ಕೆಲಸದ ಒತ್ತಡ ನಿವಾರಣೆಗೆ ಕ್ರೀಡಾಕೂಟ ಸಹಕಾರಿ : ಶಾಸಕ ಯಶ್‍ಪಾಲ್ ಎ ಸುವರ್ಣ

Upayuktha
0

 


ಉಡುಪಿ: ಸರಕಾರಿ ನೌಕರರು ಸಮಯದ ಚೌಕಟ್ಟಿನಲ್ಲಿ ದುಡಿಯುವ ಸಂದರ್ಭದಲ್ಲಿ ಹೆಚ್ಚಿನ ಒತ್ತಡವನ್ನು ಅನುಭವಿಸುತ್ತಾರೆ. ಮಾನಸಿಕ ಹಾಗೂ ದೈಹಿಕ ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ದಿನನಿತ್ಯ ಕ್ರೀಡೆ, ಯೋಗ ಹಾಗೂ ವ್ಯಾಯಾಮದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘವು ಸರ್ಕಾರಿ ನೌಕರರಿಗೆ ಆಯೋಜಿಸಿರುವ ಕ್ರೀಡಾಕೂಟವು ಅರ್ಥಪೂರ್ಣವಾಗಿದ್ದು ನೌಕರರ ಒತ್ತಡ ನಿವಾರಣೆಗೆ ಸಹಕಾರಿಯಾಗಿದೆ ಎಂದು ಶಾಸಕ ಯಶ್‍ಪಾಲ್ ಎ ಸುವರ್ಣ ಹೇಳಿದರು.


ಅವರು ಇಂದು ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.


ಕೆಲಸ-ಕಾರ್ಯಗಳಲ್ಲಿ ಒತ್ತಡವಿದ್ದಾಗ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಏರು ಪೇರಾಗುತ್ತದೆ. ಇದರಿಂದಾಗಿ ದಿನನಿತ್ಯದ ಕಾರ್ಯಗಳಲ್ಲಿ ವ್ಯತ್ಯಾಸವಾಗುತ್ತದೆ. ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಿಂದ ಮನಸ್ಸು ಚೇತೋಹಾರಿಯಾಗಿರುತ್ತದೆ. ಸರ್ಕಾರಿ ನೌಕರರ ಸಂಘವು ಸದಸ್ಯರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕೆಲಸಮಾಡುತ್ತಿದ್ದು ಕ್ರೀಡಾ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಸಂಘಟಿಸಿದೆ ಎಂದು ಸಂಘದ ಪ್ರಯತ್ನವನ್ನು ಅಭಿನಂದಿಸಿದ ಅವರು, ಸಂಘದ ಬಹುಕಾಲದ ಸ್ವಂತ ಕಟ್ಟಡದ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದರು.


ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಸರ್ಕಾರಿ ನೌಕರರು ಮತ್ತು ಜನಪ್ರತಿನಿಧಿಗಳು ಜೊತೆಯಾಗಿ ಪ್ರಜಾಪ್ರಭುತ್ವಕ್ಕೆ ಶಕ್ತಿ ನೀಡುವ ಕಾರ್ಯ ಮಾಡಬೇಕು. ಸರ್ಕಾರಿ ನೌಕರರು ಶೃದ್ದೆ ಮತ್ತು ಪ್ರಾಮಾಣಿಕತೆಯಿಂದ ಜನರ ಸೇವೆ ಮಾಡಿದಾಗ ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ತಮ್ಮ ದಿನನಿತ್ಯದ ಜಂಜಾಟಗಳ ಮಧ್ಯೆಯೂ ಸರ್ಕಾರಿ ನೌಕರರು ಆಟೋಟಗಳಲ್ಲಿ ತೊಡಗಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಕ್ರೀಡೆ ಮೂಲಕ ಸಮಾಜವನ್ನು ಕಟ್ಟುವ ಕೆಲಸವಾಗಬೇಕು. ಜಿಲ್ಲೆಯ ಕ್ರೀಡಾಳುಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲೂ ಅತ್ಯುತ್ತಮ ಸಾಧನೆ ಮಾಡಿ ಕೀರ್ತಿ ತರಬೇಕು ಎಂದರು. 


ಜಿಲ್ಲೆಯಲ್ಲಿ 4 ಸಾವಿರಕ್ಕೂ ಮಿಕ್ಕಿ ಸರ್ಕಾರಿ ನೌಕರರು ದುಡಿಯುತ್ತಿದ್ದಾರೆ. ಸರ್ಕಾರಿ ನೌಕರರು ಸಮಾಜ ಸೇವೆಯಲ್ಲಿ ನಿರತರಾಗಿದ್ದು, ಇವರ ಸೇವೆ ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಪಕ್ಷ, ರಾಜಕಾರಣಿ ಹಾಗೂ ಜನರಿಂದ ಒತ್ತಡಕ್ಕೆ ಒಳಗಾಗುವ ಅಧಿಕಾರಿಗಳು ಜಾಗರೂಕರಾಗಿ ತಮ್ಮ ಬಗ್ಗೆ ತಪ್ಪು ಅಭಿಪ್ರಾಯ ಮೂಡದಂತೆ ಕೆಲಸ ನಿರ್ವಹಿಸಿ ಮೆಚ್ಚುಗೆ ಪಡೆಯಬೇಕು ಎಂದ ಅವರು ಉಡುಪಿಯ ಪರ್ಯಾಯ ಮಹೋತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.


ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಇದ್ದರೂ ಸರ್ಕರಿ ನೌಕರರು ನೂರು ಪ್ರತಿಶತದಷ್ಟು ಕಾರ್ಯದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಾರೆ. ಈ ಸಂದರ್ಭದಲ್ಲಿ ಒತ್ತಡಕ್ಕೊಳಗಾಗುವುದು ಸಹಜ. ಒತ್ತಡವನ್ನು ನಿಭಾಯಿಸಲು ಖಡ್ಡಾಯವಾಗಿ ದಿನನಿತ್ಯ ಒಂದು ಗಂಟೆ ಕ್ರೀಡೆ ಅಥವಾ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ದೇಹದ ಆರೋಗ್ಯದ ಜೊತೆಗೆ ಮಾನಸಿಕವಾಗಿಯೂ ಸಂತೋಷದಿಂದಿರಲು ಸಾಧ್ಯ ಎಂದರು.


ಕ್ರೀಡಾ ಕಾರ್ಯದರ್ಶಿಗಳಾದ ದಿನಕರ್ ನಾಯ್ಕ್ ಹಾಗೂ ದೀಪಾ ಕ್ರೀಡಾ ಪ್ರತಿಜ್ಷಾ ವಿಧಿ ಬೋಧಿಸಿದರು. 


ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಆನಂದ ಜತ್ತಣ್ಣ, ಜಿಲ್ಲಾ ಖಜಾಂಜಿ ದಯಾನಂದ ಬೆನ್ನೂರು, ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಶೆಟ್ಟಿ, ಸಂಘದ ಪದಾಧಿಕಾರಿಗಳು ಮತ್ತಿರರು ಉಪಸ್ಥಿತರಿದ್ದರು. 


ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು ಸ್ವಾಗತಿಸಿ, ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಹಾಗೂ ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ ನಿರೂಪಿಸಿದರು. 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top