ನಮ್ಮ ಸಮಾಜದಲ್ಲಿ ಜೀವನದ ಗತಿಯೇ ಬದಲಾಗುತ್ತಿದೆ. ವಿಶೇಷವಾಗಿ ಯುವಜನರ ಬದುಕಿನಲ್ಲಿ ರಾತ್ರಿ ಎಂಬುದು ವಿಶ್ರಾಂತಿಯ ಸಮಯಕ್ಕಿಂತಲೂ ಜಾಗರಣೆಯ ಸಮಯವಾಗಿ ಮಾರ್ಪಟ್ಟಿದೆ. ಕಾಲೇಜು, ಕೆಲಸ, ಮನರಂಜನೆ, ಸಾಮಾಜಿಕ ಜಾಲತಾಣಗಳು, ಗೇಮಿಂಗ್, ಸರಣಿ ಚಿತ್ರಗಳು ಇವುಗಳ ನಡುವೆ ನಿದ್ರೆ ಹಿಂಬದಿಗೆ ಸರಿದು ರಾತ್ರಿ ಜಾಗರಣೆ ಒಂದು ಹೊಸ ಜೀವನಶೈಲಿಯಾಗಿದೆ. ಆದರೆ ಈ ಅಭ್ಯಾಸವು ವ್ಯಕ್ತಿಯ ದೇಹ ಮನಸ್ಸು ಭವಿಷ್ಯ ಇವೆಲ್ಲಕ್ಕೂ ಎಂತಹ ಪರಿಣಾಮ ಬೀರುತ್ತದೆ ಎಂಬುದು ಗಂಭೀರ ಚಿಂತನೆಯ ವಿಷಯ.
ಯುವಜನರು ರಾತ್ರಿ ಜಾಗೃತರಾಗಿರುವುದಕ್ಕೆ ಅನೇಕ ಕಾರಣಗಳಿವೆ. ಓದುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಒತ್ತಡ ರಾತ್ರಿ ಹೊತ್ತಿಗೇ ಹೆಚ್ಚು ಕಾಣಿಸುತ್ತದೆ. ಉದ್ಯೋಗದಲ್ಲಿರುವವರ ಜೀವನದಲ್ಲಿ ಸಮಯದ ಕೊರತೆ ಪ್ರಮುಖ ಸಮಸ್ಯೆ. ದಿನವಿಡೀ ಕೆಲಸದಿಂದ ಬೆರಗಾದ ಮನಸ್ಸು ರಾತ್ರಿ ಹೊತ್ತು ಸ್ವಲ್ಪ ಮನರಂಜನೆ ಹುಡುಕುವುದು ಸಹಜ. ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಈ ಅಭ್ಯಾಸಕ್ಕೆ ಇನ್ನಷ್ಟು ಬೆಂಕಿ ಹಚ್ಚುವಂತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ತೊಡಗಿಸಿಕೊಂಡು ಸಮಯ ಹೀಗೇ ಜಾರುತ್ತದೆ. ಒಂದು ವಿಡಿಯೋ ನೋಡಿದರೆ ಇನ್ನೊಂದು ತೋರಿಸುವ ಡಿಜಿಟಲ್ ಜಗತ್ತು ನಿದ್ರೆಯ ಬಾಗಿಲನ್ನೇ ಮುಚ್ಚುತ್ತದೆ.
ರಾತ್ರಿ ಜಾಗರಣೆ ತಕ್ಷಣವೇ ತೊಂದರೆ ಕೊಡದಿದ್ದರೂ ದೀರ್ಘಾವಧಿಯಲ್ಲಿ ಅದರ ಪರಿಣಾಮ ಗಂಭೀರ. ಮನುಷ್ಯನ ದೇಹ ನೈಸರ್ಗಿಕವಾಗಿ ರಾತ್ರಿಯಲ್ಲಿ ವಿಶ್ರಾಂತಿಗೆ ತಯಾರಾಗುತ್ತದೆ. ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದರಿಂದ ದೇಹದ ಜೈವಿಕ ಗಡಿಯಾರ ಅಸ್ಥವ್ಯಸ್ಥವಾಗುತ್ತದೆ. ಅಲ್ಪ ನಿದ್ರೆ ಮುಂದಿನ ದಿನದ ಚೈತನ್ಯ ಹಿಂಸುತ್ತದೆ. ಓದು ನಡೆಸುವವರಲ್ಲಿ ಗಮನಕ್ಷಮತೆ ಕುಗ್ಗುವುದು, ನೆನಪಿನ ಸಾಮರ್ಥ್ಯ ಕಡಿಮೆಯಾಗುವುದು ಸಾಮಾನ್ಯ.
ಮನಸ್ಸಿನ ಮೇಲೆ ಇದರ ಪರಿಣಾಮ ಇನ್ನೂ ಸೂಕ್ಷ್ಮ. ನಿರಂತರ ರಾತ್ರಿ ಜಾಗರಣೆಯಿಂದ ಕಳವಳ, ಅಸಹನೆ, ಒತ್ತಡ, ನಿರುತ್ಸಾಹ ಇವುಗಳು ಹೆಚ್ಚಾಗುತ್ತವೆ. ಕೆಲವೊಮ್ಮೆ மனೋನಿಲೆಯಲ್ಲಿಯೂ ಬದಲಾವಣೆ ಕಾಣಬಹುದು. ದೇಹ ಆರೋಗ್ಯವೂ ಹಿಂದುಮುಂದು ಕಾಣುತ್ತದೆ. ರೋಗನಿರೋಧಕ ಶಕ್ತಿ ಕುಗ್ಗುವುದರಿಂದ ಸಣ್ಣ ಸಣ್ಣ ಸೋಂಕುಗಳು ಹೆಚ್ಚಾಗುತ್ತವೆ. ಅಸ್ಥಿರ ನಿದ್ರೆ ಹಾರ್ಮೋನ್ ಸಮತೋಲನಕ್ಕೇ ಹಾನಿ ಮಾಡುತ್ತದೆ.
ಆದರೆ ಈ ಅಭ್ಯಾಸವನ್ನು ಬದಲಾಯಿಸಲು ಸಾಧ್ಯವಿಲ್ಲ ಎನ್ನುವುದು ತಪ್ಪು. ಇದು ನಿಧಾನವಾಗಿ ಬೆಳೆದ ಅಭ್ಯಾಸವಾದುದರಿಂದ ನಿಧಾನವಾಗಿ ಬದಲಿಸಬಹುದಾದದ್ದು. ದಿನದ ವೇಳೆಯಲ್ಲಿ ಕೆಲಸದ ಪ್ಲಾನ್ ನಿಷ್ಠೆಯಿಂದ ಮಾಡುವುದು, ರಾತ್ರಿ ನಿದ್ರೆಗೆ ಒಂದು ನಿಶ್ಚಿತ ಸಮಯ ನಿಗದಿಪಡಿಸುವುದು, ಸರಣಿ ಚಿತ್ರಗಳು ಮತ್ತು ಫೋನ್ ಬಳಕೆಗೆ ಮಿತಿಯನ್ನು ನೇಮಿಸುವುದು ಈ ಎಲ್ಲವೂ ಉತ್ತಮ ಪ್ರಯತ್ನಗಳು. ನಿದ್ರೆಗೆ ಒಂದು ಗಂಟೆ ಮೊದಲು ಸ್ಕ್ರೀನ್ ಬೆಳಕಿನಿಂದ ದೂರವಿರುವುದು ದೇಹಕ್ಕೆ ವಿಶ್ರಾಂತಿಯ ಸೂಚನೆ ನೀಡುತ್ತದೆ. ಹಗಲಿನ ಹೊತ್ತಿಗೆ ಸ್ವಲ್ಪ ವ್ಯಾಯಾಮದಿಂದ ದೇಹ ದಣಿದು ರಾತ್ರಿ ನಿದ್ರೆಗೆ ಸಿದ್ಧವಾಗುತ್ತದೆ.
ರಾತ್ರಿ ಜಾಗರಣೆ ಮೋಜಿನಂತೆ ಕಾಣಬಹುದು. ಸ್ನೇಹಿತರ ಜೊತೆ ಆನ್ಲೈನ್ ಗೇಮಿಂಗ್, ಚಾಟಿಂಗ್, ನೋಡಬೇಕಾದ ಸರಣಿ ಇವು ಕ್ಷಣಿಕ ಖುಷಿ ಕೊಡಬಹುದು. ಆದರೆ ನಿದ್ರೆ ಎನ್ನುವುದು ದೇಹದ ಮೂಲ ಆಹಾರ. ಅದನ್ನು ಕಳೆಯುವ ಮೂಲಕ ನಾವು ನಮ್ಮ ಆರೋಗ್ಯದ ಮೂಲಾಧಾರವನ್ನೇ ನಾಶಪಡಿಸುತ್ತೇವೆ. ಜಾಗರಣೆ ಜೀವನವನ್ನು ಕುಂಠಿತಗೊಳಿಸಬಹುದು. ಆದರೆ ಸರಿಯಾದ ನಿದ್ರೆ ಜೀವನಕ್ಕೆ ಚೆಲುವು, ಚೈತನ್ಯ ಮತ್ತು ಚೈತನ್ಯದಿಂದ ತುಂಬಿದ ದಿನಗಳನ್ನು ನೀಡುತ್ತದೆ.
ಯುವಜನತೆ ತಮ್ಮ ಶಕ್ತಿಯಿಂದ ಸಮಾಜವನ್ನು ಮುಂದಕ್ಕೆ ಕೊಂಡೊಯ್ಯುವವರು. ಆ ಶಕ್ತಿ ರಾತ್ರಿಯ ನಿದ್ರೆಯಿಂದಲೇ ಹುಟ್ಟುವದನ್ನು ಅರಿತುಕೊಳ್ಳುವುದು ಅವಶ್ಯಕ. ನಿದ್ರೆಯೊಂದಿಗೆ ಹೊಂದಿಕೊಂಡ ಬದುಕು ಯುವಜನರ ಕನಸುಗಳನ್ನು ಇನ್ನಷ್ಟು ಗಗನಕ್ಕೆ ಕೊಂಡೊಯ್ಯಬಲ್ಲದು.
-ಶ್ರೇಯ ಜೈನ್
ಎಸ್ ಡಿ ಎಂ ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



