ಮಚ್ಚೂರು ಕ್ರಾಸ್ ಬಳಿ ಎನ್‌ಎಚ್–169 ರಸ್ತೆ ದುರಸ್ತಿ: 30 ದಿನ ಸಂಚಾರ ಮಾರ್ಗ ಬದಲಾವಣೆ

Upayuktha
0


ಮಂಗಳೂರು, ಫೆ. 10: ಮಂಗಳೂರು ತಾಲೂಕಿನ ಬಜಪೆ ಎಡಪದವಿನ ಮಚ್ಚೂರು ಕ್ರಾಸ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ–169 ರಲ್ಲಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ, ಫೆಬ್ರವರಿ 12ರಿಂದ ಮಾರ್ಚ್ 13ರವರೆಗೆ 30 ದಿನಗಳ ಕಾಲ ಸಂಚಾರ ಮಾರ್ಗಗಳಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಇಲಾಖೆ ಪ್ರಕಟಿಸಿದೆ.


ಘನ ವಾಹನಗಳ ನಿರಂತರ ಸಂಚಾರದಿಂದ ಮಂಗಳೂರು–ಮೂಡಬಿದ್ರೆ ನಡುವಿನ ಹಳೆಯ ರಸ್ತೆ ಬಿರುಕು ಬಿಟ್ಟು, ಕೆಲವೆಡೆ ಕುಸಿತ ಕಾಣಿಸಿಕೊಂಡಿರುವುದರಿಂದ ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ದುರಸ್ತಿ ಕಾಮಗಾರಿ ಕೈಗೊಂಡಿದೆ. ಈ ಅವಧಿಯಲ್ಲಿ ಸದರಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುತ್ತದೆ.


ಬದಲಿ ಸಂಚಾರ ಮಾರ್ಗಗಳು:

ಮಾರ್ಗ ಬದಲಾವಣೆಯ ಅವಧಿಯಲ್ಲಿ ಮಂಗಳೂರು ಹಾಗೂ ಮೂಡಬಿದ್ರೆ ನಡುವಿನ ಸಂಚಾರಕ್ಕೆ ಕೆಳಕಂಡ ಬದಲಿ ರಸ್ತೆಗಳನ್ನು ಬಳಸುವಂತೆ ಪೊಲೀಸ್ ಇಲಾಖೆ ಸೂಚಿಸಿದೆ.


ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಲಾರಿಗಳು ವಿದ್ಯಾಗಿರಿ ಮುಲ್ಕಿ ಕ್ರಾಸ್‌ನಲ್ಲಿ ಬಲಕ್ಕೆ ತಿರುಗಿ ಕಿನ್ನಿಗೋಳಿ ರಸ್ತೆಯ ಮೂಲಕ ಪಕ್ಷಿಕೆರೆ ಕ್ರಾಸ್ ತಲುಪಿ, ಅಲ್ಲಿಂದ ಮುಲ್ಕಿ ಜಂಕ್ಷನ್–ಸುರತ್ಕಲ್ ಮೂಲಕ ಮಂಗಳೂರು ಪ್ರವೇಶಿಸಬೇಕು. ಮಂಗಳೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಸಂಚರಿಸುವ ಲಾರಿಗಳಿಗೂ ಇದೇ ಮಾರ್ಗ ಅನ್ವಯಿಸುತ್ತದೆ.


ಇತರ ಎಲ್ಲಾ ಲಘು ವಾಹನಗಳು ವಿದ್ಯಾಗಿರಿ ಮುಲ್ಕಿ ಕ್ರಾಸ್ ಮೂಲಕ ಕಿನ್ನಿಗೋಳಿ ರಸ್ತೆಯಲ್ಲಿ ಸಂಚರಿಸಿ ಮೂರುಕಾವೇರಿ–ಕಟೀಲು–ಪೆರ್ಮುದೆ–ಬಜಪೆ ಮಾರ್ಗವಾಗಿ ಅಥವಾ ಪಕ್ಷಿಕೆರೆ ಕ್ರಾಸ್‌ನಿಂದ ಹಳೆಯಂಗಡಿ–ಸುರತ್ಕಲ್ ಮೂಲಕ ಮಂಗಳೂರು ಪ್ರವೇಶಿಸಬಹುದು. ಮಂಗಳೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಸಂಚರಿಸುವ ಲಘು ವಾಹನಗಳಿಗೂ ಇದೇ ಮಾರ್ಗವನ್ನು ಸೂಚಿಸಲಾಗಿದೆ.


ಮೂಡಬಿದ್ರೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಸಾರ್ವಜನಿಕ ರೂಟ್ ಬಸ್ಸುಗಳು ಹಾಗೂ ಸ್ಥಳೀಯರ ಲಘು ವಾಹನಗಳು ಮಾತ್ರ ದಡ್ಡಿ ಕ್ರಾಸ್‌ನಲ್ಲಿ ಬಲಕ್ಕೆ ತಿರುಗಿ ಪುಮಾರ್ ಪದವು ಕ್ರಾಸ್, ಮಂಜನ ಕಟ್ಟೆ ಕ್ರಾಸ್, ಅರ್ಜುನಕೋಡಿ, ಈಶ್ವರಕಟ್ಟೆ ಕ್ರಾಸ್ ಮೂಲಕ ಮುಚ್ಚೂರು ಕ್ರಾಸ್ ತಲುಪಿ, ಅಲ್ಲಿಂದ ಕೈಕಂಬ–ಗುರುಪುರ ಮಾರ್ಗವಾಗಿ ಮಂಗಳೂರು ಪ್ರವೇಶಿಸಬೇಕು.


ಮಂಗಳೂರು ಕಡೆಯಿಂದ ಗುರುಪುರ–ಕೈಕಂಬ ಮೂಲಕ ಮೂಡಬಿದ್ರೆ ಕಡೆಗೆ ತೆರಳುವ ಸಾರ್ವಜನಿಕ ರೂಟ್ ಬಸ್ಸುಗಳು ಮತ್ತು ಸ್ಥಳೀಯರ ಲಘು ವಾಹನಗಳು ಗಂಜಿಮಠದ ಬಳಿಕ ಮುಚ್ಚೂರು ಕ್ರಾಸ್‌ನಲ್ಲಿ ಎಡಕ್ಕೆ ತಿರುಗಿ ಈಶ್ವರಕಟ್ಟೆ ಕ್ರಾಸ್, ಅರ್ಜುನಕೋಡಿ, ಮಂಜನ ಕಟ್ಟೆ ಕ್ರಾಸ್, ಪುಮಾರ್ ಪದವು ಕ್ರಾಸ್ ಹಾಗೂ ದಡ್ಡಿ ಕ್ರಾಸ್ ಮೂಲಕ ಮೂಡಬಿದ್ರೆ ಕಡೆಗೆ ಸಂಚರಿಸಬೇಕು.


ಇದಲ್ಲದೆ, ಮಂಗಳೂರು–ಮೂಡಬಿದ್ರೆ ಮಾರ್ಗವಾಗಿ ಕಾರ್ಕಳ ಕಡೆಗೆ ಸಂಚರಿಸುವ ಎಲ್ಲಾ ಲಾರಿಗಳು ರಾಷ್ಟ್ರೀಯ ಹೆದ್ದಾರಿ–66 ರಲ್ಲಿ ಸುರತ್ಕಲ್–ಮುಲ್ಕಿ–ಪಡುಬಿದ್ರೆ ಮಾರ್ಗವಾಗಿ ಕಾರ್ಕಳ ಕಡೆಗೆ ತೆರಳುವಂತೆ ಸೂಚಿಸಲಾಗಿದೆ.


ರಸ್ತೆ ದುರಸ್ತಿ ಹಾಗೂ ಮಾರ್ಗ ಬದಲಾವಣೆ ಅವಧಿಯಲ್ಲಿ ಕೆಲವೊಂದು ಸಂಚಾರ ಅಡಚಣೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಸಂಯಮ ವಹಿಸಿ, ಸಂಚಾರ ನಿಯಂತ್ರಣ ಕಾರ್ಯದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top