ಉತ್ತರಾಯಣ ಪುಣ್ಯಕಾಲದ ಸಂಕ್ರಾಂತಿ ಹಬ್ಬದ ಮಾರನೇ ದಿನ ಕೆ.ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆಯಲ್ಲಿ ನಡೆಯುವ ಶ್ರೀ ಕೋದಂಡರಾಮ ಬ್ರಹ್ಮ ರಥೋತ್ಸವವು ಅತ್ಯಂತ ಪ್ರಸಿದ್ಧವಾಗಿದೆ. ಪ್ರತಿವರ್ಷ ಸಾವಿರಾರು ಭಕ್ತರನ್ನು ಆಕರ್ಷಿಸುವ ಈ ಜಾತ್ರೆ ಧಾರ್ಮಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ.
ಹಾಸನದಿಂದ ಹೊಳೆನರಸೀಪುರ ಮಾರ್ಗವಾಗಿ ಚುಂಚನಕಟ್ಟೆಗೆ ಸುಲಭವಾದ ಸಾರಿಗೆ ವ್ಯವಸ್ಥೆ ಲಭ್ಯವಿದೆ. ಜಾತ್ರೆಯ ದಿನಗಳಲ್ಲಿ ವಿಶೇಷವಾಗಿ ನೇರ ಬಸ್‌ಗಳ ವ್ಯವಸ್ಥೆಯೂ ಇರುತ್ತದೆ. ದೇವಸ್ಥಾನ ರಸ್ತೆಯ ಸುತ್ತಮುತ್ತ ವ್ಯಾಪಾರ ಚಟುವಟಿಕೆಗಳು ಜೋರಾಗಿದ್ದು, ಪುರಿಕಾರ, ಬಳೆ, ಪ್ಲಾಸ್ಟಿಕ್ ವಸ್ತುಗಳ ಅಂಗಡಿಗಳು ಭಕ್ತರ ಗಮನ ಸೆಳೆಯುತ್ತವೆ. ದೇವಸ್ಥಾನ ಆವರಣದಲ್ಲಿ ಭಕ್ತಸಾಗರವೇ ಹರಿದಾಡುವ ದೃಶ್ಯ ಕಂಡುಬರುತ್ತದೆ.
ಉತ್ಸವದ ದಿನ ಉತ್ಸವಮೂರ್ತಿಯನ್ನು ಅಡ್ಡೆಯಿಂದ ತಂದು ಭವ್ಯ ಐದು ಅಂಕಣಗಳ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ದೇವಸ್ಥಾನದ ಮುಂಭಾಗ ಸಿದ್ಧವಾಗಿ ನಿಂತಿರುವ ರಥವನ್ನು ನೂರಾರು ಭಕ್ತರು ತೇರುಹರಿಯುವ ಮೂಲಕ ಚಲಿಸುತ್ತಾರೆ. ದೇವಾಲಯದ ಸುತ್ತು ತಿರುಗುವ ರಥದ ಸಂಚಲನ ಭಕ್ತರಲ್ಲಿ ಅಪಾರ ಭಕ್ತಿ ಹಾಗೂ ಉತ್ಸಾಹವನ್ನು ಮೂಡಿಸುತ್ತದೆ.
ಚುಂಚನಕಟ್ಟೆಯ ಪ್ರಮುಖ ಆಕರ್ಷಣೆಯೆಂದರೆ ಕಾವೇರಿ ನದಿಯ ಜಲಪಾತ. ಮಳೆಗಾಲದಲ್ಲಿ ಸುಮಾರು 65 ಅಡಿ ಎತ್ತರದಿಂದ ಬಂಡೆಗಳ ಮೇಲೆ ಬೋರ್ಗರೆಯುತ್ತಾ ದುಮ್ಮಿಕ್ಕುವ ಕಾವೇರಿ ನದಿ ರಮಣೀಯ ಜಲಪಾತವನ್ನು ಸೃಷ್ಟಿಸುತ್ತದೆ. ಇದು ಕಾವೇರಿ ನದಿಯ ಮೊದಲ ಜಲಪಾತವೆಂಬ ಖ್ಯಾತಿಯನ್ನು ಹೊಂದಿದೆ. ಪದರಪದರವಾಗಿ ಒಡೆದು ನಿಂತಿರುವ ಬಂಡೆಗಳು ಈ ಜಲಪಾತದ ವೈಶಿಷ್ಟ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ.
ಸ್ಥಳಪುರಾಣದ ಪ್ರಕಾರ ತೃಣಬಿಂದು ಮಹಾಮುನಿಗಳ ಕೋರಿಕೆಯಂತೆ ಲಕ್ಷ್ಮಣನು ಬಾಣದಿಂದ ಬಂಡೆಯನ್ನು ಬೇಧಿಸಿದನೆಂದು ಹೇಳಲಾಗುತ್ತದೆ. ಆ ಬಂಡೆಯ ಮೇಲಿರುವ ಪಾದಗುರುತುಗಳನ್ನು ತೃಣಬಿಂದು ಮಹಾಮುನಿಗಳ ಪಾದಚಿಹ್ನೆಗಳೆಂದು ನಂಬಲಾಗಿದೆ. ಸೀತಾದೇವಿ ಸ್ನಾನ ಮಾಡಿದ ಸ್ಥಳವೆಂಬ ನಂಬಿಕೆಯ ಹಿನ್ನೆಲೆಯಲ್ಲಿ ಹಳದಿ ಬಣ್ಣದ ನೀರು ಬೀಳುವ ಜಾಗವನ್ನು ‘ಸೀತೆಮಡು’ ಎಂದು ಕರೆಯುತ್ತಾರೆ. ಜಲಪಾತದ ಶಬ್ದವನ್ನು ‘ಸೀತೆಮೊರೆವು’ ಎನ್ನುವುದು ಸ್ಥಳೀಯರ ನಂಬಿಕೆ.
ಒಂದು ವಿಶಿಷ್ಟ ಅಂಶವೆಂದರೆ ಜಲಪಾತದ ರಭಸದ ಶಬ್ದ ಸುತ್ತಮುತ್ತಲ ಹಳ್ಳಿಗಳಿಗೆ ಕೇಳಿಸಿಕೊಳ್ಳುತ್ತಿದ್ದರೂ, ಶ್ರೀ ಕೋದಂಡರಾಮ ದೇವಾಲಯದ ಗರ್ಭಗುಡಿಯೊಳಗೆ ಆ ಶಬ್ದ ಕೇಳಿಸುವುದಿಲ್ಲ ಎಂಬುದು. ಸ್ಥಳಪುರಾಣದ ಪ್ರಕಾರ ರಾಮನು ಸೀತೆಯ ವಿಶ್ರಾಂತಿಗೆ ತೊಂದರೆಯಾಗಬಾರದೆಂದು ಕಾವೇರಿ ನದಿಯ ಹರಿವಿನ ಶಬ್ದ ಗರ್ಭಗುಡಿಗೆ ಕೇಳದಂತೆ ಆಜ್ಞಾಪಿಸಿದನೆಂದು ಹೇಳಲಾಗುತ್ತದೆ.
ರಾಮಾಯಣ ಪರಂಪರೆಯಂತೆ ರಾಮ, ಸೀತೆ ಹಾಗೂ ಲಕ್ಷ್ಮಣರು ಈ ಪ್ರದೇಶದಲ್ಲಿ ಕೆಲಕಾಲ ವಾಸ್ತವ್ಯ ಮಾಡಿದರೆಂದು ಪ್ರತೀತಿ ಇದೆ. ಆ ಕಾಲದಲ್ಲಿ ಚುಂಚ ಹಾಗೂ ಚುಂಚಿ ಎಂಬ ರಾಕ್ಷಸರು ಇಲ್ಲಿನ ಜನರಿಗೆ ಹಿಂಸೆ ನೀಡುತ್ತಿದ್ದರೆಂದು, ಅವರನ್ನು ವಧೆ ಮಾಡಿದ ಬಳಿಕ ಈ ಪ್ರದೇಶಕ್ಕೆ ‘ಚುಂಚಾರಣ್ಯ’ ಎಂಬ ಹೆಸರು ಬಂದಿತೆಂದು ಹೇಳಲಾಗುತ್ತದೆ. ಅದು ಕಾಲಕ್ರಮೇಣ ಚುಂಚನಕಟ್ಟೆ ಎಂದು ಪರಿವರ್ತನೆಯಾಯಿತು ಎಂಬ ನಂಬಿಕೆಯೂ ಇದೆ.
ಇನ್ನೊಂದು ಕಥೆಯ ಪ್ರಕಾರ ಚುಂಚ–ಚುಂಚಿ ಎಂಬ ಬೇಡ ದಂಪತಿಗಳು ತೃಣಬಿಂದು ಮುನಿಗಳ ತಪಶಕ್ತಿಯನ್ನು ಅರಿತು ಮನಪರಿವರ್ತನೆಗೊಂಡು ಮುನಿಗಳ ಶರಣಾಗಿ ಆಶ್ರಮವಾಸಿಗಳಾದರು. ಇಂದಿಗೂ ದೇವಾಲಯದ ಮುಂದೆ ಕಾವಲುಗಾರರಂತೆ ಸ್ಥಾಪಿತವಾಗಿರುವ ವಿಗ್ರಹಗಳನ್ನು ಅವರದ್ದೆಂದು ಸ್ಥಳೀಯರು ನಂಬುತ್ತಾರೆ.
ಇಲ್ಲಿನ ಶ್ರೀ ಕೋದಂಡರಾಮ ದೇವಾಲಯವು ಸುಂದರ ಶಿಲ್ಪಕಲೆಯ ರಚನೆಯಿಂದ ಪ್ರಸಿದ್ಧಿಯಾಗಿದೆ. ಗರ್ಭಗುಡಿಯಲ್ಲಿ ಶ್ರೀರಾಮನ ಬಲಬದಿಗೆ ಸೀತಾದೇವಿಯ ವಿಗ್ರಹ ಹಾಗೂ ಎಡಬದಿಗೆ ಲಕ್ಷ್ಮಣನ ವಿಗ್ರಹವಿರುವುದು ವಿಶೇಷ. ದೇವಾಲಯದ ಹೊರಾಂಗಣ ಗೋಡೆಗಳಲ್ಲಿ ಶ್ರೀಮನ್ನಾರಾಯಣನ ದಶಾವತಾರಗಳ ಚಿತ್ರಣ ಮನಮುಟ್ಟುವಂತೆ ಮೂಡಿಬಂದಿದೆ. ಮಹಾದ್ವಾರದ ರಾಜಗೋಪುರವು ದೇಗುಲದ ಶಿಲ್ಪಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಒಂದು ಕಾಲದಲ್ಲಿ ರಥೋತ್ಸವದ ಅಂಗವಾಗಿ ಸುಮಾರು ಹದಿನೈದು ದಿನಗಳ ಕಾಲ ನಡೆಯುತ್ತಿದ್ದ ದನಗಳ ಜಾತ್ರೆ ರಾಜ್ಯದಾದ್ಯಂತ ಪ್ರಸಿದ್ಧವಾಗಿತ್ತು. ಉತ್ತಮ ಎತ್ತುಗಳ ಜೋಡಿಯನ್ನು ‘ಚುಂಚನಕಟ್ಟೆ ಜೋಡಿ’ ಎಂದು ಕರೆಯಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಆ ವೈಭವ ಕಡಿಮೆಯಾದರೂ ಅದರ ನೆನಪುಗಳು ಇನ್ನೂ ಜೀವಂತವಾಗಿವೆ.
ಬಸ್ ನಿಲ್ದಾಣದ ಕೆಳಗಿನ ವೃತ್ತದಲ್ಲಿ ಸ್ಥಾಪಿಸಿರುವ ರಾಸುವಿನ ಪ್ರತಿಮೆ ಗಮನ ಸೆಳೆಯುತ್ತದೆ. ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹನುಮಂತಕಟ್ಟೆಯನ್ನು ಮೈಸೂರು ಅರಸರಾದ ಚಿಕ್ಕದೇವರಾಜ ಒಡೆಯರ್ ಕಾಲದಲ್ಲಿ ಕ್ರಿ.ಶ. ೧೬೭೨ರಲ್ಲಿ ನಿರ್ಮಿಸಲಾಯಿತು. ನಂತರ ದಿವಾನ್ ಪೂರ್ಣಯ್ಯನವರು ಅದನ್ನು ದುರಸ್ತಿ ಮಾಡಿಸಿದರು. ಕಟ್ಟೆಯ ಹಿನ್ನೀರಿನಿಂದ ಜಲವಿದ್ಯುತ್ ಉತ್ಪಾದನೆಯೂ ನಡೆಯುತ್ತಿದೆ.
ಇಲ್ಲಿ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಸ್ಥಿತವಾಗಿದ್ದು, ದೇವಾಲಯದ ಎದುರು ಸ್ಥಾಪಿಸಿರುವ ಭವ್ಯ ಹನುಮಂತನ ವಿಗ್ರಹವು ಕ್ಷೇತ್ರಕ್ಕೆ ವಿಶೇಷ ಮೆರುಗು ನೀಡಿದೆ. ಸುತ್ತಮುತ್ತಲ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಲು ವೀಕ್ಷಣ ಗೋಪುರವೂ ನಿರ್ಮಿಸಲಾಗಿದೆ.
ರಥೋತ್ಸವದ ದಿನ ತೇರು ಹರಿಯುವ ಸಮಯದಲ್ಲಿ ಅಪಾರ ಜನಸಂದಣಿ ಸೇರಿರುತ್ತದೆ. ಪುರಿ–ಖಾರ, ಖರ್ಜೂರ, ಕಬ್ಬಿನ ಹಾಲು ಮುಂತಾದ ವ್ಯಾಪಾರ ಚಟುವಟಿಕೆಗಳು ಜೋರಾಗಿದ್ದು ಜಾತ್ರೆಯ ಸಡಗರವನ್ನು ಹೆಚ್ಚಿಸುತ್ತವೆ. ಈ ರೀತಿ ಧರ್ಮ, ಇತಿಹಾಸ, ಪ್ರಕೃತಿ ಮತ್ತು ಜನಜೀವನ ಒಂದಾಗಿ ಬೆರೆತ ಚುಂಚನಕಟ್ಟೆ ಜಾತ್ರೆ ಭಕ್ತರ ಮನಸ್ಸಿನಲ್ಲಿ ಅಚ್ಚಳಿಯದ ಅನುಭವವನ್ನು ಮೂಡಿಸುತ್ತದೆ.
- ಗೊರೂರು ಅನಂತರಾಜು, ಹಾಸನ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


