ಯಕ್ಷಾಂಗಣದ ತಾಳಮದ್ದಳೆ ಸಪ್ತಾಹ 2025- ಸಂಘಟನಾ ಪರ್ವ
ಮಂಗಳೂರು: 'ಯಕ್ಷಾಂಗಣ ಮಂಗಳೂರು' ಯಕ್ಷಗಾನ ಚಿಂತನ- ಮಂಥನ ಮತ್ತು ಪ್ರದರ್ಶನ ವೇದಿಕೆ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷಭಾರತಿ ಪುತ್ತೂರು ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸಲ್ಪಡುವ ಹದಿಮೂರನೇ ವರ್ಷದ ನುಡಿಹಬ್ಬ 'ಯಕ್ಷಗಾನ ತಾಳಮದ್ದಳೆ ಸಪ್ತಾಹ 2025' ತ್ರಯೋದಶ ಸರಣಿಯು ಇದೇ 2025 ನವೆಂಬರ್ 23 ರಿಂದ 29ರ ವರೆಗೆ ನಗರದ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಜರಗಲಿದೆ. 'ಸಂಘಟನಾ ಪರ್ವ' ಎಂಬ ಹೆಸರಿನಲ್ಲಿ ಜಿಲ್ಲೆಯ ವಿವಿಧ ಯಕ್ಷಗಾನ ಸಂಘಗಳ ಸಹಕಾರದಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಸರಣಿ ತಾಳಮದ್ದಳೆ:
ನವೆಂಬರ 23 ರಿಂದ ಕ್ರಮವಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ 'ಮಿತ್ತ ಲೋಕೊದ ಪೆತ್ತ' ತುಳು ತಾಳಮದ್ದಳೆ ಮತ್ತು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯಕ್ಷಗಾನ ಸಂಘ ಸೂಡ, ಕಾರ್ಕಳ (ನಚಿಕೇತ), ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಬೆಟ್ಟಂಪಾಡಿ (ಶಾರದಾ ವಿವಾಹ), ಯಕ್ಷಧ್ರುವ ಪಟ್ಲ ಫೌಂಡೇಶನ್ ಹವ್ಯಾಸಿ ಘಟಕ (ಸೌಗಂಧಿಕಾ ಹರಣ), ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಟ್ರಸ್ಟ್ ಉಪ್ಪಿನಂಗಡಿ (ಶಲ್ಯ ಪರ್ವ), ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ (ವರುಣಾಧ್ವರ), ಹವ್ಯಾಸಿ ಬಳಗ ಕದ್ರಿ, ಮಂಗಳೂರು (ಪಾಂಚಜನೋತ್ಪತ್ತಿ), ಕರ್ನಾಟಕ ಯಕ್ಷಭಾರತಿ ಪುತ್ತೂರು (ಸತೀ ಶಕ್ತಿ) ಹೀಗೆ 7 ತಂಡಗಳು ಕನ್ನಡ ಭಾಷೆಯಲ್ಲಿ ವಿನೂತನ ಪ್ರಸಂಗಗಳನ್ನು ಪ್ರಸ್ತುತಪಡಿಸುತ್ತವೆ. ಈ ಎಲ್ಲಾ ತಂಡಗಳೊಂದಿಗೆ ಪ್ರತಿದಿನ ಜಿಲ್ಲೆಯ ಪ್ರಸಿದ್ದ ಅತಿಥಿ ಕಲಾವಿದರು ಅರ್ಥಧಾರಿಗಳಾಗಿ ಭಾಗವಹಿಸಲಿದ್ದಾರೆ.
ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ- ಗೌರವ ಪ್ರಶಸ್ತಿ:
ಯಕ್ಷಾಂಗಣದ ಹದಿಮೂರನೇ ವರ್ಷದ ತಾಳಮದ್ದಳೆ ಸಪ್ತಾಹ ಉದ್ಘಾಟನಾ ಸಮಾರಂಭವು ನವೆಂಬರ್ 23 ರಂದು ಸಾಯಂಕಾಲ ಗಂ. 4.30 ಕ್ಕೆ ಜರಗಲಿದ್ದು ಗೌರವಾಧ್ಯಕ್ಷ ಡಾ| ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸುವರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಸಪ್ತಾಹವನ್ನು ಉದ್ಘಾಟಿಸುವರು. ಇದೇ ಸಂದರ್ಭ ಮಂಗಳೂರಿನ ಪ್ರಸಿದ್ದ ಸ್ವರ್ಣೋದ್ಯಮಿ ಹಾಗೂ ಕಲಾಪೋಷಕ ಎಂ. ರವೀಂದ್ರ ಶೇಟ್ ಅವರಿಗೆ 'ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ' ನೀಡಲಾಗುವುದು. ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್ ಪ್ರಶಸ್ತಿ ಪ್ರದಾನ ಮಾಡುವರು. ಕೆನರಾ ಬ್ಯಾಂಕ್ ವಲಯ ಮುಖ್ಯಸ್ಥ ಮಂಜುನಾಥ ಬಿ.ಸಿಂಗಾಯಿ ಪ್ರಧಾನ ಅಭ್ಯಾಗತರಾಗಿರುವರು. ಎಸ್. ಪ್ರದೀಪ ಕುಮಾರ ಕಲ್ಕೂರ, ವಿ. ಕರುಣಾಕರ, ಪ್ರೊ.ಗಣಪತಿ ಗೌಡ ಎಸ್., ಶ್ರೀಧರ ಶೆಟ್ಟಿ ಪುಳಿಂಚ, ಅರುಣ ಪ್ರಭ ಕೆ.ಎಸ್., ಡಾ। ಧನಂಜಯ ಕುಂಬಳೆ ಮುಖ್ಯ ಅತಿಥಿಗಳಾಗಿರುವರು.
ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ ಎ.ಕೆ. ಜಯರಾಮ ಶೇಖ, ಬೊಂಡಾಲ ಸಚ್ಚಿದಾನಂದ ಶೆಟ್ಟಿ ಮತ್ತು ಕರುಣಾಕರ ಶೆಟ್ಟಿ ಪಣಿಯೂರು ಅವರನ್ನು ಅಭಿನಂದಿಸಲಾಗುವುದು.
ಸಂಸ್ಮರಣ ಗೋಷ್ಠಿ – ತುಳು ತಾಳಮದ್ದಳೆ:
ಸಪ್ತಾಹದ ಆರಂಭದಲ್ಲಿ ದಿನಾಂಕ 17 ಆದಿತ್ಯವಾರ ಅಪರಾಹ್ನ ಗಂ.2.00 ರಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ 'ಅಮ್ಮಣ್ಣಾಯೆರ್ನ ನೆಂಪು ಬೊಕ್ಕ ತುಳು ತಾಳಮದ್ದೊಲಿ, ಭಾಗವತ ದಿ। ದಿನೇಶ ಅಮ್ಮಣ್ಣಾಯರ ಸಂಸ್ಮರಣಾ ಗೋಷ್ಠಿ ಮತ್ತು ತುಳು ತಾಳಮದ್ದಳೆಯನ್ನು ಏರ್ಪಡಿಸಲಾಗಿದೆ. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸುವರು. ಭಾಗವತ ಪ್ರಸಂಗಕರ್ತ ಹರೀಶ್ ಶೆಟ್ಟಿ ಸೂಡಾ ಸಂಸ್ಮರಣಾ ಭಾಷಣ ಮಾಡುವರು. ಮಂಗಳೂರು ತಾಲೂಕು ಮಹಿಳಾ ಮಂಡಲದ ಗೌರವಾಧ್ಯಕ್ಷೆ ವಿಜಯಲಕ್ಷ್ಮಿ ಬಿ. ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.
ಪತ್ರಿಕಾಗೋಷ್ಠಿಯಲ್ಲಿ ಯಕ್ಷಾಂಗಣ ಮಂಗಳೂರು ಇದರ ಕಾರ್ಯಾಧ್ಯಕ್ಷರಾದ ಭಾಸ್ಕರ ರೈ ಕುಕ್ಕುವಳ್ಳಿ, ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ತೋನ್ಸೆ ಪುಷ್ಕಳ ಕುಮಾರ್, ಕೆ. ರವೀಂದ್ರ ರೈ ಕಲ್ಲಿಮಾರು, ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ನಿವೇದಿತಾ ಎನ್. ಶೆಟ್ಟಿ, ಸುಮಾ ಪ್ರಸಾದ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ






