ಶುದ್ಧ ಗೌರವ ಪದ್ಮ ಭೂಷಣ
ಖುದ್ದು ಪಡೆದಿಹ ಶತವಧಾನಿಗೆ
ಬದ್ಧಕಂಕಣರಾಗಿ ನಮಿಸುವರೆಲ್ಲ ಸಜ್ಜನರು |
ಗೆದ್ದು ಬಂದವರೀ ಗಣೇಶರು
ಮುದ್ದುತನದಲಿ ವಿಬುಧರೆಲ್ಲರ
ಶ್ರದ್ಧೆಯಿಂದಭಿನಂದಿಸುವೆ ನಾನಿವರ ಸಾಧನೆಗೆ || ೧ ||
ಹಲವು ಭಾಷೆಯ ಕಲಿತು ಶಾರದೆ--
ಯೊಲವ ಗಳಿಸಿದ ಪಂಡಿತೋತ್ತಮ
ನೆಲದ ಸಂಸ್ಕೃತಿ ಗಮಕ ಕಲೆಯನು ಬೆಳೆಸಲಾಧಾರ |
ಸುಲಭ ಸಾಧ್ಯವೆ ಶ್ರೀ ಗಣೇಶರ
ಗೆಲುವ ಜಾಣರ ಸಿದ್ಧ ಪಡಿಸಲು
ಛಲದಿ ಹೋಲಿಸಿ ನೋಡಲೀತನೆ ಕವಿ ಶಿರೋಮಣಿಯು || ೨ ||
ಕಲೆಯ ನೆಲೆಗಳನರಿತುಕೊಳ್ಳುತ
ಹಲವು ವಾಙ್ಮಯ ಸಿದ್ಧಿಹೊಂದುತ
ಬಲಿದ ಕಣಜ ಗಣೇಶ ವಾಲ್ಮೀಕಿ ಮುನಿಗೆಣೆಯೆನುವೆ |
ನಳಿನನಾಭನೆ ಮೆಚ್ಚಿ ಹರಸಿದ
ಚೆಲುವ ಚೆನ್ನಿಗ ನಗೆಮೊಗದವನ
ಭಳಿರೆ ಭಾಪುರೆಯೆನುತ ಸುಜನರು ನಿತ್ಯ ನುತಿಸುವರು || ೩ ||
ನೀವೆ ಕಾವ್ಯಕೆ ಹರಿ ವಿಧಾತರು
ನೀವೆ ಸಿರಿ ವಾಗರ್ಥ ವೇತ್ತರು
ನೀವೆ ಸರಸತಿ ಮಾತೆಯೊಲವನು ಗಳಿಸಿ ಮೆರೆವವರು |
ನೀವು ಹೊಂದಿದ ವಿದ್ಯೆ ವಾರಿಧಿ
ನೀವು ನುಡಿಯುವ ಸತ್ಯ ವೇದವು
ನೀವೆಯವಧಾನಿ ಶತ ಸಾವಿರ ಕಾವ್ಯ ಜಗತಿಯಲಿ || ೪ ||
ಗಮನ ಸೆಳೆಯಿತು ಪದ್ಮಭೂಷಣ
ರಮಣರೆನಿಸಲು ಹಿರಿಯ ಬಿರುದಿಗೆ
ಸುಮನಸರು ಮೆಚ್ಚಿ ತಲೆದೂಗಲು ನಿಮ್ಮ ಸಾಧನೆಗೆ |
ಸಮನಿಸಲು ಸಂತಸವು ಮನದಲಿ
ನಿಮಗೆ ನೀಡುವೆ ಕಾವ್ಯಗುಚ್ಛವ
ಸುಮಗಳನು ಕೋದಿರುವ ಭಾಮಿನಿ ಛಂದ ಮಾಲೆಯನು || ೫ ||
ಛಂದಸ್ಸು: ಭಾಮಿನಿ ಷಟ್ಪದಿ
ಆಶುಕವನ ರಚನೆ:- ವಿ.ಬಿ. ಕುಳಮರ್ವ, ಕುಂಬ್ಳೆ
(ಕೇಂದ್ರ ಸರಕಾರದ ಹೆಮ್ಮೆಯ ಪ್ರಶಸ್ತಿಯಾದ ಪದ್ಮ ಭೂಷಣ ಗೌರವಕ್ಕೆ ಭಾಜನರಾದ ನಮ್ಮ ನಾಡಿನ ಅಭಿಮಾನದ ಘನವಿದ್ವಾಂಸ, ಬಹುಭಾಷಾ ಪಂಡಿತ, ಶತಾವಧಾನಿ, ಆಶುಕವಿ,ಗಮಕಿ ಇತ್ಯಾದಿ ನೂರಾರು ಗೌರವಗಳ ಸಂಕೇತವಾಗಿರುವ ಶ್ರೀ ಡಾ.ಆರ್.ಗಣೇಶ್ ಅವರಿಗೆ ಈ ಪಂಚ ಭಾಮಿನಿ ಷಟ್ಪದಿ ಕುಸುಮಗಳ ಮೂಲಕ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಲು ಸಂತೋಷಪಡುತ್ತೇನೆ)
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


