ಕರುಣೆ- ಆಯುಧಾ ಎರಡೂ ದೇವಿಯಲ್ಲಿದೆ: ರಾಮಚಂದ್ರಾಪುರ ಶ್ರೀ

Upayuktha
0

ಪುರಾಣ ಕಥೆಗಳು ಕಾಗಕ್ಕಾ ಗುಬ್ಬಕ್ಕ ಕಥೆಗಳಲ್ಲ

ಸಂಸದ ಕಾಗೇರಿ ಸೇರಿ ಹಲವಾರು ಗಣ್ಯರು ಭಾಗಿ




ಸಾಗರ: ದೇವಿಯಲ್ಲಿ ಸಹಜಾನಂದದ ಪ್ರತೀಕವಾದ ಕರುಣೆಯ ಮಂದಹಾಸವೂ ಇದೆ. ವಿವಿಧ ರೀತಿಯ ಆಯುಧಗಳನ್ನು ದೇವಿ ಧರಿಸಿದ್ದಾಳೆ. ನಾವು ಭಂಡಾಸುರರಾದರೆ ದೇವಿ ಆಯುಧ ಪ್ರಯೋಗ ಮಾಡುತ್ತಾಳೆ. ನಾವು ಪುಣ್ಯದ ದಾರಿಯಲ್ಲಿ ಸಾಗಿದರೆ ದೇವಿಯ ಕರುಣೆಗೆ ಪಾತ್ರರಾಗುತ್ತೇವೆ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.



ಸಾಗರದ ಶ್ರೀ ರಾಘವೇಶ್ವರ ಭವನದಲ್ಲಿ ನಡೆಯುತ್ತಿರುವ 'ನವರಾತ್ರ ನಮಸ್ಯಾ'ದ ಏಳನೇ ದಿನ ಲಲಿತೋಪಾಖ್ಯಾನ ಪ್ರವಚನ ಮಾಲಿಕೆಯಲ್ಲಿ ಆಶೀರ್ವಚನ ನೀಡಿದರು. ನಮ್ಮ ನಡೆ ನುಡಿಗಳು ನಾವು ದೇವಿಯ ಕರುಣಾಪೂರಿತ ಅನುಗ್ರಹಕ್ಕೆ ನಾವು ಪಾತ್ರರೋ ಅಥವಾ ದೇವಿಯ ಆಯುಧಾಘಾತಕ್ಕೆ ನಾವು ಅರ್ಹರೋ ಎಂದು ನಿರ್ಧರಿಸುತ್ತದೆ ಎಂದು ಮಾರ್ಮಿಕವಾಗಿ ಹೇಳಿದ ಶ್ರೀಗಳು, ಇಂದಿನ ವಿಜ್ಞಾನವನ್ನು ಓದಿದವರು ನಮ್ಮ ಪುರಾಣ ಕಥೆಗಳನ್ನು ಕಾಗಕ್ಕಾ ಗುಬ್ಬಕ್ಕನ ಕಥೆ ಎಂದು ಭಾವಿಸಬಹುದು. ಆದರೆ ನಮ್ಮ ಋಷಿ ಮುನಿಗಳು ಜ್ಞಾನ ದೃಷ್ಟಿಯಲ್ಲಿ ಅವುಗಳನ್ನು ಕಂಡುಕೊಂಡಿದ್ದಾರೆ. ನಾವು ಆ ಜ್ಞಾನ ದೃಷ್ಟಿಯಲ್ಲಿ ನಮ್ಮ ಪುರಾಣಾದಿಗಳನ್ನು ಗಮನಿಸಿದಾಗ ಅವುಗಳ ಒಳಮರ್ಮದ ಅರಿವಾಗುತ್ತದೆ ಎಂದರು.



ಪ್ರಕೃತಿ ಒಳಿತು ಹಾಗೂ ಕೆಡುಕು ಎರಡರ ಸೂಚನೆಯನ್ನು ನೀಡುತ್ತದೆ. ಗ್ರಹ- ನಕ್ಷತ್ರಗಳ ಮೂಲಕ, ನಮ್ಮ ದೇಹದ ಮೂಲಕ ಮತ್ತು ಶಕುನಗಳ ಮೂಲಕ ಮೂರು ರೀತಿಯಲ್ಲಿ ಪ್ರಕೃತಿ ಮುಂದಿನ ಸೂಚನೆಯನ್ನು ನೀಡುತ್ತದೆ. ಅದನ್ನು ಅರಿತಾಗ ನಾವು ಮುಂದಿನ ದಿನಗಳನ್ನು ಇಂದೇ ಕಾಣಬಹುದು ಎಂದು ಅಭಿಪ್ರಾಯಪಟ್ಟರು.



ಲಲಿತಾ ದೇವಿ ಹಾಗೂ ಭಂಡಾಸುರನ ಯುದ್ಧದ ಸನ್ನಿವೇಶಗಳ ಬಗ್ಗೆ ವಿವರಿಸಿದ ಶ್ರೀಗಳು, ಅಂದಿನ ಯುದ್ಧ ತಂತ್ರಗಳು ಹಾಗೂ ಯುದ್ಧೋಪಕರಣಗಳು ವೈರಿಗೂ ಕೂಡ ಮುಕ್ತಿಗೆ ದಾರಿ ತೋರಿಸುವಂತಿದ್ದವು. ಆದರೆ ಇಂದಿನ ಯುದ್ಧಾಯುಧಗಳು ಸಮೂಹ ನಾಶಕವಾಗಿದ್ದು, ಜೀವ ಸಂಕುಲಕ್ಕೆ ಮಾರಕವಾಗಿವೆ ಎಂದು ವಿವರಿಸಿದರು.


ಉತ್ತರ ಕನ್ನಡದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿಮುಲ್ ಅಧ್ಯಕ್ಷ ವಿದ್ಯಾಧರ ಗುರುಶಕ್ತಿ, ಸಾಗರ ನಗರ ಸಭಾ ಅಧ್ಯಕ್ಷೆ ಮೈತ್ರಿ ಪಾಟೀಲ್, ಮಾಜಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಮಠದ ಶಾಸನತಂತ್ರದ ಅಧ್ಯಕ್ಷರಾದ ಮೋಹನ ಭಾಸ್ಕರ ಹೆಗಡೆ, ಕಾರ್ಯದರ್ಶಿ ಕೃಷ್ಣಪ್ರಸಾದ್ ಎಡಪ್ಪಾಡಿ, ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ ಮುಂತಾದವರು ಉಪಸ್ಥಿತರಿದ್ದರು ಶ್ರೀಗಳಿಗೆ ಫಲಸಮರ್ಪಿಸಿದರು. 



ಇದಕ್ಕೂ ಮುನ್ನ ನವರಾತ್ರ ನಮಸ್ಯಾ ಸಮಿತಿಯಿಂದ ಕೊಡ ಮಾಡಿದ ಸಮಾಜ ಗೌರವವನ್ನು ಜೈನ ಸಮಾಜ, ವಿಷ್ಣು ಸಮಾಜ, ಜೈನ ದಿಗಂಬರ ಸಮಾಜ, ಆರ್ಯ ವೈಶ್ಯ ಸಮಾಜ, ಕುರುಬ ಸಮಾಜ ಹಾಗೂ ಮಾರಿಕಾಂಬಾ ಸಮಿತಿಯವರಿಗೆ ಕೊಡಲಾಯಿತು. ಆಯಾ ಸಮಾಜದ ಪರವಾಗಿ ಅಧ್ಯಕ್ಷರಾದ ಚಗನ್ ಜಿ. ಲಾಲ್, ಭಿಮ್ ಸಿಂಗ್, ಹೊಯ್ಸಳ, ಸೂರ್ಯನಾರಾಯಣ, ಹನುಮಂತಪ್ಪ ಹಾಗೂ ನಾಗೇಂದ್ರ ಗೌರವ ಸ್ವೀಕರಿಸಿದರು. 

ನವರಾತ್ರ ನಮಸ್ಯಾ ಸಮಿತಿಯ ಪ್ರಧಾನ ಸಂಚಾಲಕ ಮುರಳಿ ಗೀಜಗಾರು, ಅಧ್ಯಕ್ಷ ಗುರುಮೂರ್ತಿ ಹೆಗಡೆ ಕಲ್ಸೆಮನೆ, ಹವ್ಯಕ ಮಹಾಮಂಡಲದ ಮುಷ್ಟಿ ಭಿಕ್ಷಾ ಪ್ರಧಾನೆ ರುಕ್ಮಾವತಿ ರಾಮಚಂದ್ರ, ರಾಮಚಂದ್ರಾಪುರ ಮಂಡಲದ ಉಪಾಧ್ಯಕ್ಷ ರಮೇಶ್ ಕಾನುಗೋಡು, ನವರಾತ್ರ ನಮಸ್ಯಾದ ಸುವಸ್ತು ಸಂಚಾಲಕ ಪ್ರಕಾಶ್ ಭಾಗಿ, ಪುರಪ್ರವೇಶ ಸಂಚಾಲಕ ಗಣೇಶ್ ಪ್ರಸಾದ್, ಪ್ರಧಾನ ಮಠದ ಪುನರ್ನಿರ್ಮಾಣ ಸಮಿತಿಯ ಗಣಪತಿ ಜಟ್ಟಿಮನೆ,  ಸಮಾಜದ ಪ್ರಮುಖರಾದ ಯು.ಹೆಚ್. ರಾಮಪ್ಪ, ಮಹಾಮಂಡಲದ ಪ್ರಧಾನ ರಮೇಶ್ ಹೆಗಡೆ ಗುಂಡೂಮನೆ, ಶ್ರೀನಾಥ ಸಾರಂಗ, ಗೌತಮ ಮತ್ತಿತರರು ಇದ್ದರು.


ಇದಕ್ಕೂ ಮುನ್ನ ಬೆಳಗ್ಗೆ ಚಂಡಮುಂಡಹಾ ಉಪಾಸನೆ, ಶ್ರೀಸೂಕ್ತ ಹವನ, ಚಂಡಿಕಾ ಹವನ, ಶ್ರೀಪೂಜೆ, ಕುಂಕುಮಾರ್ಚನೆ, ಉಡಿ ಹಾಗೂ ಸ್ತೋತ್ರ ಸಮರ್ಪಣೆ, ಸುವರ್ಣ ಪಾದುಕಾ ಪೂಜೆ, ಭಜನೆ, ಲಲಿತಾ ಅಷ್ಟೋತ್ತರ ನಡೆಯಿತು. ಸಂಜೆ ದುರ್ಗಾದೀಪ ನಮಸ್ಕಾರ, ರಾಜರಾಜೇಶ್ವರಿ ಪೂಜೆ ಹಾಗೂ ಚಂಡಿಕಾ ಪಾರಾಯಣ ನೆರವೇರಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top