ಮಂಗಳೂರು: ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ರಾಗಸುಧಾರಸ-2025 ಸಂಗೀತ ಮತ್ತು ನೃತ್ಯೋತ್ಸವ ಡಿ.13ರಿಂದ 20ರ ವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಸಂಗೀತ ಕ್ಷೇತ್ರದ ಹಲವು ಸಾಧಕರಿಗೆ ಸನ್ಮಾನ-ಗೌರವಗಳನ್ನು ಸಲ್ಲಿಸಲಾಗುತ್ತಿದೆ.
ಸುರತ್ಕಲ್‌ನಲ್ಲಿರುವ ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ವಿಶ್ವೇಶತೀರ್ಥ ಸಭಾಂಗಣದಲ್ಲಿ ಕಾರ್ಕಳದ ಆತ್ರೇಯಿ ಕೃಷ್ಣಾ ಹಾಗೂ ದಿವ್ಯಶ್ರೀ ಭಟ್ ಮಣಿಪಾಲ ಅವರಿಗೆ ಯುವ ಕಲಾಮಣಿ ಪ್ರಶಸ್ತಿಯನ್ನು ಡಿ.14 ರಂದು ಪ್ರದಾನ ಮಾಡಲಾಗುವುದು.
ಕು.ಆತ್ರೇಯೀ ಕೃಷ್ಣಾ ಕಾರ್ಕಳ: ಶ್ರೀಮತಿ ಪೂರ್ಣಿಮಾ ಹಾಗೂ ಡಾ.ಎಸ್.ಆರ್. ಅರುಣ್ ಕುಮಾರ್ ಇವರ ಪುತ್ರಿಯಾದ ಆತ್ರೇಯೀ ವಿದುಷಿ ಉಮಾಶಂಕರಿ ಮಣಿಪಾಲ, ವಿದ್ವಾನ್ ಯತಿರಾಜ ಆಚಾರ್ಯ ಬಿ.ಸಿ.ರೋಡು, ಇವರಲ್ಲಿ ಶಿಷ್ಯ ವೃತ್ತಿ ನಡೆಸಿದ ಆತ್ರೇಯೀ ಕೃಷ್ಣಾ ಪ್ರಸ್ತುತ ಚೆನ್ನೈ ನ ವಿದ್ವಾನ್ ಆರ್.ಕೆ. ಶ್ರೀರಾಮ್ ಕುಮಾರ್ ಹಾಗೂ ವಿದುಷಿ ಅಮೃತಾ ಮುರಳಿ ಇವರಲ್ಲಿ ಹೆಚ್ಚಿನ ತರಬೇತಿ ಪಡೆಯುತ್ತಿದ್ದಾರೆ. ನಾಡಿನಾದ್ಯಂತ ತಮ್ಮ ಕಛೇರಿ ಗಳಿಂದ ರಸಿಕರ ಮನಗೆದ್ದಿರುವ ಇವರು ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುತ್ತಾರೆ. ತಮ್ಮ ವಿಶೇಷ ಗಾಯನ ಶೈಲಿಯಿಂದ ಈಗಾಗಲೇ ಸಂಗೀತ ರಸಿಕರ ಮನ ಗೆದ್ದಿದ್ದಾರೆ.ದಿನಾಂಕ 14.12.2025 ಆದಿತ್ಯವಾರದಂದು ಸುರತ್ಕಲ್‌ನ ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ವಿಶ್ವೇಶ ತೀರ್ಥ ಸಭಾಂಗಣದಲ್ಲಿ ಆತ್ರೇಯೀ ಕೃಷ್ಣಾ ಇವರಿಗೆ 'ಯುವ ಕಲಾಮಣಿ' ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕು. ದಿವ್ಯಶ್ರೀ ಭಟ್ ಮಣಿಪಾಲ: ಜಯಶ್ರೀ ಹಾಗೂ ಡಾ. ಕುಮಾರಶ್ಯಾಮ ಇವರ ಪುತ್ರಿಯಾದ ಇವರು ವಿದುಷಿ ಉಮಾಶಂಕರಿ ಮಣಿಪಾಲ ಹಾಗೂ ವಿದ್ವಾನ್ ಮಧೂರು ಪಿ. ಬಾಲಸುಬ್ರಮಣ್ಯ ಇವರ ಶಿಷ್ಯೆ. ನಾಡಿನಾದ್ಯಂತ ತಮ್ಮ ವಿದ್ಯುತ್ಪ್ಪೂರ್ಣ ಕಚೇರಿಗಳಿಂದ ಸಂಗೀತ ರಸಿಕರ ಮನೆಗೆದ್ದಿರುವ ದಿವ್ಯಶ್ರೀ ಭಟ್ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ. ತಮ್ಮ ಇಂಪಾದ ಶಾರೀರದಿಂದ ಜನ ಮೆಚ್ಚುಗೆ ಪಡೆದಿರುವ ಕಲಾವಿದೆ. ಇವರಿಗೆ ದಿನಾಂಕ 14.12. 2025 ಆದಿತ್ಯವಾರದಂದು ಮಣಿ ಕೃಷ್ಣ ಸ್ವಾಮಿ ಅಕಾಡೆಮಿ (ರಿ.) ಸುರತ್ಕಲ್ ಇಲ್ಲಿಯ ವಿಶ್ವೇಶತೀರ್ಥ ಸಭಾಂಗಣದಲ್ಲಿ 'ಮಣಿ ಮತ್ತು ಎಂ.ಕೆ. ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಣಿ ಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ..ನಿತ್ಯಾನಂದ ರಾವ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವಿದುಷಿ ಉಮಾಶಂಕರಿ: ತೊಟ್ಟೆತ್ತೋಡಿ ಕೇಶವ ಭಟ್ ಹಾಗೂ ಪ್ರೇಮಾ ಕೆ. ಭಟ್ ಇವರ ಪುತ್ರಿಯಾದ ಉಮಾಶಂಕರಿ ಮಣಿಪಾಲ ಇವರು ವಿದುಷಿ ಸುಮತಿ ಶಂಕರ ಭಟ್ ಬದನಾಜೆ, ವಿದುಷಿ ಲಕ್ಷ್ಮೀ ಐಯ್ಯಂಗಾರ್ ಮಣಿಪಾಲ, ವಿದುಷಿ ಅನುಪಮ ಪೆರುಮುಂಡ, ಹಾಗೂ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯ ಉಡುಪಿ ಇವರ ಶಿಷ್ಯರಾದ ಇವರು ವೇದಿಕೆಯ ಕಲಾವಿದೆಯಾಗಿ ಹಾಗೂ ನೂರಾರು ಶಿಷ್ಯರನ್ನು ತರಬೇತುಗೊಳಿಸಿದ ಸಂಗೀತ ಶಿಕ್ಷಕಿ. ಸರಿಗಮ ಭಾರತಿ ಪರ್ಕಳ, ಉಡುಪಿ ಇಲ್ಲಿಯ ಸಂಗೀತ ವಿದ್ಯಾಲಯದ ನಿರ್ದೇಶಕಿಯಾಗಿ 25 ವರ್ಷಗಳಿಂದ ಎಲ್ಲಾ ಸಂಗೀತ ಕಲಾವಿದರಿಗೆ ಹಾಗೂ ಇತರ ಕಲೆಗಳಿಗೆ ವೇದಿಕೆ ನೀಡಿ ಮಾದರಿ ಎನಿಸಿಕೊಂಡಿದ್ದಾರೆ. ಕಳೆದ ಒಂದು ದಶಕದಿಂದ ಉಡುಪಿಯ ರಾಗ ಧನ ಸಂಸ್ಥೆ (ರಿ.) ಕಾರ್ಯದರ್ಶಿಯಾಗಿಯೂ 'ಸೈ' ಎನಿಸಿಕೊಂಡಿದ್ದಾರೆ. ಸಂಗೀತ ಕಲಾವಿದೆ, ಶಿಕ್ಷಕಿ ಹಾಗೂ ತಮ್ಮ ಸಂಘಟನಾ ನಿಪುಣತೆಯಿಂದ ಸಂಗೀತ ಹಾಗೂ ಕಲಾ ಕ್ಷೇತ್ರಕ್ಕಾಗಿ ಸದಾ ದುಡಿಯುವ ನಿಸ್ವಾರ್ಥ ಸಾಧಕಿ.ದಿನಾಂಕ 14.12.2025 ರಂದು ಮಣಿಕೃಷ್ಣ ಸ್ವಾಮಿ ಅಕಾಡೆಮಿ (ರಿ.) ಸುರತ್ಕಲ್ ಇಲ್ಲಿಯ ವಿಶ್ವೇಶತೀರ್ಥ ಸಭಾಂಗಣದಲ್ಲಿ 'ಕಲಾವಿಹಾರಿ ಎ. ಈಶ್ವರಯ್ಯ ಸ್ಮಾರಕ ಪ್ರಶಸ್ತಿ' ಯನ್ನು ಪ್ರದಾನ ಮಾಡಲಾಗುವುದು.
ವಿದ್ವಾನ್ ವಿಠಲರಾಮ ಮೂರ್ತಿ: ಅಂತಾರಾಷ್ಟ್ರೀಯ ಪಿಟೀಲು ವಾದಕ, ಉನ್ನತ ಶ್ರೇಣಿಯ ಆಕಾಶವಾಣಿ, ದೂರದರ್ಶನ ಕಲಾವಿದರಾದ ನಿಡ್ಲೆಯ ಕರುಂಬಿತ್ಲು ವಿಠಲ ರಾಮಮೂರ್ತಿಯವರು ಲಾಲ್ಗುಡಿ ಬಾನಿಯನ್ನು ಮುಂದುವರಿಸುತ್ತಿರುವ ಹೆಸರಾಂತ ಕಲಾವಿದರು. ನೂರಾರು ಶಿಷ್ಯರನ್ನು ತರಬೇತುಗೊಳಿಸಿದ ಅತ್ಯುತ್ತಮ ಸಹವಾದಕರೂ ಹಾಗೂ ಸೋಲೋ ಕಲಾವಿದರು. ಪ್ರಪಂಚದಾದ್ಯಂತ ತಮ್ಮ ವಾದನದ ಇಂಪನ್ನು ಪಸರಿಸುವ ಇವರು ತನ್ನ ಊರಾದ ನಿಡ್ಲೆಯ ಕರುಂಬಿತ್ತಿಲ್‌ನಲ್ಲಿ ಪ್ರತೀ ವರ್ಷ ನಡೆಸುವ ಸಂಗೀತ ಶಿಬಿರದಲ್ಲಿ 300 ಕ್ಕೂ ಅಧಿಕ ಸಂಗೀತ ವಿದ್ಯಾರ್ಥಿಗಳು ನಾಡಿನ ಹೆಸರಾಂತ ಕಲಾವಿದರಿಂದ ತರಬೇತಿ ಪಡೆಯುತ್ತಿರುವುದು ಸ್ತುತ್ಯರ್ಹ. ಡಿ. 13ರ ಶನಿವಾರದಂದು ಇವರಿಗೆ ಶ್ರೀಮದೆಡನೀರು ಮಠದ ಸಭಾಂಗಣದಲ್ಲಿ 'ಲಲಿತ ಕಲಾ ಪೋಷಕ ಮಣಿ' ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸಂಗೀತ ವಿದ್ವಾನ್ ಖಂಡಿಗೆ ಜೇನುಮೂಲೆ ಕೃಷ್ಣ ಭಟ್: ಕಾಸರಗೋಡು ಜಿಲ್ಲೆಯ ನೀರ್ಚಾಲು ಗ್ರಾಮದ ಖಂಡಿಗೆ ಜೇನುಮೂಲೆ ದಿ. ಶಾಮ ಭಟ್ಟ ಮತ್ತು ಸರಸ್ವತಿ ಅಮ್ಮನವರ ಸುಪುತ್ರರು. ಇವರು ವಯೊಲಿನ್, ಹಾಡುಗಾರಿಕೆ, ಹಾಗೂ ಹಾರ್ಮೋನಿಯಮ್ ವಾದನದಲ್ಲಿ ಪರಿಣಿತರು. ಚೆಂಬೈ ವೈದ್ಯನಾಥ ಭಾಗವತರ್ ಇವರ ನೇರ ಶಿಷ್ಯರಾದ ವಿದ್ವಾನ್ ಎಂ.ಜಿ. ಭಾಗವತರ್ ಇವರ ಶಿಷ್ಯರು. ಕೇರಳ ಮತ್ತು ಕರ್ನಾಟಕ ಹಲವೆಡೆಗಳಲ್ಲಿ ಹಾಡುಗಾರಿಕೆ ಮತ್ತು ವಯೊಲಿನ್ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಕೃಷ್ಣ ಭಟ್ಟರು 'ಮಧುಪುರನಾಥ' ಎಂಬ ಅಂಕಿತನಾಮದೊಂದಿಗೆ ನೂರಕ್ಕೂ ಹೆಚ್ಚು ಕೃತಿ, ಕೀರ್ತನೆ, ವರ್ಣ, ತಿಲ್ಲಾನಗಳನ್ನು ರಚಿಸಿರುತ್ತಾರೆ. ಇವರಿಗೆ ಡಿ.13ರಂದು ಶನಿವಾರ ಮಣಿಕೃಷ್ಣ ಸ್ವಾಮಿ ಅಕಾಡೆಮಿ (ರಿ.) ಸುರತ್ಕಲ್ ನೀಡಲಿರುವ "ಹಿರಿಯ ಸಾಧಕ ಪ್ರಶಸ್ತಿ"ಯು ಶ್ರೀಮದೆಡನೀರು ಮಠದ ಸಭಾಂಗಣದಲ್ಲಿ ಪ್ರದಾನ ಮಾಡಲಾಗುವುದು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

