ಅವಳಂತೆ ಅವಳೇ ಅವಳು
ಬೇರೆಯವರಂತೆ ಅವಳಲ್ಲ
ಕರುಣಾಮಯಿ ಅಕ್ಕ
ಅವಳೇ ನನ್ನ ಪುಟ್ಟಕ್ಕ!
ಎಂದಿಗೂ ಬೇರೆಯವರು
ಹೊಗಳಲಿ ಎಂದು ಕೆಲಸ ಮಾಡಲಿಲ್ಲ;
ತನಗಾಗಿ ಏನೊಂದು ಕೆಳಲಿಲ್ಲ
ಸದಾ ನಗು ತುಳುಕುವ ಮುಖ
ಅದೇ ಮುಗ್ಧತೆ ಅದೇ ಪ್ರೀತಿ
ಇನ್ನಾರಲ್ಲಿ ಹುಡಕಲಿ ನಾನು
ಓ ದೇವರೆ!
ಕೆಟ್ಟದನು ಬಯಸಲಿಲ್ಲ ಎಂದಿಗೂ
ಸದಾ ಉಪಕಾರಿ ಎಲ್ಲ ಮಂದಿಗೂ
ತಾಯಿಗೆ ಏನೆಂದು ಹೇಳಲಿ ನಾನು
ನಿನ್ನ ಬರುವಿಕೆ ಬಗ್ಗೆ ಹೇಳು ಪುಟ್ಟಕ್ಕ?
ಶಿವರಾತ್ರಿ ದಿನ ನೀ ಬೆಳಗು ಮುಂಜಾನೆ
ಹೀಗೆ ಹೇಳದೇ ಕೇಳದೆ ಹೋಗಿ ಬಿಡುವುದೆ?
ಯಾರಲ್ಲಿ ಕಾಣಲಿ ನಾ ಮಾತೃ ಹೃದಯವನು
ಕಡಲ ರಾಶಿ ರಾಶಿ ಪ್ರೀತಿ ಕೊಟ್ಟ ಪುಟ್ಟಕ್ಕಳನು
ಎಲ್ಲಿಂದ ಕರೆ ತರಲಿ ಶಕುಂತಲಾ ನಿನಗಾಗಿ?
ಎಲ್ಲ ಹಾಂ! ಎನ್ನುವದರಲ್ಲಿ ಮುಗಿದು ಹೋಯಿತಲ್ಲ?
ನಾ ಬಂದರೂ ನೀ ನಿರ್ಲಿಪ್ತಳಾಗಿ ಮಲಗಿದ್ದು ಏಕೆ ಹೇಳು?
ಅಕ್ಕ! ರಾತ್ರಿ ಎರಡಾದರೂ ನಿನ್ನ ಮೊಗದ ಕಳೆ
ಮಾಸಲೇ ಇಲ್ಲ ನೋಡು, ನೀ ಖರೇ ಜಗದಂಬಿಕಾ!
ಮಗ ಮಗಳು ಬಂದರೂ ಏಳಲೇ ಇಲ್ಲ ನೀ
ಪುಟ್ಟ ಕಂದಮ್ಮಗಳ ಕರೆ ಕೇಳಲೇ ಇಲ್ಲವೆ?
ಮೊಮ್ಮಕ್ಕಳ ನಗುವಿಗಾದರೂ ನಿನ್ನ ಏಳಿಸುವ
ನಿನ್ನ ಮಾತು ಕೇಳಿಸುವ ಶಕ್ತಿ ಇದೆ ಎಂದುಕೊಂಡಿದ್ದೆ,
ಅದೂ ಆಗಲೇ ಇಲ್ಲ ನೋಡು
ಬಹಳ ಮೃದು ಹೃದಯದ ನಿನ್ನ ಹೃದಯದ ಬಡಿತ
ನಿಂತಿದ್ದಾದರೂ ಯಾವಾಗ ಹೇಳಕ್ಕ?
ಎಲ್ಲರೂ ಕರೆದರೂ ನೀ ಹೊರಟು ಬಿಟ್ಟೆ
ಅವಸರ ಏನಿತ್ತು ನಿನಗೆ?
ತಂದೆಯನ್ನು ಭೆಟ್ಟಿಯಾಗಲು ಹೋದೆಯಾ?
ಶಿವ ಧ್ಯಾನದಿ ಲೋಕ ಮೈ ಮರೆತಾಗ
'ಶಿವರಾತ್ರಿ'ಯ 'ಶಿವೆ' ನೀನಾಗಿ
ಲೋಕ ಕಲ್ಯಾಣಕೆ ಹೊರಟ ನಿನಗೆ
ನನ್ನ ಅನಂತ ಕೋಟಿ ನಮನಗಳು!
ನಿನ್ನ ಪ್ರೀತಿಯಲಿ ತೋಯ್ದು ಹೋದ ನನಗೆ
ಒಂದು ಓಲೆ ಬರೆದು ಹಾಕು ಮರೆಯದೇ ನೀನು
ಅದು 'ಕಾಲ' ಕಾಲನ ಬಸಿರಲಿ ಅಡಗಿದ
ಸತ್ಯಗಳನು ಧ್ವನಿಸಿರಲಿ
ಅದರಲಿ ನೆಮ್ಮದಿಯ ಕನಸಿರಲಿ
ಅದು ಜಗದ ಶಾಂತಿಯ ಕಣ್ಣಾಗಿರಲಿ!
ಹೋಗಿ ಬಾ ಅಕ್ಕ.......,
ಇದು ಬಿಟ್ಟು ನಾ ಏನು ತಾನೇ ಹೇಳಲಿ?
- ಶ್ರೀನಿವಾಸ ಜಾಲವಾದಿ, ಸುರಪುರ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


