ಬೆಂಗಳೂರು: 2ನೇ ವಿಶ್ವ ಆಯುರ್ವೇದ ಸಮ್ಮೇಳನದ ಸಮಾರೋಪ
ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆದ 2ನೇ ವಿಶ್ವ ಆಯುರ್ವೇದ ಸಮ್ಮೇಳನದ ಕೊನೆಯ ದಿನದ ಸಮಾರೋಪ ಕಲಾಪಗಳು ವೈಚಾರಿಕ ಚರ್ಚೆ, ದಾಖಲಾತಿ ಸಾಧನೆಗಳು ಹಾಗೂ ಗಣ್ಯರ ಸಂದೇಶಗಳೊಂದಿಗೆ ಯಶಸ್ವಿಯಾಗಿ ನೆರವೇರಿದವು.
ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, “ಸರ್ಕಾರ ಎಲ್ಲವನ್ನೂ ಮಾಡುತ್ತದೆ ಎಂದು ಕೂರುವುದು ಸರಿಯಲ್ಲ. ಸಮಾಜಕ್ಕೆ ಅಗತ್ಯವಿರುವ ಕಾರ್ಯಗಳನ್ನು ಜಾಗೃತ ನಾಗರಿಕರೇ ಕೈಗೆತ್ತಿಕೊಳ್ಳಬೇಕು. ಇದೇ ದೃಷ್ಟಿಯಿಂದ ಡಾ. ಗಿರಿಧರ ಕಜೆ ಈ ಐತಿಹಾಸಿಕ ಆಯುರ್ವೇದ ಸಮ್ಮೇಳನವನ್ನು ಆಯೋಜಿಸಿದ್ದಾರೆ” ಎಂದು ಪ್ರಶಂಸಿಸಿದರು.
ರಾಮಾಯಣದ ಯುದ್ಧ ಪ್ರಸಂಗವನ್ನು ಉಲ್ಲೇಖಿಸಿದ ಶ್ರೀಗಳು, ಯುದ್ಧಗಾಯಗಳ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಹಾಗೂ ಮುರಿದ ಅಂಗಗಳ ಜೋಡಣೆಗಳ ವಿವರಣೆಗಳು ಆಯುರ್ವೇದದ ವೈಜ್ಞಾನಿಕ ಶಕ್ತಿಯನ್ನು ತೋರಿಸುತ್ತವೆ ಎಂದರು. ಸಂಜೀವಿನಿ ಪರ್ವತದ ಉದಾಹರಣೆ ನೀಡಿದ ಅವರು, “ಈ ಆಯುರ್ವೇದ ಸಮ್ಮೇಳನದ ಸ್ಪರ್ಶದಿಂದ ಭಾರತ ಮತ್ತೆ ಆರೋಗ್ಯಪೂರ್ಣವಾಗಿ ಎದ್ದು ನಿಲ್ಲಲಿ” ಎಂದು ಆಶಿಸಿದರು.
ಆಯುರ್ವೇದವನ್ನು ಪ್ರಾಥಮಿಕ ಶಿಕ್ಷಣದಲ್ಲೇ ಪರಿಚಯಿಸುವ ಅಗತ್ಯವಿದೆ ಎಂದು ಒತ್ತಿಹೇಳಿದ ಶ್ರೀಗಳು, ಬಾಲ್ಯದಲ್ಲೇ ಆಯುರ್ವೇದೀಯ ಜೀವನಶೈಲಿ ತಿಳಿದರೆ ದೀರ್ಘಕಾಲಿಕ ಆರೋಗ್ಯ ಸಾಧ್ಯ ಎಂದರು. ವಾಣಿಜ್ಯ ಉದ್ದೇಶದಿಂದ ಗಿಡಮೂಲಿಕೆಗಳ ಬಳಕೆ ಪೂರ್ಣ ಚಿಕಿತ್ಸಾ ಫಲ ನೀಡುವುದಿಲ್ಲ ಎಂಬ ಎಚ್ಚರಿಕೆಯನ್ನು ಸಹ ನೀಡಿದರು.
ಮೂಡುಬಿದಿರೆಯ ಡಾ. ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ ಮಾತನಾಡಿ, “ದೇಹದ ಅಂಗಾಂಗಗಳು ಹಾಗೂ ಪಂಚೇಂದ್ರಿಯಗಳು ಸರಿಯಾಗಿ ಕಾರ್ಯನಿರ್ವಹಿಸುವವರೇ ಇಂದಿನ ಕಾಲದ ನಿಜವಾದ ಶ್ರೀಮಂತರು” ಎಂದರು. ಯೋಗ–ಆಯುರ್ವೇದದಂತಹ ಜ್ಞಾನ ಕೊಡುಗೆಗಳನ್ನು ಭಾರತವೇ ಜಗತ್ತಿಗೆ ನೀಡಿದೆ ಎಂದು ಅವರು ಹೇಳಿದರು.
ಸಮ್ಮೇಳನದ ರುವಾರಿಗಳಾದ ಡಾ. ಗಿರಿಧರ ಕಜೆ, ಆಯುರ್ವೇದವು ಸಾವಿರಾರು ವರ್ಷಗಳಿಂದ ಕಾಲಪರೀಕ್ಷಿತ ಪದ್ಧತಿ ಎಂದು ಹೇಳಿ, ಸ್ಥಳೀಯ ಆಹಾರ ಪದ್ಧತಿಗಳಿಂದ ದೂರ ಸರಿದಿರುವುದೇ ಇಂದಿನ ಅನಾರೋಗ್ಯಕ್ಕೆ ಪ್ರಮುಖ ಕಾರಣ ಎಂದರು. “ಎಲ್ಲರೂ ಒಂದೇ ರೀತಿಯ ಸಿರಿ ಧಾನ್ಯ ಬಳಸುವುದು ಆರೋಗ್ಯಕರವಲ್ಲ. ಪ್ರದೇಶಾನುಸಾರ ಧಾನ್ಯ ಸೇವನೆಯೇ ಆಯುರ್ವೇದದ ಮೂಲ ತತ್ವ” ಎಂದು ವಿವರಿಸಿದರು. ಮನೆಮನೆಗೆ ಔಷಧ ತಲುಪಿದರೂ ಖಾಯಿಲೆಗಳು ಹೆಚ್ಚುತ್ತಿರುವುದನ್ನು WHO ಉದಾಹರಣೆಯೊಂದಿಗೆ ಅವರು ಪ್ರಸ್ತಾಪಿಸಿದರು.
ನ್ಯೂಸ್ ಫಸ್ಟ್‌ನ CEO ರವಿ ಕುಮಾರ್ ಮಾತನಾಡಿ, “ಟಿ.ಎನ್. ಶೇಷನ್ ನಂತರ ಚುನಾವಣಾ ಆಯೋಗಕ್ಕೆ ಮಹತ್ವ ಬಂದಂತೆ, ಡಾ. ಗಿರಿಧರ ಕಜೆ ಅವರ ಕಾರ್ಯದಿಂದ ಆಯುರ್ವೇದಕ್ಕೆ ಹೊಸ ಗೌರವ ದೊರೆತಿದೆ” ಎಂದರು.
ವಿಜಯವಾಣಿಯ ಸಂಪಾದಕ ಕೆ.ಎನ್. ಚನ್ನೇಗೌಡ, ಕೊರೋನಾ ಸಂದರ್ಭದಲ್ಲಿ ಆಯುರ್ವೇದದ ಶಕ್ತಿ ಜಗತ್ತಿನ ಮುಂದೆ ಸಾಬೀತಾಗಿದೆ ಎಂದು ಹೇಳಿ, ವಿಜಯವಾಣಿಯ ಮೂಲಕ ಆಯುರ್ವೇದವನ್ನು ಜನತೆಗೆ ತಲುಪಿಸುತ್ತಿರುವ ಡಾ. ಕಜೆ ಅವರ ಸೇವೆಯನ್ನು ಶ್ಲಾಘಿಸಿದರು.
ಸಮಾರೋಪ ಸಮಾರಂಭದಲ್ಲಿ ನವದೆಹಲಿಯ CCRAS ಉಪ ನಿರ್ದೇಶಕ ಡಾ. ಶ್ರೀಕಾಂತ್ ಎನ್, CCIM ನ ಮಾಜಿ ಉಪ ನಿರ್ದೇಶಕ ಡಾ. ಜಯಪ್ರಕಾಶ್ ನಾರಾಯಣ್ ಹಾಗೂ ಜೋಧಪುರದ DSRRAU ಉಪಕುಲಪತಿ ಪ್ರೊ. ಗೋವಿಂದ್ ಶುಕ್ಲಾ ಉಪಸ್ಥಿತರಿದ್ದರು.
ಸಮ್ಮೇಳನದ ಪ್ರಮುಖ ದಾಖಲೆಗಳು:
ಅಷ್ಟಾಂಗ ಹೃದಯದ ದಿನಚರ್ಯಾ ಅಧ್ಯಾಯ ಪಠಣಕ್ಕೆ ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ಸ್ ಹಾಗೂ ಏಷಿಯನ್ ಬುಕ್ಸ್ ಆಫ್ ರೆಕಾರ್ಡ್ಸ್ ಮಾನ್ಯತೆ
7 ದಕ್ಷಿಣ ರಾಜ್ಯಗಳಲ್ಲಿ 4300 ಕಿ.ಮೀ ಆಯುರ್ವೇದ ರಥ ಸಂಚಾರ, 137 ಆಯುರ್ವೇದ ಕಾಲೇಜುಗಳ ಸಂಪರ್ಕ
1005 ವೈದ್ಯಕೀಯ ಪ್ರಬಂಧಗಳ ಮಂಡನೆ
6000ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಪ್ರತಿನಿಧಿಗಳ ಭಾಗವಹಿಸುವಿಕೆ
400 ಆಯುರ್ವೇದ ತಜ್ಞರಿಗೆ ‘ವಿಶ್ವ ಆಯುರ್ವೇದ ರತ್ನ’ ಪ್ರಶಸ್ತಿ ಪ್ರದಾನ
ಈ ಸಂದರ್ಭದಲ್ಲಿ ಸಮ್ಮೇಳನದ ರುವಾರಿ ಡಾ. ಗಿರಿಧರ ಕಜೆ ಅವರಿಗೆ “ಆಯುರ್ವೇದ ಬೃಹಸ್ಪತಿ” ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

