ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಗುಡುಗಿದ ಗುತ್ತೇದಾರ್
ಬೆಂಗಳೂರು: ಈಡಿಗ ಸಮುದಾಯದ 26 ಪಂಗಡಗಳ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಪ್ರಗತಿಗಾಗಿ ನಡೆಸುವ ಹೋರಾಟದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಹತ್ವದ ಮಾತುಕತೆ ನಡೆಸಿದ ಮಾಜಿ ಸಚಿವರಾದ ಮಾಲಿಕಯ್ಯ ಗುತ್ತೇದಾರ್ ಸಮುದಾಯ ವಿರೋಧಿ ಶಕ್ತಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಹರಿಹಾಯ್ದರು.
ಬೆಂಗಳೂರಿನಲ್ಲಿ ಡಾ. ಪ್ರಣವಾನಂದ ಸ್ವಾಮೀಜಿ ಅವರು ಸಮಾಜದ ಅಭಿವೃದ್ಧಿಗಾಗಿ 18 ಬೇಡಿಕೆಗಳನ್ನು ಮುಂದಿಟ್ಟುಕೊಂಡು 38 ದಿನಗಳ ಕಾಲ 708 ಕಿ. ಮೀ. ಪಾದಯಾತ್ರೆ ನಡೆಸಿ ಫೆ 12 ರಂದು ಫ್ರೀಡಂ ಪಾರ್ಕ್ ನಲ್ಲಿ ಏರ್ಪಡಿಸಿದ ಶಕ್ತಿ ಪ್ರದರ್ಶನದ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಸಮಾಜದ ಅಭಿವೃದ್ಧಿಗಾಗಿ ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ನಾಯಕನಾಗಿ ಎಲ್ಲ ರೀತಿಯ ಬೆಂಬಲವನ್ನು ನೀಡುವುದಾಗಿ ಸ್ಪಷ್ಟ ಭರವಸೆ ಕೊಟ್ಟಿದ್ದಾರೆ. ಈಡಿಗ ಸೇರಿದಂತೆ 26 ಪಂಗಡಗಳ ಸೂಕ್ಷ್ಮ ವಿಷಯಗಳನ್ನು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಲಾಗಿದ್ದು ಶೀಘ್ರದಲ್ಲೇ ಮುಖಂಡರ ಸಭೆ ಕರೆಯುವುದಾಗಿ ವಾಗ್ದಾನ ನೀಡಿದ್ದು ಡಾ. ಪ್ರಣವಾನಂದ ಸ್ವಾಮೀಜಿ, ಎಚ್ ಆರ್ ಶ್ರೀನಾಥ್ ಸೇರಿದಂತೆ ಐದು ಜನರ ನಿಯೋಗದೊಂದಿಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಮತ್ತು ಸಮಾಜದ ಬೇಡಿಕೆಗಳನ್ನು ಮುಂದಿನ ಬಜೆಟ್ಟಿನಲ್ಲಿ ಈಡೇರಿಸುವ ಪೂರ್ಣ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿರುವುದಾಗಿ ಮಾಧ್ಯಮದವರಿಗೆ ಮಾಲಿಕಯ್ಯ ಗುತ್ತೇದಾರ್ ತಿಳಿಸಿದರು.
ಸಮುದಾಯದ ಒಗ್ಗಟ್ಟನ್ನು ಮುರಿದು ತಮ್ಮ ಸ್ವಂತ ಬೇಳೆ ಬೇಯಿಸಲು ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ ಮತ್ತು ಇತರ ಕೆಲವು ವ್ಯಕ್ತಿಗಳು ತೆರೆಮರೆಯಲ್ಲಿ ಸಿಎಂ ಅವರಿಗೆ ತಪ್ಪು ಸಂದೇಶಗಳನ್ನು ನೀಡಿ ಸಮುದಾಯದ ಅಭಿವೃದ್ಧಿಯಾಗದಂತೆ ಅಡ್ಡಗಾಲು ಹಾಕುತ್ತಿರುವುದರ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಲಾಗಿದೆ ಮತ್ತು ಸಂದರ್ಭ ಬಂದರೆ ಇಂತಹ ದುಷ್ಟ ಶಕ್ತಿಗಳ ವಿರುದ್ಧ ಪ್ರತಿಭಟನೆ ಮಾಡಲು ರಾಜ್ಯದ ಸಮುದಾಯದ ಬೆಂಬಲ ಅಗತ್ಯ. ಅದಕ್ಕಾಗಿ ಸಿದ್ಧತೆ ಕೂಡಾ ಮಾಡಲಾಗುವುದು ಎಂದು ಗುತ್ತೇದಾರ್ ಎಚ್ಚರಿಕೆ ನೀಡಿದರು.
ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷದಲ್ಲಿರುವ ಸಮುದಾಯದ ಸಚಿವರು ಮತ್ತು ಶಾಸಕರ ಬಳಿಗೆ ತೆರಳಿ ಸೌಹಾರ್ದಯುತವಾಗಿ ಸಮಾಜದ ಅಭಿವೃದ್ಧಿಗೆ ಎಲ್ಲರೂ ಕಂಕಣಬ ದ್ಧರಾಗುವಂತೆ ಮಾತುಕತೆಯನ್ನು ನಡೆಸಲಾಗುವುದು. ಇದಕ್ಕೆ ಸಮುದಾಯದ ಶಾಸಕರು, ಸಚಿವರು ಸ್ಪಂದನೆ ನೀಡಬೇಕು ಎಂದು ಮನವಿ ಮಾಡಿದರು.
ಡಾ ಪ್ರಣವಾನಂದ ಸ್ವಾಮೀಜಿಯವರು ಸಮುದಾಯದ ಸ್ವಾಮೀಜಿಯಾಗಿದ್ದು ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡವರಲ್ಲ. ಸ್ವಾಮೀಜಿಗಳಿಗೆ ಪಕ್ಷದ ಬಣ್ಣ ಹಚ್ಚಿ ಮುಖ್ಯಮಂತ್ರಿಗಳಿಗೆ, ಸಚಿವರಿಗೆ ತಪ್ಪು ಸಂದೇಶ ನೀಡಿ ಹೋರಾಟದ ದಿಕ್ಕನ್ನು ಬದಲಾಯಿಸುವ ಕಪಟ ಬುದ್ಧಿಯ ನಾಯಕರುಗಳಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಗುಡುಗಿದರು.
ಸ್ವಾಮೀಜಿಯವರು ಕೂಡ ಸಮಾಜದ ಹಿತಕ್ಕಾಗಿ ಪಕ್ಷ ಬೇಧ ಪಂಗಡವಿಲ್ಲದೆ ಹೋರಾಟ ಮಾಡಿ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕವಾದ ಪ್ರಯತ್ನ ಮುಂದುವರಿಸಲಿ. ಅದಕ್ಕೆ ಸಂಪೂರ್ಣ ಬೆಂಬಲವನ್ನು ಕಾಂಗ್ರೆಸ್ ಸರ್ಕಾರ ನೀಡುತ್ತದೆ ಎಂದು ಭರವಸೆ ನೀಡಿದರು.
ಮುಖ್ಯಮಂತ್ರಿಗಳ ಜೊತೆ ಎಚ್ ಆರ್ ಶ್ರೀನಾಥ್ ಸಮ್ಮುಖದಲ್ಲಿ ನಡೆದ ಮಹತ್ವದ ಮಾತುಕತೆ ನಂತರ ಅವರ ಮಾರ್ಗದರ್ಶನದಂತೆ ಸಚಿವ ಶಿವರಾಜ್ ತಂಗಡಗಿ ಎರಡು ಬಾರಿ ಮುಷ್ಕರ ಸ್ಥಳಕ್ಕೆ ಆಗಮಿಸಿ ಸಂಧಾನ ನಡೆಸಿ ಕರ್ನಾಟಕದ ಸಮಸ್ತ ಈಡಿಗ ಸಮುದಾಯದ ಜನರ ಬೇಡಿಕೆಗಳಿಗೆ ಪ್ರಾಮಾಣಿಕ ಸ್ಪಂದನೆ ಸಾಧ್ಯವಾಯಿತು. ಅದಕ್ಕಾಗಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಸಚಿವ ತಂಗಡಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ರಾಜ್ಯದಲ್ಲಿ ಈಡಿಗ ಸಮುದಾಯದ ಎಲ್ಲರೂ ಒಗ್ಗಟ್ಟಿನ ಮಂತ್ರ ಜಪಿಸಲು ಎಲ್ಲರೂ ಪ್ರಾಮಾಣಿಕವಾಗಿ ಒಗ್ಗೂಡಬೇಕು ಎಂದು ಗುತ್ತೇದಾರ್ ಕರೆ ನೀಡಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

