ಮಂಗಳೂರು: ರೈತಕುಡ್ಲ ಪ್ರತಿಷ್ಠಾನ ನೇತೃತ್ವದಲ್ಲಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು, ಶ್ರೀ ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್ (ರಿ.) ಉಳಾಯಿ ಬೆಟ್ಟು ಸಹಯೋಗದೊಂದಿಗೆ ಕರಾವಳಿ ಉತ್ಸವದ ಭಾಗವಾಗಿ ಪಿಲಿಕುಳ ಪರ್ಬ-2025 ಪಿಲಿಕುಳ ಅರ್ಬನ್ ಹಾಥ್ ನಲ್ಲಿ 2025 ಡಿಸೆಂಬರ್ 24ರಿಂದ ಡಿಸೆಂಬರ್ 28 ವರೆಗೆ ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಬೆಳಗ್ಗೆ 10ರಿಂದ ರಾತ್ರಿ 10 ವರೆಗೆ ಕಾರ್ಯಕ್ರಮ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ಕಬ್ಬು ಅರೆಯುವ ಆಲೆಮನೆ, ಮತ್ಸ್ಯ ಪ್ರದರ್ಶನ, ವಿವಿಧ ರಾಜ್ಯಗಳ ಕುಶಲಕರ್ಮಿಗಳ ಮಳಿಗೆ, ಚಿತ್ರಕಲಾ ಪ್ರದರ್ಶನ, ತರಕಾರಿ ಬೀಜ, ಔಷಧೀಯ ಗಿಡ, ಹಣ್ಣಿನ ಸಸ್ಯಗಳ ಮಾರಾಟ, ಆಹಾರ ಮೇಳ, ಸ್ವಸಹಾಯ ಗುಂಪುಗಳ ಮಳಿಗೆಗಳು, ರೈತ ಮಳಿಗೆಗಳು, ಖಾದಿ ವಸ್ತ್ರೋದ್ಯಮ ಸಂಸ್ಥೆಗಳ ಮಳಿಗೆಗಳು, ಚನ್ನಪಟ್ಟಣ ಗೊಂಬೆ ಮಳಿಗೆ ಇರಲಿವೆ.
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಉಪ ನಿರ್ದೇಶಕ (ಹೆಚ್ಚುವರಿ ಹೊಣೆ) ಡಾ. ಅರುಣ್ ಕುಮಾರ್ ಶೆಟ್ಟಿ ಎನ್ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪಿಲಿಕುಳ ಪರ್ಬದ ಕುರಿತು ವಿವರವಾದ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪಿಲಿಕುಳ ಜೈವಿಕ ಉದ್ಯಾನವನದ ಆಡಳಿತಾಧಿಕಾರಿ ಡಾ. ಅಶೋಕ್, ವಿಜ್ಞಾನ ಕೇಂದ್ರದ ನಿರ್ದೇಶಕ ಕೆ.ವಿ ರಾವ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪಿಲಿಕುಳ ಪರ್ಬದ ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಪ್ರತಿದಿನ ನಗರದ ಸ್ಟೇಟ್‌ಬ್ಯಾಂಕ್‌ನಿಂದ ಪಿಲಿಕುಳಕ್ಕೆ 2 ವಿಶೇಷ ಬಸ್‌ಗಳ ಸಂಚಾರವನ್ನು ಪ್ರಾರಂಭಿಸಿದೆ. ಈ ಬಸ್ಸುಗಳು ಡಿ.20ರಿಂದ ಜನವರಿ 4ರ ವರೆಗೆ ತಲಾ 12 ಟ್ರಿಪ್‌ಗಳಂತೆ ಒಟ್ಟು 24 ಟ್ರಿಪ್‌ಗಳನ್ನು ಈ ಬಸ್‌ಗಳು ನಡೆಸಲಿವೆ.
ಸಾಮಾನ್ಯ ದಿನಗಳಲ್ಲಿ ಪಿಲಿಕುಳ ಜೈವಿಕ ಉದ್ಯಾನದ ಪ್ರವೇಶಕ್ಕೆ ವಿಧಿಸಲಾಗುತ್ತಿರುವ 250 ರೂ.ಗಳ ಕಾಂಬೋ ಆಫರ್ ಟಿಕೆಟ್ ಶುಲ್ಕವನ್ನು ಪಿಲಿಕುಳ ಪರ್ಬದ ದಿನಗಳಲ್ಲಿ ಶೇ 50ರಷ್ಟು ಇಳಿಸಿ ಕೇವಲ 150 ರೂ.ಗಳಿಗೆ ಎಲ್ಲ ಕಡೆಗಳಿಗೂ ಪ್ರವೇಶಿಸಬಹುದಾದ ವಿಶೇಷ ರಿಯಾಯಿತಿ ಇರುತ್ತದೆ.
ಇದೇ ಸಂದರ್ಭದಲ್ಲಿ, ಡಿ.24ರಿಂದ 28ರ ವರೆಗೆ ಪಿಲಿಕುಳದ ಅರ್ಬನ್ ಹಾಥ್ ಮತ್ತು ರೂರಲ್ ಹಾಥ್‌ನಲ್ಲಿ ಕಬ್ಬು ಅರೆಯುವ ಆಲೆಮನೆ, ಮತ್ಸ್ಯ ಪ್ರದರ್ಶನ, ಕುಶಲ ಕರ್ಮಿಗಳ ಮಳಿಗೆ, ಆಹಾರ ಮೇಳ, ಸಂಗೀತ, ನೃತ್ಯ ವೈವಿಧ್ಯ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಗಾಂಧಿ ಶಿಲ್ಪ ಬಜಾರ್ ನಲ್ಲಿ 24ರಿಂದ 30ರ ವರೆಗೆ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿಯಮಿತ ಪುತ್ತೂರು ಇವರ ಸಹಯೋಗದೊಂದಿಗೆ ಭಾರತದ ಅತ್ಯುತ್ತಮ ಕರಕುಶಲ ವಸ್ತುಗಳನ್ನು ನೇರವಾಗಿ ಕುಶಲಕರ್ಮಿಗಳಿಂದ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ.
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಜನಿಸಿದ ಎರಡು ಹುಲಿಮರಿಗಳನ್ನು 21ರಂದು ಭಾನುವಾರ ಸಾರ್ವಜನಿಕರ ವೀಕ್ಷಣೆಗೆ ಬಿಡಲಾಗುವುದು. 25ರಂದು ಗುರುವಾರ ವನ್ಯಜೀವಿಗಳ ಕುರಿತಾದ ಟ್ರೆಶರ್ ಹಂಟ್ (ಚಹರೆಗಳ ಮೂಲಕ ಪ್ರಾಣಿಗಳನ್ನು ಶೋಧಿಸುವುದು) ನಡೆಸಲಾಗುವುದು. 27ರಂದು ಪಕ್ಷಿ ವೀಕ್ಷಣಾ ಪ್ರವಾಸ, 28ರಂದು ಉರಗಗಳ ಕುರಿತು ಜಾಗೃತಿ ಕಾರ್ಯಕ್ರಮ, 29ರಂದು ವಿಜ್ಞಾನದಲ್ಇ ಮನರಂಜನೆ ಪ್ರದರ್ಶನ, 30ರಂದು ವಿಜ್ಞಾನ ರಸಪ್ರಶ್ನೆ ಆಯೋಜಿಸಲಾಗಿದೆ.
ಜನವರಿ 1ರಂದು ವಾಟರ್ ರಾಕೆಟ್ ಪ್ರಾತ್ಯಕ್ಷಿಕೆ ಹಾಗೂ 2ರಂದು ಡ್ರೋನ್ ಶೋ ಪ್ರಾತ್ಯಕ್ಷಿಕೆ ನಡೆಯಲಿದೆ.
ಮನರಂಜನೆಗಾಗಿ ಅಮ್ಯೂಸ್ಮೆಂಟ್ ಪಾರ್ಕ್, ಪ್ರತಿದಿನ ಸಂಗೀತ, ನೃತ್ಯ ವೈವಿಧ್ಯ ಆಯೋಜಿಸಲಾಗಿದೆ. ಡಿಸೆಂಬರ್ 27 ಶನಿವಾರ ಬೆಳಗ್ಗೆ 10.30ಕ್ಕೆ ಸಾವಯವ ಕೃಷಿಕ ಗ್ರಾಹಕ ಬಳಗ (ರಿ.) ಆಯೋಜಿಸುವ ಪೌಷ್ಟಿಕ ಆಹಾರ ತಯಾರಿಕೆ ಕಾರ್ಯಾಗಾರ, ಮಧ್ಯಾಹ್ನ 3ರಿಂದ LKgಯಿಂದ 10 ನೇ ತರಗತಿ ಮಕ್ಕಳ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ.
ಸಾಯಂಕಾಲ 6ರಿಂದ ಸಂಗೀತ ಸಂಜೆ ಮತ್ತು ಸಾಂಸ್ಕೃತಿಕ ವೈವಿಧ್ಯ, ಡಿಸೆಂಬರ್ 28, ಬೆಳಗ್ಗೆ 10ರಿಂದ ಮಹಿಳೆಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆ, ಮಕ್ಕಳಿಗೆ ಮನೋರಂಜನಾ ಸ್ಪರ್ಧೆಗಳು ನಡೆಯಲಿವೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಸಾಯಂಕಾಲ 6ರಿಂದ ಗೊಂಬೆಯಾಟ ಪ್ರದರ್ಶನ ಆಯೋಜಿಸಲಾಗಿದೆ. ಪ್ರತಿದಿನ ಸಾಯಂಕಾಲ 6ರಿಂದ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ವ್ಯವಸ್ಥಿತ ಪಾರ್ಕಿಂಗ್: ಕರಾವಳಿ ಉತ್ಸವ ಸಂದರ್ಭದಲ್ಲಿ ಮಂಗಳೂರು ನಗರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತದೆ. ಆದರೆ ಪಿಲಿಕುಳದಲ್ಲಿ ಅಂತಹ ಸಮಸ್ಯೆ ಇಲ್ಲ. ವ್ಯವಸ್ಥಿತ ಪಾರ್ಕಿಂಗ್ ಇದೆ. ವಾಹನಗಳನ್ನು ಪಿಲಿಕುಳ ಹಬ್ಬ ನಡೆಯುವ ಅರ್ಬನ್ ಹಾಥ್ ಪ್ರದೇಶಕ್ಕೆ ತರಬಹುದು. ದಿನವಿಡೀ ಮಕ್ಕಳಿಗೆ, ಹಿರಿಯರಿಗೆ ಮಾಹಿತಿ ಮನರಂಜನೆಗೆ ಪೂರಕವಾಗುವಂತೆ ಪಿಲಿಕುಳ ಹಬ್ಬದಲ್ಲಿ ವ್ಯವಸ್ಥೆ ಮಾಡಲಾಗಿದೆ.


