ಘನತ್ಯಾಜ್ಯ ನಿರ್ವಹಣೆ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ISO 14001:2015 ಪರಿಸರ ಮಾನದಂಡಗಳ ಪ್ರಮಾಣಪತ್ರ

Upayuktha
0


ಬೆಂಗಳೂರು: ಬೆಂಗಳೂರಿನ ಹೃದಯಭಾಗದಲ್ಲಿ ಸ್ಥಿತವಾಗಿರುವ ಭಾರತದ ಪ್ರಮುಖ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರಗಳಲ್ಲಿ ಒಂದಾದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ (KMIO), ಕ್ಯಾನ್ಸರ್ ಆರೈಕೆಯನ್ನು ಪರಿಸರ ಜವಾಬ್ದಾರಿಯೊಂದಿಗೆ ಜೋಡಿಸುವ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಸಂಸ್ಥೆಯ ಘನತ್ಯಾಜ್ಯ ನಿರ್ವಹಣಾ (Solid Waste Management – SWM) ಘಟಕವು ISO 14001:2015 ಪರಿಸರ ನಿರ್ವಹಣಾ ವ್ಯವಸ್ಥೆ (EMS) ಪ್ರಮಾಣೀಕರಣವನ್ನು ಯಶಸ್ವಿಯಾಗಿ ಪಡೆದಿರುವುದು, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸುಸ್ಥಿರತೆಯ ದೃಷ್ಠಿಯಿಂದ ಒಂದು ಮಹತ್ವದ ಮೈಲಿಗಲ್ಲಾಗಿದೆ.


ಈ ಪ್ರಯಾಣವು ಮಾರ್ಚ್ 2020ರಲ್ಲಿ ಆರಂಭವಾಯಿತು. ದೊಡ್ಡ ತೃತೀಯ ಹಂತದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ, ಜವಾಬ್ದಾರಿಯುತವಾಗಿ ಮತ್ತು ಸುಸ್ಥಿರವಾಗಿ ನಿರ್ವಹಿಸುವ ಅಗತ್ಯವನ್ನು ಗುರುತಿಸಿದ KMIO, 10 ವರ್ಷಗಳ ನಿರ್ಮಾಣ–ಒಡೆತನ–ನಿರ್ವಹಣೆ–ವರ್ಗಾವಣೆ (BOOT) ಮಾದರಿಯ ಅಡಿಯಲ್ಲಿ ಅತ್ಯಾಧುನಿಕ ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸಲು ಪಾರದರ್ಶಕ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಿತು. ತಾಂತ್ರಿಕವಾಗಿ ಅತ್ಯುನ್ನತ ಪರಿಸರ ಸುಸ್ಥಿರತೆಯ ಮಾನದಂಡಗಳನ್ನು ಪೂರೈಸಿ, ಅತೀ ಕಡಿಮೆ ಆರ್ಥಿಕ ಮೊತ್ತವನ್ನು ನಮೂದಿಸಿದ ಬಿಡ್‌ದಾರರಿಗೆ ಯೋಜನೆಯನ್ನು ನೀಡಲಾಗಿದ್ದು, ಇದು ವೆಚ್ಚದ ದಕ್ಷತೆ ಮತ್ತು ಪರಿಸರ ನಾಯಕತ್ವ ಎರಡನ್ನೂ ಖಚಿತಪಡಿಸಿತು.


ಈ ಯೋಜನೆಗಾಗಿ KMIO ತನ್ನ ಆವರಣದಲ್ಲಿ 4000 ಚದರ ಅಡಿ ಭೂಮಿಯನ್ನು ಮಂಜೂರು ಮಾಡಿದ್ದು, ಘನತ್ಯಾಜ್ಯ ನಿರ್ವಹಣಾ ನಿಯಮಗಳು–2016, ಬಿಬಿಎಂಪಿ ಬೈಲಾ–2020 ಹಾಗೂ ಎಲ್ಲಾ ಅನ್ವಯಿಸುವ ಪರಿಸರ ನಿಯಮಗಳ ಕಟ್ಟುನಿಟ್ಟಾದ ಪಾಲನೆಯನ್ನು ಕಡ್ಡಾಯಗೊಳಿಸಿತು. 31 ಡಿಸೆಂಬರ್ 2020ರೊಳಗೆ ಸಂಪೂರ್ಣ ಮೂಲಸೌಕರ್ಯ ನಿರ್ಮಾಣಗೊಂಡು, ಜನವರಿ 2021ರ ಆರಂಭದಲ್ಲಿ ಯಶಸ್ವಿ ಪ್ರಾಯೋಗಿಕ ಕಾರ್ಯಾಚರಣೆಗಳು ಆರಂಭವಾದವು.


ಈ SWM ಘಟಕದ ಹೃದಯಭಾಗದಲ್ಲಿ ದಿನಕ್ಕೆ 1 ಟನ್ ಸಾಮರ್ಥ್ಯದ ಜೈವಿಕ ಅನಿಲ (ಬಯೋಗ್ಯಾಸ್) ಘಟಕ ಕಾರ್ಯನಿರ್ವಹಿಸುತ್ತಿದ್ದು, ಸಾವಯವ ಹಾಗೂ ತೋಟದ ತ್ಯಾಜ್ಯವನ್ನು ಶುದ್ಧ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಜೈವಿಕ ಅನಿಲ ಶುದ್ಧೀಕರಣ ವ್ಯವಸ್ಥೆಯು ಸುರಕ್ಷಿತ ಹಾಗೂ ಪರಿಣಾಮಕಾರಿ ದಹನವನ್ನು ಖಚಿತಪಡಿಸುತ್ತದೆ. 10 kVA ಸಾಮರ್ಥ್ಯದ ಜೈವಿಕ ಅನಿಲ ಜನರೇಟರ್ ಮೂಲಕ ಉತ್ಪಾದಿತ ವಿದ್ಯುತ್, SWM ಘಟಕದ ಕಾರ್ಯಾಚರಣೆಗೆ ಮತ್ತು KMIO ಆವರಣದಲ್ಲಿ ಬಳಸಲಾಗುವ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್‌ಗೆ ಉಪಯೋಗವಾಗುತ್ತದೆ.


ಜೈವಿಕ ಅನಿಲ ಉತ್ಪಾದನೆಯ ನಂತರ ಉಳಿಯುವ ಸ್ಲರಿ ಹಾಗೂ ಜೈವಿಕ ಅನಿಲಕ್ಕೆ ಹೊಂದದ ಆಹಾರ ತ್ಯಾಜ್ಯವನ್ನು, ತೋಟದ ತ್ಯಾಜ್ಯವನ್ನು, ಬಳಸಿ ಏರೋಬಿಕ್ ಕಾಂಪೋಸ್ಟಿಂಗ್ ಮೂಲಕ ಉತ್ತಮ ಗುಣಮಟ್ಟದ ಗೊಬ್ಬರವನ್ನು ತಯಾರಿಸಲಾಗುತ್ತದೆ. ಈ ಗೊಬ್ಬರದ ಗುಣಮಟ್ಟವನ್ನು ನಿಯಮಿತವಾಗಿ ಸರ್ಕಾರಿ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗುತ್ತಿದ್ದು, ಅದು KMIO ಆವರಣದಲ್ಲಿರುವ 8000ಕ್ಕೂ ಹೆಚ್ಚು ಮರಗಳು ಮತ್ತು 800ಕ್ಕೂ ಹೆಚ್ಚು ಕುಂಡದ ಗಿಡಗಳಿಗೆ ಸುರಕ್ಷಿತವಾಗಿ ಬಳಸಲಾಗುತ್ತಿದೆ.


ಒಣ ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಗೆ 500 ಚದರ ಅಡಿಯ ಒಣ ತ್ಯಾಜ್ಯ ವಿಂಗಡಣಾ ಶೆಡ್ ಅನ್ನು ಸ್ಥಾಪಿಸಲಾಗಿದ್ದು, ದ್ವಿತೀಯ ಹಂತದ ವಿಂಗಡಣೆ ಮತ್ತು ಸುರಕ್ಷಿತ ಸಂಗ್ರಹಣೆಯನ್ನು ಸಾಧ್ಯವಾಗಿಸಿದೆ. ಮರುಬಳಕೆಯೋಗ್ಯ ವಸ್ತುಗಳನ್ನು ಪ್ರಮಾಣೀಕೃತ ಮರುಬಳಕೆದಾರರು ಹಾಗೂ ಎನ್‌ಜಿಒಗಳ ಮೂಲಕ ಪರಿಸರ ಸ್ನೇಹಿಯಾಗಿ ಚೇತರಿಸಲಾಗುತ್ತಿದೆ. ಈ ಎಲ್ಲದ ಜೊತೆಗೆ, ಸೌಲಭ್ಯದಾದ್ಯಂತ ಸೌರ ದೀಪಗಳು, ಹಳೆಯ ಬೋರ್‌ವೆಲ್‌ನ ಪುನಃಶ್ಚೇತನ, ಹೊಸ ಸಬ್‌ಮರ್ಸಿಬಲ್ ಪಂಪ್ ಅಳವಡಿಕೆ ಹಾಗೂ ನಿಯಮಿತ ವಾಯು ಗುಣಮಟ್ಟ ಮೇಲ್ವಿಚಾರಣೆ ಮೂಲಕ ಪರಿಸರ ಸುರಕ್ಷತೆಯನ್ನು ಖಚಿತಪಡಿಸಲಾಗಿದೆ.


ಮೂಲಸೌಕರ್ಯದ ಜೊತೆಗೆ, ಮಾನವ ಸಂಪನ್ಮೂಲ ಸಾಮರ್ಥ್ಯ ವೃದ್ಧಿಗೂ ವಿಶೇಷ ಗಮನ ನೀಡಲಾಗಿದೆ. ಆಸ್ಪತ್ರೆಯ ವಿವಿಧ ವಿಭಾಗಗಳ ಸಿಬ್ಬಂದಿಗೆ ವೈಜ್ಞಾನಿಕ ತ್ಯಾಜ್ಯ ವಿಂಗಡಣೆಯ ಕುರಿತು ಜಾಗೃತಿ ಅಧಿವೇಶನಗಳನ್ನು ನಡೆಸಲಾಗಿದ್ದು, ಹೌಸ್‌ಕೀಪಿಂಗ್ ಸಿಬ್ಬಂದಿಗೆ ತರಬೇತಿ ನೀಡಲು ಬಿಬಿಎಂಪಿ ಪೌರಕಾರ್ಮಿಕರನ್ನು ಆಹ್ವಾನಿಸಲಾಗಿದೆ. ಈ ಮೂಲಕ ಸುಸ್ಥಿರತೆ ಸಂಸ್ಥೆಯ ಸಂಸ್ಕೃತಿಯ ಭಾಗವಾಗುವಂತೆ ಮಾಡಲಾಗಿದೆ.


ಈ ನಿರಂತರ ಪ್ರಯತ್ನಗಳ ಫಲವಾಗಿ, ಜನವರಿ 2021 ರಿಂದ ನವೆಂಬರ್ 2025ರವರೆಗೆ, SWM ಘಟಕವು 10,89,631 ಕಿಲೋಗ್ರಾಂ ಆಹಾರ ತ್ಯಾಜ್ಯ,

2,80,250 ಕಿಲೋಗ್ರಾಂ ತೋಟದ ತ್ಯಾಜ್ಯ, ಮತ್ತು 3,73,848 ಕಿಲೋಗ್ರಾಂ ಮೌಲ್ಯರಹಿತ ಒಣ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿದೆ. ಇದರಿಂದ KMIO ಇಂದು ಲ್ಯಾಂಡ್‌ಫಿಲ್‌ಗೆ ಶೂನ್ಯಕ್ಕೆ ಸಮೀಪದ ಸಾವಯವ ತ್ಯಾಜ್ಯ ಕಳುಹಿಸುವ ಅಪರೂಪದ ಸಾರ್ವಜನಿಕ ತೃತೀಯ ಹಂತದ ಆಸ್ಪತ್ರೆಗಳಲ್ಲೊಂದು ಆಗಿದೆ.


ಈ ಮಾದರಿಯು ಆಸ್ಪತ್ರೆಯೊಳಗೆ ವೃತ್ತಾಕಾರದ ಆರ್ಥಿಕತೆ (Circular Economy) ಯನ್ನು ಯಶಸ್ವಿಯಾಗಿ ಅಳವಡಿಸಿದೆ. ಈ ಎಲ್ಲಾ ನಿರಂತರ ನಿಯಮಪಾಲನೆ, ಕಾರ್ಯಕ್ಷಮತೆ ಮತ್ತು ಪರಿಸರ ಸಾಧನೆಗಳ ಹಿನ್ನೆಲೆಯಲ್ಲೇ, 2025ರಲ್ಲಿ SWM ಘಟಕವು ಸ್ವತಂತ್ರ ISO ಆಡಿಟ್‌ಗೆ ಒಳಗಾಗಿ ISO 14001:2015 ಪರಿಸರ ನಿರ್ವಹಣಾ ವ್ಯವಸ್ಥೆ (EMS) ಪ್ರಮಾಣೀಕರಣವನ್ನು ಪಡೆದುಕೊಂಡಿತು. ಇದು ಜಾಗತಿಕ ಪರಿಸರ ಮಾನದಂಡಗಳಿಗೆ KMIO ಹೊಂದಿರುವ ಬದ್ಧತೆಯನ್ನು ದೃಢಪಡಿಸುತ್ತದೆ ಮತ್ತು ಟೆಂಡರ್‌ನಲ್ಲೇ ನಿರ್ಧರಿಸಲಾದ ESG (ಪರಿಸರ–ಸಾಮಾಜಿಕ–ಆಡಳಿತ) ಅವಶ್ಯಕತೆಗಳ ಭಾಗವಾಗಿದೆ. ಯೋಜನೆಯ ಉತ್ತಮ ಕಾರ್ಯಕ್ಷಮತೆಯ ಆಧಾರದ ಮೇಲೆ 2ನೇ ಮತ್ತು 4ನೇ ವರ್ಷದ ನಂತರ ಗುತ್ತಿಗೆ ನವೀಕರಣಗಳಿಗೂ ಅನುಮೋದನೆ ದೊರೆತಿದೆ.


KMIO ನಾಯಕತ್ವದ ಪ್ರಕಾರ, ಈ ಉಪಕ್ರಮವು “ಕ್ಯಾನ್ಸರ್ ಆರೈಕೆಯನ್ನು ಜಾಗತಿಕ ಪರಿಸರ ಸಂರಕ್ಷಣೆಯೊಂದಿಗೆ ಜೋಡಿಸುವ ಮಹತ್ವದ ಹೆಜ್ಜೆ” ಆಗಿದ್ದು, ಭಾರತದ ಇತರೆ ಸಾರ್ವಜನಿಕ ಆಸ್ಪತ್ರೆಗಳಿಗೆ ಮಾದರಿಯಾಗಿದೆ. ISO 14001 ಪ್ರಮಾಣೀಕರಣ ಪಡೆದ ಈ ಘನತ್ಯಾಜ್ಯ ನಿರ್ವಹಣಾ ಘಟಕವು, ತ್ಯಾಜ್ಯವನ್ನು ಶಕ್ತಿ, ಗೊಬ್ಬರ ಮತ್ತು ಪರಿಸರ ಮೌಲ್ಯವಾಗಿ ಪರಿವರ್ತಿಸುವ ಮೂಲಕ, ಭವಿಷ್ಯನಿರ್ಧಿಷ್ಟ, ಜವಾಬ್ದಾರಿಯುತ ಹಾಗೂ ಸುಸ್ಥಿರ ಆರೋಗ್ಯ ಸಂಸ್ಥೆಯ ಪ್ರತಿರೂಪವಾಗಿ KMIO ಅನ್ನು ಸ್ಥಾಪಿಸಿದೆ.


ಈ ಸಾಧನೆಯ ಮೂಲಕ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸುಸ್ಥಿರತೆ ಆರೋಗ್ಯ ಸೇವೆಯ ಪೂರಕವಲ್ಲ, ಅದು ಅತ್ಯಾವಶ್ಯಕ ಅಂಶ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.



Post a Comment

0 Comments
Post a Comment (0)
To Top