ಲೇಖಾ ಲೋಕ-65: ಕನ್ನಡ ಪತ್ತೇದಾರಿ ಸಾಹಿತ್ಯದ ಪಿತಾಮಹ ಎನ್. ನರಸಿಂಹಯ್ಯ

Upayuktha
0


ಆಂಗ್ಲ ಸಾಹಿತ್ಯದಲ್ಲಿ ಪತ್ತೇದಾರಿ ಕಥೆಗಳ ಮೂಲಕ ಅಮರರಾದ ಶರ್ಲಾಕ್ ಹೋಮ್ಸ್ ಹೇಗೆ ಓದುಗರನ್ನು ಸೆಳೆದರೋ, ಅದೇ ರೀತಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ಪತ್ತೇದಾರಿ ಕಾದಂಬರಿಗಳ ಮೂಲಕ ಜನಮನ ಗೆದ್ದವರು ಎನ್. ನರಸಿಂಹಯ್ಯ. ರೋಚಕತೆ, ಕುತೂಹಲ ಮತ್ತು ಸರಳ ಭಾಷೆಯ ಮೂಲಕ ಕನ್ನಡ ಓದುಗರಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿದ ಮಹತ್ವದ ಲೇಖಕರಾಗಿ ಅವರು ಗುರುತಿಸಲ್ಪಟ್ಟಿದ್ದಾರೆ.


ಎನ್. ನರಸಿಂಹಯ್ಯ ಅವರು ಸಿ. ನಂಜಪ್ಪನವರ ಪುತ್ರರಾಗಿ 1925ರ ಸೆಪ್ಟೆಂಬರ್ 18ರಂದು ಬೆಂಗಳೂರು ನಗರದಲ್ಲಿ ಜನಿಸಿದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಅವರು, ನಂತರ ಆಶ್ರಯ ನೀಡಿದ ಚಿಕ್ಕಪ್ಪನವರನ್ನೂ ಕಳೆದುಕೊಂಡರು. ಕುಟುಂಬದ ಈ ಆಘಾತಗಳಿಂದ ಅವರ ವಿದ್ಯಾಭ್ಯಾಸ ಮಧ್ಯದಲ್ಲೇ ನಿಂತುಹೋಯಿತು. ಆದರೂ ಬದುಕಿನ ಸಂಕಷ್ಟಗಳು ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸಲಿಲ್ಲ.


ಜೀವನ ಸಾಗಿಸಲು ಅವರು ಚಿಕ್ಕಮಗಳೂರಿನಲ್ಲಿ ನೆಲೆಸಿ ಹಲವು ಉಪಕಸುಬುಗಳನ್ನು ಕೈಗೊಂಡರು. ಕೆಲಕಾಲ ಕಾಫಿ ತೋಟದಲ್ಲಿ ಕೆಲಸ ಮಾಡಿದರು. ನಂತರ ಮೂರು ವರ್ಷಗಳ ಕಾಲ ಕೈಗಾರಿಕಾ ಪಾಠಶಾಲೆಯಲ್ಲಿ ತರಬೇತಿ ಪಡೆದರು. 1942ರಲ್ಲಿ ಬಸ್ ಕ್ಲೀನರ್ ಆಗಿ ಉದ್ಯೋಗ ಜೀವನ ಆರಂಭಿಸಿ, ನಂತರ ಬಸ್ ಕಂಡಕ್ಟರ್ ಆಗಿಯೂ ಕೆಲಸ ಮಾಡಿದರು.


1947ರಲ್ಲಿ ನಾಗರತ್ನಮ್ಮ ಅವರೊಂದಿಗೆ ವಿವಾಹವಾದ ನಂತರ, ಅವರು ಬೆಂಗಳೂರು ನಗರದಲ್ಲಿ ಲಾರಿ ಉದ್ಯೋಗಕ್ಕೂ ಸೇರಿದರು.

ಉದ್ಯೋಗದ ಒತ್ತಡದ ನಡುವೆಯೂ ನರಸಿಂಹಯ್ಯನವರು ಓದುವ ಹವ್ಯಾಸವನ್ನು ಬಿಡಲಿಲ್ಲ. ಬೆಂಗಳೂರಿನ ವಾಚನಾಲಯಗಳಲ್ಲಿ ನಿರಂತರವಾಗಿ ಪುಸ್ತಕ ಓದುತ್ತಾ ಸಾಹಿತ್ಯದ ಲೋಕಕ್ಕೆ ನಿಕಟರಾದರು. ಬಳಿಕ ತಮ್ಮ ಬಾಡಿಗೆ ಮನೆಯಲ್ಲಿ ಸಣ್ಣ ವಾಚನಾಲಯವನ್ನೇ ಆರಂಭಿಸಿದರು. ಬಾಲಸರಸ್ವತಿ, ವೆಂಕಟಾಚಾರ್ಯ, ಗುಂಡಾಶಾಸ್ತ್ರಿ ಗುರುರಾಜಾಚಾರ್ಯ ಮೊದಲಾದವರ ಪತ್ತೇದಾರಿ ಕಾದಂಬರಿಗಳನ್ನು ಓದಿ ಸಾಹಿತ್ಯಾಸಕ್ತಿ ಬೆಳೆಸಿಕೊಂಡರು. ವಿಶೇಷವಾಗಿ ಎಂ. ರಾಮಮೂರ್ತಿ ಅವರ ಕೃತಿಗಳು ಇವರಿಗೆ ಬರವಣಿಗೆಯತ್ತ ತೀವ್ರ ಪ್ರೇರಣೆಯಾದವು.


ಈ ಪ್ರೇರಣೆಯಿಂದಲೇ ನರಸಿಂಹಯ್ಯನವರು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಬರವಣಿಗೆ ಆರಂಭಿಸಿದರು. ಅವರ ಕಾದಂಬರಿಗಳಲ್ಲಿ ಪತ್ತೇದಾರಿ ಪುರುಷೋತ್ತಮ ಮತ್ತು ಮಧುಸೂದನ ಎಂಬ ಪಾತ್ರಗಳು ಓದುಗರಲ್ಲಿ ಅಪಾರ ಜನಪ್ರಿಯತೆ ಗಳಿಸಿವೆ. “ಪುರುಷೋತ್ತಮನ ಸಾಹಸ” ಎಂಬ ಕಾದಂಬರಿ ಮಾಲಿಕೆ ಕನ್ನಡ ಪತ್ತೇದಾರಿ ಸಾಹಿತ್ಯದಲ್ಲಿ ಮೈಲುಗಲ್ಲಾಗಿ ಉಳಿದಿದೆ. 1952ರಲ್ಲಿ ಅವರ ಮೊದಲ ಕಾದಂಬರಿ “ಪತ್ತೇದಾರಿ ಪುರುಷೋತ್ತಮ” ಪ್ರಕಟವಾಗಿ ಉತ್ತಮ ಪ್ರತಿಕ್ರಿಯೆ ಪಡೆದಿತು.


ಸಾಹಿತ್ಯ ಜೀವನದಲ್ಲಿ ಅವರು 350ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳು ಹಾಗೂ 50ಕ್ಕೂ ಹೆಚ್ಚು ಸಾಮಾಜಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಭಯಂಕರ ಬೈರಾಗಿ, ವಿಚಿತ್ರ ಕೊಲೆಗಾರ, ಸಾವಿನ ಸೋಲು, ಸೇಡಿನ ಸರ್ಪ, ಮಿತ್ರದ್ರೋಹಿ, ಸಂಶಯದ ಸುಳಿಯಲ್ಲಿ, ರಾಣಿವಾಸದ ರಹಸ್ಯ, ಎರಡು ತಲೆ ಹಾವು ಮೊದಲಾದ ಕೃತಿಗಳು ಕನ್ನಡ ಓದುಗರಲ್ಲಿ ಅಪಾರ ಜನಪ್ರಿಯತೆ ಪಡೆದಿವೆ.


ಕನ್ನಡದಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಜನಸಾಮಾನ್ಯರೊಳಗೆ ವ್ಯಾಪಕಗೊಳಿಸಿದವರಲ್ಲಿ ನರಸಿಂಹಯ್ಯ ಪ್ರಮುಖರು. ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ 1992ರಲ್ಲಿ ದಾವಣಗೆರೆಯಲ್ಲಿ ನಡೆದ 61ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರನ್ನು ಸನ್ಮಾನಿಸಲಾಯಿತು. ಅವರಿಗೆ ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ 2006ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.


ಕನ್ನಡ ಪತ್ತೇದಾರಿ ಸಾಹಿತ್ಯಕ್ಕೆ ದೃಢವಾದ ನೆಲೆಯನ್ನಿಟ್ಟು, ಕುತೂಹಲಭರಿತ ಕಥೆಗಳ ಮೂಲಕ ಓದುಗರ ಮನಸ್ಸನ್ನು ಸೆಳೆದ ಎನ್. ನರಸಿಂಹಯ್ಯ ಅವರು 2011ರ ಡಿಸೆಂಬರ್ 25ರಂದು ವಿಧಿವಶರಾದರು. ಆದರೆ ಅವರ ಕೃತಿಗಳು ಇಂದಿಗೂ ಓದುಗರ ಕೈಯಲ್ಲಿ ಓದಿಸಿಕೊಂಡು, ಕನ್ನಡ ಸಾಹಿತ್ಯದಲ್ಲಿ ಜೀವಂತವಾಗಿಯೇ ಉಳಿದಿವೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top