ಅಂದು ಸೋಮವಾರ, ಭಾನುವಾರ ಪೂರ್ತಿ ದಿನ ಡ್ಯೂಟಿ, ಸೋಮವಾರ ಮತ್ತೆ ಹೊರ ರೋಗಿಗಳ ಸಂತೆ, ಹತ್ತು ಗಂಟೆಗೆ ಶುರುವಾದ ಕೆಲಸ ಮಧ್ಯಾಹ್ನ ಮೂರೂವರೆ ಆದರೂ ಮುಗಿಯುತ್ತಿಲ್ಲ, ಹಿಂದಿನ ದಿನದ ಆಯಾಸ, ಆ ಹೊತ್ತಿನ ಹಸಿವು ಇನ್ನು ನನಗೆ ರೋಗಿಗಳನ್ನು ನೋಡುವ ಶಕ್ತಿಯಿಲ್ಲ, ಏನಾದರೂ ತುರ್ತು ವಿಷಯವಿದ್ದರೆ ಕರೆ ಮಾಡಿ, ಇಲ್ಲವೇ ಸ್ವಲ್ಪ ನನಗೆ ವಿಶ್ರಾಂತಿ ಬೇಕು ಎಂದು ಬಂದು ಊಟ ಮಾಡಿ ಮಲಗಿದೆ. ಹೆಸರಿಗೆ ಮಲಗಿದ್ದಷ್ಟೇ ನಿಮಿಷ ನಿಮಿಷಕ್ಕೂ ಒಂದಲ್ಲಾ ಒಂದು ಕರೆ.
ಆ ಮಧ್ಯೆ ಒಂದು ಹೆಂಗಸು ತಿಂಗಳ ಮುಟ್ಟು ಜಾಸ್ತಿ ಆಗಿದೆ ಎಂದು ಬಂದಿದ್ದಾಳೆ, ರಕ್ತ ಸ್ರಾವವಾಗುತ್ತಿದೆ ಎಂದರು ಆಸ್ಪತ್ರೆ ಶುಶ್ರೂಷಕಿ. ನಾನು ಅವರ ವಯಸ್ಸು, ಅವಳ ಎಲ್ಲಾ ವಿಷಯ ಕೇಳಿ ಬಹುಶಃ ಗರ್ಭಪಾತ ಅನಿಸುತ್ತೆ, ಒಮ್ಮೆ ಪರೀಕ್ಷೆ ಮಾಡಿ ಎಂದೆ. ಅವರು ಪರೀಕ್ಷೆ ಮಾಡಿ, ಸ್ವಲ್ಪ ದಬಾಯಿಸಿ ಎಲ್ಲಾ ವಿಚಾರಿಸಿ, ನಾನು ಹೇಳಿದ ಚಿಕಿತ್ಸೆ ನೀಡಿ ನನಗೆ ಮತ್ತೆ ಕರೆಮಾಡಿ ಅವಳಿಗೆ ಎರಡು ತಿಂಗಳಾಗಿದೆ, ಅವಳ ಮಾವ ಖಾಸಗಿ ಕ್ಲಿನಿಕ್ ನಿಂದ ಗರ್ಭಪಾತ ಮಾತ್ರೆ ತಂದು ಕೊಟ್ಟಿದ್ದರಂತೆ, ಅದು ಗರ್ಭಪಾತವಾಗಿದೆ. ಈಗ ಎಲ್ಲಾ ರಕ್ತಸ್ರಾವ ನಿಂತಿದೆ, ಆರಾಮಾಗಿದ್ದಾಳೆ, ಏನೋ ಹೃದಯ ಸಂಬಂಧಿ ರೋಗಿ ಅಂತೆ, ಆದರೆ ಇಂದು ಅದರ ಯಾವುದೇ ದಾಖಲೆ ತಂದಿಲ್ಲ ಎಂದರು.
ಸರಿ, ನಾನು ಆಸ್ಪತ್ರೆಗೆ ಹೋಗಿ ನೋಡಿದೆ. ಆಗಲೇ ವಾರ್ಡ್ ನಲ್ಲಿ ಮಲಗಿದ್ದ ಅವಳ ಎದೆ ಮೇಲೆ ಅವಳ ಒಂದು ಮಗು ಮೊಲೆ ಹಾಲು ಚೀಪುತ್ತಿತ್ತು, ಪಕ್ಕದ ಹಾಸಿಗೆಯಲ್ಲಿ ಇನ್ನೊಂದು ಮಗು ನಿದ್ರಿಸಿತ್ತು. ಬಹಳ ರಕ್ತಸ್ರಾವವಾಗಿ ಬಿಳಿಚಿಕೊಂಡಿದ್ದಳು, ರಕ್ತ ಏಳು ಗ್ರಾಂ ಇತ್ತು, ಹೃದಯ ರೋಗಿ, ಎರಡು ಮಕ್ಕಳಿದ್ದು ಮತ್ತೊಂದು ಮಗು ಏಕೆ? ಬೇಡ ಅಂದರೆ ಸರಿಯಾಗಿ ಸ್ತ್ರೀ ರೋಗ ತಜ್ಞರ ಬಳಿ ಸಲಹೆ ಪಡೆದು ಗರ್ಭಪಾತ ಮಾಡಿಸುವುದು ಬಿಟ್ಟು ಇದೆಲ್ಲಾ ಏನಿದು ಹುಚ್ಚಾಟ? ಹೃದಯ ಸಮಸ್ಯೆ ಏನಿತ್ತು? ಏನು ಚಿಕಿತ್ಸೆ ಎಂದೆಲ್ಲಾ ವಿಚಾರಿಸಿದೆ, ಎಲ್ಲಾ ದಾಖಲೆ ಮನೆಯಲ್ಲಿದೆ, ನಮ್ಮ ಮನೆಯವರು ಬರುತ್ತಿದ್ದಾರೆ, ಅವರು ಬಂದ ಮೇಲೆ ಎಲ್ಲಾ ದಾಖಲೆ ಕೊಡುವೆ ಎಂದಳು. ಹೃದಯ ರೋಗ ಏನು ತಿಳಿದು ರಕ್ತ ಹಾಕುವ ಯೋಚನೆ ಮಾಡೋಣ, ಅವರ ಕಡೆಯವರು ಬಂದೊಡನೆ ಎಲ್ಲಾ ದಾಖಲೆ ನೋಡಿ ಹೇಳಿ ಅಂದವಳೇ ಬಾಕಿಯಿದ್ದ ಎರಡು ಸಿಸೇರಿಯನ್ ಮುಗಿಸಲು ಓಟಿ ಕಡೆ ಹೊರಟೆ.
ಸಿಸೇರಿಯನ್ ಮುಗಿಸಿ ಬಂದಾಗ ಅವಳ ಇಬ್ಬರು ಮಕ್ಕಳು ನಮ್ಮ ಹೆರಿಗೆ ಕೊಠಡಿಯನ್ನು ಕೊಂಪೆ ಮಾಡಿಬಿಟ್ಟಿದ್ದರು, ನಮ್ಮ ಸಿಬ್ಬಂದಿಗೆ ಅವರನ್ನು ಹಿಡಿಯುವುದೇ ತಲೆನೋವಾಗಿ ನಾನು ಬಂದ ತಕ್ಷಣ ಇವರಿಗೊಂದು ದಾರಿ ಮಾಡಿ ಮೇಡಂ ಎಂದರು. ಅವರಿಗೆ ಒಂದು ಪ್ರತ್ಯೇಕ ವಾರ್ಡ್ ಕೊಟ್ಟು ಮಕ್ಕಳ ಜೊತೆ ಅಲ್ಲಿ ಇರಲು ವ್ಯವಸ್ಥೆ ಮಾಡಿ ಬಂದೆ, ಮರುದಿನಕ್ಕೆ ಮೂರು ಹೆರಿಗೆಗಳು ತಯಾರಿದ್ದವು, ನಾನು ಆ ಕಡೆ ಗಮನ ಹರಿಸಿದೆ, ಅವರನ್ನು ಪರೀಕ್ಷಿಸಿ ಬಂದು ಮಲಗಿಬಿಟ್ಟೆ.
ಮರುದಿನ ರೌಂಡ್ಸ್ ಸಮಯಕ್ಕೆ ಇವಳಿಬ್ಬರೂ ಮಕ್ಕಳು ಮೊಬೈಲ್‌ನಲ್ಲಿ ಮಗ್ನರಾಗಿದ್ದಾರೆ, ಇವಳು ಚೆನ್ನಾಗಿ ನಿದ್ರೆಗೆ ಜಾರಿದ್ದಾಳೆ. ನಾನು ಅವಳನ್ನು ಎಬ್ಬಿಸಿ ಎರಡು ಎಳೆ ಮಕ್ಕಳು, ಹೀಗೆ ಪ್ರಜ್ಞೆ ತಪ್ಪಿ ನೀನು ಮಲಗಿಬಿಟ್ಟರೆ ಮಕ್ಕಳಿಗೆ ಏನಾದರೂ ತೊಂದರೆಯಾದರೆ ಏನು ಗತಿ ಎಂದೆ, ಅವಳು ನಾವು ಏನೇ ಕೇಳಿದರೂ ಅದಕ್ಕೊಂದು ಸಬೂಬು ಹೇಳಿ ಬಿಡುತ್ತಿದ್ದಳು. ಸಿಸ್ಟರ್ ಗೆ ಒಮ್ಮೆ ಸ್ಕ್ಯಾನಿಂಗ್ ಅವಶ್ಯ ರಕ್ತ ಪರೀಕ್ಷೆ ಮಾಡಲು ಸೂಚಿಸಿ ನನ್ನ ಕೆಲಸಗಳನ್ನು ಮುಂದುವರಿಸಿದೆ.
ಸಂಜೆ ಅವಳು ಎಲ್ಲಾ ರಿಪೋರ್ಟ್ ತಂದಳು, ಹೃದಯ ಸಮಸ್ಯೆಗೆ ಒಮ್ಮೆ ತಜ್ಞ ವೈದ್ಯರ ಬಳಿ ತೋರಿಸಿ ಬರಲು ಕಳುಹಿಸಿದಾಗ ಅವರು ಕರೆ ಮಾಡಿ ಅವಳು ಈ ಹಿಂದೆ ನಮ್ಮ ಐಸಿಯು ನಲ್ಲಿ ಚಿಕಿತ್ಸೆಗೆ ಸೇರಿದ್ದಳು, ಅವಳಿಗೆ ಅವಳದ್ದೇ ಅನೇಕ ವೈಯಕ್ತಿಕ ತಿಕ್ಕಾಟಗಳಿವೆ ಎಂದರು. ನನಗೆ ಸಾಲು ಸಾಲು ಹೆರಿಗೆಗಳು ಬಾಕಿ ಇದ್ದರಿಂದ ಅವಳ ವೈಯಕ್ತಿಕ ಜೀವನ ಕೆದಕುವ ಪುರುಸೊತ್ತು ಇರಲಿಲ್ಲ. ನನಗೆ ಸಧ್ಯ ಅವಳ ಸ್ಕ್ಯಾನಿಂಗ್ ಅಷ್ಟು ಸಮಸ್ಯೆ ಅನಿಸಲಿಲ್ಲ, ಅವಳು ಆರಾಮಾಗಿ ಓಡಾಡಿಕೊಂಡು ಇದ್ದಳು, ಮರುದಿನ ಹೃದಯ ಹೇಗಿದೆ ಪರೀಕ್ಷಿಸಿ ರಕ್ತ ಹಾಕಿಸಿ ಕಳುಹಿಸುವ ಆಲೋಚನೆಯಿತ್ತು. (ಹೃದಯ ಸಂಬಂಧಿ ಕಾಯಿಲೆ ಇದ್ದವರಿಗೆ ರಕ್ತ ಹಾಕಬೇಕಾದರೆ ಬಹಳ ಎಚ್ಚರ ವಹಿಸಬೇಕು)
ಆ ರಾತ್ರಿ ಒಂಬತ್ತು ಗಂಟೆಗೆ ಇನ್ನೇನು ಮಲಗುವಳಿದ್ದೆ, ಅಪರೂಪಕ್ಕೆ ಆ ರಾತ್ರಿ ಯಾವುದೇ ಹೆರಿಗೆಗೆ ಮಹಿಳೆಯರು ದಾಖಲಾಗಿರಲಿಲ್ಲ, ಅದೇ ಖುಷಿಯಲ್ಲಿ ಇನ್ನೇನು ಮಲಗಬೇಕು, ಆಸ್ಪತ್ರೆಯಿಂದ ಇವಳಿಗೆ ಮತ್ತೆ ರಕ್ತಸ್ರಾವ ಎಂಬ ಕರೆ ಬಂತು, ಮಧ್ಯಾಹ್ನ ನೋಡಿದ್ದ ಸ್ಕ್ಯಾನ್ ಪ್ರಕಾರ ರಕ್ತಸ್ರಾವವಾಗುವ ಯಾವ ಸಂಭವವಿರಲಿಲ್ಲ, ಆದರೆ ಕರೆ ಮಾಡಿದ ಸಿಸ್ಟರ್ ದನಿ ನೀವು ಒಮ್ಮೆ ಬಂದು ನೋಡಿ ಎಂದು ಕರೆಯಲು ಹೋದೆ.
ದಾರಿಯಲ್ಲಿ ಒಂದು ಬೆಕ್ಕು ಮೂರು ಬಾರಿ ಅಡ್ಡ ಅಡ್ಡ ಬರಲು ಬೇಡವೆಂದರೂ ಮನಸ್ಸು ಮೂರ್ನಾಕು ಬಾರಿ ಶಕುನಗಳ ಲೆಕ್ಕಾಚಾರ ಹಾಕಿತು, ಸರಿ ದೇವರ ಮೇಲೆ ಭಾರ ಹಾಕಿ ಹೋದೆ.
ಅವಳನ್ನು ಪರೀಕ್ಷಿಸಿದೆ, ಗರ್ಭಕೋಶದಿಂದ ಒಂದೇ ಸಮನೆ ನಲ್ಲಿ ನೀರಿನಂತೆ ರಕ್ತ ಹರಿಯುತ್ತಿತ್ತು, ಸರಿ ಒಳಗೆ ಒಂದಿಷ್ಟು ಕಸ ಉಳಿದಿರುವುದು ಖಾತ್ರಿಯಾಗಿ ನಮ್ಮ ಸಿಬ್ಬಂಧಿ ಸಹಾಯದಿಂದ ಅದನ್ನು ತೆಗೆಯಲು ಮುಂದಾಗುತ್ತಾ ಹಾಗೆಯೇ ಅಗತ್ಯ ರಕ್ತ ಪರೀಕ್ಷೆ, ರಕ್ತ ಹಾಕಲು ಅದರ ಹುಡುಕಾಟ, ರಕ್ತಸ್ರಾವ ನಿಲ್ಲಿಸಲು ಮದ್ದು ಎಲ್ಲವೂ ಶುರುವಾಯಿತು, ಆ ಮಧ್ಯೆ ಅವಳ ಚಿಕ್ಕ ಮಗ ಕ್ಯಾ ಎಂದು ಅಳುತ್ತಾ ಬರಲು ಅವಳು ಆ ಮಗುವಿಗೆ ಹಾಲು ಕುಡಿಸಲು ಮುಂದಾಗಲು ನನಗೆ ಆತಂಕ. ಹೃದಯ ರೋಗ, ರಕ್ತ ಹೀನತೆ ಮೇಲೆ ರಕ್ತ ಸ್ರಾವ, ಅದರ ಮೇಲೆ ಹಾಲು ಉಣಿಸುವ ಪ್ರಕ್ರಿಯೆ ಎಲ್ಲಾ ಒಂದಾದರೆ ಅವಳ ಹೃದಯ ಒತ್ತಡ ತಡೆಯಲಾಗದೆ ಏನಾದರೂ ಅನಾಹುತವಾದರೆ ಎಂದು ಅದನ್ನು ತಡೆದು ಆ ಮಗುವನ್ನು ಪಕ್ಕಕ್ಕೆ ನಿಲ್ಲಿಸುತ್ತಾ ಈಗಲಾದರೂ ನಿನ್ನ ಮನೆಯವರನ್ನು ಕರೆಸಮ್ಮ ಎನ್ನುತ್ತಾ ಗಂಡನ ಬಗ್ಗೆ ಕೇಳಿದಾಗ ಗೊತ್ತಾದ ಸತ್ಯ ಅವಳಿಗೆ ಗಂಡ ಇಲ್ಲ, ಮರಣವಾದ ಗಂಡನ ಅಗಲಿಕೆ ಮಾವನ ಸಾಂಗತ್ಯ - ಅನೈತಿಕ ಸಂಬಂಧ ಈ ಎಡವಟ್ಟು ಎಂಬ ಸತ್ಯ.
ನೆನ್ನೆಯಿಂದ ಮಾವ ಮಾವ ಎನ್ನಲು ಗಂಡನ ಅಪ್ಪ ಎಂದೇ ಎಣಿಸಿದ್ದ ನನಗೆ ಈ ಮಾವ ಯಾರೋ ಹೆಂಡತಿ ಬಿಟ್ಟಿರುವ ದೂರ ಸಂಬಂಧಿ ಎಂದು ತಿಳಿಯಲು, ಅನೈತಿಕ ಗರ್ಭ, ಈ ವಿಷಯ ಪೊಲೀಸ್ ಗೆ ತಿಳಿಸಿಲ್ಲ ಭಯ ಒಂದೆಡೆ, ಈ ಹೆಂಗಸು ಈ ಮಕ್ಕಳ ಜೊತೆ ಒಬ್ಬಳೇ ಇದ್ದಾಳೆ, ಇಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ, ಏನಾದರೂ ಹೆಚ್ಚು ಕಮ್ಮಿ ಆದರೆ ಎಂಬ ಆತಂಕದ ಜೊತೆ ಜೊತೆಗೆ ಹೇಗಾದರೂ ಆ ರಕ್ತಸ್ರಾವ ನಿಲ್ಲಿಸುವ ಸತತ ಪ್ರಯತ್ನ ಸಾಗಿತ್ತು. ಮಧ್ಯಾಹ್ನ ಸ್ಕ್ಯಾನಿಂಗ್ ವರದಿ ಸ್ವಲ್ಪ ನಮ್ಮ ದಿಕ್ಕು ತಪ್ಪಿಸಿತ್ತು, ಒಳಗೆ ಅಷ್ಟು ಕಸ ಇಲ್ಲ ಎಂಬ ವರದಿಗೆ ನೆಮ್ಮದಿಯಾಗಿದ್ದ ನನಗೆ ತೆಗೆದಷ್ಟು ಬರುತಿದ್ದ ಮತ್ತಷ್ಟು ಕಸ , ರಕ್ತ ತಲೆ ಕೆಡಿಸಿತು, ಮನಸ್ಸಿನಲ್ಲಿ ಆ ಸ್ಕ್ಯಾನಿಂಗ್ ಮಾಡಿದ ವ್ಯಕ್ತಿಯನ್ನು ಶಪಿಸುತ್ತಾ ಬಹುಶಃ ಹೃದಯ ಸಂಬಂಧಿ ರೋಗಗಳ ಔಷಧಿ ಪ್ರಭಾವ ರಕ್ತ ನಿಲ್ಲುತ್ತಿಲ್ಲ, ನಾನು ಇವಳನ್ನು ಮಂಗಳೂರಿಗೆ ಕಳುಹಿಸಿ ಕೊಡಬೇಕಾಗಬಹುದು ಎಂದು ನಮ್ಮ ಸಿಬ್ಬಂದಿಗೆ ಅವಳ ಕಡೆಯವರನ್ನು ಕರೆಸಲು ಸೂಚಿಸಿದೆ.
ಖಾಸಗಿ ಆಸ್ಪತ್ರೆಯಾದರೆ ರೋಗಿಯ ಸಂಬಂಧಿ ಇಲ್ಲದೆ ಅವರನ್ನು ಯಾರೂ ಹತ್ತಿರವೂ ಸೇರಿಸುವುದಿಲ್ಲ, ಆದರೆ ಸರ್ಕಾರಿ ಆಸ್ಪತ್ರೆ ಅದರಲ್ಲೂ ಹೆರಿಗೆ ವಿಷಯ ಎಂದರೆ ಪರಿಸ್ಥಿತಿಗೆ ತಲೆಬಾಗಿ ಎಷ್ಟೋ ಬಾರಿ ನಾವು ಯಾರೂ ಇಲ್ಲದೆ ಹೋದರೂ ಸ್ವತಃ ನಾವೇ ಊಟ ಬಟ್ಟೆ ಕೊಟ್ಟು ಅವರನ್ನು ಉಪಚರಿಸುವುದು ನೈಜ ವಾಸ್ತವ. ಆದರೆ ಇಂದಿನ ಸಂದರ್ಭ ಇಲ್ಲಿ ಏನಾದರೂ ಅವಘಡವಾದರೆ ಇಲಾಖೆಯಿಂದ ಇಡಿದು ಸಂಬಂಧಿಕರು ಮಾಧ್ಯಮ ಎಲ್ಲರಿಗೂ ನಾವೇ ಉತ್ತರ ಕೊಡಬೇಕು. ಒಂದು ಕಡೆ ಚಿಕಿತ್ಸೆ, ಇನ್ನೊಂದು ಕಡೆ ಅವಳ ಆಪ್ತರ ಹುಡುಕಾಟ, ಮತ್ತೊಂದು ಕಡೆ ಅತ್ತಿಂದ ಇತ್ತ ಓಡುತ್ತಾ ಆಸ್ಪತ್ರೆಯನ್ನು ಜಾತ್ರೆ ಮಾಡಿದ್ದ ಅವಳ ಎರಡು ಪಟಿಂಗ ಮಕ್ಕಳು, ಎಲ್ಲವನ್ನೂ ಸಂಬಾಳಿಸುವುದು ನಮಗೆ ಸೋ ಎನ್ನುವಂತಾಯಿತು.
ಹಾಗೂ ಹೀಗೂ ಚಿಕಿತ್ಸೆಗೆ ಸ್ವಲ್ಪ ರಕ್ತಸ್ರಾವ ನಿಂತಿತು, ರಿಪೋರ್ಟ್ ಕೂಡ ಬಂತು, ಅವಳ ರಕ್ತ ಐದು ಗ್ರಾಂ ಗೆ ಇಳಿದಿತ್ತು. ರಕ್ತ ಹೊಂದಿಸಿ ರಕ್ತವನ್ನು ಹಾಕಲು ಶುರು ಮಾಡಿದೆವು, ಒಂದೊಂದು ಹನಿ ರಕ್ತ ಹೋಗುವಾಗಲೂ ಕಣ್ಣು ಮಾನಿಟರ್ ನೋಡುತ್ತಾ ಅವಳಿಗೆ ಏನೂ ತೊಂದರೆಯಾಗದಿದ್ದರೆ ಸಾಕು ಎಂಬ ಪ್ರಾರ್ಥನೆ, ಅಷ್ಟರಲ್ಲಿ ಅವಳ ಚಿಕ್ಕ ಮಗ ಮಂಚ ಹತ್ತಿ ಅಮ್ಮನ ಎದೆಗೆ ಬಾಯಿಟ್ಟು ಹಾಲು ಚೀಪಲು ಶುರು ಮಾಡಿದ್ದ, ಇನ್ನೊಬ್ಬ ಅಮ್ಮ ಪೋನ್ ಕೊಟ್ಟರೆ ಸಾಕು ಅಂತ ಅವಳ ಕೈ ಎದುರು ನೋಡುತ್ತಾ ನಿಂತಿದ್ದ.
ಅವಳ ಸೋ ಕಾಲ್ಡ್ ಮಾವ ನಮ್ಮ ಕರೆ ತೆಗೆಯಲಿಲ್ಲ, ಅವಳ ಫೋನ್ ನಲ್ಲಿ ಕರೆ ಮಾಡಲು ಉತ್ತರಿಸಿದ, ಅವಳ ಸ್ಥಿತಿ ಚಿಂತಾಜನಕವಾಗಿದೆ, ಬೇಗ ಬನ್ನಿ ಎಂದರೆ ರಾತ್ರೋ ರಾತ್ರಿ ಕರೆದರೆ ಗಾಡಿ ಎಲ್ಲಿಂದ ಹುಡುಕಲಿ ಎಂದು ಏರು ದನಿಯಲ್ಲಿ ನಮ್ಮನ್ನೇ ದಬಾಯಿಸಿದ. ಇನ್ನು ಅವಳು ಅವನು ಫೋನ್ ಅಲ್ಲಿ ಮಾತಾಡಿದ್ದೇ ಮಾತಾಡಿದ್ದು, ನಾವು ವಿಚಾರವನ್ನು ಪೊಲೀಸ್ ಗೆ ತಿಳಿಸಿ, ಮಂಗಳೂರು ಆಸ್ಪತ್ರೆಯವರಿಗೆ ಅಲ್ಲಿಗೆ ರವಾನೆ ಮಾಡುವ ವಿಷಯ ಮುಟ್ಟಿಸಿ ಎಲ್ಲಾ ದಾಖಲೆ ಸರಿ ಮಾಡುವಷ್ಟರಲ್ಲಿ ಇವರದ್ದು ಹೊಸ ರಾಗ, ಮಂಗಳೂರಿಗೆ ಬೇಡ ಪಕ್ಕದಲ್ಲಿರುವ ಮೆಡಿಕಲ್ ಕಾಲೇಜ್ ಗೆ ಹೋಗುತ್ತೇವೆ ಎನ್ನುತ್ತಾ ನಮಗೆ ಅಂಬುಲೆನ್ಸ್ ಗೆ ಕರೆಮಾಡಲು ಬಿಡಲಿಲ್ಲ. ಅಲ್ಲಿ ಹಣ ಖರ್ಚು ವೆಚ್ಚ ದುಬಾರಿಯಾಗಬಹುದು ಎಂದರೆ ಆ ವಿಚಾರಕ್ಕೆ ಇವರದ್ದು ಇನ್ನೊಂದಷ್ಟು ಫೋನ್ ಮಾತುಕಥೆ, ಸರಿ, ಕಾಲೇಜ್ ನವರಿಗೆ ವಿಷಯ ತಿಳಿಸಿದೆವು, ಇವಳ ಪಾಪ ಕರ್ಮ ಅಂದು ಅಲ್ಲಿಯೂ ಹಿರಿಯ ವೈದ್ಯರು ಲಭ್ಯವಿರಲಿಲ್ಲ, ಅಲ್ಲಿ ಹೋಗುವುದಕ್ಕಿಂತ ಮಂಗಳೂರು ಹೋಗುವುದು ಸೂಕ್ತ ಎಂಬ ಉತ್ತರ. ಅದನ್ನು ಇವರಿಗೆ ಹೇಳಲು ಯಾರೋ ಅವಳ ಮಾವನ ಕಡೆಯವರು ರಿಕ್ಷಾದಲ್ಲಿ ಬರುತ್ತಿದ್ದಾರೆ, ನಂತರ ನೋಡೋಣ ಎಂದರು, ಅವಳ ಚಿಕಿತ್ಸೆ ಮುಂದುವರೆಸಿ ಅವಳ ಕಡೆಯವರಿಗೆ ಕಾದೆವು. ಒಂದು ಗಂಟೆ ಕಳೆದರೂ ಯಾರ ಸುದ್ಧಿ ಇಲ್ಲ, ಕೊನೆಗೆ ರೋಸಿ ಹೋಗಿ ನೀನು ಏನಾದ್ರೂ ಮಾಡಿಕೋ ನಾವು 108ನಲ್ಲಿ ನಿನ್ನನ್ನು ಮಂಗಳೂರಿಗೆ ಬಿಡಲೇಬೇಕು ಎಂದು 108ಗೆ ಕರೆಕೊಟ್ಟರೆ, ಮತ್ತೆ ಪರಿಸ್ಥಿತಿ ದುರಾದೃಷ್ಟ, ಒಂದು ಅಂಬುಲೆನ್ಸ್ ಕೂಡಾ ಸಿಗದೆ ಒಂದೂವರೆ ತಾಸು ಕಾದರೆ ಸುಬ್ರಮಣ್ಯ ಗಾಡಿ ಬರಬಹುದು ಎಂದರು, ಸರಿ, ನಾನು ನನ್ನ ಸಿಬ್ಬಂದಿ ಈ ರಾತ್ರಿ ಇವಳ ಹಾಗೂ ಇವಳ ಮಕ್ಕಳ ಚೌಕಿದಾರರು ನಾವು ಎನ್ನುತ್ತಾ ಅಲ್ಲೇ ಮಾನಿಟರ್ ಮುಂದೆ ಕುಳಿತೆವು.
ಒಂದೇ ಸಮನೆ ಫೋನ್ ಅಲ್ಲಿ ಮುಳುಗಿದ್ದ ಅವಳು, ಎದೆ ಚೀಪುತ್ತಾ ನಿದ್ರೆಗೆ ಜಾರಿದ ಕಿರಿಮಗ, ಮೈ ತುಂಬಾ ಅಂಟಿಸಿದ್ದ ಮಾನಿಟರ್ ವೈರ್, ಕೈಗೆ ಸಿಕ್ಕಿಸಿದ್ದ ರಕ್ತ ಗ್ಲೂಕೋಸ್ ಬಾಟಲಿ, ನನಗೆ ಮೊಬೈಲ್ ಕೊಡು ಎಂದು ಗಲಾಟೆ ಮಾಡುತ್ತಿದ್ದ ಹಿರಿಮಗ, ಜೀವನ್ಮರಣದ ಮಧ್ಯೆ ಇದ್ದರೂ ನರಪಿಳ್ಳೆಯೂ ಮೂಸದ ಅವಳ ಹಣೆಬರಹ, ಅವಳ ಹೃದಯಕ್ಕೇನಾದರೂ ಸಮಸ್ಯೆಯಾದರೆ ಎಂದು ಒಂದೇ ಸಮನೆ ನನ್ನನ್ನು ಹೆದರಿಸುತ್ತಿದ್ದ ನನ್ನ ಹೃದಯ, ಒಮ್ಮೆ ವೈದ್ಯೆಯಾಗಿ ಕರ್ತವ್ಯ, ಒಮ್ಮೆ ಹೆಣ್ಣಾಗಿ ಕೋಪ ಆಕ್ರೋಶ, ಮತ್ತೊಮ್ಮೆ ಮಕ್ಕಳನ್ನು ನೋಡಲು ಅವಳಿಗೇನಾದರೂ ಆದರೆ ಅವು ಅನಾಥವಾಗುವವು ಸಹಾನುಭೂತಿ, ಮನದಲ್ಲಿ ಓಡುತಿದ್ದ ಎಲ್ಲಾ ಭಾವನೆಗಳ ನಿಯಂತ್ರಿಸುವುದೇ ಒಂದು ಸವಾಲಾಯಿತು.
ಈ ಮಧ್ಯೆ ಹಿರಿಯ ಅಧಿಕಾರಿಗಳಿಗೆ, ಪೊಲೀಸ್ ನವರಿಗೆ ಎಲ್ಲರಿಗೂ ವಿಷಯ ತಿಳಿಸಿ ಅಂಬುಲೆನ್ಸ್ ಬರುವವರೆಗೂ ಅವಳಿಗೆ ಏನೂ ತೊಂದರೆ ಆಗದಂತೆ ಎಚ್ಚರ ವಹಿಸುತ್ತಿರಲು, ಒಂದೇ ಸಮನೆ ಫೋನ್ ಅಲ್ಲಿ ಮುಳುಗಿದ್ದ ಹೆಂಗಸು ಹಾಗೊಮ್ಮೆ ಹೀಗೊಮ್ಮೆ ಆ ಗಂಡಸಿನ ಬಳಿ ಮಾತನಾಡಲು ನನಗೆ ವಿನಂತಿಸುತ್ತಿದ್ದಳು, ಸರಿ ರಾತ್ರಿ ಆ ವ್ಯಕ್ತಿ ಗಾಡಿ ಸಿಗುತ್ತಿಲ್ಲ, ಮಂಗಳೂರಿಗೆ ಕಳುಹಿಸಿದರೆ ಅವಳ ಜೊತೆ ನಿಲ್ಲಲು ಯಾರೂ ಇಲ್ಲ ಎಂದು ನಮ್ಮ ಮೇಲೆ ರೋಪು ಹಾಕಲು ನಾನಂತು ನಿನಗೂ ನಿನ್ನ ಫೋನ್ ಗೂ ದೊಡ್ಡ ನಮಸ್ಕಾರ ತಾಯಿ. ಅವನಿಗೆ ಬರುವ ಮನಸ್ಸಿದ್ದರೆ ಹೇಗೋ ಬರುತ್ತಿದ್ದ, ನಿನಗೆ ಅಂದವಿದೆ, ಅವನಿಗೆ ಆಸೆಯಿದೆ, ಇಬ್ಬರೂ ಸೇರಿ ಆಡಿರುವ ಚೆಲ್ಲಾಟಕ್ಕೆ ನಮಗೆ ಪ್ರಾಣ ಸಂಕಟ ಎಂದೆ.
ಯಾರೂ ಕೈ ಹಿಡಿಯದೇ ಹೋದಾಗ ನನ್ನನ್ನು ನನ್ನ ಮನೆಗೆ ಬಿಡಿ ಎಂದು ಹೊಸಾ ರಾಗ ಶುರು ಮಾಡಿದಳು. ಸಾಯುತ್ತಿದೆಯಾ ಎಂದರು ಒಂದು ಕರೆಗೆ ಒಬ್ಬರು ನಿನ್ನ ಪಕ್ಕ ನಿಲ್ಲುತ್ತಿಲ್ಲ, ಎರಡು ಎಳೆ ಮಕ್ಕಳ ತಾಯಿ ನೀನು, ಇಂತಹ ಅನಾಚಾರದ ಬದುಕು ಬೇಕಾ, ಈಗ ನನ್ನ ನೇತೃತ್ವದಲ್ಲಿ ಚಿಕಿತ್ಸೆ ಕೊಟ್ಟರೂ ಪ್ರಾಣಕ್ಕೆ ಅಪಾಯ ಎಂದು ಮಂಗಳೂರಿಗೆ ಕಳುಹಿಸಲು ಮುಂದಾದರೆ ಮನೆಗೆ ಕಳುಹಿಸಿ ಎನ್ನುತ್ತಿದ್ದಿಯಲ್ಲಾ ಮನೆಗೆ ಹೋದರೆ ಗೋವಿಂದ ಎಂದು ರೇಗಿಬಿಟ್ಟೆ. ಅವಳು ಮಂಗಳೂರಿಗೆ ಬೇಡ ಇಲ್ಲೇ ಇರುವೆ ನಾನು ಇಲ್ಲೇ ಇರುವೆ ಅಂತ ಅಳುತ್ತಾ ಹಠ ಮಾಡಿದಳು, ರಾತ್ರಿ ಹನ್ನೆರಡಾಗುತ್ತಿತ್ತು, ಇವರ ದೊಂಬರಾಟಕ್ಕೆ ತಲೆ ಗಿರ್ ಎನ್ನಲು ತಾಳ್ಮೆ ಮೀರಿ ಹೋಗಿ ಕೋಪ ಬೈಗುಳದ ಜೊತೆ ಆ ಮಕ್ಕಳನ್ನು ನೋಡಿ ನನ್ನ ಕಣ್ಣಲ್ಲಿ ನೀರು ಬಂತು. ಸುಮ್ಮನೆ ಒಬ್ಬಳೇ ಕುಳಿತು ಬಿಟ್ಟೆ.
ಪ್ರತಿ ತಿಂಗಳಿಗೆ ಒಮ್ಮೆಯಾದರೂ ಸರಿ ರಾತ್ರಿ ಎದುರಾಗುವ ಈ ಅನೈತಿಕ ಸಂಬಂಧಗಳ ಪಾಪ ಫಲ ತೊಳೆಯುವ ಕರ್ಮ, ಕರ್ತವ್ಯಕ್ಕೆ ಕಟ್ಟು ಬಿದ್ದು ಎಷ್ಟೇ ತಾಳ್ಮೆಯಿಂದ ವ್ಯವಹರಿಸಿದರೂ ನಮ್ಮನ್ನೇ ಇಕ್ಕಟ್ಟಿಗೆ ಸಿಲುಕಿಸಿ ನಮಗೇ ಕುತ್ತು ತರಲು ಮಾಡುವ ಇವರ ಒಳ ಸಂಚುಗಳು, ಕೆಲವೊಮ್ಮೆ ಅವರ ಅಸಹಾಯಕ ದುಸ್ಥಿತಿಗೆ ರಾತ್ರೋರಾತ್ರಿ ಧನ ಸಹಾಯದಿಂದ ಇಡಿದು ಪ್ರತಿಯೊಂದು ನಾವೇ ಮಾಡಬೇಕಾಗುವ ಪರಿಸ್ಥಿತಿ, ರಾತ್ರಿ ವೇಳೆ ಮನಸನ್ನು ಮತ್ತೆ ಮತ್ತೆ ಕದಡುವ ಈ ತರವಾರಿ ಸನ್ನಿವೇಶಗಳಿಗೆ ಮನಸ್ಸು ಬೇಸತ್ತು ಹೋಗಿ ಅಂಬುಲೆನ್ಸ್ ಬಂದರೆ ಸಾಕು ಎನ್ನುವಂತಾಯಿತು. ಮನಸ್ಸು ಮತ್ತೆ ಮತ್ತೆ ಇವರ ಅನೈತಿಕ ಕಷ್ಟಗಳಿಗೆ ಕರ್ತವ್ಯದ ಹೆಸರಲ್ಲಿ ಕಟ್ಟುಬೀಳುವ ನಮ್ಮ ನೈತಿಕ ಹೊಣೆಗಾರಿಕೆ ಪ್ರಶ್ನಿಸಲು "ಸರ್ಕಾರಿ ಸ್ತ್ರೀ ರೋಗ ತಜ್ಞೆ" ಎಂಬ ಪದವಿ ನನ್ನನ್ನು ಮೂಕ ಮಾಡಿತು.
ನಾನು ನಮ್ಮ ಸಿಬ್ಬಂದಿ ಅವಳ ಹಠ, ಮಕ್ಕಳ ಗಲಾಟೆ ನಡುವೆ ಸುಮ್ಮನೆ ಮಾನಿಟರ್ ಹಾಗೂ ಬ್ಲೀಡಿಂಗ್ ಬಗ್ಗೆ ಎಚ್ಚರ ವಹಿಸಿ ಅವಳ ಚಿಕಿತ್ಸೆ ನೋಡಿಕೊಳ್ಳುತ್ತಾ ಅಂಬುಲೆನ್ಸ್ ದಾರಿ ಕಾದೆವು.
ಅವಳ ಮಾವ ಎಂದವ, ಅವನ ರಿಕ್ಷಾದಲ್ಲಿ ಬರುತ್ತಿದ್ದ ಸಂಬಂಧಿ ಯಾರೂ ಕ್ಯಾರೇ ಅನ್ನಲಿಲ್ಲ. ಸಾವು ಬದುಕಿನ ನಡುವೆ ಕೊನೆಗೆ ನಮ್ಮ ಅವಳ ಹೋರಾಟ. ಏಕಾಂಗಿಯಾಗಿದ್ದ ಅವಳಿಗೆ ನಮ್ಮದು ಯಾವ ಜನ್ಮದ ಋಣವೋ? ನನಗೆ ದಾರಿಯಲ್ಲಿ ಅಡ್ಡ ಸಿಕ್ಕ ಬೆಕ್ಕು ಎಲ್ಲೋ ಅಪಶಕುನವೇ ಆಗಿತ್ತು ಎಂಬ ಮೂಡ ಭಾವ.
ಅಂಬುಲೆನ್ಸ್ ಬರಲು, ಅಲ್ಲಿದ್ದ ಎಲ್ಲಾ ಆಸ್ಪತ್ರೆ ಸಿಬ್ಬಂಧಿ ಒಟ್ಟಾಗಿ ಸೇರಿ ಆ ಮಕ್ಕಳಿಗೆ ಬಟ್ಟೆ ತೊಡಿಸಿ ಅವಳನ್ನು ಅಂಬುಲೆನ್ಸ್ ಹತ್ತಿಸಿ, ಅಂಬುಲೆನ್ಸ್ ಅವರಿಗೆ ದಾರಿಯಲ್ಲಿ ನೀಡಬೇಕಾದ ಎಲ್ಲಾ ಚಿಕಿತ್ಸೆ ಹೇಳಿದೆವು. ಹೊರಡುವ ಸಮಯಕ್ಕೆ ಈಗಾಗಲೇ ನಾವು ಕೊಟ್ಟ ಚಿಕಿತ್ಸೆಗೆ ಸ್ಪಂದಿಸಿದ್ದ ಅವಳ ಜೀವಕ್ಕೆ ಏನೂ ಆಗುವುದಿಲ್ಲ ಎಂಬ ನಂಬಿಕೆಯಿತ್ತು. ಅದೇ ಸಮಾಧಾನದಲ್ಲಿ ಮುಂದೆ ಅವಳಿಗೆ ಇಲ್ಲಿ ಹಠ ಮಾಡಿದ ಹಾಗೆ ಮಾಡಬೇಡ, ವೈದ್ಯರ ಮಾತು ಕೇಳು ಎನ್ನುತ್ತಾ ಧೈರ್ಯ ಹೇಳುತ್ತಿದ್ದರೆ ಆ ಹೆಂಗಸು ಬ್ಯಾಗ್ ಗೆ ಎಲ್ಲಾ ಸಮಾನು ಸರಿಯಾಗಿ ಇಟ್ಟಿದ್ದೀರಾ? ನನ್ನ ಮಕ್ಕಳ ಚಪ್ಪಲಿ ಎಲ್ಲಿ? ಮಕ್ಕಳೇ ಚಪ್ಪಲಿ?? ಎಂದು ಕೂಗಿದಳು. ಅವಳ ಹೀನ ಮನಸ್ಥಿತಿಗೆ ಮತ್ತೆ ಅವಳ ಮುಖವನ್ನು ನೋಡಲು ಬಯಸದ ನನ್ನ ಮನಸ್ಸು ಗಾಡಿಯಿಂದ ದೂರ ಬಂತು, ನಮ್ಮ ಸಿಬ್ಬಂದಿ ಅವರ ಚಪ್ಪಲಿ ಹುಡುಕಿ ತರಲು ಗಾಡಿ ಹೊರಟಿತು.
ಸತತ ನಾಲ್ಕು ಗಂಟೆ ನಾಟಕಕ್ಕೆ ತೆರೆ ಎಳೆದು ಎಲ್ಲರೂ ಸುಸ್ತಾಗಿ ದುಪ್ ಅಂತ ಅಲ್ಲೇ ಕಟ್ಟೆ ಮೇಲೆ ಕೂತೆವು. ಈ ಸರಿ ರಾತ್ರಿ ಅವಳಿಗೆ ಎಂದು ನರಪಿಳ್ಳೆ ಬರದಿದ್ದಾಗ ನಾವು ಅಷ್ಟು ಅವಳ ಕಾಳಜಿ ಮಾಡಿ ಜೀವ ಉಳಿಸಿದ್ದರೂ ಕೃತಜ್ಞತೆ ಇರದೇ ಮಾತು ಮಾತಿಗೂ ಅವಳ ಎದುರು ಮಾತುಗಳು, ಹಠ, ಆ ಮಕ್ಕಳ ಸೆರಗಲ್ಲಿ ಅವಳ ಚಾರಿತ್ರ್ಯ ನಮಗೆ ಸಾಕು ಸಾಕೆನಿಸಿತು. ಎರಡೇ ನಿಮಿಷಕ್ಕೆ ಅಂಬುಲೆನ್ಸ್ ಅವರು ಗಾಡಿಯಲ್ಲಿ ಮತ್ತೆ ಅವಳ ಗಲಾಟೆ ಎಂದಾಗ ಅವಳ ವರಸೆಗೆ ನಮಗೆ ನಗಬೇಕೋ ಅಳಬೇಕೋ ತಿಳಿಯಲಾಗಲಿಲ್ಲ, ಅವರಿಗೆ ಅವಳೊಂದು ದೊಡ್ಡ ಡ್ರಾಮಾ ಕ್ವೀನ್, ಅವಳ ಮಾತಿಗೆ ಕಿವಿ ಕೊಡದೆ ಅವಳನ್ನು ಆಸ್ಪತ್ರೆಗೆ ಸೇರಿಸಿ, ಅವಳಿಗೆ ನೈತಿಕವಾಗಿ ಬದುಕುವ ಹಕ್ಕಿಲ್ಲ, ಆದರೆ ಆ ಮಕ್ಕಳಿಗೆ ತಾಯಿಯಾಗಿ ಅದೊಂದು ಉಸಿರು ಉಳಿಯಬೇಕು ಎಂದೆವು.
ಒಂಬತ್ತನೇ ತರಗತಿಯಲ್ಲಿದ್ದಾಗ "ಅವ್ವ" ಎಂಬ ಪಾಠ ಇತ್ತು, ತಾಯಿ ಅವಳ ಮಗುವಿನ ಹಸಿವು ನೋಡಲಾಗದೆ ಆ ರಾತ್ರಿ ಪರಪುರುಷನಿಗೆ ಸೆರಗು ಹಾಸಿ ಮಗುವಿನ ಹೊಟ್ಟೆ ತುಂಬಿಸಿದ ಕಥೆ. ಆಗ ಅದನ್ನು ಓದಿದ್ದ ನನಗೆ ತಾಯಿ ತನ್ನ ಮಕ್ಕಳಿಗಾಗಿ ಯಾವ ಮಟ್ಟಕ್ಕಾದರೂ ಇಳಿಯುವವಳು ಎಂಬ ಪರಿಕಲ್ಪನೆ ದೊಡ್ಡದೆನಿಸಿ ತಾಯಿ ಎಂಬ ಪದ ಬಹಳ ದೊಡ್ದದು ಎನಿಸಿತ್ತು. ಆದರೆ ಗಂಡನ ಮನೆಯಲ್ಲಿ ಬೇಕಷ್ಟು ಆಸ್ತಿ ಇದೆ, ದುಡಿಯುವ ವಯಸ್ಸಿದೆ, ಅಲ್ಪ ಸ್ವಲ್ಪ ವಿದ್ಯೆ ಜೊತೆ ಊರನ್ನೇ ಮುಳುಗಿಸುವಷ್ಟು ಬುದ್ಧಿ ಇದೆ, ಇಷ್ಟರ ನಡುವೆ ಆ ಎರಡು ಮಕ್ಕಳಿಗೂ ಮೊಬೈಲ್ ಹುಚ್ಚು ಇಡಿಸಿ ಮಾತಾಡಿದರೆ ಮೊಬೈಲ್ ಕೈಗೆ ಕೊಟ್ಟು ಅನೈತಿಕ ಸಂಬಂಧಗಳ ಸರಮಾಲೆಯಲ್ಲಿ ಪಾಪದ ಮೂಟೆ ಸುತ್ತಿಕೊಂಡು, ಅವಳ ತಲೆಪ್ರತಿಷ್ಟೆಗೆ ನಮಗೂ ತಲೆ ನೋವು ತಂದು, ಹೆಣ್ಣು ಕುಲಕ್ಕೆ ಮಸಿ ಎಂಬಂತೆ, ತಾಯಿ ಎಂಬ ಪದಕ್ಕೆ ಕಳಂಕ ಎಂಬಂತೆ ಎದುರಾದ ಈಕೆಯ ಬದುಕು ನಾನು ಓದಿದ ಪಾಠಕ್ಕೆ ಹೊಸ ಆಯಾಮ ನೀಡಿತು.
ಮನುಷ್ಯ ಸಾವಿನ್ನಂಚಿನಲ್ಲಿ ನಿಂತಾಗ ಒಂದು ಕೈ ಆಸರೆಗೆ ನಿಲ್ಲದೆ ಹೋದಲ್ಲಿ ಅವನು ಬದುಕಿದ್ದು ಸತ್ತ ಹಾಗೆ, ಅದರಲ್ಲೂ ಎರಡು ಮಕ್ಕಳ ತಾಯಿ, ತಂದೆಯಿಲ್ಲದ ಮಕ್ಕಳ ಒಂದೇ ಒಂದು ಆಸರೆ, ಒಂದು ಹುಲ್ಲು ಕಡ್ಡಿಯ ಸಹಾಯ ಸಿಕ್ಕಿಯಾದರೂ ನನ್ನ ಪ್ರಾಣ ಉಳಿದರೆ ಸಾಕು ನನ್ನ ಮಕ್ಕಳ ಭವಿಷ್ಯ ಉಳಿಯುವುದು ಎಂದು ಯೋಚಿಸುವ ಬದಲು ಫೋನ್ ಅಲ್ಲಿ ಸಮಯ ಸರಿಸಿ ಅವಳಿಗಾಗಿ ಪ್ರತಿ ಕ್ಷಣ ಮಿಡಿದ ನಮ್ಮನ್ನು ಅಸಡ್ಡೆಯಾಗಿ ಕಂಡ ಅವಳು, ಮಾನವೀಯತೆಯಲ್ಲಿ ಕರ್ತವ್ಯಕ್ಕೆ ಕಟ್ಟುಬಿದ್ದು ಎಲ್ಲದರ ನೈತಿಕ ಹೊಣೆಗಾರಿಕೆ ಹೊರುವ ನನ್ನ ಗುಣವನ್ನು ಪ್ರಶ್ನಿಸಿ ಅವಮಾನಿಸಿ ಒಂದಷ್ಟು ಅಸಹನೆ ತುಂಬಿ ಹೋದ ಒಂದು ಅನವಶ್ಯ ಧನ್ಯತೆ.
- ಡಾ ಶಾಲಿನಿ ವಿ ಎಲ್
ಸ್ತ್ರೀ ರೋಗ ತಜ್ಞೆ
ಸಾರ್ವಜನಿಕ ಆಸ್ಪತ್ರೆ, ಸುಳ್ಯ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


