ವಿಚ್ಛೇದನ ಎಂಬುದು ಇಂದಿನ ದಿನಗಳಲ್ಲಿ ಕೇವಲ ದಂಪತಿಗಳ ನಡುವಿನ ಸಂಬಂಧ ಮುಕ್ತಾಯಗೊಳಿಸುವ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ; ಅದು ಮನೆಗಳೊಳಗೆ ಮೌನವಾಗಿ ಹರಡುತ್ತಿರುವ ಒಂದು ಗಂಭೀರ ಸಾಮಾಜಿಕ ಸಂಕಟವಾಗಿದೆ. ಸಾಮಾಜಿಕ ಜಾಲತಾಣಗಳು ಮತ್ತು ಸುದ್ದಿವಾಹಿನಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ವಿಚ್ಛೇದನ ಪ್ರಕರಣಗಳು, ಸಂಬಂಧಗಳ ಬಿರುಕುಗಳನ್ನು ಮಾತ್ರವಲ್ಲದೆ, ಆ ಬಿರುಕುಗಳ ಮಧ್ಯೆ ಬೆಳೆದುಬರುವ ಮಕ್ಕಳ ಮನಸ್ಸಿನ ನೋವನ್ನೂ ಬಯಲಿಗೆ ತರುತ್ತಿವೆ. ದಾಂಪತ್ಯದ ಬಿರುಕುಗಳಿಗೆ ತೆರೆ ಬೀಳುವಾಗ, ಅದರ ನೆರಳಲ್ಲಿ ಸಂಕಟ ಅನುಭವಿಸುವವರು ಹೆಚ್ಚಿನದಾಗಿ ಮಕ್ಕಳೆಂಬುದು ಈ ಸಂದರ್ಭದ ಅತ್ಯಂತ ನೋವಿನ ವಾಸ್ತವ.
ಇಂದಿನ ಬಹುತೇಕ ವಿಚ್ಛೇದನ ಪ್ರಕರಣಗಳು ತಂದೆ–ತಾಯಿಗಳ ನಡುವಿನ ಅಸಮಾಧಾನ ಮತ್ತು ಕಲಹದಿಂದಲೇ ಹುಟ್ಟಿಕೊಳ್ಳುತ್ತಿವೆ. ಆರಂಭದಲ್ಲಿ ಸಣ್ಣದಾಗಿ ಕಾಣುವ ಜಗಳಗಳು ಕಾಲಕ್ರಮೇಣ ದೊಡ್ಡ ಸಂಘರ್ಷಗಳಾಗಿ ರೂಪುಗೊಂಡು, ಅದರ ನೇರ ಪರಿಣಾಮ ಮಕ್ಕಳ ಮೇಲೆ ಬೀರುತ್ತದೆ. ತಂದೆ–ತಾಯಿಯ ನಡುವಿನ ಬಿರುಕು ಮಕ್ಕಳ ಮನಸ್ಸಿನಲ್ಲಿ ಭಯ, ಅಸುರಕ್ಷಿತ ಭಾವನೆ ಹಾಗೂ ಆತ್ಮವಿಶ್ವಾಸದ ಕೊರತೆಯನ್ನುಂಟುಮಾಡುತ್ತದೆ. ವಿಚ್ಛೇದನದ ನಿಜವಾದ ಬಲಿ ದಂಪತಿಗಳಿಗಿಂತ ಮಕ್ಕಳೇ ಎನ್ನುವುದು ನಿರಾಕರಣೆಯಿಲ್ಲದ ಸತ್ಯ.
ಪ್ರತಿಯೊಂದು ಮಗು ತನ್ನ ತಂದೆ–ತಾಯಿ ಸದಾ ಒಟ್ಟಿಗೆ ಸಂತೋಷದಿಂದ ಬದುಕಬೇಕು ಎಂಬ ಕನಸನ್ನು ಹೊಂದಿರುತ್ತದೆ. ಆದರೆ ಕೆಲವೊಮ್ಮೆ ಪೋಷಕರ ನಡುವಿನ ಜಗಳಗಳಲ್ಲಿ ಮಕ್ಕಳು ಬಲಿಯಾಗುತ್ತಾರೆ. ವಿಚ್ಛೇದನ ಅನಿವಾರ್ಯವಾಗುವ ಸಂದರ್ಭಗಳಿರಬಹುದು; ಆದರೆ ಅಂತಹ ಸಂದರ್ಭದಲ್ಲಿ ಮಕ್ಕಳ ಹಿತಾಸಕ್ತಿಯನ್ನು ಮೊದಲಿಗೊಳಿಸುವುದು ಪೋಷಕರ ನೈತಿಕ ಹಾಗೂ ಸಾಮಾಜಿಕ ಕರ್ತವ್ಯವಾಗಿದೆ.
ಇಂದಿನ ದಿನಗಳಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಪ್ರಕರಣಗಳೂ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅತ್ತೆ–ಮಾವರಿಂದ ಹೆಚ್ಚು ಕೆಲಸ ಕೇಳಿದರು ಅಥವಾ ಸ್ವಲ್ಪ ಗಟ್ಟಿಯಾಗಿ ಮಾತನಾಡಿದರು ಎಂಬ ಕಾರಣಕ್ಕೂ ದಾಂಪತ್ಯ ಜೀವನಕ್ಕೆ ತೆರೆ ಬೀಳುತ್ತಿರುವುದು ಸಮಾಜದ ಸಹಿಷ್ಣುತೆಯ ಕುಗ್ಗುವಿಕೆಯನ್ನು ಸೂಚಿಸುತ್ತದೆ. ಹಿಂದಿನ ಪೀಳಿಗೆಯೊಂದಿಗೆ ಹೋಲಿಸಿದರೆ, ಇಂದಿನ ಪೀಳಿಗೆಯ ಸಂಬಂಧಗಳಲ್ಲಿ ಸ್ಪಷ್ಟವಾದ ಮೌಲ್ಯಾಧಾರಿತ ವ್ಯತ್ಯಾಸ ಕಾಣಿಸುತ್ತಿದೆ.
ಹಿಂದಿನ ಕಾಲದಲ್ಲಿ ಮದುವೆಯಾಗಿ ಗಂಡನ ಮನೆಗೆ ಬಂದ ಮದುಮಗಳು ಅತ್ತೆ–ಮಾವಂದಿರನ್ನು ತನ್ನದೇ ತಂದೆ–ತಾಯಿಯಂತೆ ಗೌರವಿಸುತ್ತಿದ್ದಳು. ಅವರ ಮಾತುಗಳಲ್ಲಿ ಕಠಿಣತೆ ಇದ್ದರೂ ಅದರ ಹಿಂದೆ ಒಳಿತಿನ ಉದ್ದೇಶವಿದೆ ಎಂಬ ಭಾವನೆ ಅವಳಲ್ಲಿ ಇತ್ತು. ಸಹನೆ, ಹೊಂದಾಣಿಕೆ ಮತ್ತು ಪರಸ್ಪರ ಗೌರವವೇ ದಾಂಪತ್ಯದ ಅಡಿಗಲ್ಲಾಗಿತ್ತು.
ಹಿಂದಿನ ದಂಪತಿಗಳಲ್ಲಿಯೂ ಜಗಳಗಳಿರಲಿಲ್ಲ ಎಂದು ಹೇಳಲಾಗದು; ಆದರೆ ಅವು ದೀರ್ಘಕಾಲ ಉಳಿಯುತ್ತಿರಲಿಲ್ಲ. ಹಿರಿಯರು ಹೇಳುತ್ತಿದ್ದಂತೆ, “ಗಂಡ–ಹೆಂಡತಿಯ ಜಗಳ ಉಂಡು ಮಲಗುವ ತನಕ ಮಾತ್ರ.” ಆ ಜಗಳಗಳಲ್ಲಿಯೂ ಪ್ರೀತಿ ಅಡಗಿಕೊಂಡಿತ್ತು. ಇಂದಿನಂತೆ ಕೋರ್ಟ್–ಕಚೇರಿಗಳ ಸುತ್ತಾಟ ಅವರ ಬದುಕಿನ ಭಾಗವಾಗಿರಲಿಲ್ಲ. ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳಬೇಕೆಂಬ ಜಾಣ್ಮೆ ಮತ್ತು ಜವಾಬ್ದಾರಿ ಅವರಿಗೆ ಇತ್ತು.
ಅವತ್ತಿನ ದಿನಗಳಲ್ಲಿ ಪಂಚಾಯಿತಿ ಎಂಬ ವ್ಯವಸ್ಥೆಯ ಮೂಲಕ ಕುಟುಂಬ ಸಮಸ್ಯೆಗಳಿಗೆ ಸಮಾಧಾನಕರ ಪರಿಹಾರ ದೊರಕುತ್ತಿತ್ತು. ವಿಚ್ಛೇದನ ಕೇವಲ ದಂಪತಿಗಳ ಸಂಬಂಧದ ಅಂತ್ಯವಲ್ಲ; ಅದು ಮಕ್ಕಳ ಜೀವನ, ವ್ಯಕ್ತಿತ್ವ ಮತ್ತು ಭವಿಷ್ಯದ ಮೇಲೆ ಆಳವಾದ ಪರಿಣಾಮ ಬೀರುವ ಸಾಮಾಜಿಕ ಸಮಸ್ಯೆಯಾಗಿದೆ. ಆದ್ದರಿಂದ ಜೀವನದಲ್ಲಿ ಎಷ್ಟೇ ದೊಡ್ಡ ಕಷ್ಟಗಳು ಎದುರಾದರೂ, ಅವಕ್ಕೆ ಅಂಜದೆ ಸಂವಾದ, ಸಹನೆ ಮತ್ತು ಪರಸ್ಪರ ಅರಿವಿನ ಮೂಲಕ ಬದುಕನ್ನು ಮುಂದುವರಿಸುವ ಮನೋಭಾವವನ್ನು ಬೆಳೆಸಿಕೊಳ್ಳುವುದು ಅತ್ಯಾವಶ್ಯಕ.
-ದೀಪಿಕಾ, ದೋಳ
ದ್ವಿತೀಯ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಕಾಲೇಜು ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


