2025ನೇ ಸಾಲಿನ 'ಆರೋಹಣ ಸೋಷಿಯಲ್‌ ಇನೋವೇಷನ್‌ ಪ್ರಶಸ್ತಿ' ಪಟ್ಟಿ ಪ್ರಕಟ

Upayuktha
0

ಇನ್ಫೋಸಿಸ್‌ ಪ್ರತಿಷ್ಠಾನ ನೀಡುತ್ತಿರುವ ಪ್ರಶಸ್ತಿ

ಶಿಕ್ಷಣ, ಆರೋಗ್ಯಸೇವೆ ಮತ್ತು ಪರಿಸರಕ್ಕೆ ಸಂಬಂಧಿಸಿದ ಸುಸ್ಥಿರತೆಯಲ್ಲಿ ಹೊಸತನದ ಆವಿಷ್ಕಾರಕ್ಕಾಗಿ ಎಂಟು ಮಂದಿಗೆ ಒಟ್ಟು ರೂ 2 ಕೋಟಿ ಮೊತ್ತವನ್ನು ನೀಡಲಾಗುತ್ತಿದೆ.




ಮಂಗಳೂರು: ಇನ್ಫೊಸಿಸ್‌ ಲಿಮಿಟೆಡ್‌ ಕಂಪನಿಯ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಅಂಗಸಂಸ್ಥೆಯಾಗಿರುವ ಇನ್ಫೊಸಿಸ್‌ ಪ್ರತಿಷ್ಠಾನವು ಆರೋಹಣ ಸೋಷಿಯಲ್‌ ಇನ್ನೊವೇಷನ್‌ ಪ್ರಶಸ್ತಿಗೆ ಆಯ್ಕೆಯಾದವರ ಹೆಸರನ್ನು ಸೋಮವಾರ (ನ.23) ಪ್ರಕಟಿಸಿದೆ. 2018ರಲ್ಲಿ ಆರಂಭಿಸಲಾದ ಈ ಪ್ರಶಸ್ತಿಯು ಭಾರತದ ಸಮುದಾಯಗಳ ಬದುಕಿನ ಸ್ಥಿತಿಯನ್ನು ಉತ್ತಮಪಡಿಸುವಂತಹ ಮಹತ್ವದ ಸಾಮಾಜಿಕ ಕಾರ್ಯಗಳನ್ನು ನಡೆಸಿದ ವ್ಯಕ್ತಿಗಳು ಹಾಗೂ ತಂಡಗಳನ್ನು ಗುರುತಿಸಿ, ಗೌರವಿಸುವ ಕೆಲಸ ಮಾಡುತ್ತದೆ. ಇದು ಈ ಪ್ರಶಸ್ತಿಯ ನಾಲ್ಕನೆಯ ಆವೃತ್ತಿಯಾಗಿದೆ. 


ಈ ವರ್ಷ ಈ ಪ್ರಶಸ್ತಿಯು ಶಿಕ್ಷಣ, ಆರೋಗ್ಯಸೇವೆ ಮತ್ತು ಪರಿಸರಕ್ಕೆ ಸಂಬಂಧಿಸಿದ ಸುಸ್ಥಿರತೆಯ ಕ್ಷೇತ್ರದಲ್ಲಿ ನಡೆದ ಅಸಾಮಾನ್ಯವಾದ ಆವಿಷ್ಕಾರಗಳನ್ನು ಗೌರವಿಸುವ ಕೆಲಸ ಮಾಡಿದೆ. ತಂತ್ರಜ್ಞಾನ, ಸೃಜನಶೀಲತೆ ಮತ್ತು ಸಹಾನುಭೂತಿಯ ಮೂಲಕ ಸಾಮಾಜಿಕವಾಗಿ ಪರಿಣಾಮ ಉಂಟುಮಾಡಬೇಕು ಎಂದು ಇನ್ಫೊಸಿಸ್‌ ಪ್ರತಿಷ್ಠಾನ ಹೊಂದಿರುವ ಧ್ಯೇಯದೊಂದಿಗೆ ಈ ಮೂರು ಆದ್ಯತಾ ಕ್ಷೇತ್ರಗಳು ಸರಿಹೊಂದುವಂತೆ ಇವೆ. 2,000ಕ್ಕೂ ಹೆಚ್ಚಿನ ಅರ್ಜಿಗಳ ಪೈಕಿ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಸಮಿತಿಯಲ್ಲಿ ಇದ್ದ ಹಿರಿಯರು:


• ಅಭಿಜಿತ್‌ ರೇ, ಸಹ ಸಂಸ್ಥಾಪಕ, ಯನೈಟಸ್‌ ಕ್ಯಾಪಿಟಲ್‌ ಮತ್ತು ಯುಸಿ ಇನ್‌ಕ್ಲೂಸಿವ್‌ ಕ್ರೆಡಿಟ್‌

• ಅಲಿನಾ ಆಲಂ, ಮಿಟ್ಟಿ ಕೆಫೆ ಸಂಸ್ಥಾಪಕರು

• ಅಪರ್ಣಾ ಉಪ್ಪಲೂರಿ, ಅಂತಾರಾ ಅಡ್ವೈಸರಿ ಸಂಸ್ಥೆಯ ಸಂಸ್ಥಾಪಕರು ಮತ್ತು ಪ್ರಧಾನ ಸಲಹೆಗಾರರು

• ಸುಮಿತ್‌ ವಿರ್ಮಾನಿ, ಟ್ರಸ್ಟಿ, ಇನ್ಫೊಸಿಸ್‌ ಪ್ರತಿಷ್ಠಾನ

• ಸುನಿಲ್‌ ಕುಮಾರ್‌ ಧಾರೇಶ್ವರ, ಟ್ರಸ್ಟಿ, ಇನ್ಫೊಸಿಸ್‌ ಪ್ರತಿಷ್ಠಾನ


ಆರೋಹಣ ಸೋಷಿಯಲ್‌ ಇನ್ನೊವೇಷನ್‌ ಪ್ರಶಸ್ತಿ 2025ಕ್ಕೆ ಆಯ್ಕೆಯಾಗಿರುವವರಿಗೆ ತಲಾ ರೂ 50 ಲಕ್ಷ ನಗದನ್ನು ಬಹುಮಾನವಾಗಿ ನೀಡಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾಗಿರುವವರು ಇವರು:


• ಶಿಕ್ಷಣ–‌ ಬೆಂಗಳೂರಿನ ರಾಜೇಶ್‌ ಎ. ರಾವ್‌, ರವೀಂದ್ರ ಎಸ್‌. ರಾವ್‌ ಮತ್ತು ದೀಪಾ ಎಲ್.ಬಿ. ರಾಜೀವ್. ಇವರು ಸರ್ಕಾರಿ ಶಾಲೆಗಳ 6ನೇ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳಿಗೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಗಣಿತ (STEM) ವಿಷಯಗಳನ್ನು ಹಾಗೂ ಇಂಗ್ಲಿಷ್‌ ಸಂವಹನವನ್ನು ನಿತ್ಯದ ತರಗತಿಗಳ ಮೂಲಕ, ಪ್ರಯೋಗಾಲಯದ ಕಿಟ್‌ಗಳ ಮೂಲಕ, ವಿದ್ಯಾರ್ಥಿವೇತನದ ಮೂಲಕ ಕಲಿಸಲು ʼಕನೆಕ್ಟಿಂಗ್‌ ದಿ ಡಾಟ್ಸ್ʼ ಎಂಬ ಸಂವಾದಾತ್ಮಕ ಕಲಿಕಾ ಕಾರ್ಯಕ್ರಮವೊಂದನ್ನು ರೂಪಿಸಿದ್ದಾರೆ. ಕಲಿಕೆಯು ಪರಿಣಾಮಕಾರಿ ಆಗಬೇಕು ಎಂಬ ಉದ್ದೇಶದಿಂದ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮವನ್ನೂ ರೂಪಿಸಿದ್ದಾರೆ.



• ಆರೋಗ್ಯಸೇವೆ– ನವದೆಹಲಿಯ ಚಿತ್ತರಂಜನ್‌ ಸಿಂಗ್‌ ಮತ್ತು ರಾಬಿನ್‌ ಸಿಂಗ್. ಇವರು ʼಕ್ಲುಯಿಕ್ಸ್‌ ಸಿ012ʼ ಎಂಬ ಎ.ಐ ಆಧಾರಿತ ಹಾಗೂ ಐಒಟಿ (ಇಂಟರ್ನೆಟ್‌ ಆಫ್‌ ಥಿಂಗ್ಸ್) ಜೊತೆ ಬೆಸೆದುಕೊಂಡಿರುವ ನೀರಿನ ಗುಣಮಟ್ಟ ಪರಿಶೀಲನಾ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಜಿಪಿಎಸ್‌-ಸಂಯೋಜಿತ ಗುಣಮಟ್ಟ ವರದಿಯನ್ನು ತಕ್ಷಣವೇ ಒದಗಿಸಿಕೊಡುತ್ತದೆ. ನೀರಿನ ಮೂಲಕ ಹರಡುವ ರೋಗಗಳನ್ನು ಗುರುತಿಸಲು ಇದು 14 ಮಾನದಂಡಗಳ ಮೂಲಕ ನೀರನ್ನು 30 ನಿಮಿಷಗಳಲ್ಲಿ ಪರೀಕ್ಷಿಸುತ್ತದೆ. ಈ ಮೂಲಕ ಈ ಸಾಧನವು ವಿಶ್ವಾಸಾರ್ಹವಾದ ನೀರಿನ ಪರೀಕ್ಷಾ ವಿಧಾನವು ಜನರ ಕೈಗೆಟಕುವಂತೆ, ಎಲ್ಲರಿಗೂ ಲಭ್ಯವಾಗುವಂತೆ ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳ ಸಮುದಾಯಗಳ ಪಾಲಿಗೆ ಅದು ಸುಸ್ಥಿರವಾಗುವಂತೆ ಮಾಡಿದೆ.




• ಪರಿಸರಕ್ಕೆ ಸಂಬಂಧಿಸಿದ ಸುಸ್ಥಿರತೆ– ಪುಣೆಯ ರಾಹುಲ್‌ ಸುರೇಶ್‌ ಬಾಕರೆ ಮತ್ತು ವಿನೀತ್‌ ಮೋರೇಶ್ವರ ಫಡ್ನಿಸ್. ಇವರು ರೋಬೊಟಿಕ್‌ ತಂತ್ರಜ್ಞಾನದ ಆಧಾರದಲ್ಲಿ ಕೊಳವೆಬಾವಿ ಮರುಪೂರಣ ಮಾಡುವ ʼಬೋರ್‌ಚಾರ್ಜರ್‌ʼ ಹೆಸರಿನ ವಿಶ್ವದ ಮೊದಲ ತಂತ್ರವೊಂದವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಈಗಾಗಲೇ ಇರುವ ಕೊಳವೆ ಬಾವಿಗಳಿಗೆ ವಾರ್ಷಿಕ 4 ಲಕ್ಷದಿಂದ 80 ಲಕ್ಷದವರೆಗೆ ನೀರು ಮರುಪೂರಣ ಮಾಡಬಲ್ಲದು. ಇದರಿಂದಾಗಿ ನೀರಾವರಿಗೆ ಹೆಚ್ಚು ನೀರು ಲಭ್ಯವಾಗುತ್ತದೆ, ಕೃಷಿ ಉತ್ಪಾದನೆ ಸುಧಾರಿಸುತ್ತದೆ, ಕೃಷಿ ಆದಾಯ ಹೆಚ್ಚುತ್ತದೆ, ಕುಡಿಯುವ ಉದ್ದೇಶಕ್ಕೆ ಹೆಚ್ಚಿನ ನೀರು ಸಿಗುವಂತಾಗುತ್ತದೆ, ನೀರಿನ ಗುಣಮಟ್ಟ ಹೆಚ್ಚುತ್ತದೆ. ಈ ಮೂಲಕ ವಾಸ ಪರಿಸರವು ಇನ್ನಷ್ಟು ಸುಸ್ಥಿರವಾಗುತ್ತದೆ.


ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷ ಸಲೀಲ್‌ ಪಾರೇಖ್‌ ಅವರು “ಒಂದು ಉದ್ದೇಶದೊಂದಿಗೆ ನಡೆಸುವ ಆವಿಷ್ಕಾರಗಳಿಗೆ ಜೀವನದಲ್ಲಿ ಬದಲಾವಣೆ ತರುವ ಹಾಗೂ ಸುಸ್ಥಿರವಾದ ಭವಿಷ್ಯವನ್ನು ಕಟ್ಟುವ ಶಕ್ತಿ ಇರುತ್ತದೆ. ಈ ನಂಬಿಕೆಗೆ ಒಂದು ಸಾಕ್ಷಿಯಾಗಿ ನಿಂತಿದೆ ಆರೋಹಣ ಸೋಷಿಯಲ್‌ ಇನ್ನೊವೇಷನ್‌ ಪ್ರಶಸ್ತಿ. ಇದು ಜಾಣ್ಮೆ, ಸಹಾನುಭೂತಿಯೊಂದಿಗೆ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವ ವ್ಯಕ್ತಿಗಳನ್ನು ಗುರುತಿಸುವ ಕೆಲಸ ಮಾಡುತ್ತದೆ. ಶಿಕ್ಷಣ, ಆರೋಗ್ಯಸೇವೆ ಮತ್ತು ಪರಿಸರಕ್ಕೆ ಸಂಬಂಧಿಸಿದ ಸುಸ್ಥಿರತೆಯ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾದ ಕೆಲಸಗಳನ್ನು ಗುರುತಿಸಿ ಇನ್ಫೊಸಿಸ್‌ ಪ್ರತಿಷ್ಠಾನವು ಇಂತಹ ಆವಿಷ್ಕಾರಗಳ ಪರಿಣಾಮವನ್ನು ಬಲಪಡಿಸುವ ಉದ್ದೇಶ ಹೊಂದಿದೆ. ಈ ಮೂಲಕ ಸಮಾನ ಹಾಗೂ ಗಟ್ಟಿಯಾದ ಭವಿಷ್ಯವನ್ನು ನಿರ್ಮಿಸಲು ಬದ್ಧತೆ ಇರುವ, ಬದಲಾವಣೆ ತರುವ ಒಂದು ತಲೆಮಾರಿಗೆ ಸ್ಫೂರ್ತಿ ತುಂಬುವ ಉದ್ದೇಶವಿದೆ” ಎಂದು ಹೇಳಿದ್ದಾರೆ.


ಈ ಮೂರು ವರ್ಗಗಳಲ್ಲಿ ಪ್ರಶಸ್ತಿಗೆ ಆಯ್ಕೆಯಾದವರಷ್ಟೇ ಅಲ್ಲದೆ, ತೀರ್ಪುಗಾರರು ಐದು ಸಾಮಾಜಿಕ ಆವಿಷ್ಕಾರಗಳನ್ನು ಗುರುತಿಸಿದ್ದಾರೆ. ಅವುಗಳಿಗೆ ಕಾರಣರಾದವರಿಗೆ ತಲಾ ರೂ 10 ಲಕ್ಷದ ಬಹುಮಾನ ಘೋಷಿಸಿದ್ದಾರೆ. ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಆಯ್ಕೆಯಾದ ಆವಿಷ್ಕಾರಗಳು:


• ಸುಕೂನ್‌- ಇದೊಂದು ಬಗೆಯ ಚೂಟಿ ಜಾಕೆಟ್‌. ಇದು ಡಿಜಿಟಲ್‌ ಹೈಬ್ರಿಡ್‌-ಐಡಿಇಸಿ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತದೆ. ಇದು ಬಳಕೆದಾರರಿಗೆ ತೀವ್ರ ಬಿಸಿಯ ವಾತಾವರಣದಲ್ಲಿ ತಂಪನೆಯ ಅನುಭವ ನೀಡಿ, ಅವರ ಆರೋಗ್ಯವನ್ನು ಉತ್ತಮವಾಗಿ ಇರಿಸಿ, ಅವರ ಉತ್ಪಾದಕತೆಯು ಹೆಚ್ಚಿನ ಮಟ್ಟದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಇದನ್ನು ಪುಣೆಯ ಫಲ್ಗುಣ ಮುಕೇಶ್‌ ವ್ಯಾಸ್‌ ಅಭಿವೃದ್ಧಿಪಡಿಸಿದ್ದಾರೆ.



• ಸಮಗ್ರ ವನ್ಯಜೀವಿ ನಿರ್ವಹಣಾ ವೇದಿಕೆ– ಇದು ವೆಬ್‌ ಆಧಾರಿತವಾದ ವೇದಿಕೆ. ಇದು ವನ್ಯಜೀವಿಗಳ ರಕ್ಷಣೆ, ಆರೈಕೆ, ಪುನರ್ವಸತಿ ಮತ್ತು ಅವುಗಳನ್ನು ಅರಣ್ಯಕ್ಕೆ ಬಿಟ್ಟಿದ್ದುದರ ಬಗ್ಗೆ ದತ್ತಾಂಶವನ್ನು ನಿರ್ವಹಿಸುತ್ತದೆ. ಇದು ʼಒನ್‌ ಹೆಲ್ತ್‌ʼ ಹೆಸರಿನ ಚೌಕಟ್ಟೊಂದನ್ನು ಬಳಸಿ, ಮನುಷ್ಯನ, ವನ್ಯಜೀವಿಗಳ ಮತ್ತು ಪರಿಸರದ ಆರೋಗ್ಯವನ್ನು ಪರಸ್ಪರ ಬೆಸೆಯುವ ಕೆಲಸಮಾಡುತ್ತದೆ. ಈ ಮೂಲಕ ಸಮಸ್ಯೆಗಳನ್ನು ಅಂದಾಜು ಮಾಡಲು, ನಿಗಾ ಇರಿಸಲು ನೆರವಾಗುತ್ತದೆ. ಇದನ್ನು ಪುಣೆಯ ನೇಹಾ ಪಂಚಮಿಯಾ ಮತ್ತು ಪುಣೆಯ ನಚಿಕೇತ್‌ ಉತ್ಪತ್‌ ಅಭಿವೃದ್ಧಿಪಡಿಸಿದ್ದಾರೆ.


• ಪ್ರಾಜೆಕ್ಟ್‌ ಬಿಂದು – ಅಂಗವೈಕಲ್ಯದ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಗಳಿಗಾಗಿ ಇದು ಎಲ್ಲಿಂದಲಾದರೂ ಕಾರ್ಯ ನಿರ್ವಹಿಸುವ, ತಂತ್ರಜ್ಞಾನ ಆಧಾರಿತ ಕೆಲಸದ ವ್ಯವಸ್ಥೆಯೊಂದನ್ನು ಸೃಷ್ಟಿಸುವ ಉಪಕ್ರಮ. ಇಂತಹ ವ್ಯಕ್ತಿಗಳು ಇದನ್ನು ಬಳಸಿ ಹಿರಿಯರ ಆರೈಕೆ ಸೇವೆಗಳನ್ನು, ದತ್ತಾಂಶ ನಿರ್ವಹಣೆ ಮತ್ತು ಸಮನ್ವಯದ ಕೆಲಸವನ್ನು ಮಾಡಿಕೊಡುತ್ತಾರೆ. ಇದರಿಂದಾಗಿ ಅಂಗವಿಕಲ ವ್ಯಕ್ತಿಗಳಿಗೆ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಆರ್ಥಿಕ ಒಳಗೊಳ್ಳುವಿಕೆಯ ವ್ಯಾಪ್ತಿಗೆ ಬರಲು ಸಾಧ್ಯವಾಗುತ್ತದೆ. ಇದನ್ನು ಪುಣೆಯ ಸೌಮ್ಯಾ ಎಸ್.‌ ಮತ್ತು ಪಲ್ಲವಿ ಕುಲಕರ್ಣಿ ಅಭಿವೃದ್ಧಿಪಡಿಸಿದ್ದಾರೆ.



• ಚರ್ವಿಚೆಕ್‌ - ಇದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್‌ಸಿಒ) ಅನುಮೋದನೆ ಪಡೆದಿರುವ, ಎಚ್‌ಪಿವಿ (ಹ್ಯೂಮನ್‌ ಪ್ಯಾಪಿಲೋಮಾವೈರಸ್‌) ತಪಾಸಣೆಯನ್ನು ಮನೆಯಲ್ಲಿಯೇ ಮಾಡಿಕೊಳ್ಳಲು ನೆರವಾಗುವ ಸಾಧನ. ಇದನ್ನು ವಡೋದರಾದ ಅನಿರ್ಬಾನ್‌ ಪಲಿತ್‌ ಮತ್ತು ಡಾ. ಸಾಯಂತಾನಿ ಪ್ರಮಾಣಿಕ್‌ ಮತ್ತು ಪಲ್ನಾ ಪಟೇಲ್ ಅವರು ಅಭಿವೃದ್ಧಿಪಡಿಸಿದ್ದಾರೆ.


• ಹೆಲಿಕ್ಸ್‌ ಮತ್ತು ಐರಿಸ್‌ - ದೃಷ್ಟಿದೋಷ ಇರುವ ವಿದ್ಯಾರ್ಥಿಗಳಿಗೆ ಸಮಗ್ರವಾದ ಕಲಿಕಾ ವ್ಯವಸ್ಥೆ ಇದು. ದೃಷ್ಟಿದೋಷ ಇರುವವರಿಗೆ ಚಿತ್ರದ ರೇಖೆಗಳನ್ನು ಗುರುತಿಸಲು ಸಹಾಯ ಮಾಡುವ ಸೌಲಭ್ಯ, ಬ್ರೈಲ್‌ ಲಿಪಿಯ ನೆರವು ಇರುತ್ತದೆ. ವಿಶೇಷ ಮಕ್ಕಳ ಶಾಲೆಗಳಲ್ಲಿನ ಶಿಕ್ಷಕರಿಗೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಗಣಿತವನ್ನು ಕಲಿಸಲು ಅಗತ್ಯವಿರುವ ಮಾಹಿತಿಯು ಕೂಡ ಇದರಲ್ಲಿದೆ. ಇದನ್ನು ಬೆಂಗಳೂರಿನ ನಾಗರಾಜನ್‌ ರಾಜಗೋಪಾಲ್‌, ವಿದ್ಯಾ ವೈ ಮತ್ತು ಸುಪ್ರಿಯಾ ಡೇ ಅಭಿವೃದ್ಧಿಪಡಿಸಿದ್ದಾರೆ.



ಇನ್ಫೊಸಿಸ್‌ ಪ್ರತಿಷ್ಠಾನದ ಟ್ರಸ್ಟಿಯಾಗಿರುವ ಸುಮೀತ್‌ ವಿರ್ಮಾನಿ ಅವರು “ಸಾಮಾನ್ಯ ಜನರು ಅಸಾಮಾನ್ಯವಾದುದನ್ನು ಮಾಡಬಲ್ಲರು ಎಂಬ ನಂಬಿಕೆಯು ಆರೋಹಣ ಸೋಷಿಯಲ್‌ ಇನ್ನೊವೇಷನ್‌ ಪ್ರಶಸ್ತಿಯ ಪರಿಕಲ್ಪನೆಯ ಹಿಂದಿದೆ. ಈ ವರ್ಷದ ಪ್ರಶಸ್ತಿಗೆ ಆಯ್ಕೆ ಆಗಿರುವವರ ಬದ್ಧತೆ ಮತ್ತು ಅವರ ಕಲ್ಪನೆಗಳು ಸಹಾನುಭೂತಿಯ ಜೊತೆ ಆವಿಷ್ಕಾರವು ಸೇರಿಕೊಂಡಾಗ ಏನು ಸಾಧ್ಯ ಎಂಬುದನ್ನು ಹೇಳುತ್ತಿವೆ. ಸುಸ್ಥಿರವಾದ, ಸಮಾಜವನ್ನು ಮೊದಲ ಸಾಲಿನಲ್ಲಿ ನಿಲ್ಲಿಸುವ ಉಪಕ್ರಮಗಳನ್ನು ಕಂಡು ನಮಗೆ ಸ್ಫೂರ್ತಿಯಾಗಿದೆ. ಇವರ ಕೆಲಸಗಳು ದೇಶದಾದ್ಯಂತ ಒಳ್ಳೆಯ ಬದಲಾವಣೆಗೆ ಕಾರಣವಾಗುತ್ತವೆ ಎಂದು ನಾವು ಭಾವಿಸಿದ್ದೇವೆ” ಎಂದು ಹೇಳಿದ್ದಾರೆ.


ಆರೋಹಣ ಸೋಷಿಯಲ್‌ ಇನ್ನೊವೇಷನ್‌ ಪ್ರಶಸ್ತಿಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಮತ್ತು ಈ ವರ್ಷದ ಪ್ರಶಸ್ತಿಗೆ ಆಯ್ಕೆಯಾದವರ ಬಗ್ಗೆ ಇನ್ನಷ್ಟು ಮಾಹಿತಿಗೆ ಇಲ್ಲಿಗೆ ಭೇಟಿ ನೀಡಿ: www.infosys.com/aarohan



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top