ಪರ್ಯಾಯ ಮಹೋತ್ಸವವು ಕೇವಲ ಎರಡು ವರ್ಷಗಳ ಅಧಿಕಾರ ಹಸ್ತಾಂತರವಲ್ಲ. ಅದು ಧರ್ಮವನ್ನು ಕಾಲಕ್ಕೆ ತಕ್ಕಂತೆ ಪುನರ್ವ್ಯಾಖ್ಯಾನಿಸುವ ಶಕ್ತಿ. ಶೀರೂರು ಶ್ರೀಗಳ ಪ್ರಥಮ ಪರ್ಯಾಯದೊಂದಿಗೆ ಉಡುಪಿ ಮತ್ತೊಮ್ಮೆ- ಧರ್ಮ, ಸಂಸ್ಕೃತಿ ಮತ್ತು ವಿಶ್ವಮಾನವತೆಗೆ ದಾರಿದೀಪವಾಗಿ ಪ್ರಕಾಶಿಸುತ್ತಿದೆ.
ಕಡೆಗೋಲು ಶ್ರೀ ಕೃಷ್ಣನ ಅಡುಂಬೋಲ ಉಡುಪಿ ಮತ್ತೊಮ್ಮೆ ಧರ್ಮ–ಸಂಸ್ಕೃತಿಯ ಮಹೋತ್ಸವಕ್ಕೆ ಸಾಕ್ಷಿಯಾಗುತ್ತಿದೆ. ಮಧ್ವಪರಂಪರೆಯ ಶಿಸ್ತು, ತತ್ವ ಮತ್ತು ಸೇವೆಯ ಪ್ರತೀಕವಾದ ದ್ವೈವಾರ್ಷಿಕ ಪರ್ಯಾಯ ಮಹೋತ್ಸವ, ಜನವರಿ 18ರಂದು ಶೀರೂರು ಮಠದ ಶ್ರೀ ವೇದವರ್ಧನ ತೀರ್ಥರ ಪ್ರಥಮ ಪರ್ಯಾಯದೊಂದಿಗೆ ಹೊಸ ಅಧ್ಯಾಯ ಆರಂಭಿಸಲಿದೆ.
ಉಡುಪಿ ಮತ್ತೆ ಸಂಭ್ರಮದಲ್ಲಿ:
ದ್ವೈತ ಮತಸ್ಥಾಪನಾಚಾರ್ಯ ಶ್ರೀ ಮಧ್ವಮುನಿಗಳಿಂದ ಪ್ರತಿಷ್ಠಿತನಾದ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಮಹೋತ್ಸವ ಎಂದರೆ ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ; ಅದು ಜೀವಂತ ಸಂಸ್ಕೃತಿ. ಮುಂದಿನ ಎರಡು ವರ್ಷಗಳ ಕಾಲ ಶ್ರೀ ಕೃಷ್ಣನ ಪೂಜಾ ನಿರ್ವಹಣೆಯ ಹೊಣೆ ಹೊರುವ ಪರ್ಯಾಯ ಪೀಠಕ್ಕೆ, ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಆಚಾರ್ಯ ಮಧ್ವರ ಸಾನ್ನಿಧ್ಯವಿರುವ ಸರ್ವಜ್ಞ ಪೀಠದಲ್ಲಿ ವಿಧ್ಯುಕ್ತವಾಗಿ ವಿರಾಜಮಾನಗೊಳ್ಳುತ್ತಿರುವುದು ಈ ಬಾರಿಯ ವಿಶೇಷ.
ಹಿಂದೂ ಧರ್ಮ ಸಂಕ್ರಮಣದ ಈ ಕಾಲಘಟ್ಟದಲ್ಲಿ, ಪರ್ಯಾಯ ಮಹೋತ್ಸವವು ಧರ್ಮಜಾಗೃತಿಯ ಮಹಾಸಂಕಲ್ಪವಾಗಿ ಮತ್ತೆ ಪ್ರಸ್ತುತವಾಗುತ್ತಿದೆ. ಶಿಸ್ತುಬದ್ಧ ಪೂಜಾಕ್ರಮ, ಯತಿ ಸಂಸ್ಕೃತಿ ಮತ್ತು ಸೇವಾಧಾರಿತ ಜೀವನಪಥ- ಇವುಗಳ ಸಮನ್ವಯವೇ ಉಡುಪಿಯ ಪರ್ಯಾಯ.
ಹಬ್ಬದಿಂದ ಜಾಗತಿಕ ಮಹೋತ್ಸವದವರೆಗೆ:
ಆದಿಯಲ್ಲಿ ಉಡುಪಿಯ ಹಬ್ಬವಾಗಿದ್ದ ಪರ್ಯಾಯ, ಕ್ರಮೇಣ ತುಳುನಾಡಿನ ಸಂಭ್ರಮವಾಯಿತು; ನಂತರ ಕನ್ನಡನಾಡಿನ ಹೆಮ್ಮೆಯಾಯಿತು; ಇಂದು ಅದು ಭಾರತದ ಗಡಿಗಳನ್ನು ಮೀರಿ ಜಾಗತಿಕ ಗಮನ ಸೆಳೆಯುತ್ತಿದೆ. ಮಧ್ವಾಚಾರ್ಯರಿಂದ ಸ್ಥಾಪಿತವಾದ ಅಷ್ಟಮಠ ಪರಂಪರೆಯಡಿ ಶ್ರೀ ಕೃಷ್ಣನ ಪೂಜೆಯನ್ನು ಪರ್ಯಾಯ ಕ್ರಮದಲ್ಲಿ ನಿರ್ವಹಿಸುವ ವ್ಯವಸ್ಥೆ, ಜಗತ್ತಿನಲ್ಲಿಯೇ ಅಪರೂಪದ ಧಾರ್ಮಿಕ ಆಡಳಿತ ಮಾದರಿ.
ಪರ್ಯಾಯ ದಿನದ ಮುಂಜಾನೆ ಜೋಡುಕಟ್ಟೆಯಿಂದ ಹೊರಡುವ ಭವ್ಯ ಮೆರವಣಿಗೆ, ವಾದ್ಯಘೋಷ, ಸ್ತಬ್ಧಚಿತ್ರಗಳು, ಅಷ್ಟಮಠಾಧೀಶರ ಮೇನೆಗಳ ಸಂಚಲನ- ಇವೆಲ್ಲವೂ ಉಡುಪಿ ನಗರದ ಸಂಸ್ಕೃತಿಯ ಜೀವಂತ ಚಿತ್ರಣ. ಸರ್ವ ದೇವರ ದರ್ಶನದ ಬಳಿಕ ಸರ್ವಜ್ಞ ಪೀಠದಲ್ಲಿ ಅಕ್ಷಯ ಪಾತ್ರೆ–ಸಟ್ಟುಗ ಹಸ್ತಾಂತರ, ಬಡಮಾಳಿಗೆಯಲ್ಲಿ ಅರಳು ಗದ್ದುಗೆಯಾರೋಹಣ, ನಂತರ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ಪ - ಪರಂಪರೆಯ ನಿರಂತರತೆಯನ್ನು ಸಾರುವ ವಿಧಿವಿಧಾನಗಳು.
ಕೃಷ್ಣನ ಮಂದಿರ: ಮಠವೂ ಹೌದು, ದೇವಾಲಯವೂ ಹೌದು
ಉಡುಪಿ ಶ್ರೀ ಕೃಷ್ಣ ಮಠವು ಭಾರತದ ಧಾರ್ಮಿಕ ಇತಿಹಾಸದಲ್ಲಿಯೇ ವಿಶಿಷ್ಟ. ಇಲ್ಲಿ ಕೃಷ್ಣನನ್ನು ಯತಿಗಳು ಮಾತ್ರವೇ ಪೂಜಿಸುತ್ತಾರೆ. ಅದೇ ಸಮಯದಲ್ಲಿ ಇದು ಸಾರ್ವಜನಿಕರಿಗೆ ಸಂಪೂರ್ಣವಾಗಿ ತೆರೆದಿರುವ ದೇವಾಲಯವೂ ಹೌದು. ಈ ಅಪರೂಪದ ಸ್ವರೂಪವನ್ನೇ ಗಮನಿಸಿ, ಸರ್ವೋಚ್ಛ ನ್ಯಾಯಾಲಯವು ಇದನ್ನು ಅಷ್ಟಮಠಗಳ ಅಧೀನದ ಸಾರ್ವಜನಿಕ ದೇವಾಲಯವೆಂದು ಘೋಷಿಸಿದೆ.
ಕನಕದಾಸರಂಥ ಮಹನೀಯರು ಇಲ್ಲಿ ಅಚ್ಛಿನ್ನ ಭಕ್ತರಾಗಿದ್ದುದು, ಉಡುಪಿ ಮಠದ ಸಾಮಾಜಿಕ–ಆಧ್ಯಾತ್ಮಿಕ ಸಮನ್ವಯದ ಪ್ರತೀಕ. ಹದಿನಾಲ್ಕು ವಿಧದ ನಿತ್ಯಪೂಜೆಗಳು, ಮಧ್ವಸರೋವರದ ಪಾವಿತ್ರ್ಯ, ಅನ್ನಬ್ರಹ್ಮನಾಗಿ ನಿತ್ಯಾನ್ನದಾನ- ಇವೆಲ್ಲವೂ ಉಡುಪಿಯ ಕೃಷ್ಣನ ಆಧ್ಯಾತ್ಮವನ್ನು ಜಗತ್ತಿಗೆ ಪರಿಚಯಿಸುತ್ತವೆ.
ಮತ್ತೆ ಬಂದಿದೆ ಶೀರೂರು ಪರ್ಯಾಯ:
ಈ ಬಾರಿ ಪರ್ಯಾಯ ಪೀಠದ ಹೊಣೆ ಶೀರೂರು ಮಠಕ್ಕೆ. ಮಧ್ವಾಚಾರ್ಯರಿಂದ ಸ್ಥಾಪಿತವಾದ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಪಟ್ಟದ ದೇವತೆ ದೇವಿ–ಭೂದೇವಿ ಸಹಿತ ವಿಠಲ. ಶತಮಾನಗಳಿಂದ ದ್ವೈತ ತತ್ವ, ಶಿಸ್ತು ಮತ್ತು ಭಕ್ತಿಯ ಸಂಕೇತವಾಗಿ ಈ ಮಠ ಗುರುತಿಸಿಕೊಂಡಿದೆ.
ಪೂರ್ವ ಪೀಠಾಧಿಪತಿ ಶ್ರೀ ಲಕ್ಷ್ಮಿವರ ತೀರ್ಥರು ಕೃಷ್ಣದೇವರ ಅಲಂಕಾರದಲ್ಲಿ ಅಪೂರ್ವ ಸಾಧನೆ ಮಾಡಿ, 300ಕ್ಕೂ ಹೆಚ್ಚು ವಿಧದ ಅಲಂಕಾರಗಳ ಮೂಲಕ ದಾಖಲೆಯನ್ನು ನಿರ್ಮಿಸಿದ್ದರು. ಅವರ ಪರಂಪರೆಯ ಮುಂದುವರಿಕೆಯಾಗಿ, ಈ ಬಾರಿ ಶೀರೂರು ಮಠವು ಹೊಸ ಯುಗದ ಪರ್ಯಾಯಕ್ಕೆ ಸಜ್ಜಾಗಿದೆ.
ಪ್ರಥಮ ಪರ್ಯಾಯ: ಹೊಸ ಹೊಣೆ, ಹೊಸ ನಿರೀಕ್ಷೆ:
ಶೀರೂರು ಮಠದ 30ನೇ ಪೀಠಾಧಿಪತಿಗಳಾದ ಶ್ರೀ ವೇದವರ್ಧನ ತೀರ್ಥರು 2005ರಲ್ಲಿ ಜನಿಸಿ, 2021ರಲ್ಲಿ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರಿಂದ ಸನ್ಯಾಸ ದೀಕ್ಷೆ ಪಡೆದವರು. ಪ್ರಸ್ತುತ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 2026–28ರ ಅವಧಿಗೆ ನಡೆಯಲಿರುವ ಈ ಪ್ರಥಮ ಪರ್ಯಾಯ, ಪರಂಪರೆಯೊಂದಿಗೆ ಸಮಕಾಲೀನ ಜವಾಬ್ದಾರಿಯನ್ನು ಸಮತೋಲನದಿಂದ ನಿಭಾಯಿಸುವ ನಿರೀಕ್ಷೆಯನ್ನು ಮೂಡಿಸಿದೆ.
ಅಷ್ಟಮಠಗಳ ಪರಂಪರೆ:
ಮಧ್ವಾಚಾರ್ಯರು ಮಠಗಳನ್ನು ನಿರ್ಮಿಸಲಿಲ್ಲ; ಶಿಷ್ಯರಿಗೆ ದೇವರ ಪೆಟ್ಟಿಗೆ, ದಂಡ, ಜೋಳಿಗೆಯನ್ನಷ್ಟೇ ನೀಡಿದರು. ಶಿಷ್ಯ ಸಂಪತ್ತು ವೃದ್ಧಿಯಾದಂತೆ ಮಠಗಳು ರೂಪುಗೊಂಡವು.
ಫಲಿಮಾರು, ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು, ಪೇಜಾವರ- ಇವೇ ಉಡುಪಿ ಅಷ್ಟಮಠಗಳ ಆಧಾರ.
ಶೀರೂರು ಶ್ರೀಗಳು
* ಶೀರೂರು ಮಠದ 30ನೇ ಪೀಠಾಧಿಪತಿ
* ಜನನ: 2005
* ಸನ್ಯಾಸ ದೀಕ್ಷೆ: 14–05–2021
* ಗುರು: ಶ್ರೀ ವಿಶ್ವವಲ್ಲಭ ತೀರ್ಥ (ಸೋದೆ ಮಠ)
* ವಿದ್ಯಾಭ್ಯಾಸ: ಶ್ರೀ ವಿದ್ಯಾಸಾಗರ ತೀರ್ಥರ ಮಾರ್ಗದರ್ಶನ
* ಪರ್ಯಾಯ ಅವಧಿ: 2026–28 (ಪ್ರಥಮ)
ಪರ್ಯಾಯ ಮಹೋತ್ಸವವು ಕೇವಲ ಅಧಿಕಾರ ಹಸ್ತಾಂತರವಲ್ಲ; ಅದು ಧರ್ಮದ ನಿರಂತರ ಜ್ಯೋತಿ. ಶೀರೂರು ಶ್ರೀಗಳ ಪ್ರಥಮ ಪರ್ಯಾಯದೊಂದಿಗೆ ಉಡುಪಿ ಮತ್ತೆ—ಧರ್ಮ, ಸಂಸ್ಕೃತಿ ಮತ್ತು ವಿಶ್ವಮಾನವತೆಗೆ ದಾರಿದೀಪವಾಗುತ್ತಿದೆ.
- ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)
ಸಂಸ್ಕೃತಿ ಚಿಂತಕರು, 9739369621
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

