ಬ್ರಹ್ಮಾವರ: ಸಮಾಜಮುಖಿ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಜನಸೇವಾ ಟ್ರಸ್ಟ್ (ರಿ.), ಗಿಳಿಯಾರು ವತಿಯಿಂದ ವರ್ಷಂಪ್ರತಿ ಆಯೋಜಿಸಲಾಗುವ ಸಾಂಸ್ಕೃತಿಕ–ಧಾರ್ಮಿಕ ಉತ್ಸವ “ಅಭಿಮತ ಸಂಭ್ರಮ” ಈ ಬಾರಿ 2026ರ ಫೆಬ್ರವರಿ 14ರ ಮುಸ್ಸಂಜೆ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ನಡೆಯಲಿದೆ.
ಸಮಾಜದ ಸ್ವಾಸ್ಥ್ಯ ಮತ್ತು ಸುಖಕ್ಕಾಗಿ ಸಾಸಿವೆ ಗಾತ್ರದ ಯೋಗದಾನವಾದರೂ ನಮ್ಮದಾಗಲಿ ಎಂಬ ಆಶಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಜನಸೇವಾ ಟ್ರಸ್ಟ್, ಹಸಿರು ಕಾರ್ಯಚಟುವಟಿಕೆಗಳು, ದೇವಾಲಯಗಳ ಆವರಣದಲ್ಲಿ ದೇವವೃಕ್ಷಾರೋಪಣೆ, ಕಣ್ಣಿನ ತಪಾಸಣೆ ಹಾಗೂ ಪೊರೆ ಶಸ್ತ್ರಚಿಕಿತ್ಸಾ ಶಿಬಿರಗಳು, ರೈತಪರ ಹೋರಾಟ, ರಕ್ತದಾನ ಶಿಬಿರಗಳು, ಹೊಲಿಗೆ ಯಂತ್ರ ವಿತರಣೆ, ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮನೆ ನಿರ್ಮಾಣ, ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ, ಮಾದಕ ವ್ಯಸನಗಳ ವಿರುದ್ಧ ಜಾಗೃತಿ ಕಾರ್ಯಕ್ರಮಗಳು, ಕೋವಿಡ್ ಸಂದರ್ಭದಲ್ಲಿ ಆಹಾರ–ಔಷಧ ವಿತರಣೆ ಹಾಗೂ ಶವ ಸಂಸ್ಕಾರ ಸೇರಿದಂತೆ ಹತ್ತಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.
ಅಭಿಮತ ಸಂಭ್ರಮದ ಅಂಗವಾಗಿ ಸಾಧನೆಯ ಹೊಸ ಎತ್ತರಗಳನ್ನು ತಲುಪಿದ ಸಾಧಕರನ್ನು ಗೌರವಿಸುವ “ಕೀರ್ತಿ ಕಲಶ ಪ್ರದಾನ” ಕಾರ್ಯಕ್ರಮ ನಡೆಯಲಿದೆ. ಇದುವರೆಗೆ ತುಳುನಾಡಿನ ಕೊರಗ ಸಮುದಾಯದ ಹಿರಿಯ ಗುರುವ ಕೊರಗ, ಕುಂದಾಪ್ರ ಕನ್ನಡದ ವಾಗ್ಮಿ ಮನು ಹಂದಾಡಿ, ಸಂಗೀತ ನಿರ್ದೇಶಕ ರವಿ ಬಸೂರು, ಧಾರ್ಮಿಕ ಮುಂದಾಳು ಶ್ರೀ ಬಿ. ಅಪ್ಪಣ್ಣ ಹೆಗ್ಡೆ, ಉಡುಪಿ ಮಾನವ ಹಕ್ಕುಗಳ ಪ್ರತಿಷ್ಠಾನದ ಡಾ. ರವೀಂದ್ರನಾಥ ಶಾನುಭಾಗ್, ಸಿನಿ ನಿರ್ದೇಶಕರಾದ ರಿಷಬ್ ಶೆಟ್ಟಿ ಹಾಗೂ ಯೋಗರಾಜ್ ಭಟ್, ಹಿರಿಯ ನಟ ಅನಂತನಾಗ್, ಭಾಗವತೋತ್ತಮ ಜಿ.ಆರ್. ಕಾಳಿಂಗ ನಾವಡ (ಮರಣೋತ್ತರ) ಮತ್ತು ಸಮಾಜಸೇವಾ ಧುರೀಣ ಆನಂದ ಸಿ. ಕುಂದರ್ ಸೇರಿದಂತೆ ಹಲವರು ಈ ಗೌರವಕ್ಕೆ ಭಾಜನರಾಗಿದ್ದಾರೆ.
ಇದೇ ವೇಳೆ ಸವಾಲುಗಳನ್ನು ಅವಕಾಶಗಳಾಗಿ ರೂಪಿಸಿಕೊಂಡು ಯಶಸ್ಸು ಕಂಡ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಸಾಧನೆಗಳನ್ನು ಪರಿಚಯಿಸುವ “ಯಶೋಗಾಥೆ ಗೌರವಾದರ” ಕಾರ್ಯಕ್ರಮವೂ ನಡೆಯಲಿದೆ. ಧಾರ್ಮಿಕ ಭಾಗವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಮಹಾಮೃತ್ಯುಂಜಯ ಯಾಗ, ಮಂತ್ರಾಲಯದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥರ ಮೂಲಕ ಶ್ರೀ ಮೂಲರಾಮರ ಅರ್ಚನೆ, ಶೃಂಗೇರಿ ಜಗದ್ಗುರು ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ ತೀರ್ಥ ಮಹಾಸ್ವಾಮಿಗಳ ಸನ್ನಿಧಿಯಲ್ಲಿ ಸಹಸ್ರ ನಾಳಿಕೇರ ಗಣಯಾಗ ಸೇರಿದಂತೆ ಹಲವು ಧಾರ್ಮಿಕ ಅನುಷ್ಠಾನಗಳು ಈಗಾಗಲೇ ಟ್ರಸ್ಟ್‌ನಿಂದ ನೆರವೇರಿವೆ ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಗಣ್ಯರ ಸ್ಫೂರ್ತಿದಾಯಕ ಉಪನ್ಯಾಸಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸ್ಥಳ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ರಸ್ತೆ, ಬ್ರಹ್ಮಾವರ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

