ಗುರುಗಳೆ,
ಏನು?
ಒಂದು ಅನುಮಾನ.
ಹೇಳು?
ಸತ್ತು ಹೋದವರು ಬದುಕಿರ್ತಾರಾ!!?
ತುಂಬಾ ಗಂಬೀರವಾದ ಪ್ರಶ್ನೆ ಇದು ಶಿಷ್ಯಾ. ಸತ್ತು ಹೋದವರು ಸತ್ತು ಹೋಗಿರ್ತಾರೆ, ಬದುಕಿರುವವರು ಬದುಕಿರ್ತಾರೆ. ಕೆಲವರು ಬದುಕಿದ್ದೂ ಸತ್ತಂತೆ ಇರ್ತಾರೆ. ಹೌದು, ಕೆಲವರು ಬದುಕಿದ್ದಾಗ ಮಾಡಿದ ಸಾಧನೆ, ತೋರಿದ ಪ್ರೀತಿ, ಮಾಡಿದ ದಾನ-ಧರ್ಮ, ಹೊಂದಿದ ಶಿಸ್ತು-ಆದರ್ಶ, ಜ್ಞಾನ-ಪಾಂಡಿತ್ಯಗಳಿಂದ ಸತ್ತು ಹೋದ ಮೇಲೂ ಬದುಕಿರ್ತಾರೆ. ದೈಹಿಕವಾಗಿ ಅವರು ಬದುಕಿಲ್ಲದೇ ಇದ್ದರೂ, ಜನರ ಮನಸ್ಸಿನಲ್ಲಿ ಬದುಕಿರುತ್ತಾರೆ. ಅವರು ಮಾಡಿದ ಸಾಧನೆಗಳು ಮಾತ್ರ ಬದುಕಿರುವುದು ಅಂತ ಅರ್ಥ.
ಇನ್ನು ಭಗವದ್ಗೀತೆಯ ಭಗವಂತನ ಮಾತನ್ನು ನೋಡಿದರೆ, "ದೇಹಿನೋಯಸ್ಮಿನ್ಯಥಾ ದೇಹೇ ಕೌಮಾರಂ ಯೌವನಂ ಜರಾ | ತಥಾ ದೇಹಾಂತರಪ್ರಾಪ್ತಿರ್ಧೀರಸ್ತತ್ರ ನ ಮಹ್ಯತಿ ||" ಇದರ ಅರ್ಥ: "ಯಾವ ರೀತಿ ದೇಹದಲ್ಲಿ ಬಾಲ್ಯ, ಯೌವನ, ಮತ್ತು ವೃದ್ಧಾಪ್ಯಗಳು ಬಂದು ಹೋಗುತ್ತವೆಯೋ, ಹಾಗೆಯೇ ದೇಹದಿಂದ ದೇಹಕ್ಕೆ ಆತ್ಮದ ಪರಿವರ್ತನೆಯಾಗುತ್ತದೆ. ಸಾಯುವುದು ದೇಹ ಮಾತ್ರ. ಆತ್ಮಕ್ಕೆ ಸಾವಿಲ್ಲ.
ನನ್ನ ಪ್ರಶ್ನೆ ಹಾಗಲ್ಲ ಗುರುಗಳೆ
ಅರ್ಥ ಆಯ್ತು, ಭಗವದ್ಗೀತೆಯ ಇನ್ನೊಂದು ಶ್ಲೋಕದಲ್ಲಿ ನಿನ್ನ ಪ್ರಶ್ನೆಗೆ ಉತ್ತರ ಇದೆ. "ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋ಼ಪರಾಣಿ | ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ ||" ಇದರ ಅರ್ಥವೇನೆಂದರೆ, ಮನುಷ್ಯನು ಹರಿದು ಹೋದ ಹಳೆಯ ಬಟ್ಟೆಗಳನ್ನು ಬಿಟ್ಟು ಹೊಸ ಬಟ್ಟೆಗಳನ್ನು ಧರಿಸುವಂತೆ, ಆತ್ಮವು ಹಳೆಯ ಮತ್ತು ಹಾಳಾದ ದೇಹವನ್ನು ತ್ಯಜಿಸಿ ಹೊಸ ದೇಹವನ್ನು ಸೇರುತ್ತದೆ. ಅಂದರೆ, ಸತ್ತು ಹೋದವನ ದೇಹದ ಆತ್ಮ ಮತ್ತೊಂದು ಸೃಷ್ಟಿಯಾಗುತ್ತಿರುವ ದೇಹವನ್ನು ಸೇರಿ ಮತ್ತೆ ಜನಿಸುತ್ತಾನೆ.
ನನ್ನ ಪ್ರಶ್ನೆ ಅದೂ ಅಲ್ಲ ಗುರುಗಳೆ.
ಮತ್ತೇನು ಶಿಷ್ಯ ನಿನ್ನ ಸಮಸ್ಯೆ?
ಗುರುಗಳೆ, ನೀವು ಹೇಳುತ್ತಿರುವ ಉತ್ತರ ಹೇಗಿದೆ ಅಂದ್ರೆ, ನೀರಿಳಿಯದ ಗಂಟಲಲ್ಲಿ ಕಡುಬು ಹಾಕಿ ತುರುಕಿದಂತಿದೆ ಗುರುಗಳೆ. ಅಥವಾ ಒಬ್ಬ ಗ್ರಾಮ ಪಂಚಾಯತಿ ಸದಸ್ಯನಾಗಲೂ ಜ್ಞಾನವಿಲ್ಲದವನ ಕಿವಿಗೆ ಪ್ರಧಾನ ಮಂತ್ರಿಗೆ ಇರಬೇಕಾದ ಜ್ಞಾನದ ಮಹತ್ವ ಹೇಳಿದಂತಾಯ್ತು ಗುರುಗಳೆ. ನನ್ನ ಪ್ರಶ್ನೆ ಸತ್ತು ಹೋದವರು ಮತ್ತೆ ಬಂದು ಹೆದರಿಸುತ್ತಾರಾ? ಅದೇ ರೂಪದಲ್ಲಿ ಬಂದು ಹೆದರಿಸುತ್ತಾರಾ? ಅಥವಾ ಈಗಾಗಲೆ ಬೇರೊಂದು ಆತ್ಮ ಇರುವ, ಆತ್ಮ ಇದ್ದು ಬದುಕಿರುವ ಬೇರೆಯವರ ದೇಹದಲ್ಲಿ ಪ್ರವೇಶಿಸಿ, ಬಂದು ಹೆದರಿಸುತ್ತಾರಾ? ಇದು ಪ್ರಶ್ನೆ ಗುರುಗಳೆ.
**
"ಯಾರು ಹೆದರಿಸುವುದು ರಿ? ಎಂತ ಪ್ರಶ್ನೆ ರಿ?
ತಗಳಿ ಕಾಫಿ ಕುಡಿಯಿರಿ. ನಿಮಗಿನ್ನೂ ಸೋಮೇಶ್ವರದ ಸುಲೋಚನ ಗುಂಗು ಬಿಟ್ಟಿಲ್ಲಾ ಅನಿಸುತ್ತೆ? ತಗಳಿ ಕಾಫಿ ತಗಳಿ".
ನಿನ್ನೆ ಸು ಫ್ರೆಂ ಸೋ ಸಿನಿಮಾ ನೋಡಿದ್ದು ತಲೆಯಲ್ಲಿತ್ತು. ಇವತ್ತು ಪತ್ರಿಕೆಯಲ್ಲಿ ಓದಿದ ರಾಹುಲ್ ಗಾಂಧಿಯವರ ಹೇಳಿಕೆ "ದೇಶದಲ್ಲಿ ಮೂರು ಕೃಷಿ ಕಾನೂನುಗಳ ವಿರುದ್ಧ 2020ರಲ್ಲಿ ಸಂಸತ್ ಒಳಗೆ ಹಾಗೂ ಸಂಸತ್ ಹೊರಗೆ ಹೋರಾಟ ನಡೆಯುವ ವೇಳೆ ಅರುಣ್ ಜೇಟ್ಲಿ ನಮಗೆ ಬೆದರಿಕೆ ಹಾಕಿದ್ದರು" ಎಂಬ ಹೇಳಿಕೆಯೂ ತಲೆಯಲ್ಲಿತ್ತು.(ಅರುಣ್ ಜೇಟ್ಲಿ 2019 ರಲ್ಲೇ ತೀರಿ ಹೋಗಿದ್ದರು!!) ಮಧ್ಯಾಹ್ನ ತಿಂದ ದಿಂಡಿನ ಹಣ್ಣಿನ ಗೊಜ್ಜೂ ತಲೆಯಲ್ಲಿತ್ತು. ಊಟದ ಮನೆ ಊಟ ಮುಗಿಸಿ, ಮನೆಗೆ ಬಂದು ಮಲಗಿದ್ದಾಗ ಬಂದ ಗಾಢ ನಿದ್ದಿಯೂ ತಲೆಯಲ್ಲಿತ್ತು. ಯಾರೋ 'ಅವಧೂತ ಗುರುಗಳೂ' ಒಬ್ಬರು ಕನಸಿನೊಳಗಿದ್ದ ತಲೆಯಲ್ಲಿ ಬಂದು ಕೂತಿದ್ರು!!.
ಪ್ರಶ್ನೆಗೆ ಉತ್ತರ ಬರುವುದರೊಳಗೆ ಕಾಫಿ ಬಂದ ಕಾರಣ, ಪ್ರಶ್ನೆಗೆ ಉತ್ತರ ಸಿಕ್ಕದೆ ಹಾಗೇ ಉಳಿಯಿತು!!
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ