ಸೆಪ್ಟೆಂಬರ್ 30- ಮಂಗಳವಾರ ಚಂಡಿಕಾಹೋಮ- ಅನ್ನ ಸಂತರ್ಪಣೆ- ಯಕ್ಷಗಾನ
ಗೋಕರ್ಣ: ಭಟ್ಕಳ ಸಮೀಪದ ಬೆಳಕೆಯ ಶ್ರೀ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವವು ದಿನಾಂಕ 22.09.2025 ರಿಂದ 02.10.2025 ವರೆಗೆ ನಡೆಯುತ್ತಿದ್ದು, ಶ್ರೀ ಅಖಿಲ ಹವ್ಯಕ ಮಹಾಸಭೆಯ ವತಿಯಿಂದ ಅತ್ಯಂತ ವೈಭವದಿಂದ, ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಉತ್ಸವವು ನಡೆಯುತ್ತಿದೆ.
ವರಪ್ರದೆಯಾದ ಶ್ರೀ ದುರ್ಗಾಪರಮೇಶ್ವರೀ ದೇವಿಯ ಶಿಲಾಮಯ ದೇಗುಲದ ಪ್ರಾಂಗಣದಲ್ಲಿ ಕ್ಷೇತ್ರದ ಸಾನ್ನಿಧ್ಯವೃದ್ಧಿ ಹಾಗೂ ಲೋಕಕಲ್ಯಾಣದ ಸಂಕಲ್ಪದೊಂದಿಗೆ ನವರಾತ್ರಿಯ ವಿಶೇಷ ಕಾರ್ಯಕ್ರಮವನ್ನು ಹವ್ಯಕ ಮಹಾಸಭೆಯು ಆಯೋಜಿಸಿದ್ದು, ಪ್ರತಿದಿನ ಪ್ರಾತಃಕಾಲ ವಿಶೇಷ ಅಭಿಷೇಕ, ಪುಷ್ಪಾಲಂಕಾರ, ದುರ್ಗಾಸಪ್ತಶತಿ ಪಾರಾಯಣ, ಶ್ರೀದುರ್ಗಾಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗಗಳು ನಡೆಯುತ್ತಿದ್ದು, ಸಾಯಂಕಾಲ ದುರ್ಗಾದೀಪ ನಮಸ್ಕಾರ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಸೇರಿದಂತೆ ಅನೇಕ ಧಾರ್ಮಿಕ ಕೈಂಕರ್ಯಗಳ ಮೂಲಕ ಶ್ರೀದೇವಿಯ ಆರಾಧನೆ ನಡೆಯುತ್ತಿದೆ.
ಸ್ಥಳೀಯರು ಹಾಗೂ ವಿವಿಧ ಭಾಗಗಳ ಸದ್ಭಕ್ತರು ಧಾರ್ಮಿಕ ಸೇವೆಗಳಲ್ಲಿ ಭಾಗಿಗಳಾಗುವ ಮೂಲಕ ಹಾಗೂ ಕಾರ್ಯಕ್ರಮಕ್ಕೆ ಅಗತ್ಯವಾದ ಹಲವು ವಿಧದ ಸುವಸ್ತುಗಳನ್ನು ಸಮರ್ಪಿಸುವುದರ ಮೂಲಕ ನವರಾತ್ರಿ ಉತ್ಸವದಲ್ಲಿ ಭಾಗಿಗಳಾಗುತ್ತಿದ್ದು, ಆಸ್ತಿಕ ಭಕ್ತಜನರು ಶ್ರೀದೇವಿಯ ದರ್ಶನ ಪಡೆಯಬಹುದಾಗಿದೆ.
30ರಂದು ಚಂಡಿಕಾ ಹೋಮ ಅನ್ನಸಂತರ್ಪಣೆ ಹಾಗೂ 'ಕಂಸ ವಧೆ' ಯಕ್ಷಗಾನ:
ಮಂಗಳವಾರ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಶ್ರೀ ಚಂಡಿಕಾ ಹೋಮ ನಡೆಯಲಿದ್ದು, ಆಸ್ತಿಕ ಭಕ್ತಮಹಾಜನರು ಪುಣ್ಯಕಾರ್ಯದಲ್ಲಿ ಭಾಗಿಗಳಾಗಿ ಶ್ರೀದುರ್ಗಾಪರಮೇಶ್ವರಿಯ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ. ಹಾಗೆಯೇ ಸಂಜೆ ಖ್ಯಾತ ಕಲಾವಿದರಿಂದ 'ಕಂಸ ವಧೆ' ಯಕ್ಷಗಾನ ಪ್ರಸಂಗ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳು ಸರ್ವಸಮಾಜದ ಆಸ್ತಿಕ ಬಂಧುಗಳಿಗೂ ಮುಕ್ತವಾಗಿದ್ದು, ದೇವಿಯ ಕೃಪೆಗೆ ಪಾತ್ರರಾಗಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ 9148459191.
ಸ್ಥಳದ ಹಿನ್ನೆಲೆ:
ಮಂಜುನಾಥ ಬಿಲ್ಲವ ಎಂಬುವವರು ಶ್ರೀ ಅಖಿಲ ಹವ್ಯಕ ಮಹಾಸಭೆಯ ಸಮಾಜಮುಖೀ ಕಾರ್ಯಗಳನ್ನು ಗುರುತಿಸಿ, ಶ್ರೀ ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಂತೆ, ಭಟ್ಕಳ ಸಮೀಪದ ಬೆಳಕೆ ಗ್ರಾಮದಲ್ಲಿ ಶ್ರೀದುರ್ಗಾಪರಮೇಶ್ವರಿ ದೇವಾಲಯ, ನಾಗದೇವರ ಸನ್ನಿಧಿ, ಬಯಲು ರಂಗಮಂದಿರ ಸಹಿತವಾದ ಸುಮಾರು ಒಂದು ಎಕರೆ ಜಾಗವನ್ನು ಶ್ರೀ ಅಖಿಲ ಹವ್ಯಕ ಮಹಾಸಭೆಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸೇವಾರೂಪದಲ್ಲಿ ಸಮರ್ಪಿಸಿದ್ದು, ಹವ್ಯಕ ಮಹಾಸಭೆಯಿಂದ ಶ್ರೀಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ