ಕಥೆ: ಕೇಕ್

Upayuktha
0


ಯಾವತ್ತೂ ಬೇಗ ಮನೆಗೆ ಬರುವವನು ಅವತ್ತು ತಡವಾಯಿತು. ಯಾಕೆ ತಡ ಎಂದರೆ ಆಫೀಸ್ ಅಲ್ಲಿ ಬಾಸ್ ಹೊರಡಲೆಂದು ಬ್ಯಾಗ್ ತಗೊಂಡಾಗ ಒಂದು ಕೆಲಸವಿತ್ತದ್ದರಿಂದ ತಡವಾಯಿತು. ಮನಸಲ್ಲೇ ನಿರ್ಧರಿಸಿದ, ನಾಳೆಯಿಂದ ಬ್ಯಾಗ್ ತರಬಾರದು, ಬ್ಯಾಗ್ ತಂದರಲ್ಲವೇ ಈ ಬಾಸ್‌ಗೆ ನಾನು ಹೊರಡುವ ವಿಚಾರ ತಿಳಿಯುವುದು, ನೇರ ನನ್ನ ಸಮಯ ಮುಗಿಯುತ್ತಿದ್ದಂತೆ ಎದ್ದುಕೊಂಡು ಬರಬೇಕು ಎಂದು ಅಂದುಕೊಂಡ. 

.

ಜಿಟಿ ಜಿಟಿ ಮಳೆ ಬರುತ್ತಿತ್ತು ಹೊರಗೆ, ಇನ್ನೇನು ಕಾರ್ ಹತ್ತಿ ಹೊರಡಬೇಕೆಂದು ಅಂದುಕೊಳ್ಳುವಷ್ಟರಲ್ಲಿ ಆಕಾಶ ತೂತಾದಂತೆ ಮಳೆ ಹುಯ್ಯಲು ಶುರುವಾಯಿತು. ಮಳೆ ಬಂದರೆ ಟ್ರಾಫಿಕ್ ಆಗುತ್ತದೆ, ಮನೆಗೆ ತಲುಪಲು ಇನ್ನೂ ತಡವಾಗುತ್ತದೆ, ಇದನ್ನೆಲ್ಲ ಮನಸ್ಸಲ್ಲಿಟ್ಟುಕೊಂಡೇ ಕಾರ್ ಹತ್ತಿ ತೊಡಗಿದ. ರೇಡಿಯೋದಲ್ಲಿ ಏನೋ ಆಗುತ್ತಿತ್ತು, ಅವನ ಯೋಚನಾ ಲಹರಿ ಮಾತ್ರ ಮಧ್ಯಾಹ್ನ ಬಾಸ್ ಹೇಳಿದ ಮಾತೇ ರಿಂಗಣಿಸುತ್ತಿತ್ತು. ದಿನಂಪ್ರತಿ ಬೆಳಗ್ಗಿಂದ ಕತ್ತೆಯಂತೆ (ಹಿಂದಿನ ಕಾಲದ ಕತ್ತೆ, ಈಗಿನ ಕಾಲದ ಕತ್ತೆ ಕೆಲ್ಸ ಮಾಡಲ್ಲ) ದುಡಿದ ಅವನಿಗೆ, “ನೀವೇನ್ರಿ ಕೆಲ್ಸನೇ ಮಾಡಲ್ಲ, ಮಾಡಿದ್ದೆಲ್ಲ ಕೆಲ್ಸ ಸರೀನೂ ಇರಲ್ಲ. ಕೇಳಿದ್ರೆ ಅದು ಇದು ಅಂತ ಸಬೂಬು ಹೇಳಿ ನುಣುಚಿಕೊಳ್ಳುವ ಮನುಷ್ಯ ನೀವು” ಎಂದೆಲ್ಲಾ ಹೇಳಿದ್ದು ತಲೆಯಲ್ಲಿ ಗಿರಕಿ ಹಾಕುತ್ತಿತ್ತು.


ಅವನೊಬ್ಬ ಸತ್ಯವಂತ ಪ್ರಾಮಾಣಿಕ ನಿಷ್ಠಾವಂತ ಕೆಲಸಗಾರ, ಅಂತವನಿಗೆ ಈ ಮಾತು ಕೇಳಿ ಹೇಗಾಗಿರಬೇಡ. ಜೋರಾಗಿ ಇಕ್ಕುತ್ತಿರುವ ಮಳೆಯ ನಡುವೆ ಇಂಚಿಂಚಾಗಿ ಕಾರ್ ಬಿಡುತ್ತಾ ಮನೆಯ ಕ್ರಾಸ್ ಗೆ ಬಂದ.  ಇನ್ನೇನು ಮನೆ ಬಂತು ಎನ್ನಲು, ಮನೆ ತುಂಬಾ ನೆಂಟರು ಇರುವುದು ಕಂಡು ಬಂತು. 

ಏನಿದು ನನ್ನದೇ ಮನೆ ಹೌದೋ ಅಲ್ಲವೋ ಎಂದು ಸಂಶಯ ಬಂದು ಕಾರ್ ಇಂದ ಕೆಳಗೆ ಇಳಿಯಲು ಮತ್ತೆ ಮಳೆಯ ತಾಳ ಜಿಟಿ ಜಿಟಿ ಗೆ ತಲುಪಿತು. 

ಫಳ್ ಎಂದು ಮಿಂಚಲು ಅವನಿಗೆ ತಾನೇನೋ ಮರೆತೆ ಎಂದು ಭಾಸವಾಯಿತು. ಮಗಳ ಐದನೇ ವರ್ಷದ ಹುಟ್ಟುಹಬ್ಬಕ್ಕೆ ಹೆಂಡತಿ ಕೇಕ್ ತರಲು ಹೇಳಿದ್ದು ಅವನಿಗೆ ಆಫೀಸ್ ನ ಗಡಿಬಿಡಿಯಲ್ಲಿ ಸಂಪೂರ್ಣವಾಗಿ ಮರೆತು ಹೋಗಿತ್ತು. ಮತ್ತೆ ಕಾರ್ ಗೆ ಹತ್ತಿದ ಅವನು ಹತ್ತಿರದ ಕೇಕ್ ಶಾಪ್‌ಗೆ ಹೋದ, ಆರ್ಡರ್ ಮಾಡಿಟ್ಟಿದ್ದ ಕೇಕು ಆಫೀಸ್ ಡ್ರಾವರ್ ನಲ್ಲಿತ್ತು.


ಡ್ರಾವರ್ ಅಲ್ಲಿರುವ ಕೇಕ್ ನಾಳೆ ನೋಡಿದರಾಯಿತು ಇವತ್ತಿಗೆ ಬೇರೆ ತೆಗೆದುಕೊಂಡು ಹೋಗುವ ಎಂದು ಹತ್ತಿರದ ಅಂಗಡಿಯಿಂದ ಬೇರೊಂದು ಕೇಕು ಖರೀದಿಸಿ ಮನೆಗೆ ತಲುಪಿದ. 

.

ಮನೆ ತಲುಪಿದ ಅವನಿಗೆ ಮನೆಯಲ್ಲಿ ಬಾಸ್ ಇರುವುದು ಕಾಣಿಸಿತು, ಈ ಮನುಷ್ಯ ಇಲ್ಲೂ ಯಾಕೆ ಬಂದ ಎಂದು ಅನಿಸಿತು. ಮನೆ ಮೆಟ್ಟಿಲು ಹತ್ತುತ್ತಿದ್ದಂತೆ ಬಾಸ್ ಬಂದು ರಟ್ಟಿನ ಬಾಕ್ಸ್ ಕೊಟ್ಟು, “ಏನ್ ಮಾರಾಯ ಆಫೀಸ್ ಅಲ್ಲಿ ಹೇಗೂ ಅರ್ಧಂಬದ್ಧ ಕೆಲ್ಸ ಮಾಡೋದು, ಕನಿಷ್ಠ ಹೆಂಡ್ತಿ ಹೇಳಿದ ಕೇಕು ಆದ್ರೂ ತಗೊಂಡ್ ಹೋಗ್ಬಾರ್ದ” ಎಂದು ಅವನು ಆಫೀಸ್ ಅಲ್ಲಿ ಬಿಟ್ಟುಬಂದ ಕೇಕು ಬಾಕ್ಸ್ ಕೊಟ್ಟ.


ಅಷ್ಟೊತ್ತು ಸಹಿಸಿದವನಿಗ ಆಗ ಬಂತು ಎಲ್ಲಿಲ್ಲದ ಸಿಟ್ಟು, “ನೋಡ್, ನಾನ್ ಕೆಲ್ಸ ಮಾಡ್ತೀನಿ, ಎಷ್ಟ್ ಮಾಡ್ತೀನಿ ಅಂತ ನನಗೆ ಚೆನ್ನಾಗಿ ಗೊತ್ತು, ನೀವು ಹೇಳಿದ್ದ್ ಅಷ್ಟೇ ಅಲ್ದೆ ಅದ್ಕೆ ಒಂದೆರಡು ಜಾಸ್ತಿ ಸೇರ್ಸಿ ನಾನು ಕೆಲ್ಸ ಮಾಡ್ತೀನಿ. ನೀವು ಈ ರೀತಿ ಮಾತಾಡಿದ್ರೆ ಚೆನ್ನಾಗಿರಲ್ಲ, ನಾಳೆಯಿಂದ ನನ್ ಜಾಗಕ್ಕೆ ನಿಮ್ಗೆ ಯಾರನ್ನ ಬೇಕು ಅವರನ್ನೇ ಹಾಕಿ ಕೆಲ್ಸ ಮಾಡಿ ಸಾಯ್ರಿ” ಎಂದು ರಪ್ಪನೆ ಬಾಸ್ ತಂದ ಕೇಕ್ ಬಾಸ್ ನ ಮುಖಕ್ಕೆ ಬಡಿದು ಒಳಕ್ಕೆ ನಡೆದ. 

ನೆರೆದವರು ಅವಕ್ಕಾಗಿ ನೋಡುತ್ತಿದ್ದರು.


ಮಗಳು ಬಂದವಳು ಅಪ್ಪಾ ಕೇಕು ನೋಡೋಕೆ ಚೆನ್ನಾಗಿದೆ, ಕಟ್ ಮಾಡೋಣವ ಎಂದಳು. ಬಂದವರಲ್ಲಿ ಅರ್ಧ ಮಂದಿಗೆ ಅವನ ಸಿಟ್ಟು ತಿಳಿದಿತ್ತು, ಮಿಕ್ಕುಳಿದವರಿಗೆ ಅಂದು ತಿಳಿಯಿತು - ಅವನ ಬಾಸ್ ಗೂ ಸೇರಿ. 


ಒಳಗಿನ ಬಾಗಿಲ ಸಂದಿಯಿಂದ ಆ ಸುಂದರವಾದ ಒಬ್ಬ ಹೆಣ್ಣು ನಸು ನಕ್ಕಳು, ಅವಳಿಗೆ ತಿಳಿದಿತ್ತು ಅವನ ಅನಿವಾರ್ಯತೆ ಆ ಸಂಸ್ಥೆಯಲ್ಲಿ.

ಅವನ ಹೆಂಡತಿ, ಅವಳಿಗೆ ಅವನು ಮುಂದಿನ ವಾರದಲ್ಲಿ ಹೊಸ ಸಂಸ್ಥೆ ಸ್ಥಾಪಿಸಲಿರುವ ವಿಷಯವೂ ತಿಳಿದಿತ್ತು.


-ಸಚಿನ್ ಕುಳಮರ್ವ



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top