ಜಗದ ಸಂತೆಯಲ್ಲಿ ಚಿಂತೆಗಳ ಮರೆಯೋಣ

Upayuktha
0


ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ ।

ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ॥

ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು । 

ಪದ ಕುಸಿಯೆ ನೆಲವಿಹುದು

- ಮಂಕುತಿಮ್ಮ ॥ 


ಜೀವನವು ವಿಧಿಯ ನಿಯಂತ್ರಣದಲ್ಲಿದೆ, ನಾವು ಕೇವಲ ಪಯಣಿಗರು.ಸಾಮಾನ್ಯ ಹುಲುಮಾನವರಾದ ನಾವುಗಳು ಅಂದುಕೊಂಡಂತೆ, ಗ್ರಹಿಸಿದಂತೆ, ಬದುಕು ಹಸನಾಗಲು ಸಾಧ್ಯವಿಲ್ಲ. ಜೀವನದ ಪ್ರತಿ ಸಮಯದಲ್ಲೂ ಒಂದಿಲ್ಲೊಂದು ತೊಡಕುಗಳು, ಸಂಕಷ್ಟಗಳು ಎದುರಾಗುತ್ತಲೇ ಇರುತ್ತವೆ ಒಂದಾದ ಮೇಲೊಂದರಂತೆ ನಮಗೆ. ಅವೆಲ್ಲವನ್ನೂ ಎದುರಿಸಿ ಬದುಕನ್ನು ಬಂದಂತೆ ಸ್ವೀಕರಿಸಬೇಕಿದೆ. ನಾವು ನಮ್ಮ ಯೋಜನೆಗಳು ವಿಫಲವಾದಾಗ ನಿರಾಶೆಗೊಳ್ಳದೆ, ಮುಂದೇನು ಮಾಡಬೇಕು ಎಂದು ಯೋಚಿಸುವುದು, ಅಥವಾ ಕಷ್ಟದ ಸಮಯ ಬಂದಾಗ ಅದನ್ನು ಎದುರಿಸಿ ಮುಂದೆ ಸಾಗುವ  ಆತ್ಮ ಸ್ಥೈರ್ಯವನ್ನು, ನಮ್ಮೊಳಗೆ ಭದ್ರವಾಗಿಸಿಕೊಂಡು ಮುನ್ನಡೆದಾಗ ಮಾತ್ರ ಬದುಕಿಗೊಂದು ಅರ್ಥ ಬದುಕುಗೊಂದು ಸಾರ್ಥಕತೆ.


ಜೀವನದಲ್ಲಿ ಬರುವ ಏರಿಳಿತಗಳು, ಸವಾಲುಗಳು ಮತ್ತು ಸಂತೋಷಗಳನ್ನು ಯಥಾವತ್ತಾಗಿ ಸ್ವೀಕರಿಸಿ, ಪರಿಸ್ಥಿತಿಗಳಿಗೆ ಹೊಂದಿಕೊಂಡು ಹೋಗಬೇಕು, ಇದು ಒತ್ತಡವನ್ನು ಕಡಿಮೆ ಮಾಡಿ, ನೆಮ್ಮದಿಯಿಂದ ಬದುಕಲು ಸಹಾಯ ಮಾಡುತ್ತದೆ. ಇದು  ಒಂದು ಜೀವನ ತತ್ವವೂ ಕೂಡಾ. ಜೀವನದಲ್ಲಿ ಅನಿರೀಕ್ಷಿತ ಘಟನೆಗಳು, ಕಷ್ಟಗಳು ಬಂದಾಗ ಪ್ರತಿರೋಧಿಸದೆ ಅವುಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ನಮ್ಮದಾಗಬೇಕು. ಪರಿಸ್ಥಿತಿಗಳಿಗೆ ತಕ್ಕಂತೆ ನಮ್ಮ ಮನಸ್ಥಿತಿಯನ್ನು ಮತ್ತು ಕ್ರಿಯೆಗಳನ್ನು ಬದಲಾಯಿಸಿಕೊಳ್ಳಬೇಕು. ಹೀಗೆ ಬದುಕಿದಾಗ ಜೀವನದಲ್ಲಿ ಹೆಚ್ಚು ನೆಮ್ಮದಿ ಸಿಗುತ್ತದೆ, ಆಗ ಮಾತ್ರ  ನಾವು ಬದಲಾಗುವ ವಿಷಯಗಳ ಬಗ್ಗೆ ಚಿಂತಿಸುವುದನ್ನು ನಿಲ್ಲಿಸುತ್ತೇವೆ. 


ಸಮುದ್ರದಲ್ಲಿ ಬಿದ್ದ ಮೇಲೆ, ಅಲೆಗಳ ರಭಸಕ್ಕೆ ಅಂಜಿ, ಈಜುವುದನ್ನೇ ಮರೆತರೆ ಹೇಗೆ? ಅಂತೆಯೇ ನಮ್ಮ ಬದುಕಲ್ಲವೇ? ಸಾವಿಗೆ ಅಂಜದೆ, ಬದುಕಿಗಾಗಿ ಪರದಾಡದೆ, ಜೀವನವನ್ನು ಬಂದಂತೆ ಸ್ವೀಕರಿಸಿ ಮುಂದಡಿಯಿಟ್ಟರೆ, ಸುಂದರ ಬದುಕಿನ ಮಾಲಿಕರು ನಾವಾಗಬಹುದು. ನಮಗಿರುವ ಅಲ್ಪ ಆಯಸ್ಸನ್ನು ಬದುಕಿನ ಆಕರ್ಷಣೆಗಳಲ್ಲಿ ಮುಳುಗಲು ಬಿಡದೆ, ಅದನ್ನು ಅನುಭವಿಸಿ, ಅಪಕಾರ ಮಾಡದೆ, ಉಪಕಾರಿಯಾಗಿ ಬದುಕಬೇಕಿದೆ. ಇದು ಜೀವನದ ಸಾರ್ಥಕತೆ. 


ನಗು, ಮನದಿ ಲೋಗರ ವಿಕಾರಂಗಳನು ನೋಡಿ |

ಬಿಗಿ ತುಟಿಯ; ದುಡಿವಂದು ನೋವಪಡುವಂದು ||

ಪೋಗು; ವಿಶ್ವಜೀವನದ ಜೀವಾಂತರಂಗದಲಿ |

ನಗುನಗುತ ಬಾಳ್; ತೆರಳು – ಮಂಕುತಿಮ್ಮ || 


ಲೋಕದ ವಿಚಿತ್ರಗಳನ್ನೂ ಜನರ ನಡವಳಿಕೆಗಳನ್ನೂ ನೋಡಿ ನಗುತ್ತಾ, ಕಷ್ಟ ಬಂದಾಗ ಮೌನವಾಗಿ ಸಹಿಸಿ, ಸಂತೋಷದಿಂದ ಬದುಕಿ, ಸಂತೋಷದಿಂದಲೇ ಈ ಲೋಕವನ್ನು ತ್ಯಜಿಸಬೇಕೆಂಬ ತಾತ್ವಿಕ ಸಂದೇಶವನ್ನು ಸಾರುತ್ತದೆ ಈ ಕಗ್ಗ.


ಲೋಕದ ಜನರ ವಿಚಿತ್ರ ನಡವಳಿಕೆಗಳನ್ನು ಕಂಡು ಮನಸ್ಸಿನಲ್ಲಿ ನಗಬೇಕು. ಕಷ್ಟ ಬಂದಾಗ ತುಟಿ ಕಚ್ಚಿ, ಮೌನವಾಗಿ ನೋವನ್ನು ಸಹಿಸಿಕೊಂಡು ದುಡಿಯಬೇಕು. ಕಷ್ಟ-ಸುಖಗಳನ್ನು ಸಮನಾಗಿ ಸ್ವೀಕರಿಸಿ, ಜಗತ್ತಿನ ಲೀಲೆಗಳನ್ನು ಸಾಕ್ಷಿಯಾಗಿ ನೋಡಿ ನಗುತ್ತಾ ಬದುಕಿ, ನಿರ್ಗಮಿಸಬೇಕು.  ಅಂದಾಗ ಮಾತ್ರ ಬದುಕಿಗೊಂದು ಅರ್ಥ, ಜೀವನಕ್ಕೊಂದು ಸಾರ್ಥಕತೆ.




- ಶ್ರೀಮತಿ ರೇಷ್ಮಾ ಉಮೇಶ

ಶಿಕ್ಷಕರು, ಶ್ರೀವಲ್ಲಿ ಪ್ರೌಢಶಾಲೆ ಚಿತ್ರಾಪುರ, ಭಟ್ಕಳ



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top