ಗೋಕರ್ಣ: ಕನ್ನಡ ಭಾಷೆಯಲ್ಲಿ ಕಲಬೆರಕೆಯಾಗಿರುವ ಆಂಗ್ಲ ಮತ್ತು ಇತರ ಭಾಷೆಗಳ ಪದಗಳನ್ನು ಬಿಡುವುದು ಮೊದಮೊದಲು ಕಷ್ಟವೆನಿಸಬಹುದು. ಆದರೆ ನಮ್ಮ ಭಾಷೆ- ಸಂಸ್ಕೃತಿ ಉಳಿಸಿಕೊಳ್ಳುವ ಹೊಣೆ ನಮ್ಮ ಮೇಲಿದೆ. ಆದ್ದರಿಂದ ಈ ಕಷ್ಟಗಳಿಗೆ ಅನಿವಾರ್ಯವಾಗಿ ನಾವು ಅದಕ್ಕೆ ಒಗ್ಗಿಕೊಳ್ಳಲೇಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 26ನೇ ದಿನವಾದ ಸೋಮವಾರ ಕೋಲಾರ ಜಿಲ್ಲೆ ಮಾಲೂರು ಶ್ರೀರಾಘವೇಂದ್ರ ಗೋಆಶ್ರಮದ ವತಿಯಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.
ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳುವಂತೆ ಚೆನ್ನಾಗಿ ಅನುಷ್ಠಾನ ಮಾಡುವ ಪರಧರ್ಮಕ್ಕಿಂತ ಸಾಧಾರಣವಾಗಿ ಆಚರಿಸುವ ಸ್ವಧರ್ಮ ಶ್ರೇಷ್ಠ. ಅಂತೆಯೇ ಭಾಷೆಯ ವಿಚಾರದಲ್ಲೂ ಸ್ವಭಾಷೆಯೇ ಶ್ರೇಷ್ಠ. ಆಂಗ್ಲಭಾಷೆಗೆ ಹೋಲಿಸಿದರೆ ಕನ್ನಡಕ್ಕೆ ಹೆಚ್ಚಿನ ಶ್ರೀಮಂತಿಕೆ ಮತ್ತು ಸಮೃದ್ಧತೆ ಇದೆ ಎಂದು ವಿಶ್ಲೇಷಿಸಿದರು.
ದಿನಕ್ಕೊಂದು ಇಂಗ್ಲಿಷ್ ಪದ ತ್ಯಜಿಸುವ ಅಭಿಯಾನದಲ್ಲಿ 'ಪೆನ್' ಶಬ್ದದ ಬದಲು ಲೇಖನಿ, ಲೆಕ್ಕಣಿಕೆ, ಲೆಕ್ಕಣಿ, ಕಂಟ ಮುಂತಾದ ಕನ್ನಡ ಶಬ್ದಗಳನ್ನು ರೂಢಿಸಿಕೊಳ್ಳುವಂತೆ ಸಲಹೆ ಮಾಡಿದರು. 'ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ' ಎಂಬ ಮಂಕುತಿಮ್ಮನ ಕಗ್ಗವನ್ನು ಉಲ್ಲೇಖಿಸಿ, ಲೆಕ್ಕಣಿಕೆ ಪದದ ಬಳಕೆ ಕನ್ನಡ ಸಾಹಿತ್ಯದಲ್ಲಿ ವ್ಯಾಪಕವಾಗಿತ್ತು ಎಂದು ಹೇಳಿದರು.
ದಿನಕ್ಕೆ ಒಂದು ಇಂಗ್ಲಿಷ್ ಪದವನ್ನು ಬಿಟ್ಟರೂ ವರ್ಷಕ್ಕೆ ಕೇವಲ 365 ಇಂಗ್ಲಿಷ್ ಶಬ್ದಗಳು ಮಾತ್ರ ಕಡಿಮೆಯಾದಂತಾಗುತ್ತದೆ. ಕನ್ನಡದಲ್ಲಿ ಸೇರಿರುವ ಇಂಗ್ಲಿಷ್ ಪದಗಳನ್ನು ಸಂಪೂರ್ಣ ಕಿತ್ತುಹಾಕಬೇಕಾದರೆ ನಮ್ಮ ಆಯಸ್ಸು ಇಡೀ ಬೇಕಾಗಬಹುದು ಎಂದರು.
ಪೆನ್ ಎಂಬ ಪದಕ್ಕೆ ಕೃತಕ ಬುದ್ಧಿಮತ್ತೆ (ಆರ್ಟಿಫೀಶಿಯಲ್ ಇಂಟೆಲಿಜೆನ್ಸ್) ಕೂಡಾ ಕನ್ನಡದಲ್ಲಿ 'ಪೆನ್ನು' ಎನ್ನುತ್ತದೆ. ಅಷ್ಟರ ಮಟ್ಟಿಗೆ ಆಂಗ್ಲಭಾಷೆಗೆ ನಾವು ಶರಣಾಗಿದ್ದೇವೆ. ಈ ಪ್ರವೃತ್ತಿ ಬದಲಾಗಿ ನಮ್ಮತನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಇಂದಿನ ಸರ್ವಸೇವೆ ನೆರವೇರಿಸಿದ ಮಾಲೂರು ರಾಘವೇಂದ್ರ ಗೋ ಆಶ್ರಮದ ಬಗ್ಗೆ ಪ್ರಸ್ತಾವಿಸಿ, "ಹಿಂದೆ ಅಂಗಸಂಸ್ಥೆಗಳಿಗೆ ಮಠದಿಂದಲೇ ಸಹಾಯ ಮಾಡುವ ಪರಿಸ್ಥಿತಿ ಇತ್ತು. ಆದರೆ ಇಂದು ಇದು ಸಂಪೂರ್ಣ ಬದಲಾಗಿದೆ. ಮಾಲೂರು ಗೋಶಾಲೆಯಂಥ ಅನೇಕ ಅಂಗಸಂಸ್ಥೆಗಳು ಇಂದು ತಾವೇ ಮಠಕ್ಕೆ ಸೇವೆ ಮಾಡುವಷ್ಟರ ಮಟ್ಟಿಗೆ ಬೆಳೆದಿವೆ. ನೂರಾರು ಗೋವುಗಳಿಗೆ ಆಶ್ರಯ ಆಸರೆ ನೀಡಿದೆ. ಗೋಶಾಲೆಯನ್ನು ಉನ್ನತ ಮಟ್ಟಕ್ಕೆ ಒಯ್ಯುವಲ್ಲಿ ಡಾ.ಶ್ಯಾಮಪ್ರಸಾದ್ ಅವರ ಕೊಡುಗೆ ಗಣನೀಯ" ಎಂದು ಬಣ್ಣಿಸಿದರು.
ಹಿರಿಯ ಪತ್ರಕರ್ತ ಅರುಣ್ ಕುಮಾರ್ ಹಬ್ಬು ಅವರು ತಾವು ಬರೆದ 'ಚಾಣಕ್ಯ ನೀತಿ' ಕೃತಿಯನ್ನು ಶ್ರೀಗಳಿಗೆ ಸಮರ್ಪಿಸಿದರು. ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಮಾಲೂರು ರಾಘವೇಂದ್ರ ಗೋ ಆಶ್ರಮದ ಅಧ್ಯಕ್ಷ ಡಾ.ಶ್ಯಾಮಪ್ರಸಾದ್, ಶಾರದಾ ಶ್ಯಾಮಪ್ರಸಾದ್, ವಿಕ್ರಮ್, ಕುಮಟಾ ಮಂಡಲ ಮಾತೃಪ್ರಧಾನೆ ಲಲಿತಾ ಹೆಬ್ಬಾರ, ಶ್ರೀಪರಿವಾರದ ರಾಘವೇಂದ್ರ ಮಧ್ಯಸ್ಥ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಅಂಕೋಲದ ಹಿರಿಯ ವಕೀಲ ಎಂ.ಪಿ.ಭಟ್ ಮತ್ತಿತತರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ