ಉಡುಪಿ: ರುದ್ರನ ಆರಾಧನೆಯನ್ನು ಕೇವಲ ವಿಧಿವಿಧಾನಗಳ ಮಟ್ಟಿಗೆ ಸೀಮಿತಗೊಳಿಸದೇ, ಜ್ಞಾನವೃದ್ಧಿ ಮತ್ತು ಆತ್ಮೋನ್ನತಿಯ ಸಾಧನವಾಗಿ ಅರ್ಥೈಸಬೇಕು ಎಂದು ಉಡುಪಿಯ ಪೂಜ್ಯ ಪರ್ಯಾಯ ಶ್ರೀಗಳಾದ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ತಿಳಿಸಿದರು.
ಮಹಾಶಿವರಾತ್ರಿ ಅಂಗವಾಗಿ ನೀಡಿದ ಅನುಗ್ರಹ ಸಂದೇಶದಲ್ಲಿ ಅವರು, ಪರಮಾತ್ಮನಾದ ಶ್ರೀಹರಿಯ ಅನುಗ್ರಹವನ್ನು ಪಡೆಯಲು ಜ್ಞಾನವೇ ಪ್ರಧಾನ ಮಾರ್ಗವೆಂದು ವಿವರಿಸಿದರು. “ಜ್ಞಾನೀ ಪ್ರಿಯತಮಃ” ಎಂಬ ಭಗವದ್ವಾಕ್ಯದಂತೆ, ಜ್ಞಾನವಂತರಿಗೆ ಭಗವಂತನು ಶೀಘ್ರವಾಗಿ ಅನುಗ್ರಹ ನೀಡುತ್ತಾನೆ. ವಿದ್ಯೆ ಹೊಂದಿರುವವರು ದೇವರಿಗೆ ಅತ್ಯಂತ ಪ್ರಿಯರಾಗಿರುವುದರಿಂದ ಪ್ರತಿಯೊಬ್ಬರೂ ಪರಮಾತ್ಮನ ತತ್ತ್ವಜ್ಞಾನವನ್ನು ಸಂಪಾದಿಸಬೇಕು ಎಂದು ಅವರು ಹೇಳಿದರು.
ಶ್ರೀಪಾದರು ಈ ತತ್ತ್ವವನ್ನು ಶಾಲೆಯ ಉದಾಹರಣೆಯ ಮೂಲಕ ಸ್ಪಷ್ಟಪಡಿಸಿದರು. ಶಾಲೆಯಲ್ಲಿ ಕಲಿಯುವ ನಿಜವಾದ ವಿದ್ಯೆಯೇ ಪರಮಾತ್ಮನಾದ ಶ್ರೀಹರಿಯ ಜ್ಞಾನವಾಗಿದ್ದು, ಪಠ್ಯಕ್ರಮ ಮತ್ತು ಶಿಸ್ತು ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವ ಪ್ರಿನ್ಸಿಪಾಲ್‌ನಂತೆ ಮುಖ್ಯಪ್ರಾಣ ದೇವರು ಹಾಗೂ ಶ್ರೀಮಧ್ವಾಚಾರ್ಯರು ಮಾರ್ಗದರ್ಶನ ನೀಡುತ್ತಾರೆ ಎಂದು ಹೇಳಿದರು. ಆ ಜ್ಞಾನವನ್ನು ಪ್ರಾಯೋಗಿಕವಾಗಿ ಕಲಿಸುವ ಕ್ಲಾಸ್ ಟೀಚರ್‌ನಂತೆ ಶಿವನು ಕಾರ್ಯನಿರ್ವಹಿಸುತ್ತಾನೆ ಎಂದು ಅವರು ವಿವರಿಸಿದರು.
ಶಿವ ಮತ್ತು ವಿಷ್ಣು ಭಿನ್ನವಲ್ಲ ಎಂಬ ತತ್ತ್ವವನ್ನು ಒತ್ತಿಹೇಳಿದ ಶ್ರೀಪಾದರು, “ಹರಿಯ ಮತವೇ ಹರನ ಮತ, ಹರನ ಮತವೇ ಹರಿಯ ಮತ” ಎಂಬ ಸಿದ್ಧಾಂತವನ್ನು ಸ್ಮರಿಸಿದರು. ಆದ್ದರಿಂದ ಶಿವರಾತ್ರಿಯಂದು ವಿಶೇಷವಾಗಿ ಶಿವನ ಆರಾಧನೆಯ ಮೂಲಕ ಪರಮಾತ್ಮನ ಜ್ಞಾನವನ್ನು ಪಡೆಯಬೇಕೆಂದು ಅವರು ಕರೆ ನೀಡಿದರು.
ರುದ್ರನ ನಿಜವಾದ ಆರಾಧನೆ ಎಂದರೆ ಕೇವಲ ಹೂವು, ಗಂಧ, ಆರತಿ ಅಥವಾ ಅಭಿಷೇಕವಲ್ಲ; ಶಿವನು ತೋರಿಸಿದ ಮಾರ್ಗದಲ್ಲಿ ನಡೆಯುವುದೇ ನಿಜವಾದ ಆರಾಧನೆ ಎಂದು ಅವರು ತಿಳಿಸಿದರು. ಶಿವನು ಪಾರ್ವತಿಗೆ ಉಪದೇಶಿಸಿದ “ಶ್ರೀರಾಮರಾಮೇತಿ ರಮೇ ರಾಮೇ ಮನೋರಮೇ…” ಎಂಬ ಶ್ಲೋಕವನ್ನು ಉಲ್ಲೇಖಿಸಿದ ಅವರು, ರಾಮನಾಮ ಸ್ಮರಣೆ ಭಗವಂತನ ಸಾವಿರ ನಾಮಗಳನ್ನು ಜಪಿಸಿದ ಫಲಕ್ಕೆ ಸಮಾನವೆಂದು ಶಿವನೇ ಹೇಳಿರುವುದನ್ನು ಸ್ಮರಿಸಿದರು.
ಶಿವರಾತ್ರಿ ಪ್ರಯುಕ್ತ ರಾತ್ರಿಯಿಂದ ಹಗಲಿನವರೆಗೆ ಕೃಷ್ಣಮಠದ ರಾಜಾಂಗಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದ ಶ್ರೀಪಾದರು, ಎಲ್ಲ ಕೃಷ್ಣಭಕ್ತರು ಹಾಗೂ ಶಿವಭಕ್ತರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಧಾರ್ಮಿಕ ಲಾಭ ಪಡೆಯಬೇಕೆಂದು ಮನವಿ ಮಾಡಿದರು. ಅನಾನುಕೂಲ ಇರುವವರು ಮನೆಯಲ್ಲಿಯೇ ಪಾರಾಯಣ, ಜಪ ಮತ್ತು ಸ್ಮರಣೆಯಲ್ಲಿ ತೊಡಗಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಅವರು ಕರೆ ನೀಡಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

