ಇಂದು ಕನ್ನಡ ರಾಜ್ಯೋತ್ಸವದ ಸುದಿನ. ನಮ್ಮ ರಾಜ್ಯ ಕಲೆಗಳ ಬೀಡು, ಶ್ರೀಗಂಧದ ನಾಡು.. ಕಾಫಿಯ ಘಮ, ಯಕ್ಷಗಾನದ ಸುಮ, ಸುಂದರ ಗಿರಿಧಾಮಗಳು, ಪಶ್ಚಿಮ ಘಟ್ಟಗಳು, ವರ್ಲ್ಡ್ ಹೆರಿಟೇಜ್ ಸೆಂಟರ್ಗಳಿಂದ ತುಂಬಿದ ಶ್ರೀಮಂತ ನಾಡು, ಕರುನಾಡು... ಸುಂದರ ಹಂಪೆ, ಬಾದಾಮಿ ಚಾಲುಕ್ಯರ ಶ್ರೀಮಂತ ಕಲೆಗಳು, ಇದಲ್ಲದೆ, ಬೇಲೂರು ಹಳೇಬೀಡುಗಳ ಸುಂದರ ಶಿಲ್ಪಕಲೆಗಳಿಗಿಂದ ತುಂಬಿದ ಶ್ರೀಮಂತಿಕೆ ತವರೂರು..
ಇದಲ್ಲದೆ ಇನ್ನೂ ಒಂದು ಶ್ರೀಮಂತಿಕೆ ನಮ್ಮಲ್ಲಿದೆ, ಅದೇ ನಮ್ಮ ಭಾಷೆ... ಆಹಾ! ಏನು ಸೊಗಸು, ಎಷ್ಟು ದಿರಿಸು ನಮ್ಮ ಭಾಷೆಗೆ.. ಅಸಂಖ್ಯ ರೀತಿಯ ಬರಹಗಳು, ಹರಿಹರನ ರಗಳೆ, ಕವಿರಾಜಮಾರ್ಗದ ಸೊಗಡು, ಹಳೆಗನ್ನಡ, ನಡುಗನ್ನಡ, ಹೊಸಗನ್ನಡ, ಅಲ್ಲದೇ ದಾಸರು ರಚಿಸಿದ ಅನೇಕ ಕೀರ್ತನೆಗಳು, ಸುಳಾದಿಗಳು, ಒಗಟಿನಿಂದ ಕೂಡಿದ ಬರಹಗಳು
ಆರಂಕುಶವಿಟ್ಟೊಡಂ
ನೆನೆವುದೆನ್ನ ಮನಂ
ಬನವಾಸಿ ದೇಶಮಂ,
ಎಂದು ಹಾಡಿ ಹೊಗಳಿದ್ದಾರೆ ರನ್ನ ಕವಿಗಳು.
ಶತಾವಧಾನಿ ಅಂತ ನಮ್ಮಲ್ಲಿ ಇನ್ನೂ ಇದ್ದಾರೆ.. ಅವರ ಪಾಂಡಿತ್ಯ ವರ್ಣಿಸಲು ಸಾಧ್ಯವಿಲ್ಲದಷ್ಟು, ಅನೇಕ ಪ್ರಶ್ನೆಗಳಿಗೆ ಏಕಕಾಲದಲ್ಲೇ ಉತ್ತರಿಸುವ ಜಾಣ್ಮೆ ಅವರದ್ದು, ಅಂಥವರಲ್ಲಿ ಮತ್ತೂರು ಕೃಷ್ಣಮೂರ್ತಿಗಳು, ಡಾ. ಆರ್. ಗಣೇಶ ಎಂಬ ಹೆಸರುಗಳು ನೆನಪಿನಲ್ಲಿಡುವಂಥವು.
ಈಗೀಗ ನಾವು ಮಾತಾಡುವ ಬೆಂಗಳೂರು ಕನ್ನಡ, ಮಂಗಳೂರು ಕನ್ನಡ, ಮಂಡ್ಯ ಕನ್ನಡ, ಬಿಜಾಪುರ ಕನ್ನಡ, ಬೀದರ್ ಕನ್ನಡ, ಇನ್ನೂ ಹೇಳೋದಾದ್ರೆ ಹಳ್ಳಿಯ ಆಡುಗನ್ನಡ, ಅಬ್ಬಬ್ಬಾ, ಎಂಥ ಶ್ರೀಮಂತಿಕೆ ನಮ್ಮ ಭಾಷೆಯಲ್ಲಿದೆ. ಈಗ ನಮ್ಮ ನೆನಪಿಸಿಕೊಡುತ್ತಿರುವ, ಹಾಸ್ಯ ಬಳಗದವರಾದ, ಗಂಗಾವತಿ ಪ್ರಾಣೇಶ್, ಬಸವರಾಜ್. ಹೊಸಮನಿ, ವಿನಾಯಕ ಜೋಶಿ, ಕೃಷ್ಣೇಗೌಡರು, ರಿಚರ್ಡ್, ಶ್ರೀಮತಿ, ಸುಧಾ ಬರಗೂರು.. ಇವರಿಗೆ ಅನಂತ ಧನ್ಯವಾದಗಳು, ಇವರ ಮಾತು ಕೇಳ್ತಿದ್ರೆ, ಜಗತ್ತೇ ಮರೆತು ನಗಬೇಕು.
ನಗಬೇಕಮ್ಮ, ನಗಬೇಕು, ಜಗವನೇ ನಗಿಸುತಲಿರಬೇಕು.. ಎನ್ನುತ್ತಾ ವಿದೇಶಗಳಿಗೂ ಹೋಗಿ ಕನ್ನಡದ ಕಂಪು ಹರಡುವಂತೆ ಮಾಡಿದ್ದಾರೆ.
ಇಂಥ ಭಾಷೆಯನ್ನು ನಾವು ಇಂದು ಬಡವಾಗಿಸುತ್ತಿದ್ದೇವೆಯೇ? ಹೌದಲ್ಲವೇ? ನಾವು ಕನ್ನಡ ಮಾತಾಡೋಣ, ಬರೆಯೋಣ, ಓದೋಣ, ಅಂತರಾಷ್ಟ್ರೀಯ ಭಾಷಣದಲ್ಲೂ ನಮ್ಮ ಭಾಷೆನ ಬಳಸೋಣ, ನಮ್ಮ ಭಾಷೆಯ ಸೊಗಸನ್ನು ಎತ್ತಿ ಹಿಡಿಯೋಣ.
5 ನೇ ವರ್ಗದವರೆಗಾದರೂ ಕನ್ನಡ ಕಳಿಸಿ ಮಕ್ಕಳಿಗೆ, ಆಮೇಲೆ ಇಂಗ್ಲಿಷ್ ಇದ್ದೇ ಇದೆ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
-ರೇಖಾ ಮುತಾಲಿಕ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

