ಕೌಟುಂಬಿಕ ಮೌಲ್ಯಗಳ ರಕ್ಷಣೆಗೆ ಸಂಸತ್ತಿನಲ್ಲಿ ಗಂಭೀರ ಎಚ್ಚರಿಕೆ
ಮಕ್ಕಳ ವಿದೇಶೀ ಶಿಕ್ಷಣ ಹಾಗೂ ಉದ್ಯೋಗಗಳು ಅನೇಕ ಕುಟುಂಬಗಳಿಗೆ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಗೌರವ ತಂದುಕೊಟ್ಟಿರುವುದು ನಿಸ್ಸಂದೇಹ. ಆದರೆ ಇದೇ ಪ್ರಕ್ರಿಯೆಯ ಮತ್ತೊಂದು ಮುಖವಾಗಿ, ಕೆಲವು ಸಂದರ್ಭಗಳಲ್ಲಿ ಹೆತ್ತವರು ತಮ್ಮದೇ ಮಕ್ಕಳಿಂದ ದೂರವಾಗುತ್ತಾ, ಜೀವನದ ಅಂತಿಮ ಹಂತದಲ್ಲಿ ಅನಾಥರಂತೆ ಬದುಕುವ ದಾರುಣ ಸ್ಥಿತಿಯೂ ಹೆಚ್ಚುತ್ತಿರುವುದು ಆತಂಕಕಾರಿ ವಾಸ್ತವ.
ಈ ಗಂಭೀರ ಸಾಮಾಜಿಕ ಸಮಸ್ಯೆಯ ಬಗ್ಗೆ ಉತ್ತರ ಪ್ರದೇಶದ ಮಾನ್ಯ ಸಂಸದ ರಾಧಾ ಮೋಹನದಾಸ ಅಗರ್ವಾಲ್ ಅವರು ಇತ್ತೀಚೆಗೆ ಸಂಸತ್ತಿನಲ್ಲಿ ಎತ್ತಿದ ಪ್ರಶ್ನೆ ಅತ್ಯಂತ ಸಕಾಲಿಕವೂ, ಆಳವಾದ ಚಿಂತನೆಗೆ ಒತ್ತಾಯಿಸುವಂತದ್ದೂ ಆಗಿದೆ. ಇಂಥ ವಿಷಯಗಳ ಬಗ್ಗೆ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಕೇವಲ ಆರ್ಥಿಕ ಅಥವಾ ಆಡಳಿತಾತ್ಮಕ ದೃಷ್ಟಿಕೋನದಿಂದಲ್ಲ, ಸಾಮಾಜಿಕ ಹಾಗೂ ನೈತಿಕ ಹೊಣೆಗಾರಿಕೆಯ ನೆಲೆಯಲ್ಲಿ ನಿರ್ಧಾರ ಕೈಗೊಳ್ಳಬೇಕಾದ ಅಗತ್ಯವಿದೆ ಎಂಬುದನ್ನು ಅವರ ಮಾತುಗಳು ಸ್ಪಷ್ಟಪಡಿಸುತ್ತವೆ.
ಸಂಘದ ಶತಾಬ್ದಿ ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಂಡ ಪಂಚ ವಿಚಾರಗಳ ಕಾರ್ಯಕ್ರಮಗಳಲ್ಲಿ ‘ಕುಟುಂಬ ಪ್ರಬೋಧನ್’ ಪ್ರಮುಖ ಅಂಶವಾಗಿರುವ ಹಿನ್ನಲೆಯಲ್ಲಿ, ಈ ವಿಚಾರ ಇನ್ನಷ್ಟು ಪ್ರಸ್ತುತತೆಯನ್ನು ಪಡೆದುಕೊಳ್ಳುತ್ತದೆ. ನಮ್ಮ ಸಂಸ್ಕೃತಿಯಲ್ಲಿ ‘ಸಿರಿ ಸುಪ್ಪತ್ತಿಗೆ’ ಎಂದರೆ ಕೇವಲ ಧನ–ಕನಕಗಳ ಸಂಗ್ರಹವಲ್ಲ; ಅದು ಸುಖೀ, ಸಮೃದ್ಧ ಕೌಟುಂಬಿಕ ಮೌಲ್ಯಗಳು, ಪರಸ್ಪರ ನಂಬಿಕೆ, ವಿಶ್ವಾಸಾರ್ಹ ಸಾಮಾಜಿಕ ಸಂಬಂಧಗಳು ಹಾಗೂ ತಲೆಮಾರುಗಳನ್ನು ಕೊಂಡೊಯ್ಯುವ ನಂಟುಗಳಲ್ಲಿಯೂ ಅಡಗಿದೆ. ಅಂಥ ಮೌಲ್ಯಗಳೇ ಆರೋಗ್ಯಕರ ಸಮಾಜದ ನಿಜವಾದ ಪ್ರತಿಬಿಂಬಗಳು ಎಂಬ ನಂಬಿಕೆಯ ಮೇಲೆ ನಿಂತ ಈ ನೆಲದಲ್ಲಿ, ಇಂದಿನ ವಿದೇಶೀ ಶಿಕ್ಷಣ ಮತ್ತು ಉದ್ಯೋಗಗಳ ಪರಿಣಾಮವಾಗಿ ತಂದೆ–ಮಕ್ಕಳ ನಡುವಿನ ಪ್ರೀತಿ, ಗೌರವ ಮತ್ತು ಜವಾಬ್ದಾರಿಗಳ ಸಂಬಂಧಗಳಿಗೆ ಎದುರಾಗಿರುವ ಸವಾಲುಗಳು ಗಂಭೀರ ಚರ್ಚೆಗೆ ಅರ್ಹವಾಗಿವೆ.
ಅನೇಕ ಹೆತ್ತವರು ತಮ್ಮ ಮಕ್ಕಳ ಸುಖೀ ಭವಿಷ್ಯಕ್ಕಾಗಿ ಅಪಾರ ತ್ಯಾಗ ಮಾಡುತ್ತಾರೆ. ತಮ್ಮದೇ ಸುಖವನ್ನು ಬದಿಗೊತ್ತಿ, ಕೆಲವೊಮ್ಮೆ ಸಾಲಸೂಲ ಮಾಡಿಕೊಂಡು ಮಕ್ಕಳನ್ನು ವಿದೇಶೀ ಶಿಕ್ಷಣಕ್ಕೆ ಕಳುಹಿಸುತ್ತಾರೆ; ನಂತರ ವಿದೇಶೀ ಉದ್ಯೋಗಕ್ಕೂ ದಾರಿ ಮಾಡಿಕೊಡುತ್ತಾರೆ. ಆದರೆ ದುಃಖದ ಸಂಗತಿ ಎಂದರೆ, ಕೆಲವು ಸಂದರ್ಭಗಳಲ್ಲಿ ಇದರ ನಂತರ ಆರಂಭವಾಗುವುದು ಹೆತ್ತವರ ಜೀವನದ ಘೋರ ಯಾತನೆ. ರೆಕ್ಕೆ ಬಲಿತ ಹಕ್ಕಿ ಗೂಡನ್ನೇ ಮರೆತಂತೆ, ಕೆಲವು ಮಕ್ಕಳು ತಮ್ಮಿಗಾಗಿ ಜೀವ ತ್ಯಾಗ ಮಾಡಿದ ಹೆತ್ತವರನ್ನೇ ನಿರ್ಲಕ್ಷಿಸುತ್ತಾರೆ. ಪರಿಣಾಮವಾಗಿ, ಜೀವನದ ಉತ್ತರಾರ್ಧವನ್ನು ಹೆತ್ತವರು ತೀವ್ರ ಏಕಾಂತ, ನೋವು ಮತ್ತು ಅಸಹಾಯಕತೆಯಲ್ಲಿ ಕಳೆಯಬೇಕಾದ ಪರಿಸ್ಥಿತಿಗಳು ದಿನೇದಿನೇ ಹೆಚ್ಚುತ್ತಿವೆ.
ಈ ವಾಸ್ತವವನ್ನು ಸಂಸದ ಅಗರ್ವಾಲ್ ಅವರು ಸಂಸತ್ತಿನಲ್ಲಿ ಗಂಭೀರ ಕಳವಳದೊಂದಿಗೆ ಪ್ರಸ್ತಾಪಿಸಿದ್ದಾರೆ. ಮಧ್ಯಪ್ರದೇಶದ ಇಂದೋರಿನಲ್ಲಿ ಇತ್ತೀಚೆಗೆ ನಡೆದ, ವಿದೇಶದಲ್ಲಿದ್ದ ಮಕ್ಕಳು ಕೊನೆಯ ಕ್ಷಣಕ್ಕೂ ಬಾರದೇ ಹೆತ್ತವರು ದಯನೀಯ ಅಂತ್ಯ ಕಂಡ ದುರ್ಘಟನೆಯನ್ನು ಉದಾಹರಿಸಿ, ಇಂಥ ಘಟನೆಗಳು ವೈಯಕ್ತಿಕ ದುರಂತಗಳಷ್ಟೇ ಅಲ್ಲ; ಅವು ನಮ್ಮ ಸಮಾಜದ ಕೌಟುಂಬಿಕ ಮೌಲ್ಯಗಳಲ್ಲಿ ಉಂಟಾಗುತ್ತಿರುವ ಬಿರುಕುಗಳ ಸಂಕೇತಗಳೂ ಹೌದು ಎಂದು ಅವರು ಎಚ್ಚರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ವಿದೇಶಾಂಗ ಇಲಾಖೆ ವಿಶೇಷ ಮುತುವರ್ಜಿ ವಹಿಸಿ, ವಿದೇಶಗಳಲ್ಲಿ ಶಿಕ್ಷಣ ಅಥವಾ ಉದ್ಯೋಗದಲ್ಲಿರುವ ಮಕ್ಕಳು ತಮ್ಮ ಹೆತ್ತವರ ಯೋಗಕ್ಷೇಮ ಮತ್ತು ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವುದನ್ನು ಸೂಕ್ತ ದಾಖಲೆಗಳ ಮೂಲಕ ಖಚಿತಪಡಿಸಿಕೊಳ್ಳುವ ವ್ಯವಸ್ಥೆ ರೂಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಇದು ಕೇವಲ ಆಡಳಿತಾತ್ಮಕ ಕ್ರಮವಲ್ಲ; ಸಮಾಜದ ನೈತಿಕ ಆರೋಗ್ಯವನ್ನು ಕಾಪಾಡುವ ಪ್ರಯತ್ನವೂ ಹೌದು.
ಇಷ್ಟೊಂದು ಗಂಭೀರ ಹಾಗೂ ಸಂಕೀರ್ಣ ವಿಷಯಗಳು ನಮ್ಮ ಪತ್ರಿಕೆಗಳು ಮತ್ತು ಮಾಧ್ಯಮಗಳಲ್ಲಿ ಅನೇಕ ಬಾರಿ ಪ್ರಕಟಯೋಗ್ಯ ವಿಷಯಗಳಾಗಿಯೇ ಪರಿಗಣಿಸದಿರುವುದು ವಿಷಾದಕರ. ಆದರೆ ಇಂಥ ವಿಚಾರಗಳು ಸಾರ್ವಜನಿಕ ಚರ್ಚೆಗೆ ಬರಬೇಕು, ಸಮಾಜವನ್ನು ಆತ್ಮಾವಲೋಕನಕ್ಕೆ ದೂಡಬೇಕು. ಕನಿಷ್ಠ ಕೆಲವರಿಗಾದರೂ ಈ ನೋವಿನ ಸತ್ಯ ತಲುಪಲಿ, ಕೌಟುಂಬಿಕ ಜವಾಬ್ದಾರಿಗಳ ಮಹತ್ವವನ್ನು ಮರುಚಿಂತಿಸಲು ಪ್ರೇರಣೆಯಾಗಲಿ ಎಂಬ ಆಶಯದಿಂದ ಈ ವಿಚಾರವನ್ನು ಹಂಚಿಕೊಳ್ಳುವುದು ಅನಿವಾರ್ಯವಾಗಿದೆ.
- ಜಿ. ವಾಸುದೇವ ಭಟ್, ಪೆರಂಪಳ್ಳಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


