ಒಲ್ಲೆ‌ ನಾನೊಲ್ಲೆ ಈ ದಿನವ ಶುಭದಿನವೆನಲು; ಕಾಸರಗೋಡಿನ ಕನ್ನಡಿಗರಿಗಿದು ಕರಾಳ ದಿನ

Chandrashekhara Kulamarva
0



ಕಾಸರಗೋಡಿನ ಈ ಪುಣ್ಯನೆಲದಲ್ಲಿ ಹುಟ್ಟಿದ ಅದೆಷ್ಟೋ ಕನ್ನಡದ ಹಿರಿಯರನ್ನೆಲ್ಲಾ ನೆನೆಯುತ್ತಾ 

ಎಂದುರೋ ಮಹಾನುಭಾವುಲು ಅಂದರೀಕೀ ವಂದನಂ

ಎಂದು ಅಂತಹಾ ಮಹಾನುಭಾವರಿಗೆಲ್ಲಾ ವಂದಿಸುತ್ತಾ ಕಾಸರಗೋಡಿನ ಕನ್ನಡಿಗರ ಮನದಾಳದ ದುಃಖವನ್ನು ತೋಡಿಕೊಳ್ಳಲು ಈ ವೇದಿಕೆಯನ್ನು ಇಂದು ಉಪಯೋಗಿಸುತ್ತಿದ್ದೇನೆ.


ಬಹುಶ: ನನ್ನ ಈ ಲೇಖನ ಹಲವರಿಗೆ ಅಪಥ್ಯವಾಗ ಬಹುದು. ನನ್ನನ್ನು ಸುಟ್ಟು ಬಿಡುವಷ್ಟು ಸಿಟ್ಟು ತರಿಸಲೂ ಬಹುದು. ಹಾಗೆಂದು ನನ್ನ ಮನಸ್ಸಿನ ನೋವನ್ನು ಭಾವನೆಗಳನ್ನು ಹೊರ ಹಾಕದಿದ್ದರೆ ಅದು ನನ್ನ ಆತ್ಮಕ್ಕೆ ನಾನೇ ಮಾಡಿದ ವಂಚನೆಯಾಗಬಹುದು. ಕಾಸರಗೋಡಿನಲ್ಲಿ ಕನ್ನಡಕ್ಕಾಗಿ ಹೋರಾಡಿ ಮಡಿದ ಮಹಾನ್ ಆತ್ಮಗಳಿಗೆ ಮಾಡಿದ ಅಪಮಾನವಾಗಬಹುದು.


ಇಂದಿನ ಈ ಸ್ಥಿತಿಗೆ ದುಃಖಕ್ಕೆ ಕಾರಣರಾರು? 

ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಾಗ ಸಿಕ್ಕಿದ ಮೊದಲ ಉತ್ತರ:

ಅವೈಜ್ಞಾನಿಕವಾಗಿ ಮುಂದಾಲೋಚನೆ ಇಲ್ಲದ ಮಾಡಿದ ಭಾಷಾವಾರು ಪ್ರಾಂತ್ಯ ರಚನೆ ಎಂಬ ಹುಚ್ಚು ನಿರ್ಧಾರ. ಯಾವುದೇ ಭಾಷೆ ಇರಲಿ ಗೀಟು ಎಳೆದಂತೆ ಒಂದು ಚೌಕಟ್ಟಿನೊಳಗೆ ನಿಲ್ಲಬಹುದೇ? ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಬದಲಾವಣೆಯಾಗುವ ಗಡಿ ಯಾವುದು?

ಒಂದು ಗೀಟಿನ ಆಚೆ ಒಂದು ಭಾಷೆ ಈಚೆ ಒಂದು ಭಾಷೆ ಎಂದು ಇರಲು ಸಾಧ್ಯವೇ? ಈಗಿನ ಭಾಷಾವಾರು ಪ್ರಾಂತ್ಯ ರಚನೆಯ ಪ್ರಕಾರವೇ ಯಾವುದೇ ಪ್ರಾಂತ್ಯದ ಮಧ್ಯ ಭಾಗ ತೆಗೆದು ಕೊಂಡರೆ ಅಲ್ಲಿಂದ ಗಡಿಗಳ ವರೆಗೆ ಆಡು ಭಾಷೆ ವ್ಯತ್ಯಾಸವಾಗುತ್ತಾ ಹೋಗುತ್ತದೆ. ಈಗ ಅವೈಜ್ಞಾನಿಕವಾಗಿ ನಿರ್ಮಿಸಿದ ಗಡಿಗಳಿಗೆ ತಲಪುವಾಗ 50 ಅಥವಾ 60% ಒಂದು ಭಾಷೆ ಮಾತನಾಡುವವರಾದರೆ ಉಳಿದವರು ಇನ್ನೊಂದು ಭಾಷೆ ಮಾತನಾಡುವವರು. ಭಾಷಾವಾರು ಪ್ರಾಂತ್ಯ ರಚನೆ ಎಂಬುದು ಅವರಿಗೆ ನ್ಯಾಯ ಒದಗಿಸಬಲ್ಲುದೇ?


ಪೊಟ್ಟಿ ಶ್ರೀರಾಮುಲು ಎಂಬ ಭಾಷಾ ದುರಭಿಮಾನಿ ಭಾಷಾವಾರು ಪ್ರಾಂತ್ಯ ರಚನೆ ಎಂಬ ಒಂದು ಕಲ್ಪನೆಯನ್ನು ಹರಿ ಬಿಟ್ಟಾಗಲೇ ಅದನ್ನು ತಡೆಗಟ್ಟಿದ್ದರೆ ಮುಂದಿನ ಈ  ಅನಾಹುತಗಳೊಂದೂ ನಡೆಯುತ್ತಿರಲಿಲ್ಲ. ಜವಾಹರ್ ಲಾಲ್ ನೆಹರೂ ಎಂಬ ಹೊರ ದೇಶದಲ್ಲಿ ತನ್ನ ಹೆಸರು ಮೆರೆಸಿ ಉತ್ತಮನೆನಿಸಿಕೊಳ್ಳುವ ಹುಚ್ಚು ಸ್ವಾರ್ಥ ಹೊಂದಿದ್ದ ಸ್ವಾರ್ಥೀ ಪ್ರಧಾನಮಂತ್ರಿ ಯಾವುದೇ ಸಂದರ್ಭ ಬಂದರೂ ಭಾಷಾವಾರು ಪ್ರಾಂತ್ಯ ರಚನೆ ಇಲ್ಲವೇ ಇಲ್ಲ ಎಂಬ ಹಠಮಾರಿ ಧೋರಣೆ ತಳೆದ. ಆದರೆ ಹಿಡಿದ ಛಲ ಸಾಧಿಸಲು ಅವರೇನು ವಲ್ಲಭಾಭಾಯಿ ಪಠೇಲರೇ?. ಸಾಕಷ್ಟು ಜನ ಪೊಟ್ಟಿ ಶ್ರೀರಾಮುಲುವಿನೊಂದಿಗೆ ಸಂಧಾನ ನಡೆಸಲು ತಿಳಿಸಿದರೂ ದುರಹಂಕಾರದಲ್ಲಿ ಎಲ್ಲಾ ಸಲಹೆಗಳನ್ನೂ ತಳ್ಳಿ ಹಾಕಿದವರು ಈ ಪ್ರಧಾನಿ.  ಭಾಷಾವಾರು ಪ್ರಾಂತ್ಯ ರಚನೆ ಎಂಬ ಹುಚ್ಚು ನಿರ್ಧಾರ ತೆಗೆದುಕೊಂಡು ದೇಶವನ್ನೇ ತುಂಡು ತುಂಡಾಗಿಸುವ ನಿರ್ಧಾರ ತೆಗೆದುಕೊಳ್ಳಲು ನಾನು ಹುಚ್ಚನಲ್ಲ ಎಂದಿದ್ದ ನೆಹರು. ಯಾವುದೇ ಮಧ್ಯಸ್ಥಿಕೆ ಇಲ್ಲ ಮಾತುಕತೆ ಇಲ್ಲ ಎಂದು ಎಲ್ಲಾ ಸಲಹೆಗಳನ್ನೂ ತಿರಸ್ಕರಿಸಿ ಅಹಂಕಾರ ಮೆರೆದೇ ಬಿಟ್ಟಿದ್ದರು. ಆದರೆ ಅದೇ ನೆಹರು‌ ತಾನು ಹಿಂದೆ ಹುಚ್ಚು ಎಂದು ಹೇಳಿದ ನಿರ್ಧಾರವನ್ನೇ ಒಪ್ಪಿ ಅದನ್ನು ನಡೆಸಿಕೊಟ್ಟ ಕೆಲಸವೂ ಮಾಡಬೇಕಾಯಿತು ಎಂಬುದು ಭಾರತ ದೇಶದ ಚರಿತ್ರೆಯ ಮೇಲೆ ಹಾಕಿದ ಕಪ್ಪುಚುಕ್ಕಿ. ಯಾವ ರಾಜ್ಯದ ಒಳಿತಿಗೆ ಎಂದು ಭಾಷಾವಾರು ಪ್ರಾಂತ್ಯ ರಚನೆಗೆ ಪೊಟ್ಟಿ ಶ್ರೀ ರಾಮುಲು ದೇಹತ್ಯಾಗ ಮಾಡಿದನೋ ಅದೇ ರಾಜ್ಯ ಇಂದು ಒಂದೇ ಭಾಷೆಯಾಗಿಯೂ ಎರಡು ಹೋಳಾಗಿದೆ. ಅಂದು ಸಮರ್ಥ ಗೃಹಮಂತ್ರಿ ಎನಿಸಿದ್ದ ಗೋವಿಂದ ವಲ್ಲಭ ಪಂತರು ಕೂಡಾ ಅಸಹಾಯಕರಾಗಿ ತಮ್ಮ ಸಮ್ಮತಿಯನ್ನೂ ಒತ್ತಿಯೇ ಬಿಟ್ಟಿದ್ದರು ಎಂಬುದು ಮತ್ತೊಂದು ದು:ಖಕರ ನಿರ್ಧಾರ. ಆ ನಿರ್ಧಾರದೊಂದಿಗೆ ತೊಗ್ಲಕ್ ಭರಣದ ಒಂದನೇ ಹುಚ್ಚು ಸುರುವಾಗಿಯೇ ಹೋಗಿತ್ತು. ಪೊಟ್ಟಿ ಶ್ರೀರಾಮುಲುವಿನ ತೆಲುಗು ಪ್ರೇಮ ಆಂದ್ರವನ್ನು ಒಂದಾಗಿಸಿ ಇರಿಸಿಕೊಳ್ಳಲು ಸಹಕರಿಸಲಿಲ್ಲ ಎಂಬುದು ಚರಿತ್ರೆಯಲ್ಲಿ ದಾಖಲಿಸಲ್ಪಡುವ ಭಾರತದ ಒಂದನೇ ಪ್ರಧಾನಿಯ ಹುಚ್ಚು ನಿರ್ಧಾರ ಸರಿಯಾಗಿರಲಿಲ್ಲ ಎಂಬುದಕ್ಕೆ ಉತ್ತಮ ಉದಾಹರಣೆ.


ಈ ಭಾಷಾವಾರು ಪ್ರಾಂತ್ಯ ರಚನೆಯಂತಹ ಕೆಟ್ಟ ನಿರ್ಧಾರ ಇನ್ನೊಂದಿಲ್ಲ. ದೇಶವನ್ನು ಭಾಷೆ ಭಾಷೆಗಳಾಗಿ ವಿಭಜಿಸಿದ ಈ ಹುಚ್ಚು ನಿರ್ಧಾರದಿಂದ ದೇಶದ ಏಕತೆಗೆ ಬಂದ ಪೆಟ್ಟು ಸಾಮಾನ್ಯವಾದುದಲ್ಲ.  ಒಂದೇ ಭಾಷೆಯೇ ಊರಿಂದ ಊರಿಗೆ ವ್ಯತ್ಯಾಸ ವಾಗುತ್ತಾ ಹೋಗುತ್ತದೆಂಬ ಸಾಮಾನ್ಯ ಜ್ಞಾನ ಸಾಕಿತ್ತು ಈ ಭಾಷಾವಾರು ಪ್ರಾಂತ್ಯ ರಚನೆ ಅವೈಜ್ಞಾನಿಕ ಎಂದು ತಿಳಿದು ಅದನ್ನು ತಿರಸ್ಕರಿಸಲು.


ಉದಾ: ಧಾರವಾಡದ ಕನ್ನಡ ಬೇರೆ ಬೆಂಗಳೂರು ಕನ್ನಡ ಬೇರೆ. ಹಾಗೆಯೇ ಮಂಗಳೂರು ಕನ್ನಡ ಉತ್ತರ ಕನ್ನಡದ ಕನ್ನಡ ಬೇರೆ ಬೇರೆ.

ನಾವಿರುವ ಕೇರಳದ ಕಾಸರಗೋಡು ಮಲೆಯಾಳ ಕೋಝಿಕ್ಕೋಡಿಗೆ ತಲಪುವಾಗ ವ್ಯತ್ಯಾಸ ವಾಗಿ ಬಿಡುತ್ತದೆ. ಇನ್ನು ತ್ರಿಶ್ಶೂರ್, ಕೊಚ್ಚಿ ಕಡೆಯ ಮಲೆಯಾಳಿಗಳು ರಾಗ ಎಳೆದು ಮಾತನಾಡುವ ಮಲೆಯಾಳವೇ ಬೇರೆ. ಪಾಲ್ಘಾಟ್ ಕಡೆ ಹೋದರೆ ತಮಿಳು ಮಿಶ್ರಿತ ಮಲೆಯಾಳ. ಒಂದೇ ಭಾಷೆಯಲ್ಲೇ ವ್ಯತ್ಯಾಸ ಹೊಂದಿದವರಿಗೆಲ್ಲಾ ನ್ಯಾಯ ಹೇಗೆ ಒದಗಿಸಬಲ್ಲಿರಿ? ಅದು ಸಾಧ್ಯವೇ? ಪ್ರತೀ ಗ್ರಾಮವನ್ನು ಅಥವಾ ತಾಲೂಕನ್ನೂ ರಾಜ್ಯವಾಗಿ ಘೋಷಿಸಿ ಬಿಡಿ. ಆಗ ಸಮಸ್ಯೆ ಬರೋದಿಲ್ಲ ಎಂದು ಸಲಹೆ ಕೊಡುವವರೂ ಬರಬಹುದು.


ಹಿಂದಿನವರು ತೆಗೆದುಕೊಂಡ ಕೆಟ್ಟ ನಿರ್ಧಾರಗಳು ಜನ ಮಾನಸದ ಮೇಲೆ ಬೀರಿದ ಪರಿಣಾಮದಿಂದ ಅದನ್ನು ಇನ್ನು ಸರಿ ಪಡಿಸುವುದು ಅಸಾಧ್ಯ ಎಂದೇ ತಿಳಿದುಕೊಳ್ಳಬಹುದು.


ಅಂದಿನ ಸರ್ಕಾರ ಹುಚ್ಚು ತೀರ್ಮಾನ ತೆಗೆದುಕೊಂಡುದು ಮಾತ್ರವಲ್ಲ ಸಾಕಷ್ಟು ರಾಜಕೀಯ ಹಸ್ತಕ್ಷೇಪಕ್ಕೂ ದಾರಿ ಮಾಡಿ ಕೊಟ್ಟಿತ್ತು. ರಾಜಕೀಯವಾಗಿ ಸಮರ್ಥ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕೆ ಬೇಕಾದಂತೆ ರಾಜ್ಯಗಳ ರಚನೆಯನ್ನೂ ಮಾಡಿದರು. ಕಾಂಗ್ರೆಸ್ ಆಗ ಸಂಪೂರ್ಣ ಭಾರತವನ್ನು ತನ್ನ ಹಿಡಿತದಲ್ಲಿ‌ ಇಟ್ಟು ಕೊಂಡಿತ್ತು. ಅದರಲ್ಲಿದ್ದ ಪ್ರಭಾವೀ ನಾಯಕರು ತಮ್ಮ ಇಷ್ಟದಂತೇ ಭಾಷಾವಾರು ಪ್ರಾಂತ್ಯ ವಿಭಜನೆಗೆ ಗೆರೆ ಎಳೆದಿದ್ದರು. ಆ ಸಮಯದಲ್ಲಿ ಹೆಚ್ಚಿನ ಕಾರುಬಾರು ಉತ್ತರ ಭಾರತದ ನಾಯಕರುಗಳಾಗಿದ್ದರೆ ಇನ್ನೊಂದಷ್ಟು ತಮಿಳರು ಹಾಗೂ ಮಲೆಯಾಳಿಗಳದ್ದಾಗಿತ್ತು. ಉಳಿದವರೆಲ್ಲ ಹೆಸರಿಗಷ್ಟೇ ಇದ್ದರು. ಭಾಷಾ ದುರಭಿಮಾನ ಹೊರತು ಅಭಿಮಾನವಿಲ್ಲದ ಕನ್ನಡ ನಾಡಿನ ನೇತಾರರು ಅಂದೂ ಇಂದೂ ಕೇವಲಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬವರು. ಅಭಿಮಾನ ಹಾಗೂ ದುರಭಿಮಾನದ ವ್ಯತ್ಯಾಸವೂ ತಿಳಿಯದ ನಾಯಕರು ಅವರುಗಳು. ಅದರ ಪರಿಣಾಮ ಆಯಾಯಾ ಪ್ರದೇಶದ ನಾಯಕರೆನಿಸಿ ಕೊಂಡವರು ಅವರವರ ಸ್ವಾರ್ಥಕ್ಕೆ ಬೇಕಾದಂತೆ ಭಾಷೆಯ ಗಡಿಯನ್ನು ಹಾಕಿಸಿ ಪ್ರಾಂತ್ಯ ವಿಭಜನೆ ಮಾಡಿಯೇ ಬಿಟ್ಟರು. ಆ ಸಮಯದಲ್ಲಿ ಒಂದು ರಾಜ್ಯವನ್ನೇ ಸ್ಥಾಪಿಸುವಷ್ಟು ಅಸ್ತಿತ್ವ ಇಲ್ಲದ ಮಲೆಯಾಳಕ್ಕಾಗಿ ಕೇರಳ ಎಂಬ ಒಂದು ರಾಜ್ಯವನ್ನು ಅಲ್ಲಿಂದಿಷ್ಟು ಇಲ್ಲಿಂದಿಷ್ಟು ಎಂದು ತೆಗೆದು ತಮ್ಮ ಸ್ವಾರ್ಥಕ್ಕಾಗಿ ರೂಪಿಸಿಬಿಟ್ಟರು. 


ಕೆ.ಪಿ. ಕೇಶವ ಮೆನನ್ ಎಂಬ ಸೂಕ್ಷ್ಮ ದುರ್ಬುದ್ದಿಯ ಕಾಂಗ್ರೆಸ್ ನೇತಾರ ಮಲೆಯಾಳಿ ಪಣಿಕ್ಕರ್ ಎಂಬ ಮತ್ತೊಬ್ಬ ಬುದ್ದಿಜೀವಿ (ದುರ್ಬುದ್ಧಿ) ಅಧಿಕಾರಿಯೊಂದಿಗೆ ಸೇರಿ ತನಗೆ ಬೇಕಾದಂತೆ ಕೇರಳ ರಾಜ್ಯವನ್ನು ಸೃಷ್ಟಿ ಮಾಡಿಯೇ ಬಿಟ್ಟ. (ಬಿಟ್ಟರು ಎನ್ನಲೇ) ಸಂಪೂರ್ಣ ಕನ್ನಡ ನಾಡಾಗಿದ್ದ ಕಾಸರಗೋಡು ಹೊಸದುರ್ಗಗಳನ್ನು ಕೇರಳಕ್ಕೆ ಸೇರಿಸಿಯೇ ಬಿಟ್ಟರು. ಚಂದ್ರಗಿರಿಯಾಚೆ ಹೊಸದುರ್ಗದ ವರೆಗೆ ಆ ಕಾಲದಲ್ಲಿ ಹೆಚ್ಚು ಕಡಮೆ 50:50 ಪ್ರಮಾಣದಲ್ಲಿ ಮಲೆಯಾಳ ಮತ್ತು ಕನ್ನಡಗಳಿದ್ದರೆ ಚಂದ್ರಗಿರಿಯ ಉತ್ತರಕ್ಕೆ 70:30 ಪ್ರಮಾಣದಲ್ಲಿ ಕನ್ನಡಿಗರು ಹಾಗೂ ಮಲೆಯಾಳಿಗಳಿದ್ದರು. ಅದರಲ್ಲಿ ಮಾಪ್ಳೆ ಮಲೆಯಾಳ ಮಾತನಾಡುವ ಮಲೆಯಾಳಿಗಳ ಸಂಖ್ಯೆಯೇ ದೊಡ್ಡದಿತ್ತು. ಇವರೆಲ್ಲಾ ಕನ್ನಡವೇ ಕಲಿತು ಕನ್ನಡದಲ್ಲೇ ವ್ಯವಹರಿಸುತ್ತಿದ್ದವರು. ಆದರೆ ದುಷ್ಟ ರಾಜಕೀಯದಾಟ ಕಾಸರಗೋಡನ್ನು ಶಾಶ್ವತವಾಗಿ ಕನ್ನಡ ನಾಡಿನಿಂದ ಬೇರ್ಪಡಿಸಿತ್ತು.


ಆ ಕಾಲದ ಕಾಸರಗೋಡಿನ ಹಿರಿಯರು ಕನ್ನಡಕ್ಕಾಗಿ ಮಾಡಿದ ಚಳವಳಿಗಳೆಲ್ಲಾ ನಿರರ್ಥಕವಾಗಿತ್ತು. ನರಸತ್ತ ಕರ್ನಾಟಕದ ರಾಜಕಾರಣಿಗಳಿಗೆ ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬನ ನಾಡು ಬೇಡವಾಯಿತು. ರಾಷ್ಟಕವಿ ಗೋವಿಂದ ಪೈಗಳು ಕಯ್ಯಾರರು ಎಲ್ಲಾ ಕೇರಳವೆಂಬ ಮಲೆಯಾಳ ರಾಜ್ಯದಲ್ಲಿ‌ ಹುದುಗಿಯೇ ಹೋದರು. ಕನ್ನಡಕ್ಕೆ ಎಷ್ಟೆಷ್ಟೋ ಉಡುಗೊರೆ ಕೊಟ್ಟ ಕಾಸರಗೋಡಿನ ಕನ್ನಡಿಗರ ಹೆಸರು ಕೂಡ ನೆನಪಿಡಲು ಕರ್ನಾಟಕದ ಸರ್ಕಾರಕ್ಕೆ ಮನಸ್ಸಿಲ್ಲದಾಯಿತು. ಕೇವಲಾ ಬೆಳಗಾಂ ಬಗ್ಗೆ ತಮ್ಮೆಲ್ಲಾ ಶಕ್ತಿಯನ್ನು ವ್ಯಯಿಸುತ್ತಿದ್ದ ಕರ್ನಾಟಕದ ರಾಜಕಾರಣಿಗಳು ಹಾಗೂ  ಕನ್ನಡ ಹೋರಾಟಗಾರರೆಂದು ಕರೆಸಿ ಕೊಳ್ಳುವವರು ಕನ್ನಡದ ಬಗ್ಗೆ ದುರಭಿಮಾನ ತೋರಿದ್ದಲ್ಲದೆ ಅಭಿಮಾನ ತೋರಲೇ ಇಲ್ಲ. ಅವರ ಲಕ್ಷ್ಯವೆಲ್ಲಾ ಯಾವುದೋ ರಾಜ್ಯದಿಂದ ಹೊಟ್ಟೆಪಾಡಿಗೆ ದುಡಿಯಲು ಬಂದ ಅನ್ಯ ಭಾಷಾ ನೌಕರರ ಮೇಲೆ ಪೌರುಷ ತೋರಿಸುವುದರಲ್ಲಿ ಮಾತ್ರ. ತಮ್ಮದೇ ಭಾಗವಾಗ ಬೇಕಿದ್ದ ಒಂದು ಭಾಗ ಶಾಶ್ವತವಾಗಿ ಕಳೆದು ಹೋದುದು ಅವರಿಗೆ ತಿಳಿದೇ ಇಲ್ಲ ಅಥವಾ ತಿಳಿಯದಂತೆ ನಟಿಸುತ್ತಿದ್ದಾರೆ.

ಕಾಸರಗೋಡು ಅವರ ಮಟ್ಟಿಗೆ ದೊಡ್ಡ ಅಲಕ್ಷ್ಯದ ಸ್ಥಳ. ಅದು ಅವರ ಮಟ್ಟಿಗೆ ಬೇಡದ ಕೂಸು. 


ಆದ್ದರಿಂದ ಸಂಭ್ರಮಿಸಲೇ ಈ ರಾಜ್ಯೋತ್ಸವವೆಂಬ ಸುಳ್ಳು ಪ್ರಹಸನವನ್ನು.?

ಇನ್ನು ಮಲೆಯಾಳ ಅರಿಯದ ಅಚ್ಚ ಕನ್ನಡದವನಾದರೂ ಕೇರಳದ ಮಲೆಯಾಳಿ ಎಂದು ಸಂಭ್ರಮಿಸಲೇ?

ಕನ್ನಡಮ್ಮನ ಮಕ್ಕಳಾಗಿಯೂ ಕನ್ನಡಿಗರ ನಿರ್ಲಕ್ಷದಿಂದ ಅನ್ಯರ ಪಾಲಾಗಿದ್ದೇವೆಂದು ಸಂಭ್ರಮಿಸಲೇ?

ಜನಗಳ ದುಡ್ಡಿನಿಂದ ರಾಜ್ಯೋತ್ಸವ ಎಂಬ ಪ್ರಹಸನ ನಡೆಸಿ ಒಂದಷ್ಟು ದುಡ್ಡೂ ಗಿಸೆಗಿಳಿಸಿ ನೀವು ನಡೆಸುವ ಈ ಹುಚ್ಚಾಟವನ್ನು ನೋಡಿ ಖುಷಿ ಪಟ್ಟಿದ್ದೇವೆಂಬ ನಟನೆ ತೋರಿ ಸಂಭ್ರಮಿಸಲೇ?

ನೈಜವಾದ ಕನ್ನಡ ರಾಜ್ಯ ಉದಯವಾಗಿದೆಯೇ? 

ಎದೆ ತಟ್ಟಿ ಹೇಳ ಬಲ್ಲಿರಾ ನೈಜ ಕರ್ನಾಟಕ ರಾಜ್ಯ ಉದಯವಾಗಿದೆ ಎಂದು?

 ಕನ್ನಡದ ಮಕ್ಕಳಿಗೆ ಭೂಲೋಕದ ಯಾವ ಭಾಗದಲ್ಲಾದರೂ ನೋವಾದರೆ ಪ್ರತಿಕರಿಸುವ ಶಕ್ತಿ ಇದೆಯೇ ಕನ್ನಡ ಹೋರಾಟಗಾರರೆಂದು ಶಾಲು ಹೊದೆದು ನವೆಂಬರ್ ಒಂದಕ್ಕೆ ಮಾತ್ರ ಭಾಷಣ ಬಿಗಿಯುವ ಕನ್ನಡ ಓರಾಟಗಾರರಿಗೆ? 


ಇಲ್ಲ ಸ್ವಾಮಿ ಇಲ್ಲವೇ ಇಲ್ಲ. ಯಾಕೆಂದರೆ ಇವರಿಗೆಲ್ಲಾ ಕನ್ನಡದ ಮೇಲೆ ಅಭಿಮಾನವಲ್ಲ ಇರೋದು ಕೇವಲಾ ದುರಭಿಮಾನ. ಕನ್ನಡದ ಹೆಸರು ಹೇಳಿ ದುಡ್ಡು ಮಾಡುವ ಸ್ವಾರ್ಥದ ರಾಜಕಾರಣ. ಪರಭಾಷೆಯ ಮೇಲೆ  ಇರಬೇಕಾದ ಸಹಿಷ್ಣುತೆ ಇಲ್ಲದೆ ತಮ್ಮದೇ ರಾಜ್ಯದಲ್ಲಿ ಇತರರ ಎದುರಾಗಿ ನಡೆಸುವ ಚಳವಳಿ ಇತರ ರಾಜ್ಯದಲ್ಲಿ‌ ಇರುವ ತನ್ನದೇ ರಾಜ್ಯದ ನೌಕರರಿಗೆ ಕನ್ನಡಾಂಬೆಯ ಪುತ್ರರಿಗೆ ತೊಂದರೆ ಕೊಡಬಹುದು ಎಂಬ ಅಲ್ಪ ತಿಳುವಳಿಕೆಯಾದರೂ ಇದೆಯೇ ಈ ರೀತಿ ನಾಟಕ ಆಡುವ ಈ ಹುಚ್ವು ಹೋರಾಟಗಾರರಿಗೆ? 


ನಿಮ್ಮದೇ ಮನೆಯಂಗಳದಲ್ಲಿ ನೀವು ಇನ್ನೊಬ್ಬನಿಗೆ ಕೊಡುವ ತೊಂದರೆ ತನ್ನ ಅಂಗಳದಲ್ಲಿ ಅಬ್ಬರಿಸಿ ಬೊಬ್ಬಿರಿದು ಆಚೆ ಕಡೆ ಹೋದ ಕೂಡಲೇ ಬಾಲ ಅಲ್ಲಾಡಿಸಿ ಮುಖ ನೆಕ್ಕುವ ನಾಯಿಯ ಬೊಗಳುವಿಕೆಗೆ ಸಮನಲ್ಲವೇ? ಈ ರೀತಿಯ ತಿಳುವಳಿಕೆಯಾದರೂ ಇದೆಯೇ ಈ ಸ್ವಭಾಷಾ ಹೋರಾಟಗಾರರೆನ್ನುವವರಲ್ಲಿ?


ಲೋಕದಲ್ಲಿ ಎಲ್ಲೆಂದರಲ್ಲಿ ಇರುವ ಕನ್ನಡಿಗರಿಗೆ  ತೊಂದರೆಯಾದರೆ ಎದ್ಧು ಹೋರಾಟ ಮಾಡುವ ಕಿಚ್ಚು ಬರ ಬೇಕಿದ್ದರೆ ನೈಜ ಕನ್ನಡದ ಕಿಚ್ಚು ಎದೆಯೊಳಗಿರಬೇಕು. ಅದೆಲ್ಲಾ ಇಲ್ಲದವರು ಏನು ಮಾಡುತ್ತಾರೆ? ಸುಮ್ಮನೇ ಒಂದಷ್ಟು ಡಂಬಾಚಾರ. ಸ್ಪಷ್ಟವಾಗಿ ಎರಡಕ್ಷರ ಮಾತನಾಡಲಾರದ ಹೋರಾಟಗಾರರು ಏನು ಸಾಧಿಸ ಬಲ್ಲರು? ಯಾರೋ ಹೊಟ್ಟೆ ಪಾಡಿಗೆ ದುಡಿಯುವವನಿಗೆ ತೊಂದರೆ ಕೊಟ್ಟು ತಾನೇನೋ ಅಸಾಮಾನ್ಯವಾದುದನ್ನು ಸಾಧಿಸಿದ್ದೇನೆಂದು ಎದೆ ಉಬ್ಬಿಸ ಬಹುದಷ್ಟೆ.


ಕಾಸರಗೋಡಿನಲ್ಲಿ ಕನ್ನಡ ಎಂಬುದು ಎಂದೋ ಸತ್ತು ಹೋಗಿದೆ ಎಂದು ತಿಳಿದಿದ್ದರೆ ಅದು ತಪ್ಪು. ಅಲ್ಲಿ ಇಲ್ಲಿ ಉಸಿರಾಡಲು ಅವಕಾಶ ಸಿಕ್ಕಿದಲ್ಲಿ ಕಷ್ಟ ಪಡುತ್ತಾ ಉಸಿರಾಡುತ್ತಿದೆ. ಅದನ್ನು ನೋಡಿ ಇಲ್ಲಿ ಮಲೆಯಾಳೀಕರಣದ ಹೋರಾಟಗಾರರು ಅವರನ್ನು ನರಳಿ ನರಳಿ ಸಾಯುವಂತೆ ಮಾಡುತ್ತಿದ್ದಾರಷ್ಟೆ. ಇಂಚಿಂಚಾಗಿ ಕೊಲ್ಲುವ ನಿಧಾನ ವಿಷವನ್ನು ಉಣ್ಣಿಸುತ್ತಿದ್ದಾರೆ. ಅವರು ಕೊಟ್ಟ ವಿಷವನ್ನೇ ಹಾಲೆಂದು ತಿಳಿದು ಚಪ್ಪರಿಸಿ ಚಪ್ಪರಿಸಿ ಕುಡಿಯುತ್ತಿದೆ ಕಾಸರಗೋಡಿನ ಕನ್ನಡಮ್ಮನ ಕೂಸುಗಳು.


ಬೇಸರ ಪಡ್ಬೇಡಿ ಸ್ವಾಮೀ ಆ ವಿಷದ ಪ್ರಭಾವದಿಂದ ಎಲ್ಲೋ ಅಳಿದುಳಿದು ಕನ್ನಡ ಕನ್ನಡ ಎಂದು ಕೂಗುವ ಗಂಟಲುಗಳೂ ಬೇಗನೇ ನಿಶ್ಶಬ್ಧವಾಗುತ್ತದೆ. ಹೆಚ್ಚು ಸಮಯ ಬೇಕಾಗಿ ಬರಲಾರದು.


ಕನ್ನಡದ ಹುಚ್ಚು ಹೋರಾಟಗಾರರೇ ಕನ್ನಡಮ್ಮನ ಕೂಸಾಗಿದ್ದ ಕಾಸರಗೋಡಿನ ಕನ್ನಡಿಗನ ಕೊನೆಯ ಕೂಗೂ ನಿಂತ ದಿವಸ ಬರಲು ಸಾಧ್ಯ ಇದ್ದರೆ ಕಾಸರಗೋಡಿಗೆ ಬನ್ನಿ. ಕಾಸರಗೋಡಿನ ಕನ್ನಡಿಗರ ಶವದ ಪೆಟ್ಟಿಗೆಯ ಮೇಲೆ ಒಂದೆರಡು ಹೂ ಇಟ್ಟು ಒಂದು ಊದು ಬತ್ತಿ ಹಚ್ಚಿ ಎರಡು ಮೊಸಳೆ ಕಣ್ಣೀರು ಸುರಿಸಿ ನಿಮ್ಮಿಂದ ಸಾಧ್ಯ ಇದ್ದಷ್ಟೂ ದೊಡ್ಡಸ್ವರದಲ್ಲಿ ಆರ್ಭಟಿಸಿ ಹೋಗಿಬಿಡಿ. ಬಂದು ಹೋದುದಕ್ಕೆ ಕರ್ನಾಟಕದ ಘನ ಸರ್ಕಾರದಿಂದ ದಾರಿ ಖರ್ಚಿನೊಂದಿಗೆ ನಿಮ್ಮ ಮಕ್ಕಳ ಚಾಕಲೇಟಿಗೂ ಒಂದಷ್ಟು ಹಣ ಇಸುಗೊಳ್ಳಿ.


ಬರುವಾಗ ಒಂದು ಅರಸಿನ ಶಾಲು ಕನ್ನಡದ ದ್ವಜ ಕೈಯ್ಯಲ್ಲಿ ಹಿಡಿಯಲು ಮರೆತು ಬಿಡಬೇಡಿ. ಜೈ ಕನ್ನಡಾಂಬೆ ಎಂದೂ ನೀವು ಹೇಳುವಾಗ ಒಂದಿಗೆ ಸ್ವರ ಸೇರಿಸಲು ಒಂದಷ್ಟು ಬಾಡಿಗೆ ಬಂಟರನ್ನು ಕರೆತರಲು ಮರೆತು ಬಿಡಬೇಡಿ. ಏಕೆಂದರೆ ಇಲ್ಲಿ ನಿಮ್ಮ ಕನ್ನಡ ಭಾಷಣ ಕೇಳಲು ಜೈಕಾರ ಹಾಕಲು ಯಾರೂ ಇರುವುದಿಲ್ಲ. ಖಾಲಿ ಖಾಲಿ ಕುರ್ಚಿಗಳು ನಿಮಗೆ ಶೋಭೆ ತರಲಾರದು. ಆದ್ದರಿಂದ ಅವಶ್ಯ ಬರುವಾಗ ಜನ ತನ್ನಿ ಅಥವಾ ಇಲ್ಲಿಯೇ ಒಂದಷ್ಟು ಜನಕ್ಕೆ ದುಡ್ಡು ಕೊಟ್ಟು "ನಮಿಗೂ ಕನ್ನಡಿ ಗೊತ್ತುಂಡು" ಎನ್ನುವವರನ್ನು ನೇಮಿಸಿಬಿಡಿ.  


ಪಾರ್ಥಿಸುಬ್ಬ ಇರಬಹುದು. ಉಮೇಶ್ ರಾವ, ಮಹಾಬಲ ಭಂಡಾರಿ, ಕುಣಿಕುಳ್ಳಾಯ, ಕ್ಯಾಪ್ಟನ್ ಶೆಟ್ಟರು, ಶೆರೂಲ್, ಸಾರಾ, ಕಯ್ಯಾರರು, ಮಂ. ಗೋವಿಂದ ಪೈ, ಖಂಡಿಗೆ ಶ್ಯಾಂ ಭಟ್ಟರು, ಗಣಪತಿ ಐಗಳ್ ಹೀಗೆ ಎಷ್ಟೆಷ್ಟೋ ಹೆಸರಿಸಲೂ ಸಿಗದಷ್ಟು ಮಹಾನುಭಾವರ ಆತ್ಮಗಳು ಹೋದಲ್ಲೂ ಅತ್ತು ನಿಮ್ಮ ಕನ್ನಡಾಭಿಮಾನಕ್ಕೆ ಕಣ್ಣೀರು ಸುರಿಸಲಿ. 


ಸಧ್ಯಕ್ಕೆ ನನ್ನಂತಹ ಜೀವಂತ ಇರುವ ಬೆರಳೆಣಿಕೆಯ ಕನ್ನಡಿಗ ಎಂಬುವವರು ಇಂತಹ ಬರಹ ಬರೆಯುವುದು ಆದಷ್ಟು ಬೇಗ ನಿಂತೇ ಹೋಗಲಿ ಎಂದು ಪ್ರಾರ್ಥಿಸಲು ಮಾತ್ರ ಮರೆಯಲೇ ಬೇಡಿ. ಹಾಗೆಯೇ ಅಲ್ಲಿಯ ವರೆಗೂ ಜೈ ಕನ್ನಡಾಂಬೆ ಎಂದು ಆಗಾಗ ಹೇಳುತ್ತಾ ಕಾಸರಗೋಡಿನ ಕಡೆ ಬಂದು ಇಲ್ಲಿಯ ಕನ್ನಡಿಗರ ದುರವಸ್ಥೆಯ ಬಗ್ಗೆ ಎರಡು ಮಾತು‌ ಆಡಿ ಹಾರ ಹಾಕಿಸಿಕೊಳ್ಳುವುದನ್ನೂ ಮಾತ್ರ ಮರೆತು ಬಿಡಬೇಡಿ.


ಒಂದು ನೆನಪಿಡಿ ಕಾಸರಗೋಡಿನಲ್ಲಿ ಇಂದೂ ಜೀವ ಎಳೆಯುತ್ತಾ ಇರುವ ಕನ್ನಡಿಗರು‌ ಕನ್ನಡಾಂಬೆಯನ್ನು ಸ್ಮರಿಸುತ್ತಾ ಇಂದಿನ ದಿನವನ್ನು ಕರಾಳದಿನ ಎಂದೇ ಹೆಸರಿಸುತ್ತೇವೆ.


ತನ್ನಳಲ ತೋಡಿಕೊಂಡವ


- ಎಡನಾಡು ಕೃಷ್ಣ ಮೋಹನ ಭಟ್ಟ

ನೊಂದ ಕಾಸರಗೋಡಿನ ಕನ್ನಡಿಗ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top