'ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ' ಎನ್ನುವ ಮಾತಿದೆ. ಶಿಕ್ಷಣ ಎನ್ನುವುದು ಹೆಣ್ಣಿಗೆ ಕೇವಲ ಅಕ್ಷರ ಕಲಿಸುವುದಿಲ್ಲ. ಬದಲಾಗಿ ಹಿಂದಿನ ಕಾಲದಿಂದ ಹೆಣ್ಣನ್ನು ಆವರಿಸಿದ ಅಜ್ಞಾನದ ಕತ್ತಲೆಯನ್ನು ತೋಡೆದು ಹಾಕುವ ಸಾಧನ. ಅದು ಹೆಣ್ಣಿಗೆ ಧೈರ್ಯವನ್ನು ನೀಡುತ್ತದೆ. ಸಮಾಜದಲ್ಲಿ ಇರುವ ಎಲ್ಲಾ ತಡೆಗೋಡೆಗಳನ್ನು ಎದುರಿಸಿ ನಿಲ್ಲುವ ಶಕ್ತಿ ನೀಡುತ್ತದೆ. ತಾನೂ ಹೆಣ್ಣಾದರೂ ಯಾರಿಗೂ ಕಮ್ಮಿ ಇಲ್ಲ ಎನ್ನುವ ಆತ್ಮವಿಶ್ವಾಸದಿಂದ ಜೀವಿಸುವಂತೆ ಮಾಡುತ್ತದೆ.
ಇಂದು ಹೆಣ್ಣು ಮನಸ್ಸು ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ರಾಷ್ಟ್ರಪತಿಯಾಗಿ ದೇಶಕ್ಕೆ ಸೇವೆ ಸಲ್ಲಿಸಬಲ್ಲಳು, ಸೈನಿಕಳಾಗಿ ದೇಶವನ್ನು ಕಾಯಬಲ್ಲಳು , ಗಗನಕ್ಕೆ ಹಾರಿ ಇತಿಹಾಸ ರಚಿಸಬಲ್ಲಳು. ಆಧುನಿಕ ಕಾಲದಲ್ಲಿ ಹೆಣ್ಣು ಮಕ್ಕಳು ಬಾರಿ ಅಡುಗೆ ಕೆಲಸಕ್ಕೆ ಸೀಮಿತವಾಗದೆ, ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.
ಶಿಕ್ಷಣ ಪಡೆದ ಪ್ರತಿ ಹೆಣ್ಣು ಮಕ್ಕಳು ಹಣಕಾಸೀನ ವಿಷಯದಲ್ಲಿ ಸ್ವಾತಂತ್ರ್ಯವಾಗುತ್ತಾರೆ. ಇಂದು ಮಹಿಳೆಯರು ಮನೆಯ ಕೆಲಸಗಳನ್ನು ನಿಭಾಯಿಸುವುದರ ಜೊತೆ ಜೊತೆಗೆ ಜೀವನ ಸುಗಮಗೊಳಿಸಲು ಮನೆಯ ಹೊರಗೂ ದುಡಿಯುತ್ತಿದ್ದಾರೆ. ಶಿಕ್ಷಣವು ಹೆಣ್ಣು ಮಕ್ಕಳಿಗೆ ಕನಸಿನ ರೆಕ್ಕೆ ಬಿಚ್ಚಿ ಹಾರಲು ಕಲಿಸುತ್ತದೆ ಹಾಗೂ ಜೀವನದಲ್ಲಿ ಕಂಡ ಕನಸ್ಸನ್ನೆಲ್ಲ ಸ್ವಂತ ಕಾಲ ಮೇಲೆ ತಾನು ನಿಂತು ಸಾಧಿಸುವಂತೆ ಪ್ರೇರೇಪಿಸುತ್ತದೆ. ಸಮಾಜದಲ್ಲಿರುವ ತನ್ನ ಸ್ಥಾನವನ್ನು ಅರಿತು ತಾನು ಕೇವಲ ಮನೆ ಕೆಲಸಕ್ಕೆ ಮಾತ್ರ ಸೀಮಿತವಲ್ಲ. ಅದನ್ನು ಬಿಟ್ಟು ಬೇರೆ ಪ್ರಪಂಚವಿದೆ ಎನ್ನುವುದನ್ನು ಮನದಟ್ಟು ಮಾಡುತ್ತದೆ.
ತಾಯಿಯಾಗಿ, ಹೆಂಡತಿಯಾಗಿ, ಕುಟುಂಬದ ಒಳಿತಿಗಾಗಿ ಶ್ರಮಿಸುವವಳು ಹೆಣ್ಣು. ಕೆಲವೊಮ್ಮೆ ಗಂಡಿನ ಸ್ಥಾನದಲ್ಲಿ ನಿಂತು ಕುಟುಂಬ ನಡೆಸುವ ಮಹಿಳೆಯರು ಕೂಡ ದಿಟ್ಟತನದಿಂದ ಬದುಕುತ್ತಿದ್ದಾರೆ. ಶಿಕ್ಷಣದ ಕ್ಷೇತ್ರದಲೂ ಹೆಣ್ಣು ಮಕ್ಕಳು ಒಂದು ಕೈ ಮೇಲೆಯೇ ಇದ್ದಾರೆ. ಶಿಕ್ಷಣ ಎನ್ನುವುದು ಯಾರೊಬ್ಬ ವ್ಯಕ್ತಿಯಿಂದಲೂ ಕಸಿದುಕೊಳ್ಳಲಾಗದ ಆಸ್ತಿ. ಅಂತಹ ಆಸ್ತಿ ಒಬ್ಬ ಮಹಿಳೆಯ ಬಳಿ ಇದ್ದರೆ ಆಕೆ ಸಮಾಜದಲ್ಲಿ ಯಾರ ಮುಂದೆಯೂ ಯಾವ ಸಂದರ್ಭದಲ್ಲೂ ತಲೆತಗ್ಗಿಸುವ ಸಂದರ್ಭ ಬರದೆ ದಿಟ್ಟತನದಿಂದ ಬದುಕಬಲ್ಲಳು. ಶಿಕ್ಷಣ ಎನ್ನುವುದು ಹೆಣ್ಣಿಗೆ ರಕ್ಷಾ ಕವಚ ಇದ್ದಂತೆ.
ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಎಲ್ಲವನ್ನೂ ಮೆಟ್ಟಿ ನಿಲ್ಲುವ ದೃಢಸಂಕಲ್ಪ ನಮ್ಮದಾಗಿರಬೇಕು. ಕನಸುಗಳನ್ನೆಲ್ಲ ನನಸಾಗಿಸುವ ಹಾದಿಯಲ್ಲಿ ನಡೆದು ರೆಕ್ಕೆ ಬಿಚ್ಚಿ ಹಾರುವಂತಾಗಬೇಕು. ಶಿಕ್ಷಣ ಎನ್ನುವುದು ಕೇವಲ ಅಕ್ಷರಕ್ಕಷ್ಟೇ ಸೀಮಿತವಲ್ಲ, ಸಮಾಜದಲ್ಲಿ ಪ್ರತಿ ಹೆಣ್ಣು ಮಗುವನ್ನು ಆತ್ಮವಿಶ್ವಾಸದಿಂದ ತಲೆಎತ್ತಿ ನಿಲ್ಲುವಂತೆ ಮಾಡುತ್ತದೆ. ಸಹನೆ, ಪ್ರೀತಿ ಮತ್ತು ಧೈರ್ಯದ ಸಂಕೇತವಾಗಿರುವ ಪ್ರತಿ ಮಹಿಳೆಯರಿಗೂ ಅಂತರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು.
- ವಿದಿಶಾ ಕಲ್ಲಮುಂಡ್ಕೂರು
ಆಳ್ವಾಸ್ ಕಾಲೇಜು ಮೂಡುಬಿದಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


