ಹಲೋ, ಹೇಗಿದ್ದೀರಾ?
ನಮ್ಮ ಜೀವನದಲ್ಲಿ ಕಷ್ಟ ಮತ್ತು ಸುಖ ಒಂದು ನಾಣ್ಯದ. ಎರಡು ಮುಖಗಳು ಇದ್ದಂತೆ. ಕಷ್ಟ ಬೇಡವೆಂದರೂ ಅದು ಬರುವುದು ಬಿಡುವುದಿಲ್ಲ. ಸುಖ ಬಾ ಎಂದು ಕರೆದರೂ ಅದು ಬರುವುದಿಲ್ಲ. ನಾನು ಚಿಕ್ಕವಳಿದ್ದಾಗ ಎಲ್ಲೋ ಒಂದು ಕಡೆ ಕೇಳಿದ ನೆನಪು. ಕಷ್ಟ ಎಂದರೆ ಸಿಟಿ ಬಸ್ ಇದ್ದ ಹಾಗೆ. ಒಂದರ ಮೇಲೊಂದು ಬರುತ್ತವೆ. ಸುಖ, ಎಂದರೆ ಕೆಎಸ್ಆರ್ ಟಿಸಿ ಬಸ್ ಇದ್ದ ಹಾಗೆ. ಕಾಯೋದು ಅಷ್ಟೇ.
ಕಷ್ಟ ಒಂದು ರೀತಿಯಲ್ಲಿ ದೇವರು ಅವತಾರ ಎತ್ತಿದ ಹಾಗೆ. ಯಾವ ರೂಪದಲ್ಲಿ ಆದರೂ ಬರಬಹುದು. ಅದು ದೈಹಿಕ ನೋವು, ಮಾನಸಿಕ ಖಿನ್ನತೆ, ಅವಮಾನ, ಅಗೌರವ, ಸಂಕಟ, ಒಂಟಿತನ ಮುಂತಾದ ರೂಪಗಳಲ್ಲಿ ಬರಬಹುದು.
ಆದರೆ ಒಂದೊಂದು ಸಾರಿ ನಮಗೆ ಕಷ್ಟ ಒಂದೊಂದು ಸಾರಿ ಸ್ಟ್ರಿಕ್ಟ್ ಡಾಕ್ಟರ್ ರೂಪದಲ್ಲಿ ಬರುತ್ತದೆ. ಬಲವಂತವಾಗಿ ಟ್ಯಾಬ್ಲೆಟ್ ತಿನಿಸುವ ಹಾಗೆ, ನಮಗೆ ಕಟು ಸತ್ಯವನ್ನು ಪರಿಚಯಿಸುತ್ತದೆ. ಸರ್ಜರಿ ಮಾಡುವ ಹಾಗೆ, ನಮಗೆ, ನಮ್ಮ ಜೀವನಕ್ಕೆ ಅಂಟಿದ ಅರಿಷ್ಟಗಳನ್ನು ಕಿತ್ತು ಒಗೆಯುತ್ತದೆ. ಕಷ್ಟ ಪಟ್ಟು ಸುಖ ಬಂದಾಗ ನಮಗೆ ನೆತ್ತಿಯ ಮೇಲೆ ಕಣ್ಣು ಬಂದು ಮೆರೆಯದಂತೆ ನಮಗೆ ಕೆಟ್ಟ. ನೆನಪುಗಳು ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಯಲಿಕ್ಕೆ ಹಚ್ಚುತ್ತದೆ.
ಮಹಾಭಾರತದಲ್ಲಿ ಒಂದು ಪ್ರಸಂಗ ಬರುತ್ತದೆ. ಮಹಾಭಾರತ ಯುದ್ಧ ಮುಗಿದು ಯುಧಿಷ್ಠಿರನಿಗೆ ಪಟ್ಟಾಭಿಷೇಕ ಮಾಡಿ ಕೃಷ್ಣ ದ್ವಾರಕೆಗೆ ಹೊರತು ನಿಂತಾಗ ಕುಂತಿ ಕಣ್ಣೀರು ಹಾಕುತ್ತಿದ್ದಳು. ಆಗ ಕೃಷ್ಣ, ನಿನಗೇನು ಬೇಕು ಎಂದಾಗ ಸಂಕಟಂ ದೇಹಿ ಎಂದಳು. ಆಗ ಕೃಷ್ಣ ಯಾಕೆ ಹೀಗೆ ಬೇಡುತ್ತಿದ್ದೀಯಾ ಎಂದಾಗ, ಕುಂತಿ ನಮಗೆ ಕಷ್ಟ ಬಂದರೆ ನಾವು ನಿನ್ನನ್ನು ನೆನೆಸುತ್ತೇವೆ. ಆಗ ನೀನು ಬಂದು ಕಾಯುತ್ತಿ. ಆದರೆ ಸುಖ ಬಂದರೆ ನಾವು ನಿನ್ನನ್ನು ಮರೆತು ಬಿಡುತ್ತೇವೆ. ಆದ್ದರಿಂದ ಕಷ್ಟಗಳು ಬರುವಂತೆ ಆಶೀರ್ವಾದ ಮಾಡು ಎಂದು ಬೇಡಿಕೊಂಡಳು. ಇದು ನಮಗೂ ಕೂಡ ಅನ್ವಯಿಸುತ್ತದೆ. ಅದಕ್ಕೆ ನಮ್ಮಲ್ಲಿ ಸಂಕಟ ಬಂದಾಗ ವೆಂಕಟಮಣ ಎನ್ನುತ್ತೇವೆ.
ಕಷ್ಟ ಎಂದರೆ ಚಿನ್ನವನ್ನು ಒರೆಗೆ ಹಚ್ಚಿ ನೋಡಿದ ಹಾಗೆ. ಕಷ್ಟ ಬಂದಾಗಲೇ ನಮ್ಮವರು ಯಾರು ಎಂದು ಗೊತ್ತಾಗುವುದು. ಪ್ರತಿ ಕಷ್ಟ ನಮಗೆ ಮಳೆಯ, ಬಿರುಗಾಳಿಯ, ದೂಡುವ ಬೇಸಿಗೆಯ ಅನುಭವ. ಕೊಡುತ್ತದೆ. ನಮ್ಮನ್ನು ಒಳಗಿನಿಂದ ಗಟ್ಟಿಗೊಳಿಸುತ್ತದೆ. ತೊಯ್ಯಿಸಿಕೊಂಡರೆ ಮಳೆ ಅಂಜಿಕೆ ಏನು ಎನ್ನುವಂತೆ ಪ್ರತಿ ಕಷ್ಟ ನಮ್ಮನ್ನು ಡೊಂಟ್ ಕೇರ್ ಮಾಸ್ಟರ್ ಮಾಡುತ್ತದೆ. ಜೀವನದ ಪಾಠ ಕಲಿಸುತ್ತದೆ. ಹೌದಲ್ಲವೇ? ಏನಂತೀರಾ.
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ