ಲೇಖಾ ಲೋಕ-58: ಪ್ರಕಾಂಡ ಪಂಡಿತರು- ಶತಾವಧಾನಿ ಆರ್. ಗಣೇಶ್

Upayuktha
0


ನ್ನಡದಲ್ಲಿ ಶತಾವಧಾನ ಕಾರ್ಯಕ್ರಮ ಜರುಗಿಸಿ, ಪಂಡಿತರಾಗಿರುವ ಶತಾವಧಾನಿ ಗಣೇಶ್ ಅವರು ಬಹುಶ್ರುತ ಪಂಡಿತರು. ಕನ್ನಡದಲ್ಲಿ ಅವಧಾನ ಕಾರ್ಯಕ್ರಮ ಕಲೆಯನ್ನು ಪ್ರಚುರಪಡಿಸಿ, ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದ ವಿದ್ವಾಂಸರು. ಕನ್ನಡದಲ್ಲಿ ಅವಧಾನ ಕಲೆ ಎಂಬ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಿ.ಲಿಟ್ ಪದವಿಯ ಗೌರವವನ್ನು ಸ್ವೀಕರಿಸಿದ ಪಂಡಿತರು. ಭಾರತೀಯ ವಿದ್ಯಾಭವನದಲ್ಲಿ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ಅನೇಕ ಮಹತ್ತರ ವಿಷಯಗಳನ್ನು ಜನರಿಗೆ ತಲುಪಿಸುತ್ತಿರುವ ಮಹನೀಯರು.


ಕೋಲಾರದಲ್ಲಿ 4-12-1962 ರಂದು ಜನಿಸಿ, ಕನ್ನಡ ಸಂಸ್ಕೃತ, ತೆಲುಗು, ತಮಿಳು ಭಾಷೆಗಳಲ್ಲಿ ಅಪಾರ ಪಾಂಡಿತ್ಯವನ್ನು ಸಹ ಪಡೆದು ಬಹು ಪ್ರಖ್ಯಾತ ಉಪನ್ಯಾಸಕರಾಗಿದ್ದಾರೆ. ಒಟ್ಟಾರೆ ಹದಿನೆಂಟು ಭಾಷೆಗಳಲ್ಲಿ ನುರಿತವರಾಗಿ, ಅವಧಾನ ಕಲೆಯಲ್ಲಿ ಪ್ರವೀಣರಾಗಿ, ಅನೇಕ ಶತಾವಧಾನ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಮಹನೀಯರು.


ಕೋಲಾರದಲ್ಲಿ ಆರ್ ಶಂಕರನಾರಾಯಣ ಅಯ್ಯರ್ ಮತ್ತು ಅಲಮೇಲಮ್ಮ ದಂಪತಿಗಳ ಪುತ್ರನಾಗಿ, ತಮ್ಮ ಶಿಕ್ಷಣವನ್ನು ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪಡೆದರು. ನಂತರ ಎಂಎಸ್ಸಿ ಪದವಿ ಪಡೆದು, ಮೈಸೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಸಂಸ್ಕೃತ ಎಂ ಎ ಸ್ನಾತಕೋತ್ತರ ಪದವಿ ಪಡೆದರು. ಇವರ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಬೆಂಗಳೂರಿನಲ್ಲಿ ಜರುಗಿ, ಪ್ರೌಢ ಶಿಕ್ಷಣ ಗೌರಿಬಿದನೂರು ಫ್ರೌಢಶಾಲೆಯಲ್ಲಿ ಜರುಗಿತು. ತತ್ವಶಾಸ್ತ್ರದ ಅನೇಕ ವಿಷಯಗಳ ಅಧ್ಯಯನ ಮಾಡಿ, ಸಾರಸ್ವತ ಲೋಕದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಪ್ರತಿಭಾ ಪೂರ್ಣ ವ್ಯಕ್ತಿಯಾಗಿದ್ದಾರೆ.


 

ಇಂಜಿನಿಯರಿಂಗ್ ಪದವಿ,ವಸ್ತು ವಿಜ್ಞಾನದಲ್ಲಿ ಪಿಎಚ್.ಡಿ ಪದವಿ ಪಡೆದು, ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು. ಅವಧಾನ ಕಲೆಯಲ್ಲಿ ಆಸಕ್ತಿ ಹೊಂದಿ ಅದರಲ್ಲಿ ಪರಿಣಿತಿ ಪಡೆದು, ಸಹಸ್ರಾವಧಾನ ಜರುಗಿಸಿದ ಮಹನೀಯರು. ಡಿವಿಜಿ ಅವರ ನೂರನೇ ವರ್ಧಂತಿ ಉತ್ಸವ ಜರುಗಿದಾಗ, ತಮ್ಮ ನೂರನೇ ಅಷ್ಟಾವಧಾನ ನಂತರ ಇನ್ನೂರನೇ ಅಷ್ಟಾವಧಾನ ಕೋಲಾರದಲ್ಲಿ ಶತಾವಧಾನಿ ಗಣೇಶ್ ನಡೆಸಿ, ಜನರನ್ನು ಸಂತಸಪಡಿಸಿದರು. ಚಿತ್ರಕಾವ್ಯ ಇವರ ವಿಶೇಷ ಕಾರ್ಯಕ್ರಮವಾಗಿತ್ತು. ಅಮೇರಿಕಾ ಯುರೋಪ್ ದೇಶಗಳಲ್ಲಿ ಸಹ 20 ಪ್ರದರ್ಶನ ನೀಡಿ, ಪ್ರಖ್ಯಾತರಾದವರು.


ಬಾಲಕರಿಗೆ ಅನುಕೂಲವಾಗುವಂತೆ ಎರಡು ಕೃತಿಗಳನ್ನು ರಚಿಸಿದ್ದಾರೆ. ಶತಾವಧಾನ ಶಾರದೆ, ಶತಾವಧಾನ ಶ್ರೀ ವಿದ್ಯೆ ಇವರ ಪ್ರಸಿದ್ಧ ಕೃತಿಗಳು. ತೆಲುಗು, ತಮಿಳು, ಸಂಸ್ಕೃತ ಭಾಷೆಯಲ್ಲಿ ಸಹ ಅಷ್ಟಾವಧಾನಿಯಾಗಿದ್ದು ಅನೇಕ ಕಾರ್ಯಕ್ರಮಗಳನ್ನು ನಡೆಸಿದ ಕೀರ್ತಿಗೆ ಭಾಜನರು. ಈ ರೀತಿಯಲ್ಲಿ ಏಕೈಕ ಸಾಧನೆ ಮಾಡಿದ ಭಾರತೀಯನಾಗಿ, ಡಾ. ಶತಾವಧಾನಿ ಗಣೇಶ್ ಅವರು ಬಹು ಭಾಷಾ ಪಂಡಿತರು. ಕಾವ್ಯ ಮೀಮಾಂಸೆ, ಛಂದಃಶಾಸ್ತ್ರ, ವೇದಾಂತ, ಉಪನಿಷತ್ತು, ಧರ್ಮ ಶಾಸ್ತ್ರ, ಇತಿಹಾಸ, ಸಂಸ್ಕೃತಿ, ಅಲಂಕಾರ ಶಾಸ್ತ್ರ, ಭಾರತೀಯ ತತ್ವಶಾಸ್ತ್ರ, ವ್ಯಾಕರಣ  ಹೀಗೆ ಹತ್ತು ಹಲವು ವಿವಿಧ ಕ್ಷೇತ್ರಗಳಲ್ಲಿ ಅಪಾರ ಪಾಂಡಿತ್ಯ ಪಡೆದ ಹೆಗ್ಗಳಿಕೆಗೆ ಪಾತ್ರರು.


ಸಂಗೀತ, ಕಲೆ ನೃತ್ಯ ಮುಂತಾದ ಕಲೆಗಳಲ್ಲಿ ಪ್ರವೀಣರು. ವಿದೇಶಿ ಭಾಷೆಗಳಾದ ಇಂಗ್ಲೀಷ್ ಗ್ರೀಕ್, ಲ್ಯಾಟಿನ್, ಇಟಾಲಿಯನ್, ಮುಂತಾದ ಒಟ್ಟು 18 ಭಾಷೆಗಳಲ್ಲಿ ಸಹ ಪರಿಣಿತರು. ಇವರು ಡಾ. ಗೋವಿಂದ ಪೈ ಅವರ ಮಹತ್ಸಾಧನೆಯನ್ನು ತಮ್ಮ ಆದರ್ಶವಾಗಿಟ್ಟಕೊಂಡು ಗೌರವ ಸೂಚಿಸಿದ್ದಾರೆ. ಉತ್ತಮ ಕವಿ, ಚಿಂತಕರು, ಉಪನ್ಯಾಸಕರು. ಕನ್ನಡದಲ್ಲಿ, ಸಂಸೃತದಲ್ಲಿ ನಾಟಕಗಳನ್ನು ಸಹ ರಚಿಸಿದ ಮಹಾನ್ ವಿದ್ವಾಂಸರು. ಮೂರು ಕಾದಂಬರಿಗಳನ್ನು, ಎಂಟು ಕಾವ್ಯಗಳನ್ನು, ಆರು ಅನುವಾದಗಳನ್ನು ರಚಿಸಿದ್ದಾರೆ ಕನ್ನಡ ಭಾಷೆಯ ಪುನುರುತ್ಥಾನಕ್ಕೆ ದುಡಿಯುವ ವಿದ್ವಾಂಸರು.


ಡಾ ಎಸ್ ಎಲ್ ಭೈರಪ್ಪ ಅವರ ಸಮಗ್ರ ಕಾದಂಬರಿಯ ವಿಶ್ಲೇಷಣೆ ಮಾಡಿ, ಜನರಿಗೆ ಅವರ ಸಾಹಿತ್ಯ ಪ್ರಚಾರ ಮಾಡುವ ವಿಮರ್ಶಕರು.ಇವರಿಗೆ ಕಿರಿಯ 29 ವರ್ಷದ ವಯಸ್ಸು  ಇದ್ದಾಗ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಂತರ ರಾಷ್ಟ್ರೀಯ ಯುವ ಪ್ರತಿಭಾ ಪುರಸ್ಕಾರ, ಕಾವ್ಯಕಂಟ ಪ್ರಶಸ್ತಿ, ಬಾದರಾಯಣ ವ್ಯಾಸಪುರಸ್ಕಾರ, ಸೇಡಿಯಾಪು ಪ್ರಶಸ್ತಿ, ಗೌರವ ಡಾಕ್ಟರೇಟ್, ಚಿತ್ ಪ್ರಭಾನಂದ ಪ್ರಶಸ್ತಿ, ಏರ್ಯ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ  ಮತ್ತು ಅನೇಕ ಗೌರವಗಳ ಪುರಸ್ಕಾರ ಪಡೆದ ಮಹನೀಯರು.




Post a Comment

0 Comments
Post a Comment (0)
Advt Slider:
To Top