ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ “ಗೀತೆ ಜತೆ ಸಾಹಿತ್ಯ ಸಾಂಗತ್ಯ” ಎಂಬ ಒಂದು ವರ್ಷದ ಸಾಹಿತ್ಯ ಪರ್ವ ಉಪನ್ಯಾಸ ಮಾಲಿಕೆಯ ಹದಿನೇಳನೇ ಅಧ್ಯಾಯ– ಶ್ರದ್ಧಾತ್ರಯ ವಿಭಾಗಯೋಗ ಉಪನ್ಯಾಸವು ಇಂದು (ಡಿ.28) ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ ನಡೆಯಿತು.
ಈ ಉಪನ್ಯಾಸಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ವಿಶ್ವೇಶ್ವರ ಭಟ್ ಉಂಡೆಮನೆ, ನಿವೃತ್ತ ಪ್ರಾಂಶುಪಾಲರು ಹಾಗೂ ಖ್ಯಾತ ಬರಹಗಾರರು ಭಾಗವಹಿಸಿ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತರಾದ ಹರೀಶ್ ಕೆ. ಅದೂರು ವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳು ಶಾರದ ಮಾತೆ ಹಾಗೂ ಭಾರತ ಮಾತೆಯ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಶ್ರೀಮತಿ ವಿನುತಾ ರಜತ್ ಗೌಡ ಅವರ ಶಾರದಾ ಸ್ತುತಿಯೊಂದಿಗೆ ಕಾರ್ಯಕ್ರಮ ಶುಭಾರಂಭವಾಯಿತು. ಸಮಿತಿಯ ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿ ಅವರು ರಚಿಸಿದ ಆಶಯಗೀತೆಗೆ ಶ್ರೀಮತಿ ಅಶ್ವಿಜ ಶ್ರೀಧರ್ ರಾಗ ಸಂಯೋಜನೆ ಮಾಡಿ ಸುಶ್ರಾವ್ಯವಾಗಿ ಹಾಡಿದರು. ರಾಮಕೃಷ್ಣ ಬದನಾಜೆ ಆಗಮಿಸಿದ ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅತಿಥಿಗಳಿಗೆ ತಾಂಬೂಲ ನೀಡಿ ಗೌರವಿಸಲಾಯಿತು.
ಸಂಪನ್ಮೂಲ ವ್ಯಕ್ತಿ ವಿಶ್ವೇಶ್ವರ ಭಟ್ ಉಂಡೆಮನೆ ಅವರು, ಭಗವದ್ಗೀತೆಯ 17ನೇ ಅಧ್ಯಾಯದಲ್ಲಿ ವಿವರಣೆಗೊಂಡಿರುವ ಸಾತ್ವಿಕ, ರಾಜಸ ಮತ್ತು ತಾಮಸ ಗುಣಗಳ ಅರ್ಥ ಹಾಗೂ ಅವುಗಳ ಜೀವನೋಪಯೋಗಿತ್ವವನ್ನು ಸರಳ ಹಾಗೂ ಸ್ಪಷ್ಟ ಉದಾಹರಣೆಗಳ ಮೂಲಕ ವಿವರಿಸಿದರು.
“ಹಿಂಸೆಗೆ ಹಿಂಸೆಯೇ ಮದ್ದಲ್ಲ; ಅಹಿಂಸೆಯೇ ಶಾಶ್ವತ ಪರಿಹಾರ. ಮಾನವೀಯ ಮೌಲ್ಯಗಳಿಂದ ವಿಮುಖರಾಗದೆ, ಸಾತ್ವಿಕ ಸ್ವಭಾವ ಮತ್ತು ಅಹಿಂಸಾತ್ಮಕ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ” ಎಂಬ ಸಂದೇಶವನ್ನು ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಹರೀಶ್ ಕೆ. ಅದೂರು ಅವರು, ಭಗವದ್ಗೀತೆ ಮಾನವನ ಬದುಕಿಗೆ ದಾರಿದೀಪವಾಗಿದೆ. ಪ್ರತಿಯೊಬ್ಬರ ಜೀವನದಲ್ಲಿ ಭರವಸೆಯ ಆಧಾರವಾಗಿ ನಿಂತು, ದಿನನಿತ್ಯದ ಬದುಕಿನಲ್ಲಿ ಒಂದಲ್ಲೊಂದು ರೀತಿಯಲ್ಲಿ ಸರಿಯಾದ ದಾರಿಯನ್ನು ತೋರಿಸುತ್ತಲೇ ಬರುತ್ತದೆ ಎಂದು ಆಧುನಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉದಾಹರಣೆಗಳೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಅತಿಥಿಗಳನ್ನು ಪುಸ್ತಕ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಸ್ವಸ್ತಿಕ್ ಕುಳಮರ್ವ ಅವರು ಸುಸೂತ್ರವಾಗಿ ನಿರೂಪಿಸಿದರು. ಶ್ರೀಮತಿ ವಸಂತಿ ಕುಳಮರ್ವ ಅವರು ಸರ್ವರಿಗೂ ಧನ್ಯವಾದ ಅರ್ಪಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

