ಫೆ.15: ಶ್ರೀ ಕೃಷ್ಣಮಠದಲ್ಲಿ ಅಖಂಡ ಶಿವರಾತ್ರಿ ವೈಭವ

Upayuktha
0

ಸಂಧ್ಯೆಯಿಂದ ಪ್ರಭಾತದವರೆಗೆ ನಿರಂತರ ಪೂಜೆ, ಪಾರಾಯಣ, ಭಜನೆ





ಉಡುಪಿ: ಸಪ್ತಕ್ಷೇತ್ರಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಫೆಬ್ರವರಿ 15, 2026 (ಭಾನುವಾರ) ರಂದು ವೈಭವಯುತ ಅಖಂಡ ಶಿವರಾತ್ರಿ ಉತ್ಸವವನ್ನು ಆಚರಿಸಲಾಗುತ್ತಿದೆ. ಸಂಜೆ 6 ಗಂಟೆಯಿಂದ ಮರುದಿನ ಬೆಳಿಗ್ಗೆ 6 ಗಂಟೆಯವರೆಗೆ ರಾಜಾಂಗಣದಲ್ಲಿ ನಿರಂತರ ಪೂಜೆ, ರುದ್ರಪಾರಾಯಣ, ವಿಷ್ಣುಸಹಸ್ರನಾಮ ಪಾರಾಯಣ, ಪ್ರವಚನ, ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.


‘ಅಜ್ಜ–ಮೊಮ್ಮಗನ ಊರು’ ಎಂದು ಜನಜನಿತವಾದ ಉಡುಪಿ, ಹರಿ–ಹರರ ಭಾವೈಕ್ಯತೆಗೆ ಸಾಕ್ಷಿಯಾದ ದೈವಿಕ ಕ್ಷೇತ್ರವಾಗಿದೆ. ಬೆಳ್ಳಿಯ ಪೀಠದಲ್ಲಿ ಸನ್ನಿಹಿತನಾದ ಶಿವ ಹಾಗೂ ಶಿವಲಿಂಗದಲ್ಲಿ ಸನ್ನಿಹಿತನಾದ ನಾರಾಯಣನ ಸಾನ್ನಿಧ್ಯದಿಂದ ಈ ಕ್ಷೇತ್ರವನ್ನು ‘ಶಿವಬೆಳ್ಳಿ’ (ಶಿವಳ್ಳಿ) ಎಂದು ಕರೆಯಲಾಗುತ್ತದೆ. ಮೊಮ್ಮಗನಾದ ಶಿವನ ಊರಿಗೆ ಪ್ರೀತಿಯಿಂದ ಆಗಮಿಸಿದ ಅಜ್ಜನಾದ ಜಗದೊಡೆಯ ಶ್ರೀ ಕೃಷ್ಣ ಹಾಗೂ ಅವರ ಪರಸ್ಪರ ಅನನ್ಯ ಸಂಬಂಧ ಈ ಕ್ಷೇತ್ರದ ತಾತ್ವಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.


“ವೈಷ್ಣವಾನಾಂ ಅಹಂ ಶಂಭುಃ” ಎಂಬ ಭಗವದ್ಗೀತೆಯ ಉಕ್ತಿಯಂತೆ ಶಿವನಲ್ಲಿ ವಿಶೇಷವಾಗಿ ತಾನಿರುವೆನೆಂದು ಶ್ರೀ ಕೃಷ್ಣನು ವಿವರಿಸಿದ್ದಾನೆ. ಶಿವನು ತನ್ನ ಪತ್ನಿ ಪಾರ್ವತಿಗೆ ಶ್ರೀರಾಮನಾಮದ ಮಹಿಮೆ, ರಾಮಮಂತ್ರ ಹಾಗೂ ವಿಷ್ಣುಸಹಸ್ರನಾಮದ ಗರಿಮೆಯನ್ನು ಉಪದೇಶಿಸಿ ಜಗತ್ತಿಗೆ ಸಾರಿದವನು. ಈ ಹರಿ–ಹರ ಏಕತ್ವವನ್ನು ಪುರಂದರದಾಸರು ತಮ್ಮ ಕೀರ್ತನೆಗಳಲ್ಲೂ ಸಾರಿದ್ದಾರೆ.


ಚಂದ್ರೇಶ್ವರ, ಅನಂತೇಶ್ವರ ಹಾಗೂ ಶ್ರೀ ಕೃಷ್ಣಮಠಗಳು ಒಂದೇ ಪುಷ್ಕರಣಿಯನ್ನು ಹಂಚಿಕೊಂಡಿದ್ದು, ಅವಭೃತ ಸ್ನಾನವೂ ಅದೇ ಪುಷ್ಕರಣಿಯಲ್ಲಿ ನಡೆಯುವುದು ಉಡುಪಿಯ ವಿಶಿಷ್ಟ ಪರಂಪರೆ. ಕೃಷ್ಣಮಠದ ಲಕ್ಷದೀಪೋತ್ಸವ ಹಾಗೂ ಸಪ್ತೋತ್ಸವದ ಸಂದರ್ಭದಲ್ಲಿ ಶ್ರೀ ಅನಂತೇಶ್ವರ ಮತ್ತು ಶ್ರೀ ಚಂದ್ರೇಶ್ವರ ದೇವರನ್ನು ಕೃಷ್ಣಮಠಕ್ಕೆ ಬರಮಾಡಿಕೊಂಡು ರಥೋತ್ಸವ ನಡೆಸುವ ಸಂಪ್ರದಾಯವೂ ಈ ಅವಿನಾಭಾವ ಸಂಬಂಧದ ಸಂಕೇತವಾಗಿದೆ.


ಈ ಹಿನ್ನಲೆಯಲ್ಲಿ ಶಿವರಾತ್ರಿಯ ಸಂದರ್ಭದಲ್ಲಿ ಹರಿ–ಹರ ಭಾವೈಕ್ಯತೆಯನ್ನು ಪ್ರತಿಪಾದಿಸುವ ವೈಭವಯುತ ಆಚರಣೆ ನಡೆಸಬೇಕೆಂಬ ಸಂಕಲ್ಪವನ್ನು ಪರ್ಯಾಯ ಶೀರೂರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಮಾಡಿದ್ದಾರೆ. ರುದ್ರದೇವರ ಆರಾಧನೆಗಾಗಿ ರುದ್ರಪಾರಾಯಣದೊಂದಿಗೆ, ಮಹಾರುದ್ರನು ಪಾರ್ವತಿಗೆ ಪ್ರೀತಿಯಿಂದ ಉಪದೇಶಿಸಿದಂತೆ ರಾಮಮಂತ್ರ ಜಪ ಹಾಗೂ ವಿಷ್ಣುಸಹಸ್ರನಾಮ ಪಾರಾಯಣಕ್ಕೂ ವಿಶೇಷ ಮಹತ್ವ ನೀಡಲಾಗಿದೆ.


ಶಿವ ಪಂಚಾಕ್ಷರಿ ಮಂತ್ರ ಜಪ, ನಿರಂತರ ಭಜನೆ ಹಾಗೂ ಪ್ರವಚನಗಳ ಮೂಲಕ ಮಹಾದೇವನ ಅನುಗ್ರಹವನ್ನು ಪಡೆಯುವ ಈ ಶಿವರಾತ್ರಿ ಮಹೋತ್ಸವದಲ್ಲಿ, ಮನೋನಿಯಾಮಕನೂ ರೋಗನಿವಾರಕನೂ ಆದ ಮಹಾದೇವನಿಗೆ ಹೂ, ತುಳಸಿ ಮತ್ತು ಬಿಲ್ವಪತ್ರೆ ಅರ್ಪಿಸಿ ಭಕ್ತಿಯಿಂದ ಪಾಲ್ಗೊಳ್ಳುವಂತೆ ನಾಡಿನ ಸಮಸ್ತ ಸದ್ಭಕ್ತರಿಗೆ ಶ್ರೀಮಠದ ದಿವಾನರಾದ ಡಾ. ಉದಯ ಕುಮಾರ ಸರಳತ್ತಾಯರು ಮನವಿ ಮಾಡಿದ್ದಾರೆ.


ಕಾರ್ಯಕ್ರಮದ ಸಂಕ್ಷಿಪ್ತ ವೇಳಾಪಟ್ಟಿ

ಸಾಯಂಕಾಲ 5.45 – 6.00: ಪೂಜೆ

6.00 – 6.30: ಪರ್ಯಾಯ ಸ್ವಾಮಿಗಳ ಸಂದೇಶ

6.30 – 7.00: ಪ್ರವಚನ

7.00 – 9.30: ಸಾಂಸ್ಕೃತಿಕ ಕಾರ್ಯಕ್ರಮ

9.30 – 10.00: ಪೂಜೆ

10.00 – 11.00: ಪ್ರವಚನ

11.00 – 12.30: ರುದ್ರಪಾರಾಯಣ ಮತ್ತು ವಿಷ್ಣುಸಹಸ್ರನಾಮ ಪಾರಾಯಣ

12.30 – 2.30: ಕುಳಿತು ಭಜನೆ

2.30 – 4.00: ಕುಣಿದು ಭಜನೆ

4.00 – 5.30: ರುದ್ರಪಾರಾಯಣ ಮತ್ತು ವಿಷ್ಣುಸಹಸ್ರನಾಮ ಪಾರಾಯಣ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top