ಉಜಿರೆ: ಸಮೃದ್ಧಿ, ಸುರಕ್ಷತೆ ಮತ್ತು ದಿಟ್ಟ ಹೆಜ್ಜೆಗಳೊಂದಿಗೆ ಮುನ್ನಡೆಯುವ 'ಹೊಸ ಭಾರತ' ಕಟ್ಟುವ ಘೋಷವಾಕ್ಯದೊಂದಿಗೆ ಶಿಸ್ತುಬದ್ಧ ಪಥಸಂಚಲನ ಮತ್ತು ದೇಶಾಭಿಮಾನದ ಗೀತ-ಸಂಗೀತ ಮಾಧುರ್ಯದ ನಡುವೆ ಎಸ್.ಡಿ.ಎಂ ಕಾಲೇಜಿನ ಶ್ರೀರತ್ನವರ್ಮ ಹೆಗ್ಗಡೆ ಕ್ರೀಡಾಂಗಣವು 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಯಿತು.
ಎಸ್.ಡಿ.ಎಂ ಶಾಲೆ, ಪದವಿ ಪೂರ್ವ, ಪದವಿ, ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ, ತಾಂತ್ರಿಕ ಸೇರಿದಂತೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿಗಳ ಸಮಕ್ಷಮದಲ್ಲಿ ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಎಂ.ವಿ.ಭಟ್ ಅವರು ಧ್ವಜಾರೋಹಣ ನೆರವೇರಿಸಿದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎನ್.ಸಿ.ಸಿ. ಕೆಡೆಟ್‍ಗಳಿಂದ ಧ್ವಜವಂದನೆ ನಡೆಯಿತು. ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಬ್ಯಾಂಡ್ ಸೆಟ್‍ನಲ್ಲಿ ಸಹಕರಿಸಿದರು. ಇದೇ ವೇಳೆ ಎಸ್.ಡಿ.ಎಂ. ಕಲಾಕೇಂದ್ರದ ವಿದ್ಯಾರ್ಥಿಗಳು ರಾಷ್ಟ್ರಗೀತೆ ಪ್ರಸ್ತುತಪಡಿಸಿದರು. ಬಳಿಕ ‘ವಂದೇಮಾತರಂ’ , ‘ಸಾರೇ ಜಹಾಂಸೆ ಅಚ್ಛಾ’ ಹಾಡುವ ಮೂಲಕ ಧ್ವಜಾರೋಹಣ ಮೆರಗನ್ನು ಮತ್ತಷ್ಟು ಹೆಚ್ಚಿಸಿದರು. ಕ್ರೀಡಾಂಗಣವು ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಬಲೂನ್‍ಗಳಿಂದ ಶೃಂಗರಿಸಲಾಗಿತ್ತು. ನೆರೆದಿದ್ದ ಸರ್ವ ವಿದ್ಯಾರ್ಥಿಗಳು ಕೈಯಲ್ಲಿ ಬಾವುಟ ಹಿಡಿದು ಪ್ರದರ್ಶಿಸುವುದರೊಂದಿಗೆ ಸಂಭ್ರಮಿಸಲಾಯಿತು. ಈ ವೇಳೆ ಎನ್‍ಸಿಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಭಾನುಪ್ರಕಾಶ್, ಎನ್‍ಸಿಸಿ ಆಫಿಸರ್ ಸದಾನಂದ್, ರೋವರ್ ಸ್ಕೌಟ್ ಲೀಡರ್ ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು.
ಎಸ್.ಡಿ.ಎಂ ಕಾಲೇಜಿನ ಆಡಳಿತಾಂಗ ಕುಲಸಚಿವರಾದ ಡಾ. ಶ್ರೀಧರ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಶ್ವನಾಥ ಪಿ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ ಕುಮಾರ್, ಎಸ್.ಡಿ.ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ, ಎಸ್‍ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಅಶೋಕ ಕುಮಾರ್ ಮತ್ತಿತರ ಶೈಕ್ಷಣಿಕ ವಿಭಾಗಗಳ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎನ್.ಎಸ್.ಎಸ್‍ನ ಸ್ವಯಂ ಸೇವಕರು ಸಿಹಿ ವಿತರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
