ಸಾಂತ್ವನದ ಸ್ರೋತ
ಭಗವದ್ಗೀತೆಯನ್ನು ಹಿಂದಿನವರು ಪ್ರಮುಖವಾಗಿ ಪರಮಾರ್ಥಗ್ರಂಥವಾಗಿ ಕಂಡಿದ್ದರು. ಆ ಯುಗದಲ್ಲಿ ನೆಮ್ಮದಿಯನ್ನು ಕದಡುವ ವಿಕ್ಷೇಪಗಳು ಅಷ್ಟಾಗಿ ಇರದಿದ್ದುದೂ ಇದಕ್ಕೆ ಕಾರಣವಾಗಿದ್ದೀತು. ಆದರೆ ಶತಮಾನಗಳು ಕಳೆದಂತೆ ಗೀತಾಬೋಧನೆಯ ಹೆಚ್ಚಿನ ಆಯಾಮಗಳು ಅರಿವಿಗೆ ಬಂದವು. ಕಳೆದ ನೂರೈವತ್ತು-ಇನ್ನೂರು ವರ್ಷಗಳಲ್ಲಿ ದೀರ್ಘಕಾಲದಿಂದಿದ್ದ ನಂಬಿಕೆಗಳು ಶಿಥಿಲಗೊಂಡಿರುವುದ ರಿಂದಲೂ ಅವಶ್ಯವೆನಿಸಿರುವ ಸಾಂತ್ವನ-ಭರವಸೆಗಳ ಸೋತ್ರವಾಗಿ ಗೀತೆ ಜನರಿಗೆ ಕಂಡಿದೆ. ಇದರ ಲಭ್ಯತೆ ಗೀತೆಯಲ್ಲಿ ಹಿಂದಿನಿಂದ ಇದ್ದದ್ದೇ; ಪರಿವರ್ತನೆಯಾಗಿರುವುದು ಜನರ ಮನಃಸ್ಥಿತಿಯಲ್ಲಿ, ಅಷ್ಟೇ. ಗೀತೆಯ ಸಾಮಗ್ರ ದೃಷ್ಟಿಯೂ ದೇಶಕಾಲಾತೀತತೆಯೂ ಎಷ್ಟೋ ಹಿಂದೆಯೇ ಸಿದ್ಧಗೊಂಡಿವೆ. ಒಂದೊಂದು ಯುಗಕ್ಕೂ ಹೊಸಹೊಸ ಅರ್ಥವೈಶಿಷ್ಟ್ಯಗಳನ್ನು ಹೊಳೆಯಿಸುವುದು ಶ್ರೇಷ್ಠವಾಙ್ಮಯದ ಲಕ್ಷಣ. ಹಿಂದೆ ಮೋಕ್ಷ ಶಾಸ್ತ್ರವೆನಿಸಿದ್ದುದು ಈಗ ನಿತ್ಯ ಜೀವನಶಾಸ್ತçವಾಗಿ ಹೊಮ್ಮಿರುವುದು ಈ ಭೂಮಿಕೆಯಲ್ಲಿ.
ಧರ್ಮಸಂಸ್ಥಾಪನೆಯೇ ಗೀತಾಬೋಧೆಯ ಹೃದ್ಭಾಗವಾಗಿರುವುದರಿಂದ ಸಹಜವಾಗಿಯೇ ಲೋಕಮಾನ್ಯತಿಲಕ್, ಶ್ರೀ ಅರವಿಂದರು ಮೊದಲಾದವರನ್ನು ಗೀತೆ ವಿಶೇಷವಾಗಿ ಆಕರ್ಷಿಸಿತು. ವಿದೇಶೀ ದಬ್ಬಾಳಿಕೆಯನ್ನು ವಿರೋಧಿಸುವುದು ವ್ಯಾವಹಾರಿಕ ಅನಿವಾರ್ಯತೆಯಾಗಿರುವಂತೆ ಧಾರ್ಮಿಕ ಕರ್ತವ್ಯವೂ ಆಗಿದೆ ಎಂಬ ಜಾಗೃತಿಯನ್ನು ಜನಮಾನಸದಲ್ಲಿ ಮೂಡಿಸಲು ಗೀತೆಯು ಉಪಸ್ತಂಭಕವಾಯಿತು.
ಭಗವದ್ಗೀತೆಯ ಉಗಮವಾದದ್ದು ರಣಾಂಗಣದಲ್ಲಿ ಎಂಬುದು ಆಕಸ್ಮಿಕವಲ್ಲ. ಅದಕ್ಕೆ ಚೋದಕವಾದದ್ದು ದೈವ-ಆಸುರ ಪ್ರವೃತ್ತಿಗಳ ನಡುವಣ ಸಂಘರ್ಷ. ಈ ಸಂಘರ್ಷವಾದರೋ ಎಲ್ಲ ಕಾಲದಲ್ಲಿಯೂ ಇರುವಂಥದು. ಆದ್ದರಿಂದ ಅದರ ನಿರ್ವಹಣೆಗೆ ಬೇಕಾದ ವಿವೇಕವನ್ನು ಸದಾ ಅರಸುತ್ತಿರಬೇಕಾಗುತ್ತದೆ. ಇದಕ್ಕೆ ಸ್ಫುಟವಾದ ಪಥದರ್ಶನ ಲಭ್ಯವಿರುವುದು ಭಗವದ್ಗೀತೆಯಲ್ಲಿ. ಇದರಿಂದಾಗಿ ಅದಕ್ಕೆ ಲಭಿಸಿರುವ ವಿಶೇಷ ಆದರಣೀಯತೆ.
ಗೀತೆಯ ಸಮಗ್ರ ದೃಷ್ಟಿ
ಈಚೆಗೆ ವ್ಯಕ್ತಿತ್ವವಿಕಾಸ ಎಂಬ ಹೆಸರಿನಲ್ಲಿ ದೊಡ್ಡ ಉದ್ಯೋಗ ಪಡೆದುಕೊಳ್ಳುವುದು ಹೇಗೆ, ಬಡ್ತಿ ಪಡೆಯುವುದು ಹೇಗೆ ಇಂಥವನ್ನೆಲ್ಲ ಹೇಳಿಕೊಡುತ್ತಿದ್ದಾರೆ. ಅದು ತಪ್ಪೇನಿಲ್ಲ, ಆದರೆ ಸಮಗ್ರವಲ್ಲ. ನಿಜವಾದ ವ್ಯಕ್ತಿತ್ವ ವಿಕಾಸವೆಂದರೆ ದೈಹಿಕ, ಮಾನಸಿಕ, ಬೌದ್ಧಿಕ-ಹೀಗೆ ಸರ್ವಾಂಗೀಣ ಬೆಳವಣಿಗೆ. ಅದಕ್ಕೆ ಗೀತೆಯು ಮಾರ್ಗದರ್ಶನ ಮಾಡುತ್ತದೆ.
ಗೀತೆಯಲ್ಲಿ, ಸ್ವರ್ಗ-ನರಕ, ಜನ್ಮಾಂತರ, ಸ್ವಧರ್ಮ ಆಚರಣೆಯ ಶ್ರೇಷ್ಠತೆ, ಜ್ಞಾನ-ಕರ್ಮ ಸಂಬಂಧ, ಈಶ್ವರ ಸಾಕ್ಷಾತ್ಕಾರ ವಿಧಾನ, ಯೋಗಿಯ ಲೋಕ ಹಿತದೃಷ್ಟಿ, ಉಪಾಸನೆ ಅಥವಾ ಸಾಧನೆಯ ಬೇರೆ ಬೇರೆ ರೂಪಗಳು ಮೊದಲಾದ ಅಂಶಗಳಂತೂ ಇದ್ದೇ ಇವೆ. ಆದರೆ ನಿತ್ಯಜೀವನದಲ್ಲಿ ದಕ್ಷತೆಗೆ ಅವಶ್ಯಕವಾದ ಆಹಾರ-ವಿಹಾರ ನಿಯಮಗಳು ಜಗತ್ತಿನೊಡನೆ ಹೇಗೆ ವರ್ತಿಸಬೇಕೆಂಬ ನಯ-ಇಂಥ ಹತ್ತಾರು ಸಂಗತಿಗಳನ್ನೂ ನೇರವಾಗಿಯೇ ಗೀತೆಯು ಬೋಧಿಸಿದೆ. ಭೌತಿಕ ಉನ್ನತಿಯನ್ನು ಭಗವದ್ಗೀತೆ ತಿರಸ್ಕರಿಸಿಲ್ಲ. ಪ್ರತಿಯಾಗಿ ಭೌತಿಕ ಜೀವನವನ್ನು ಅಲಕ್ಷ್ಯ ಮಾಡುವುದನ್ನು ಖಂಡಿಸಿದೆ. ಗೀತೆ ಹೇಳಿರುವುದು ಎಲ್ಲ ಪ್ರಗತಿಯೂ ಧರ್ಮದ ಚೌಕಟ್ಟಿನಲ್ಲಿ ನಡೆಯಬೇಕು ಎಂದು. ಪಾಶ್ಚಾತ್ಯರಲ್ಲಿ ಭೌತಪ್ರಗತಿಯೂ ಧಾರ್ಮಿಕ ಚಿಂತನೆಯೂ ಪ್ರತ್ಯೇಕವಾಗಿ ಇದ್ದವು. ಆದ್ದರಿಂದ ಸಂಘರ್ಷ ತಲೆದೋರಿತು. ಭಗವದ್ಗೀತೆಯು ಬಾಹ್ಯಜೀವನ, ಅಂತರಂಗಜೀವನ ಎರಡನ್ನೂ ಸಮನ್ವಯ ಮಾಡಿದೆ. ಹೀಗೆ ಗೊಂದಲ ಇಲ್ಲ. ಜೀವನವಷ್ಟೂ ದೇವರ ಉಪಾಸನೆ ಎಂದುಕೊಂಡಾಗ ಜೀವನ ಹೆಚ್ಚು ಉದಾತ್ತವಾಗುತ್ತದೆ. ಹೆಚ್ಚು ದಕ್ಷವೂ ಆಗುತ್ತದೆ. ಹೀಗೆ ಭಗವದ್ಗೀತೆಯಿಂದ ನಮಗೆ ಸಿಗುವುದು ವೈರಾಗ್ಯದ ಬೋಧನೆಯಷ್ಟೆ ಅಲ್ಲ, ಸಾರ್ಥಕ ಜೀವನದ ರೀತಿಯ ಬೋಧನೆ, ಇದರಿಂದಾಗಿಯೇ ಗೀತೆ ಎಲ್ಲ ಚಿಂತನಧಾರೆಗಳವರಿಗೂ ಪ್ರಿಯವಾಗಿರುವುದು.
ಹಲವು ಸಾವಿರ ವರ್ಷಗಳ ಹಿಂದೆ ಶ್ರೀಕೃಷ್ಣನು ನೀಡಿದ ಬೋಧನೆ ಇವತ್ತಿಗೂ ಹೇಗೆ ಲಕ್ಷಾಂತರ ಜನರಿಗೆ ಸಾಂತ್ವನ ಕೊಡುತ್ತಿದೆ ಎಂಬುದಕ್ಕೆ ಮತ್ತೊಂದು ಈಚಿನ ಉದಾಹರಣೆ ನೋಡೋಣ.
ಈಗ್ಗೆ ಕೆಲವು ಕಾಲದ ಹಿಂದೆ ಬೆಂಗಳೂರಿನ ಒಂದು ಬಡಾವಣೆಯ ನಾರಾಯಣಮೂರ್ತಿ ಎಂಬ ದಂಪತಿಗಳ ಭೇಟಿ ಆಯಿತು. ಅವರು ಏನೇನೋ ಜಟಿಲ ಸಮಸ್ಯೆಗಳಲ್ಲಿ ಸಿಕ್ಕಿಕೊಂಡು ಹನ್ನೆರಡು-ಹದಿಮೂರು ವರ್ಷ ನರಳಿದ್ದರು. ಹತಾಶರಾಗಿ ಸಮಾಧಾನಕ್ಕಾಗಿ ಪ್ರತಿದಿನ ಶ್ರದ್ಧೆಯಿಂದ ಗೀತಾ ಪಾರಯಣ ಮಾಡತೊಡಗಿದರು. ಕಡೆಗೆ ಪವಾಡವೆಂಬಂತೆ ಅವರ ಸಮಸ್ಯೆ ಪರಿಹಾರವಾಗಿ ಶಾಂತಿ ದೊರೆಯಿತು. ಅವರಿಗೆ ಭಗವದ್ಗೀತೆಯಲ್ಲಿ ಶ್ರದ್ಧೆ ಇನ್ನೂ ಹೆಚ್ಚಾಯಿತು. ಅವರು ಅರ್ಥಸಹಿತ ಗೀತೆಯ ಸಾವಿರಾರು ಪ್ರತಿಗಳನ್ನು ಮುದ್ರಣ ಮಾಡಿ ನೂರಾರು ಜನ ಆಸಕ್ತರಿಗೆಲ್ಲ ಉಚಿತವಾಗಿ ಹಂಚುತ್ತಿದ್ದಾರೆ. ಇಂಥ ಅನುಭವಗಳು ಅನೇಕ ಇವೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







