ಬೆಂಗಳೂರು, ಡಿಸೆಂಬರ್ 17, 2025: ಭಾರತದ ಮೊದಲ ಆವೃತ್ತಿ ವರ್ಲ್ಡ್ ಟೆನಿಸ್ ಲೀಗ್ ಇಂದು ಬೆಂಗಳೂರಿನಲ್ಲಿ ಆರಂಭಗೊಂಡಿತು. ಬೆಂಗಳೂರಿನ ಪ್ರೇಕ್ಷಕರಿಗೆ ಗೇಲ್ ಮೊನ್ಫಿಲ್ಸ್, ನಿಕ್ ಕಿರ್ಗಿಯೊಸ್, ಡೆನಿಸ್ ಶಪೋವಲೊವ್ ಹಾಗೂ ಎಲಿನಾ ಸ್ವಿಟೋಲಿನಾ ಅವರ ಅದ್ಬುತ ಆಟವನ್ನು ಕಣ್ಣಾರೆ ನೋಡುವ ಅವಕಾಶ ದೊರಕಿತು.
ಯುಎಸ್ ಓಪನ್ ಚಾಂಪಿಯನ್ ಹಾಗೂ 2017ರ ಚೆನ್ನೈ ಓಪನ್ ವಿಜೇತ ಡಾನಿಲ್ ಮೆಡ್ವೆಡೆವ್, ದಿಗ್ಗಜ ರೋಹನ್ ಬೋಪಣ್ಣ ಅವರ ಜೊತೆಯಲ್ಲಿ ಪುರುಷರ ಡಬಲ್ಸ್‌ನಲ್ಲಿ ಜಯ ಸಾಧಿಸಿದರು. ಭಾರತದ ಯುವ ಆಟಗಾರರಾದ ಮಾಯಾ ರಾಜೇಶ್ವರನ್ ರೇವತಿ ಮತ್ತು ಧಕ್ಷಿಣೇಶ್ವರ ಸುರೇಶ್ ಕೂಡ ತಮ್ಮ ಪ್ರದರ್ಶನದ ಮೂಲಕ ಪ್ರೇಕ್ಷಕರ ಗಮನ ಸೆಳೆದರು.
2025 ಆವೃತ್ತಿಯ ಮೊದಲ ಪಂದ್ಯದಲ್ಲಿ VB ರಿಯಾಲ್ಟಿ ಹಾಕ್ಸ್ ತಂಡ 25–21 ಅಂತರದಿಂದ ಆಸ್ಸಿ ಮೇವರಿಕ್ಸ್ ಕೈಟ್ಸ್ ವಿರುದ್ಧ ಜಯ ಸಾಧಿಸಿತು. ದಿನದ ಕೊನೆಯ ಪಂದ್ಯದಲ್ಲಿ AOS ಈಗಲ್ಸ್ ತಂಡ 18–16 ಅಂತರದಿಂದ ಗೇಮ್ ಚೇಂಜರ್ಸ್ ಫಾಲ್ಕನ್ಸ್ ವಿರುದ್ಧ ಗೆಲುವು ದಾಖಲಿಸಿತು. ಮೊದಲ ದಿನದ ಅಂತ್ಯಕ್ಕೆ ಹಾಕ್ಸ್ ತಂಡ 25 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಮೊದಲ ದಿನದ ಆರಂಭಿಕ ಸೆಟ್‌ನಲ್ಲಿ ಎಲಿನಾ ಸ್ವಿಟೋಲಿನಾ ತಮ್ಮ ಸಹಜ ಹೋರಾಟ ಮನೋಭಾವವನ್ನು ಪ್ರದರ್ಶಿಸಿ ಮಾರ್ಟಾ ಕೊಸ್ಟ್ಯುಕ್ ವಿರುದ್ಧ 7–5 ಅಂತರದ ಜಯದೊಂದಿಗೆ ಹಾಕ್ಸ್‌ಗೆ ಉತ್ತಮ ಆರಂಭ ಒದಗಿಸಿದರು. ನಂತರ ಸ್ವಿಟೋಲಿನಾ, 16 ವರ್ಷದ ಮಾಯಾ ರಾಜೇಶ್ವರನ್ ರೇವತಿ ಅವರ ಜೊತೆಯಲ್ಲಿ, ಕೊಸ್ಟ್ಯುಕ್ ಮತ್ತು ಅಂಕಿತಾ ರೈನಾ ಜೋಡಿಯನ್ನು 7–5 ಅಂತರದಿಂದ ಮಣಿಸಿದರು.
ಪುರುಷರ ಡಬಲ್ಸ್‌ನಲ್ಲಿ ಕೈಟ್ಸ್ ತಂಡ ತೀವ್ರ ಪೈಪೋಟಿ ನೀಡಿತು. ನಿಕ್ ಕಿರ್ಗಿಯೊಸ್ ಮತ್ತು ಧಕ್ಷಿಣೇಶ್ವರ ಸುರೇಶ್ ಅವರ ಜೋಡಿ, ಡೆನಿಸ್ ಶಪೋವಲೊವ್–ಯುಕಿ ಭಾಂಬ್ರಿ ಜೋಡಿಯನ್ನು 6–4 ಅಂತರದಿಂದ ಮಣಿಸಿತು. ಸಿಂಗಲ್ಸ್ ಪಂದ್ಯದಲ್ಲಿ ಶಪೋವಲೊವ್ 7–5 ಅಂತರದಿಂದ ಸುರೇಶ್ ಅವರನ್ನು ಸೋಲಿಸಿ ತಮ್ಮ ತಂಡಕ್ಕೆ ಮುನ್ನಡೆ ನೀಡಿದರು.
“ಈ ಟೂರ್ನಿಯಲ್ಲಿ ನಾನು ಹಲವು ಬಾರಿ ಆಡಿದ್ದೇನೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಅಭಿಮಾನಿಗಳ ಮುಂದೆ ಆಡೋದು ಸದಾ ಅದ್ಭುತ ಅನುಭವ,” ಎಂದು ನಿಕ್ ಕಿರ್ಗಿಯೊಸ್ ಹೇಳಿದರು.
AOS ಈಗಲ್ಸ್ ಮತ್ತು ಗೇಮ್ ಚೇಂಜರ್ಸ್ ಫಾಲ್ಕನ್ಸ್ ನಡುವಿನ ಎರಡನೇ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಸುಮಿತ್ ನಾಗಲ್ ನಡುವಿನ ಮುಖಾಮುಖಿ ಮುಖ್ಯ ಆಕರ್ಷಣೆಯಾಗಿತ್ತು. ಮಿಕ್ಸ್‌ಡ್ ಡಬಲ್ಸ್‌ನಲ್ಲಿ ನಾಗಲ್ ಮತ್ತು ಪೌಲಾ ಬಾಡೋಸಾ 6–1 ಅಂತರದಿಂದ ಜಯ ಸಾಧಿಸಿದರು. ಬಳಿಕ ಬೋಪಣ್ಣ, ಡಾನಿಲ್ ಮೆಡ್ವೆಡೆವ್ ಜೊತೆಗೂಡಿ, ನಾಗಲ್–ಮೊನ್ಫಿಲ್ಸ್ ಜೋಡಿಯನ್ನು 6–2 ಅಂತರದಿಂದ ಮಣಿಸಿದರು.
ಫಾಲ್ಕನ್ಸ್ ಪರ ಮ್ಯಾಗ್ಡಾ ಲಿನೆಟ್ ಆರಂಭಿಕ ಸಿಂಗಲ್ಸ್‌ನಲ್ಲಿ ಪೌಲಾ ಬಾಡೋಸಾ ವಿರುದ್ಧ 6–4 ಅಂತರದ ಜಯ ಸಾಧಿಸಿ ಮುನ್ನಡೆ ನೀಡಿದರು. ಡಬಲ್ಸ್ ಪಂದ್ಯಗಳಲ್ಲಿ ಎರಡೂ ತಂಡಗಳು ಸಮಬಲ ಪ್ರದರ್ಶಿಸಿದ ಬಳಿಕ, ಗೇಲ್ ಮೊನ್ಫಿಲ್ಸ್ ಡಾನಿಲ್ ಮೆಡ್ವೆಡೆವ್ ವಿರುದ್ಧ 6–3 ಅಂತರದಿಂದ ಗೆದ್ದು ಗಮನ ಸೆಳೆದರು.
ಅಂತಿಮ ಫಲಿತಾಂಶಗಳು:
* VB ರಿಯಾಲ್ಟಿ ಹಾಕ್ಸ್ vs ಆಸ್ಸಿ ಮೇವರಿಕ್ಸ್ ಕೈಟ್ಸ್: 25 – 21
* AOS ಈಗಲ್ಸ್ vs ಗೇಮ್ ಚೇಂಜರ್ಸ್ ಫಾಲ್ಕನ್ಸ್: 18 – 16
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

