ಉಡುಪಿ: ಕೇವಲ ಸ್ಮರಣಶಕ್ತಿಯಿಂದ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದೇ ಶಿಕ್ಷಣವಲ್ಲ; ಗ್ರಹಿಸಿದ ಜ್ಞಾನವು ಚಿತ್ತದಲ್ಲಿ ಪರಿವರ್ತನೆಯಾಗಿ ಸೇವಾಭಾವವನ್ನು ಹುಟ್ಟಿಸಿದಾಗ ಮಾತ್ರ ವಿದ್ಯಾಭ್ಯಾಸ ಪೂರ್ಣತೆಯನ್ನು ಹೊಂದುತ್ತದೆ ಎಂದು ಪುತ್ತಿಗೆ ಮಠದ ಶ್ರೀಶ್ರೀ ಸುಗುಣೇಂದ್ರತೀರ್ಥಶ್ರೀಪಾದರು ಹೇಳಿದರು.
ಪರ್ಯಾಯ ಪೂಜಾಕಾರ್ಯ ಸಮಾಪನಗೊಂಡು ಸೀಮೋಲ್ಲಂಘನೆಗಾಗಿ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಎನ್ನೆಸ್ಸೆಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಉನ್ನತ ಸಂಸ್ಥೆಗಳು ಕೆಲಸಕ್ಕೆ ಸಿಬ್ಬಂದಿಯನ್ನು ಆಯ್ಕೆ ಮಾಡುವಾಗ ಕೇವಲ ಪ್ರತಿಭೆಯನ್ನು ಮಾತ್ರವಲ್ಲ, ವ್ಯಕ್ತಿಯಲ್ಲಿರುವ ಸೇವಾಮನೋಭಾವ, ನಿಷ್ಠೆ ಮತ್ತು ಸ್ವಾರ್ಥತ್ಯಾಗದ ಸಾಮರ್ಥ್ಯವನ್ನೂ ಪರಿಗಣಿಸುತ್ತವೆ. ಆದ್ದರಿಂದ ಸೇವಾಮನೋಭಾವವೇ ನಿಜವಾದ ಶಿಕ್ಷಣದ ಫಲವೆಂದು ಅವರು ಹೇಳಿದರು.
ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿ ಹಾಗೂ ಅಧ್ಯಾಪಕರಲ್ಲಿ ಈ ಸೇವಾಭಾವ ಅತ್ಯಧಿಕವಾಗಿ ಕಂಡುಬರುತ್ತಿರುವುದು ಸಂತೋಷಕರ ವಿಷಯವೆಂದು ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಪಾದರು, ಶ್ರೀಕೃಷ್ಣನ ಸಂಪೂರ್ಣ ಅನುಗ್ರಹ ಎಲ್ಲರ ಮೇಲೂ ಇರಲಿ ಎಂದು ಆಶಿಸಿದರು.
ಉಡುಪಿಯ ಸಂಸ್ಕೃತ ಮಹಾವಿದ್ಯಾಲಯ ಶತಮಾನಕ್ಕೂ ಅಧಿಕ ಇತಿಹಾಸ ಹೊಂದಿರುವ ಅಪರೂಪದ ಶಿಕ್ಷಣ ಸಂಸ್ಥೆಯಾಗಿದೆ. ಶ್ರೀಕೃಷ್ಣಮಠದಂತೆ ಇದು ಕೂಡ ಪವಿತ್ರ ಕ್ಷೇತ್ರವಾಗಿದ್ದು, ಅಲ್ಲಿ ಪೂಜೆಯಾದರೆ ಇಲ್ಲಿ ಜ್ಞಾನಯಜ್ಞ ನಡೆಯುತ್ತಿದೆ. ಅಷ್ಟಮಠಗಳು ಒಟ್ಟಾಗಿ ಸ್ಥಾಪಿಸಿದ ಏಕೈಕ ಸಂಸ್ಥೆಯಾದ ಈ ಮಹಾವಿದ್ಯಾಲಯ ಇನ್ನಷ್ಟು ಬೆಳೆಯಲಿ, ಉತ್ತಮ ಕೀರ್ತಿಯನ್ನು ಸಂಪಾದಿಸಲಿ ಎಂದು ಅವರು ಹರಸಿದರು.
ಇದೇ ಸಂದರ್ಭದಲ್ಲಿ ಪರ್ಯಾಯ ಸೀಮೋಲ್ಲಂಘನೆ ನೆರವೇರಿಸಿದ ಪುತ್ತಿಗೆ ಮಠದ ಕಿರಿಯ ಯತಿಗಳಾದ ಶ್ರೀಶ್ರೀ ಸುಶ್ರೀಂದ್ರತೀರ್ಥಶ್ರೀಪಾದರು ಮಹಾವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಯನ್ನು ಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತ್ಯನಾರಾಯಣ ವಿ. ರಾವ್ ಉಭಯಶ್ರೀಗಳನ್ನು ಸ್ವಾಗತಿಸಿದರು. ಎಸ್.ಎಂ.ಎಸ್.ಪಿ. ಸಭೆಯ ಕೋಶಾಧಿಕಾರಿ ಶ್ರೀ ಚಂದ್ರಶೇಖರ ಆಚಾರ್ಯರು ಗೌರವ ಸಲ್ಲಿಸಿದರು. ಗೌರವ ಉಪನ್ಯಾಸಕ ವಿದ್ವಾನ್ ಶ್ರೀನಿವಾಸ ತಂತ್ರಿ ಸನ್ಮಾನಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ರಾಧಾಕೃಷ್ಣ ಭಟ್ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಾದ ನಿತಿನ್ ಭಟ್, ಶ್ರೀಕೃಷ್ಣ ಭಟ್, ಪ್ರಹ್ಲಾದ ಭಟ್ ಹಾಗೂ ನಾರಾಯಣ ರಾವ್ ವೇದಘೋಷ ನೆರವೇರಿಸಿದರು. ವಿದ್ವಾನ್ ಶ್ರೀನಿವಾಸ ತಂತ್ರಿ ಧನ್ಯವಾದ ಸಮರ್ಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

