2025 ರ ಜುಲೈ 26 ರಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕನ್ನಡ ನಾಡಿನ ಖ್ಯಾತ ಎಸ್. ಎಲ್. ಭೈರಪ್ಪನವರ ಜೊತೆ ಹೆಗ್ಗಡೆಯವರು.
ಧರ್ಮಸ್ಥಳ: ಖ್ಯಾತ ಕಾದಂಬರಿಕಾರ ಮತ್ತು ಲೇಖಕ ಎಸ್.ಎಲ್. ಭೈರಪ್ಪನವರ ನಿಧನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಅವರು, ಭೈರಪ್ಪನವರೊಂದಿಗಿನ ಒಡನಾಟದ ನೆನಪುಗಳನ್ನು ಸ್ಮರಿಸಿಕೊಂಡಿದ್ದಾರೆ.
2025 ರ ಜುಲೈ 26 ರಂದು ಶನಿವಾರ ಬೆಂಗಳೂರಿನಲ್ಲಿ ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ನೂರನೆ ಕೃತಿ ಬಿಡುಗಡೆ ಸಮಾರಂಭದಲ್ಲಿ ನಾವು ಜೊತೆಯಾಗಿ ಭಾಗವಹಿಸಿದ್ದು ಆತ್ಮೀಯವಾಗಿ ಮಾತನಾಡಿದ್ದೆವು. ಅದು ನಮ್ಮ ಕೊನೆಯ ಭೇಟಿಯಾಗಿತ್ತು. ನೇರ ನಡೆ-ನುಡಿಯ ಸರಳ ವ್ಯಕ್ತಿತ್ವವನ್ನು ಹೊಂದಿದ್ದ ಅವರು ಕನ್ನಡ ನಾಡು-ನುಡಿ, ಸಂಸ್ಕೃತಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಅನೇಕ ಕಾದಂಬರಿಗಳು ಹಾಗೂ ಸಾಹಿತ್ಯ ಕೃತಿಗಳು ಹಲವು ಬಾರಿ ಮರು ಮುದ್ರಣಗೊಂಡಿರುವುದಲ್ಲದೆ ಇತರ ಭಾಷೆಗಳಿಗೂ ಭಾಷಾಂತರಗೊಂಡಿವೆ. ಅವರ ಹೆಚ್ಚಿನ ಕೃತಿಗಳನ್ನು ನಾನು ಆಸಕ್ತಿಯಿಂದ ಓದಿದ್ದೇನೆ ಎಂದು ಹೆಗ್ಗಡೆಯವರು ನೆನಪಿಸಿಕೊಂಡಿದ್ದಾರೆ.
1981 ರ ನವೆಂಬರ್ 26 ರಂದು ಗುರುವಾರ ಲಕ್ಷದೀಪೋತ್ಸವ ಸಂದರ್ಭದಲ್ಲಿ ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಅವರು ಅಧ್ಯಕ್ಷತೆ ವಹಿಸಿದ್ದರು. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಎಂದು ಹೆಗ್ಗಡೆಯವರು ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


