ಕ್ರಾಂತಿಕಾರಿಗಳೆಂಬ ಸ್ವಾತಂತ್ರ್ಯ ಸಂಗ್ರಾಮದ ಯಶಸ್ವಿ ಪೂರ್ಣ ಅಧ್ಯಾಯದಲ್ಲಿ ಅದೆಷ್ಟೋ ಸಂಘಟನೆಗಳು ತೆರೆಮರೆಯಲ್ಲಿ ಸ್ವಾತಂತ್ರ್ಯ ಲಕ್ಷ್ಮಿಯ ಆರಾಧನೆಯಲ್ಲಿ ಅನುಕ್ಷಣ ತೊಡಗಿದ್ದವು. ಅವುಗಳಲ್ಲಿ ಅನುಶೀಧನ ಸಮಿತಿಯು ಒಂದು. ಪ್ರಮಥನಾಥ ಮಿತ್ರರೆಂಬ ವಕೀಲರು ಇದರ ಸಂಸ್ಥಾಪಕರಾದರೆ ಕ್ರಾಂತಿಯ ಪಥವೇ ತಮ್ಮುಸಿರೆಂದು ಹಗಲಿರಲು ಸೆಣಸಿದ ಹಲವು ವೀರರು ಇದರ ಸದಸ್ಯರು.
ಅನುಶೀಧನ ಸಮಿತಿಯು ಭಾರತಾಂಬೆಗೆ ಸಮರ್ಪಿಸಿದ ಪುಷ್ಪಮಾಲೆಯ ಒಂದು ಪುಷ್ಪ ಈ ಹೌರಾ ಪ್ರಕರಣ ಅಥವಾ ಹೌರಾ-ಸಿಬ್‌ಪುರ ಪಿತೂರಿ ಪ್ರಕರಣ.
ಸ್ವಾತಂತ್ರ್ಯ ಸಮರದ ಕಾಲವೆಂದರೆ ಅದು ಕೆಲವು ದೇಶದ್ರೋಹಿ ಭಾರತೀಯರು ಆಂಗ್ಲರ ಬೆಂಬಲಕ್ಕೆ ನಿಂತು ಸ್ವಪಕ್ಷೀಯರಿಗೆ ಚೂರಿ ಇರಿಯುತ್ತಿದ್ದ ಕಾಲವೂ ಹೌದು. ಅಂತೆಯೇ ವಂಗದೇಶದಲ್ಲಿ ಉಪ ಪೊಲೀಸ್ ಸೂಪರಿಂಟೆಂಡೆಂಟ್ ಹಾಗೂ ಇಂಟಲಿಜೆನ್ಸ್ ಅಧಿಕಾರಿಯಾಗಿ ಆಂಗ್ಲ ಸರ್ಕಾರದಲ್ಲಿ ಷಂಸುಲ್ ಅಲಂ ಎಂಬ ವ್ಯಕ್ತಿ ಕಾರ್ಯ ನಿರ್ವಹಿಸುತ್ತಿದ್ದ. ಅವನು ಇದೀಗಾಗಲೇ ಇನ್ನೊರ್ವ ಅಧಿಕಾರಿಯಾಗಿದ್ದ ನಾರಾಯಣ್ ಗೋಸೈನ್ ಎನ್ನುವವನ ಹತ್ಯೆಯ ತನಿಖೆಯಲ್ಲಿ ತೊಡಗಿದ್ದ. ಅಲ್ಲದೆ ಅದಾಗಲೇ ಅಲಿಪುರ್ ಬಾಂಬ್ ಕೇಸ್ ನಲ್ಲಿ ತೊಡಗಿದ್ದ ಅಶುತೋಷ್ ಬಿಸ್ವಾಸ್ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯನ್ನು ಕಂಡಿದ್ದ. ಅಲ್ಲದೆ ಖುದಿರಾಮ್ ಬೋಸ್‌ನ ಬಂಧನದಲ್ಲಿಯೂ ಈತನ ಪಾತ್ರ ಅಧಿಕವಾಗಿತ್ತು.
ಇಷ್ಟಲ್ಲದೆ ಕ್ರಾಂತಿಕಾರಿ ಚಟುವಟಿಕೆಯಲ್ಲಿ ಬಿರುಸಿನಿಂದ ಹಾಗೂ ಹುರುಪಿನಿಂದ ಸಾಗುತ್ತಿದ್ದ ಕ್ರಾಂತಿಕಾರಿಗಳ ಮೇಲೆ ಶಂಸುದ್ದೀನ್ ಅಲಂ ಹದ್ದಿನ ಕಣ್ಣಿಟ್ಟಿದ್ದ. ಆದ್ದರಿಂದ ಅನುಶಿಧನ ಸಮಿತಿಯ ಕ್ರಾಂತಿಕಾರಿಗಳ ಬಣವೊಂದು ಈತನಿಗೆ ತಕ್ಕ ಶಾಸ್ತಿಯನ್ನು ಮಾಡಲು ಮುಂದಾಗಿತ್ತು. ಅದೇ ಈ ಹೌರ ಪ್ರಕರಣ. (1910)
ಕಲ್ಕತ್ತಾ ನಗರದ "ರೈಟರ್ಸ್ ಬಿಲ್ಡಿಂಗ್" ಎಂಬ ಕಟ್ಟಡದ ಬಳಿ ಅಲಂ ಸಾಗುತ್ತಿದ್ದಾಗ ಅನುಶಿಧನ ಸಮಿತಿಯ ಬಿಸಿ ನೆಕ್ತಾರಿನ ಸಕ್ರಿಯ ಕಾರ್ಯಕರ್ತ ಬಿರೇನ್ದತ್ತ ಗುಪ್ತಾ ಈತನ ಮೇಲೆ ಪಿಸ್ತೂಲ್ ನಿಂದ ಗುಂಡಸೆದ. ಹಾಗೂ ತನಿನಿಸಿದ ಸಫಲತೆಯೊಂದಿಗೆ ಹಿಗ್ಗಿ ಸಂಭಮಿಸಿದ.
ಇದರ ಪರಿಣಾಮವೆಂಬಂತೆ 47 ಜನ ಅನುಶಿಧನ ಸಮಿತಿಯ ಸದಸ್ಯರನ್ನು ಆಂಗ್ಲ ಸರ್ವಕಾರವು ಬಂಧಿಸಿತು. ಕೆಲ ಕಾಲಗಳ ನಂತರ 33 ಮಂದಿ ಬಿಡುಗಡೆ ಹೊಂದಿದರು. ಜಿತೆಂದ್ರನಾಥ ಮುಖರ್ಜಿ ಹಾಗೂ ನಾರಾಯಣ ಭಟ್ಟಾಚಾರ್ಯರನ್ನು ಕ್ಷಮೆ ಕೇಳುವಂತೆ ಒತ್ತಾಯಿಸಿ ಬಳಿಕ ಬಿಡುಗಡೆ ಮಾಡಲಾಯಿತು. ಉಳಿದವರಲ್ಲಿ ಕೆಲವರು ತಪ್ಪಿಸಿಕೊಂಡು ಹೋದರೆ ಇನ್ನು ಕೆಲವರನ್ನು ಕಾಲ ನಂತರದಲ್ಲಿ ಬಿಡುಗಡೆಗೊಳಿಸಲಾಯಿತು. ಆದರೆ ನಾಲ್ವರು ಬಹುಕಾಲದವರೆಗೆ ಬಂಧನದಲ್ಲೇ ಉಳಿಯಬೇಕಾಯಿತು.
ಸ್ವಾಮಿ ವಿವೇಕಾನಂದರ ಚಿಂತನೆಯೊಂದಿಗೆ ಸಿಸ್ಟರ್ ನಿವೇದಿತಾರ ಪ್ರೇರಣೆಯೊಂದಿಗೆ ರಾಷ್ಟ್ರಭಕ್ತಿಯನ್ನೇ ಜೀವಾಳವೆಂದೆನಿಸಿಕೊಂಡ ಅಮರರ ಒಂದು ಸಣ್ಣ ಯಶೋಗಾಥೆಯ ತುಣುಕಿದು. ಮತಾದಿ ಭೇದಗಳನ್ನಳಿಸಿ ದೇಶಪ್ರೇಮವನ್ನು ಚಿಮ್ಮಿಸಿ ಮೈ ನವಿರೇಳಿಸುವ ಇಂತಹ ನೂರಾರು ಘಟನೆಗಳು ಸ್ವತಂತ್ರ ಭಾರತದ ಜನಮನದಿಂದ ದೂರವಾಗುತ್ತಿರುವುದು ವಿಷಾದನೀಯ.
- ಅಭಿಜ್ಞಾ ಉಪಾಧ್ಯಾಯ
ಇತಿಹಾಸ ಪ್ರಾಧ್ಯಾಪಕಿ
ಎಸ್.ಡಿ.ಎಂ. ಕಾಲೇಜು (ಸ್ವಾಯತ್ತ), ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ