ಭಾವನಾತ್ಮಕ ಬುದ್ಧಿಮತ್ತೆ ಬೆಳವಣಿಗೆಯಿಂದ ಯಶಸ್ಸು ಸಾಧ್ಯ : ಅಶ್ವಿನಿ ಹೆಚ್

Upayuktha
0



ಉಜಿರೆ: ಭಾವನಾತ್ಮಕವಾಗಿ ಬಲವಾದರೆ, ಅದು ಜೀವನದ ಯಶಸ್ಸಿಗೆ ಕಾರಣವಾಗುತ್ತದೆ ಎಂದು ಉಜಿರೆ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ ಹೆಚ್. ಹೇಳಿದರು.


ಎಸ್.ಡಿ.ಎಂ. ಕಾಲೇಜಿನಲ್ಲಿ ವ್ಯವಹಾರ ಆಡಳಿತ ವಿಭಾಗ ಜು.28ರಂದು ಆಯೋಜಿಸಿದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ಶೈಕ್ಷಣಿಕ ಯಶಸ್ಸಿಗೆ ಭಾವನಾತ್ಮಕ ಬುದ್ಧಿಮತ್ತೆ’ ಕುರಿತು ಮಾತನಾಡಿದರು.


“ಭಾವನಾತ್ಮಕ ಬುದ್ಧಿಮತ್ತೆ ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ. ನಮ್ಮ ಭಾವನೆಗಳನ್ನು ಅರ್ಥೈಸಿಕೊಳ್ಳುವುದರ ಜೊತೆಗೆ ಇತರರ ಭಾವನೆಗಳನ್ನೂ ಅರ್ಥಮಾಡಿಕೊಳ್ಳುವ ಈ ಗುಣ ಹುಟ್ಟಿದಾಗಿನಿಂದ ಬರುವಂಥದ್ದಲ್ಲ; ನಾವು ಬೆಳೆಸಿಕೊಂಡು ಹೋಗುವಂತದ್ದು. ಅದನ್ನು ಸ್ಥಿರವಾಗಿ ಇಟ್ಟುಕೊಂಡು ನಮ್ಮ ಗುರಿಯ ಕಡೆ ಮುನ್ನಡೆಯುವುದು ಮುಖ್ಯ. ಭಾವನಾತ್ಮಕ ಬುದ್ಧಿಮತ್ತೆ ಸ್ಥಿರವಾಗಿದ್ದರೆ ಯಾವುದೇ ರೀತಿಯ ಮಾನಸಿಕ ಒತ್ತಡಗಳಾದರೂ ಅದರಿಂದ ಹೊರಬರುವ ದಾರಿ ಕಂಡುಕೊಳ್ಳಬಹುದು” ಎಂದು ಅವರು ತಿಳಿಸಿದರು.


ಇತ್ತೀಚೆಗೆ ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಅತಿಯಾದ ಉದ್ವೇಗದಿಂದ ತಪ್ಪು ನಿರ್ಧಾರಗಳನ್ನು ಕೈಗೊಳ್ಳುವುದು ಕಂಡು ಬರುತ್ತಿದೆ. ಅದಕ್ಕೆ ಕಾರಣ ಭಾವನಾತ್ಮಕ ಬುದ್ಧಿಮತ್ತೆಯ ಕೊರತೆ. ಅದನ್ನು ಹತೋಟಿಯಲ್ಲಿಡಲು, ಅದರಿಂದಾಗುವ ಸಮಸ್ಯೆಗಳನ್ನು ನಿವಾರಿಸಲು, ಮಾನಸಿಕ ಒತ್ತಡ ಕಡಿಮೆ ಮಾಡಲು, ಮೊದಲು ನಿಮ್ಮನ್ನು ನೀವು ಅರ್ಥಮಾಡಿಕೊಳ್ಳಿ. ನಂತರ ನಿಮ್ಮ ದಿನನಿತ್ಯದ ದಿನಚರಿಯನ್ನು ಟೈಮ್ ಟೇಬಲ್ ಮಾಡಿ, ಅದರ ಮೇಲೆ ಕೆಲಸ ಮಾಡಿ, ನಿಮ್ಮ ಶಕ್ತಿ ಹಾಗೂ ದೌರ್ಬಲ್ಯಗಳ ಬಗ್ಗೆ ಅರ್ಥ ಮಾಡಿಕೊಂಡು, ನಿಮ್ಮ ಗುರಿ ಕುರಿತು ಚಿಂತಿಸಿ. ಅನಗತ್ಯ ಆಲೋಚನೆಗಳನ್ನು ಬಿಟ್ಟು ಸ್ವಲ್ಪ ಸಮಯ ಧ್ಯಾನ ಮಾಡಿ ಎಂದು ಸಲಹೆ ನೀಡಿದರು.


ಶೈಕ್ಷಣಿಕ ನೆಲೆಯಲ್ಲಿ ಭಾವನಾತ್ಮಕ ಬುದ್ಧಿಮತ್ತೆಯು ಒತ್ತಡಗಳಿಂದ ಹೊರಬಂದು, ಗುರಿಯ ಕಡೆಗೆ ಏಕಾಗ್ರತೆ ವಹಿಸಿ, ಭಾವನೆಗಳನ್ನು ಹತೋಟಿಯಲ್ಲಿ ಹಿಡಿದು, ಸ್ನೇಹಿತರೊಂದಿಗೆ ಹಾಗೂ ಶಿಕ್ಷಕರೊಂದಿಗೆ ಉತ್ತಮ ಸಂವಹನ ವೃದ್ಧಿಸಲು ಸಹಾಯ ಮಾಡುತ್ತದೆ. ವಿಶ್ವವಿದ್ಯಾಲಯಗಳಲ್ಲಿ, ಉದ್ಯೋಗ ಸ್ಥಳಗಳಲ್ಲಿ ಭಾವನಾತ್ಮಕ ಬುದ್ಧಿಮತ್ತೆ ಬಹಳ ಮುಖ್ಯವಾಗುತ್ತದೆ. ಇತ್ತೀಚಿನ ಸಂಶೋಧನೆ ಪ್ರಕಾರ ಯಾವುದೇ ಕಂಪೆನಿಯಲ್ಲಿ ಉನ್ನತ ಹುದ್ದೆ ಗಳಿಸಬೇಕಾದರೆ ಭಾವನಾತ್ಮಕ ಬುದ್ಧಿಮತ್ತೆ ಉತ್ತಮವಾಗಿರುವುದು ಅಗತ್ಯ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಭಾವನಾತ್ಮಕ ಬುದ್ಧಿಮತ್ತೆಯನ್ನು ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.


ವ್ಯವಹಾರ ಆಡಳಿತ ವಿಭಾಗದ ಉಪನ್ಯಾಸಕರಾದ ಶರಸ್ಚಂದ್ರ ಕೆ.ಎಸ್., ಗುರುರಾಜ್ ಕೆ. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಾಣಿಜ್ಯ ನಿಕಾಯದ ಡೀನ್ ಹಾಗೂ ವ್ಯವಹಾರ ಆಡಳಿತ ವಿಭಾಗ ಮುಖ್ಯಸ್ಥೆ ಶಕುಂತಲಾ ಸ್ವಾಗತಿಸಿದರು. ವಿದ್ಯಾರ್ಥಿ ಯಶವಂತ್ ಅತಿಥಿ ಪರಿಚಯ ನೀಡಿದರು. ತೇಜಸ್ವಿನಿ ವಿ.ಎಸ್. ವಂದಿಸಿ, ವಿಷ್ಮಾ ಜಿ. ಹಾಗೂ ಏಂಜಲ್ ನಿರೂಪಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top