ಭರತ ವರ್ಷದ ಒಳಗೆ ಭಾರತಿಯ ಮಡಿಲೊಳಗೆ
ಮೆರೆವ ತುಳುನಾಡೆಂಬ ಪುಣ್ಯ ಧರೆಯು
ಕೀರ್ತಿ ಮೆರೆಯಿತು ಜಗದಿ
ಸಿಂಹಿಣಿಯ ಭುಜಬಲಕೆ
ಅಭಯರಾಣಿಯ ವೀರ ಪೌರುಷದ ಗಾಥೆಗೆ
ಸಂಪತ್ತು ತುಂಬಿತ್ತು ಕೆಟ್ಟ ದೃಷ್ಟಿಯು ಬಿದ್ದಿತ್ತು
ಇಳೆಯ ಅಧಿಕಾರಕ್ಕೆ ವ್ಯಾಮೋಹ ಬೆಳೆದಿತ್ತು
ವ್ಯಾಪಾರ ಬದಿಗಿರಿಸಿ ಆಳುವ ಮನದ ಬಯಕೆಗೆ
ದಗದಗಿಸಿ ಉರಿಯಿತು ಭೂಲೋಕ ಸ್ವರ್ಗ
ಕೆಂಚರ ಕಣ್ಣು ಬಂದರಲಿ ನೆಟ್ಟಿತ್ತು
ಅದ ಪಡೆಯುವ ಹಪಹಪಿಯು ಮನದೊಳಗೆ ಕುಣಿದಿತ್ತು
ತಡೆಗೋಡೆಯೊಂದು ಎದೆಯನ್ನು ಹಿಂಡಿತ್ತು
ಅಬ್ಬಕ್ಕಳೆಂಬ ಹೆಸರಲ್ಲಿ ಅದು ಮೆರೆದಿತ್ತು
ಬರಿ ಹೆಣ್ಣಲ್ಲ ಇವಳು ಸ್ವಯಂ ದುರ್ಗೆಯೇ ಈಕೆ
ಮಾವ ತಿರುಮಲರ ಚತುರ ಶಿಷ್ಯೆ ವೀರ ವನಿತೆ
ಆತ್ಮಾಭಿಮಾನಕೆ ಪತಿಮನೆಯ ತೊರೆದವಳು
ನಾಡ ರಕ್ಷಣೆಗಾಗಿ ಖಡ್ಗವನ್ನು ಹಿಡಿದವಳು
ಪರಕೀಯರ ದಂಡಿಗೆ ಕಾಳಿಯಾದವಳು
ಕಡಲ ನೀರಿಗೆ ರಕ್ತದ ತರ್ಪಣವನಿತ್ತವಳು
ಬರಿಯ ಹೆಣ್ಣಲ್ಲ ಇವಳು ಸ್ವತಂತ್ರ ಹೋರಾಟಕೆ ಮುನ್ನುಡಿಯ ಬರೆದವಳು
ಅಗ್ನಿ ಬಾಣಗಳ ಮಳೆಯನ್ನೇ ಸುರಿಸಿದವಳು
ಅರಿಯ ಗುಂಡಿಗೆಯ ತರತರನೆ ನಡುಗಿಸಿದವಳು
ನಮ್ಮತನಕ್ಕೊಂದು ಮೂರ್ತ ರೂಪ ಆದವಳು
ಬರಿಯ ಹೆಣ್ಣಲ್ಲ ಇವಳು
ಕಪ್ಪ ಕೊಡೆನೆಂದು ಸೆಟೆದು ನಿಂತವಳು
ಅಮಿತ ಕಡಲನ್ನೇ ರಣರಂಗವಾಗಿಸಿದವಳು
ಗೆರಟೆ ತೆಂಗಿನ ಸೂಟೆಗಳನ್ನೇ ಆಯುಧವಾಗಿಸಿದವಳು
ಖಳರ ಕರುಳನ್ನೇ ಬಗೆದ ರಣಚಂಡಿ ಇವಳು
ರಾಣಿಯಾಗಿದ್ದರೂ ಸಾಮಾನ್ಯಳಂತೆ ಇದ್ದವಳು
ಹಮ್ಮು ಬಿಮ್ಮಿನ ಒಳಗೆ ಲೋಪವಾಗದೆ ಉಳಿದವಳು
ಹೆಣ್ಣು ಅಬಲೆಯಲ್ಲವೆಂದು ಜಗಕೆ ಸಾರಿದವಳು
ಅರಿಗಳ ತರಿದು ಪ್ರಜೆಗಳಿಗೆ ಸ್ವಯಂ ತಾಯಿಯಾಗಿ ಮೆರೆದವಳು
ವಜ್ರದ ಹೊಳಪು ಕಬ್ಬಿಣವ ಸುಡುತಿತ್ತು
ತನ್ನವರ ಮೋಸದ ಬಲೆಗೆ ಬಿದ್ದು ಹೊರಳಾಡಿ ಬಿಟ್ಟಿತ್ತು
ಕೊನೆಯುಸಿರಿರುವವರೆಗೆ ಅಜೇಯಳಾಗಿದ್ದವಳು
ರಣದಲ್ಲಿ ಚಂಡಿ ಮಮತೆಯಲಿ ತಾಯಿ
ನಮ್ಮ ಮಣ್ಣಿನ ಹೆಮ್ಮೆ ಅಬ್ಬೆ ಅಬ್ಬಕ್ಕ ಇವಳು
ಬರಿಯ ಹೆಣ್ಣಲ್ಲ ಇವಳು.
- ಗೀತಾ ಲಕ್ಷ್ಮೀಶ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


