ಸಾವಯವ ಆಹಾರ ಜಾಗೃತಿ: ಮಂಗಳೂರಿನಲ್ಲಿ ಜನವರಿ 11ರಂದು ಬೃಹತ್ ಕಾರ್ಯಕ್ರಮ

Chandrashekhara Kulamarva
0




ಮಂಗಳೂರು: ಸಾವಯವ ಕೃಷಿಕ ಗ್ರಾಹಕ ಬಳಗ (ರಿ.), ಮಂಗಳೂರು ಇವರ ಆಶ್ರಯದಲ್ಲಿ “ವ್ಯಸ್ತ ಜೀವನ– ಸ್ವಸ್ಥ ಭೋಜನ” ಎಂಬ ವಿಷಯದಡಿ ಆರೋಗ್ಯಕರ ಹಾಗೂ ಪಾರಂಪರಿಕ ಆಹಾರದ ಮಹತ್ವವನ್ನು ಸಾರುವ ಬೃಹತ್ ಸಾರ್ವಜನಿಕ ಕಾರ್ಯಕ್ರಮವನ್ನು 2026ರ ಜನವರಿ 11ರಂದು, ಭಾನುವಾರ ನಗರದ ಶಾರದಾ ವಿದ್ಯಾಲಯ, ಕೊಡಿಯಾಲ್ ಬೈಲ್‌ನಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮವು ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ನಡೆಯಲಿದ್ದು, ಬೆಳಿಗ್ಗೆ 9ಕ್ಕೆ ‘ಭಾರತದ ಗ್ರೀನ್ ಹೀರೋ’ ಖ್ಯಾತಿಯ ಶ್ರೀ ಆರ್. ಕೆ. ನಾಯರ್ ಅವರು ಉದ್ಘಾಟಿಸಲಿದ್ದಾರೆ. ಬಳಿಕ ಬೆಳಿಗ್ಗೆ 9.30ಕ್ಕೆ “ವ್ಯಸ್ತ ಜೀವನ– ಸ್ವಸ್ಥ ಭೋಜನ” ಪುಸ್ತಕವನ್ನು ಶ್ರೀ ಎಂ. ಬಿ. ಪುರಾಣಿಕ್, ಅಧ್ಯಕ್ಷರು, ಶ್ರೀ ಶಾರದಾ ವಿದ್ಯಾ ಸಂಸ್ಥೆಗಳು, ಅವರು ಬಿಡುಗಡೆಗೊಳಿಸಲಿದ್ದಾರೆ.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಬೆಳಿಗ್ಗೆ 10.30ರಿಂದ ಅಂತರ್ ಜಿಲ್ಲಾ ಮಟ್ಟದ “ಸ್ಥಳದಲ್ಲಿಯೇ ಅಡುಗೆ ಮಾಡುವ ಸ್ಪರ್ಧೆ – 2026” ನಡೆಯಲಿದೆ. ಮಂಗಳೂರಿನಲ್ಲಿ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಈ ಸ್ಪರ್ಧೆಯಲ್ಲಿ ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಸ್ಪರ್ಧೆಯಲ್ಲಿ ಮರೆತುಹೋದ ಸಾಂಪ್ರದಾಯಿಕ ಅಡುಗೆಗಳು, ಗೆಡ್ಡೆ–ಗೆಣಸು ಅಥವಾ ಸೊಪ್ಪು ಆಧಾರಿತ ಅಡುಗೆಗಳು, ಆರೋಗ್ಯಕರ ಟಿಫಿನ್ ಅಥವಾ ಸಾಂಪ್ರದಾಯಿಕ ಅಡುಗೆಗಳ ಆಧುನಿಕ ರೂಪ, ಹಾಗು ಶಾಲಾ–ಕಾಲೇಜು ವಿದ್ಯಾರ್ಥಿಗಳಿಗಾಗಿ ಬೆಂಕಿರಹಿತ ಅಡುಗೆ ಎಂಬ ನಾಲ್ಕು ವಿಭಾಗಗಳು ಇರಲಿವೆ. ಪ್ರತಿ ವಿಭಾಗದಲ್ಲಿ ಮೂರು ವಿಜೇತರಿಗೆ ನಗದು ಬಹುಮಾನ ನೀಡಲಾಗುವುದಲ್ಲದೆ, ಎಲ್ಲ ಭಾಗವಹಿಸುವವರಿಗೆ ಸ್ಮರಣಿಕೆ ವಿತರಿಸಲಾಗುತ್ತದೆ.

ಬೆಳಿಗ್ಗೆ 10.45ರಿಂದ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿದ್ದು, ಭರತನಾಟ್ಯ, ಕುಣಿತ ಭಜನೆ, ವಯಲಿನ್ ಹಾಗೂ ವೀಣಾ ವಾದನಗಳಂತಹ ವಿವಿಧ ಕಲಾಪ್ರದರ್ಶನಗಳು ಆಯೋಜಿಸಲ್ಪಟ್ಟಿವೆ.




ಮಧ್ಯಾಹ್ನ 1ರಿಂದ 2.30ರವರೆಗೆ 5ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಗೆಡ್ಡೆ–ಗೆಣಸು ವಿಷಯದ ಚಿತ್ರ ರಚನಾ ಸ್ಪರ್ಧೆ ನಡೆಯಲಿದ್ದು, ನಂತರ ಮಧ್ಯಾಹ್ನ 2.30ರಿಂದ ಸಂಜೆ 5ರವರೆಗೆ ವಿಚಾರಗೋಷ್ಠಿ ಆಯೋಜಿಸಲಾಗಿದೆ. ವಿಚಾರಗೋಷ್ಠಿಯಲ್ಲಿ ಗೆಡ್ಡೆ–ಗೆಣಸು ವಿಷಯವಾಗಿ ಡಾ. ಜಯಾನಂದ ಡೇರೇಕರ್ (ಜೋಯಿಡಾ) ಹಾಗೂ ಕೈ ತೋಟದ ಪಾಠ ಕುರಿತು ಶ್ರೀ ಸಂಜೀವ್ ಜಗನ್ಮೋಹನ್ (ಬೆಂಗಳೂರು) ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ಸಂಜೆ 5ರಿಂದ 6ರವರೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿವಿಧ ಸ್ಪರ್ಧೆಗಳ ವಿಜೇತರ ಘೋಷಣೆ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಕಾರ್ಯಕ್ರಮದ ಅವಧಿಯಲ್ಲಿ ಸಾವಯವ ಹಾಗೂ ಆರೋಗ್ಯಕರ ಆಹಾರ ಮಳಿಗೆಗಳೂ ಲಭ್ಯವಿರಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಾವಣೆಯ ಕೊನೆಯ ದಿನಾಂಕ 2025ರ ಡಿಸೆಂಬರ್ 20 ಆಗಿದ್ದು, ಹೆಚ್ಚಿನ ಮಾಹಿತಿಗಾಗಿ 9480682923 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Post a Comment

0 Comments
Post a Comment (0)
To Top