ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

Upayuktha
0


ರ್ನಾಟಕ ಜನಪದ ಎಂಬುದು ಕರ್ನಾಟಕದ ಜನತೆ ನೆಲೆಸಿರುವ ನಾಡು.'ಕರ್ನಾಟಕ' ಎಂಬುದು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನು ಒಳಗೊಂಡ ವ್ಯಾಪಕವಾದ ಅರ್ಥವನ್ನು ಪಡೆದಿರುವ ಪದ. ಮಹಾಭಾರತ ಕಾವ್ಯದಲ್ಲಿಯೇ ಕರ್ನಾಟಕ ಪದದ ಉಲ್ಲೇಖವಿದೆ ಎಂಬ ಅಭಿಪ್ರಾಯವಿದೆ. ಪ್ರಾಚೀನ ಸಂಸ್ಕೃತ ಶಾಸನಗಳಲ್ಲೂ 'ಕರ್ನಾಟಕ' ರೂಪದ ಮತ್ತು ಕರ್ನಾಟಕ ಸೈನಿಕರ ಸಾಹಸದ ವಿಚಾರಗಳು ಪ್ರಸ್ತಾಪವಾಗಿದೆ.


9ನೇ ಶತಮಾನದ ಕನ್ನಡದ ಕಾವ್ಯಲಕ್ಷಣ ಕೃತಿ ಕವಿ ರಾಜಮಾರ್ಗದಲ್ಲಿ ಶ್ರೀ ವಿಜಯ ಕವಿಯು "ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾವಲಯ ವಿಲೀನ ವಿಶದ ವಿಷಯ ವಿಶೇಷಂ" ಎಂದು ಕನ್ನಡ ನಾಡಿನ ಅಂದಿನ ವಿಸ್ತಾರವನ್ನು ಹೇಳುತ್ತಾನೆ.


ಕದಂಬ, ಗಂಗ, ಆಳುಪ, ಚಾಲುಕ್ಯ, ರಾಷ್ಟ್ರಕೂಟ ಹೊಯ್ಸಳ, ವಿಜಯ ನಗರ, ಮೈಸೂರಿನ ಒಡೆಯರು.. ಹೀಗೆ ಅನೇಕ ರಾಜ ವಂಶಗಳು ಆಳಿದ ವೈಭವದ ನಾಡು ಇದು. ಪಂಪ, ರನ್ನ, ನಾಗವರ್ಮ, ಜನ್ನ, ಪೊನ್ನ, ನಾಗಚಂದ್ರ, ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮಪ್ರಭು, ಹರಿಹರ, ರಾಘವಾಂಕ, ಕುಮಾರ ವ್ಯಾಸ, ಕುಮಾರ ವಾಲ್ಮೀಕಿ, ಲಕ್ಷ್ಮೀಶ, ಚಾಮರಸ, ಪುರಂದರ ದಾಸ, ಕನಕ ದಾಸ, ರತ್ನಾಕರ ವರ್ಣಿ, ಸಂಚಿಯ ಹೊನ್ನಮ್ಮ, ನಂಜುಂಡ ಕವಿ, ಸರ್ವಜ್ಞ ಹೀಗೆ ಶ್ರೇಷ್ಠ ಕವಿಗಳು ಉದಯಿಸಿದ ನಾಡು ಇದು.


ಕನ್ನಡ ನಾಡಿನ ಪ್ರಾಂತ್ಯಗಳು ಭಿನ್ನ ಭಿನ್ನ ಅರಸರ ಆಡಳಿತಗಳಿಗೆ ಸೇರಿಕೊಂಡಿದ್ದ ಕಾರಣ ನಾಡಿನ ಏಕೀಕರಣದ ಧ್ವನಿ ಮೊಳಗಿತು. ಬೆಳಗಾವಿ, ವಿಜಯಪುರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಬ್ರಿಟಿಷ್ ರ ಮುಂಬಾಯಿ ಆಡಳಿತಕ್ಕೆ ಸೇರಿತ್ತು. ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು ಬ್ರಿಟಿಷರ ಮದ್ರಾಸ್‌ನ ಆಡಳಿತಕ್ಕೆ ಸೇರಿತ್ತು. ಬೀದರ್, ಗುಲ್ಬರ್ಗ, ರಾಯಚೂರು ಜಿಲ್ಲೆಗಳು ಹೈದರಾಬಾದ್ ನಿಜಾಮನ ಆಳ್ವಿಕೆಗೆ ಸೇರಿದ್ದವು. ಮೈಸೂರು ಸಂಸ್ಥಾನ ಮೈಸೂರು ಒಡೆಯರ ಆಳ್ವಿಕೆಗೆ ಸೇರಿತ್ತು. ಕೊಡುಗು ಜಿಲ್ಲೆ, ಬ್ರಿಟಿಷರ ಅಧೀನ ರಾಜ್ಯವಾಗಿತ್ತು.


ಕನ್ನಡ ಸಂಸ್ಕೃತಿ ಮತ್ತು ಭಾಷೆ ಯನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಭಾಷಿಕರನ್ನು ಒಟ್ಟುಗೂಡಿಸುವ ಪ್ರಯತ್ನಗಳು ನಡೆದವು. ಧಾರವಾಡದ ವಿದ್ಯಾವರ್ಧಕ ಸಂಘ, ಬೆಂಗಳೂರಿನಲ್ಲಿ ಸ್ಥಾಪನೆಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಏಕೀಕರಣದ ಅಗತ್ಯವನ್ನು ಪ್ರಚಾರ ಪಡಿಸಿದವು.


1916 ರಿಂದ ತೊಡಗಿ 1956 ರ ತನಕ ವಿವಿಧ ಸಮಿತಿಗಳು ರಚನೆಗೊಂಡು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದವು. ಸ್ವತಂತ್ರ ಹೋರಾಟದೊಂದಿಗೆ ಏಕೀಕರಣದ ಚಳುವಳಿಗಳು ತೀವ್ರಗೊಂಡವು.


ಆಂಧ್ರ ಪ್ರದೇಶ ರಾಜ್ಯದ ಕಾರಣಕ್ಕಾಗಿ ಆಮರಣಾಂತ ಉಪವಾಸ ಕೈಗೊಂಡ ಪೊಟ್ಟಿ ಶ್ರೀರಾಮುಲು 1952 ರಂದು ನಿಧನರಾದರು. ಆಂಧ್ರ ಪ್ರಾಂತ ರಚನೆಗೆ ಕೇಂದ್ರ ಸರ್ಕಾರ ಕಾರ್ಯ ಪ್ರವೃತ್ತವವಾಯಿತು. ಕನ್ನಡ ನಾಡಿನಲ್ಲಿ ಏಕೀಕರಣದ ಚಳುವಳಿ ತೀವ್ರವಾಗುತ್ತಿರುವುದನ್ನು ಗಮನಿಸಿದ ಕೇಂದ್ರ ಸರಕಾರ ರಾಜ್ಯ ಪುನರ್ ವಿಂಗಡಣಾ ಆಯೋಗವನ್ನು ನೇಮಿಸಿತು.


ಸುದೀರ್ಘ ಚರ್ಚೆಗಳು ನಡೆದು ವಿಧೇಯಕದ ಮಂಡನೆಯಾಗಿ ಲೋಕಸಭೆ ಮತ್ತು ರಾಜ್ಯ ಸಭೆಗಳು ಒಪ್ಪಿಗೆ ನೀಡಿದವು. 31.8.1956ರಂದು ರಾಷ್ಟ್ರ ಪತಿಗಳ ಅಂಗೀಕಾರ ದೊರೆಯಿತು. ಕನ್ನಡಿಗರ ರಾಜ್ಯದ ಹೆಸರು ಮೈಸೂರು ಎಂದಾಯಿತು.


1956 ನವೆಂಬರ್ 1ರಂದು ವಿಶಾಲ ಮೈಸೂರು ರಾಜ್ಯವನ್ನು ಅಂದಿನ ರಾಷ್ಟ್ರಪತಿಗಳಾದ ಬಾಬು ರಾಜೇಂದ್ರ ಪ್ರಸಾದ್ ಉದ್ಘಾಟಿಸಿದರು.

ನೂತನ ರಾಜ್ಯದ ರಾಜ್ಯಪಾಲರಾಗಿ ಜಯಚಾಮರಾಜ ಒಡೆಯರ್ ಮತ್ತು ಮುಖ್ಯ ಮಂತ್ರಿಯಾಗಿ ಎಸ್. ನಿಜಲಿಂಗಪ್ಪ ಅಧಿಕಾರ ಸ್ವೀಕರಿಸಿದರು.

ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದಾಗ 1973ನವೆಂಬರ್ 1ರಂದು ಕರ್ನಾಟಕ ಎಂದು ರಾಜ್ಯಕ್ಕೆ ಪುನರ್ ನಾಮಕರಣ ಮಾಡಲಾಯಿತು.

ಬೆಂಗಳೂರು ಮತ್ತು ಹಂಪೆಗಳಲ್ಲಿ ವೈಭವ ಸಂಭ್ರಮದ ಸಮಾರಂಭಗಳು ನಡೆದವು.


ಕನ್ನಡ ಏಕೀಕರಣದ ಕಾರ್ಯದಲ್ಲಿ ತೊಡಗಿಸಿಕೊಂಡ ನಾಯಕರನ್ನು ನಾವಿಂದು ಸ್ಮರಿಸಿಕೊಳ್ಳಬೇಕಾಗಿದೆ. ಅವರು ಕಂಡ ಕನಸುಗಳನ್ನು ನನಸು ಮಾಡುವ ಹೊಣೆಗಾರಿಕೆ ನಮ್ಮದಾಗಿದೆ. 


1903 ರ ಕಾಲದಲ್ಲಿ ಶಾಂತ ಕವಿಗಳು ನಾಡಿನ ಕುರಿತು 

ರಕ್ಷಿಸು ಕರ್ನಾಟಕ ದೇವಿ, ಸಂ

ರಕ್ಷಿಸು ಕರ್ನಾಟಕ ದೇವೀ 


ಎಂದು ಕರ್ನಾಟಕದ ವೈಭವವನ್ನು ಚಿತ್ರಿಸಿದರು. ಕುವೆಂಪು ಅವರು ರಚಿಸಿದ

ಜೈ!ಭಾರತ ಜನನಿಯ ತನುಜಾತೆ 

ಜಯ ಹೇ ಕರ್ನಾಟಕ ಮಾತೆ! 

ನಾಡ ಗೀತೆ ಯಾಗಿ ಪ್ರೇರಣೆ ನೀಡಿತು.


ಹುಯಿಲಗೋಳ ನಾರಾಯಣ ರಾವ್ ರಚಿಸಿದ 

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು 

ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು 

ಎಂಬ ಹಾಡು ಕರ್ನಾಟಕದ ಇತಿಹಾಸ ಪರಂಪರೆಯನ್ನು ಚಿತ್ರಿಸುತ್ತದೆ.


ಕನ್ನಡ ನಾಡು ಇಂದು ಸಾಹಿತ್ಯ, ಕಲೆ, ಸಂಸ್ಕೃತಿ. ಕೈಗಾರಿಕೆ, ಕ್ರೀಡೆ, ಕೃಷಿ, ವಿಜ್ಞಾನ, ವಾಣಿಜ್ಯ, ವ್ಯವಹಾರ, ಸಾಮಾಜಿಕ, ಸಮಾನತೆ, ಶಿಕ್ಷಣ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯನ್ನು ಹೊಂದಿ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ.


ಕನ್ನಡವನ್ನು ಕಟ್ಟುವ, ಬೆಳೆಸುವ ಕಾಯಕ ನಮ್ಮದಾಗಬೇಕಿದೆ. ಕನ್ನಡ ಎಂಬುದು ನಮ್ಮ ಸ್ವಾಭಿಮಾನ, ನಮ್ಮ ಸಂಸ್ಕೃತಿ, ನಮ್ಮ ಜ್ಞಾನ ಪರಂಪರೆ, ನಮ್ಮ ಇತಿಹಾಸ, ನಮ್ಮ ವರ್ತಮಾನ. ನಮ್ಮ ಭವಿಷ್ಯ.


ನಮ್ಮ ನೆಲ, ಜಲ, ಭಾಷಾ ಹೋರಾಟ ಯಶಸ್ಸನ್ನು ಕಾಣಬೇಕಾದರೆ ನಮ್ಮ ನಾಡಿನ ಜನ ಮನದಲ್ಲಿ ನಾಡ ಪ್ರೇಮ, ಭಾಷಾ ಪ್ರೇಮ, ಸ್ವಾಭಿಮಾನ ಮೂಡಿ ಬರಬೇಕಾಗಿದೆ.


ಈ ನಾಡು ನಮ್ಮ ಹಿರಿಯರು ನಮ್ಮ ಕಿರಿಯರಿಗೆ ಕೊಡುತ್ತಿರುವ ಬಳುವಳಿ ಎಂಬ ಭಾವ ನಮ್ಮಲ್ಲಿ ಮೂಡಿದಾಗ ಹೊನ್ನಿನ ನಿಧಿಯಂತೆ ಪ್ರೀತಿಯಿಂದ ಸಮೃದ್ಧಿವಾಗಿ ರಕ್ಷಿಸುತ್ತಿವೆ.


ನಮ್ಮ ಮಕ್ಕಳೊಂದಿಗೆ ನಮ್ಮ ಭಾಷೆಯಲ್ಲಿ ಮಾತನಾಡೋಣ. ನಮ್ಮ ಸಂಸ್ಕೃತಿಯ ಅರಿವು ಮೂಡಿಸೋಣ. ಕನ್ನಡ ನಾಡು ನುಡಿ ಬಲಿಷ್ಠಗೊಳಿಸಲು ವಿವಿಧ ಹಾದಿಗಳಿವೆ.


ಕನ್ನಡ ದ ಹಾಗೂ ಕನ್ನಡ ನಾಡಿನ ಕುರಿತು ಪ್ರತಿಯೊಬ್ಬನ ಹೃದಯದಲ್ಲೂ ಅಕ್ಕರೆಯ ಭಾವ ಮೂಡಿದಾಗ ಕವಿ ಕನಸಿನ ಚೆಲುವ ಕನ್ನಡ ನಾಡು ಉದಯವಾಗುತ್ತದೆ.


- ಪ್ರೊ. ಕೃಷ್ಣಮೂರ್ತಿ, ಚಿತ್ರಾಪುರ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top