ಇತ್ತೀಚೆಗೆ ಸಿಕ್ಕ ನನ್ನ ಪರಿಚಿತರೊಬ್ಬರೊಂದಿಗೆ ಮಾತಿಗಿಳಿದೆ, ಅವರು ತುಂಬಾ ಸಮಯದ ಬಳಿಕ ಸಿಕ್ಕಿದ್ದಾದರೂ ಚೆನ್ನಾಗಿಯೇ ಮಾತನಾಡಿದರು. ಆದರೆ ಮಾತನಾಡುತ್ತಾ ಅವರಿಂದ ಬಂದ ಒಂದು ಮಾತು ಅರೆಕಾಲ ನನ್ನ ಯೋಚಿಸುವಂತೆ ಮಾಡಿತು. ಅವರು ಯಾವುದೋ ಒಂದು ವಿಷಯವಾಗಿ ಮಾತನಾಡುತ್ತಾ 'ಶಾರೀರಿಕ ಸೌಂದರ್ಯಕ್ಕಿಂತ ಆತ್ಮದ ಸೌಂದರ್ಯವೆ ಪೂಜನೀಯ'ಎಂದರು. ಈ ಮಾತು ನನ್ನ ಅರೆಕಾಲ ಗಮನ ಸೆಳೆಯಿತು. ಅದಕ್ಕೆ ಕಾರಣ ಕೆಲವೇ ದಿನಗಳಲ್ಲಿ ಬರುವ 'ಗಣೇಶ ಚತುರ್ಥಿ'ಯಾಗಿದೆ. ಇದನ್ನು ಕೇಳುವವರಿಗೆ ಸ್ವಲ್ಪ ಆಶ್ಚರ್ಯವಾಗಿರಬಹುದು. ಈ ಮಾತು ಗಮನ ಸೆಳೆದಿದ್ದು ಚೌತಿಯಿಂದಾಗಿಯಾದರೂ, ಚತುರ್ಥಿಗೆ ಇದು ಸಂಬಂಧಿಸಿದಲ್ಲ ಬದಲಾಗಿ ವಿಘ್ನ ನಿವಾರಕನಾದ ವಿಘ್ನೇಶ್ವರನಿಗೆ.
ಗಣೇಶ ಎಂದಾಗ ಪ್ರತಿಯೊಬ್ಬರ ಕಣ್ಣೆದುರು ಒಂದು ಚಿತ್ರ ಮೂಡುವುದು. ಡೊಳ್ಳು ಹೊಟ್ಟೆ, ಆನೆಯ ಮುಖ, ಹೊಟ್ಟೆಗೆ ಕಟ್ಟಿದ ನಾಗರ, ಮುರಿದ ದಂತ, ವಾಹನವಾಗಿ ಸಣ್ಣದೊಂದು ಇಲಿ. ಸಾಮಾನ್ಯವಾಗಿ ನಾವು ಪರಿಪೂರ್ಣ ಎಂದು ಪರಿಗಣಿಸುವಲ್ಲಿ ಯಾವೆಲ್ಲಾ ಮಾನದಂಡಗಳನ್ನು ನೀಡುತ್ತೇವೋ ಅದಕ್ಕೆ ಪೂರ್ತಿಯಾಗಿ ವಿರುದ್ಧವಾದ ಗುಣಲಕ್ಷಣಗಳ ಇದ್ದರೂ ಆತನೇ ಎಲ್ಲ ಕೆಲಸಗಳಿಗೂ ಒಂದೊಳ್ಳೆ ಪರ್ಫೆಕ್ಷನ್ ನೀಡುತ್ತಾನೆ.
ಹಿಂದೂ ಧರ್ಮದಲ್ಲಿ ಗಣಪತಿಗೆ ವಿಶೇಷ ಆದ್ಯತೆ ಇದೆ. ಯಾವುದೇ ಕಾರ್ಯಕ್ರಮಗಳು ಅದು ಚಿಕ್ಕದಾಗಲಿ ಅಥವಾ ದೊಡ್ಡದಾಗಲಿ, ಆರಂಭವಾಗುವ ಮುನ್ನ ವಿಘ್ನ ವಿನಾಯಕನನ್ನು ನೆನೆದು ಪ್ರಾರಂಭಿಸುವುದು ಪದ್ಧತಿಯಾಗಿದೆ. ಹೀಗೆ ಮಾಡುವುದರಿಂದ ಕಾರ್ಯಕ್ರಮಕ್ಕೆ ಮುಂದಾಗಬಹುದಾದಂತಹ ವಿಘ್ನಗಳನ್ನು ತಡೆಯಬಹುದು ಎಂಬುದು ನಂಬಿಕೆ. ವಿಘ್ನ ನಿವಾರಕನಾದ ಗಣಪತಿಯು ಎಲ್ಲಾ ರೀತಿಯ ಅಡಚಣೆ ತೊಂದರೆಗಳನ್ನು ಕಷ್ಟಕಾರ್ಪಣ್ಯಗಳನ್ನು ದೂರ ಮಾಡಿ ಯಶಸ್ಸನ್ನು ಕೊಡುತ್ತಾನೆ ಎಂದು ಭಕ್ತಾದಿಗಳು ನಂಬುತ್ತಾರೆ. ಯಾವುದೇ ಪುಣ್ಯಕಾರ್ಯವಾಗಿರಲಿ, ಯಜ್ಞ -ಯಾಗಗಳಾಗಿರಲಿ, ಹೋಮ -ಹವನಗಳಾಗಿರಲಿ ಮೊದಲ ಪೂಜೆ ಮಾತ್ರ ವಕ್ರತುಂಡ ಮಹಾಗಣಪತಿಯದ್ದೇ ಆಗಿರುತ್ತದೆ.
ನಮ್ಮಲ್ಲಿ ಅದೆಷ್ಟೋ ಮಂದಿ ಮುಖದಲ್ಲಿ ಒಂದು ಸಣ್ಣ ಕಲೆಯಾದರೂ ಸಾಕು, ಬದುಕಿಗೆ ಎಲ್ಲೋ ಹಿನ್ನಡೆಯಾಯಿತೆಂಬಂತೆ ಕುಸಿಯುತ್ತಾರೆ. ಇನ್ನೂ ಕೆಲವರು ಪ್ರಕೃತಿ ನೀಡಿದ ಶರೀರದಲ್ಲೇ ನೂರಾರು ಕೊರತೆಗಳನ್ನು ಹುಡುಕುತ್ತಾ ಇರುತ್ತಾರೆ. ಕೆಲವರಂತೂ ಸರ್ಜರಿಯವರೆಗೂ ಮುಂದುವರೆಯುವುದು ಈಗಿನ ಟೆಕ್ನಾಲಜಿ ಯುಗದಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಷಯವಾಗಿದೆ. ಈ ಬಾಹ್ಯ ರೂಪ ಸ್ವಲ್ಪ ಸಮಯ ಜನರನ್ನು ಆಕರ್ಷಿಸಬಹುದು, ಆದರೆ ನಮಗದು ಗೌರವ ವನ್ನು ತಂದುಕೊಡದು ಎಂಬುವುದು ಅಂತಿಮ ಸತ್ಯವಲ್ಲವೇ? ಒಂದು ವೇಳೆ ಬಾಹ್ಯ ರೂಪದಿಂದಲೇ ನಮಗೆ ಸ್ಥಾನ-ಮಾನ ಲಭಿಸುತ್ತದೆ ಎನ್ನುವುದಾದರೇ ವಕ್ರತುಂಡನಾದ ಮಹಾಗಣಪತಿ ಪ್ರಥಮ ಪೂಜ್ಯನಾಗುತ್ತಿದ್ದನೆ? ಪರಿಪೂರ್ಣತೆ ಬೇಕಾಗಿರುವುದು ನಮ್ಮ ಕೆಲಸದಲ್ಲೇ ಹೊರತು ನಮ್ಮ ಬಾಹ್ಯ ರೂಪದಲ್ಲಿ ಅಲ್ಲ.
- ಪ್ರಿಯಾ ಶ್ರೀ ವಿಧಿ
ದ್ವಿತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ