ಮುಂಬಯಿ: ಏಕ ಕಾಲದಲ್ಲಿ ಸಾವಿರಾರು ಮೊಬೈಲ್‌ಗಳ ಟಾರ್ಚ್ ಬೆಳಕು ವೇದಿಕೆಯ ಕಡೆ ಚಿಮ್ಮುತಿತ್ತು. ಕೈ ಕಾಲು ಕಳೆದುಕೊಂಡ ರಾಜಾ ವಿಕ್ರಮನು ದೀಪಕ ರಾಗದಲ್ಲಿ ಹಾಡಿದಾಗ ಅರಮನೆ ಬೆಳಗುತ್ತಿತ್ತು. ರಾಜಕುಮಾರಿ ಪದ್ಮಾವತಿ ನೃತ್ಯ ಪ್ರೇಕ್ಷಕರನ್ನು ಸೆಳೆಯುತ್ತಿತ್ತು....
ಇದು ನಿನ್ನೆ ಮುಂಬೈಯ ಕುರ್ಲಾ ಬಂಟರ ಸಂಘದ ಸಭಾಂಗಣದಲ್ಲಿ ಮಹಿಳಾ ವಿಭಾಗದವರು ಆಯೋಜಿಸಿದ "ಸೋಣದ ಸೊಬಗು" ಕಾರ್ಯಕ್ರಮದಲ್ಲಿ ಮಂಗಳೂರಿನ ಶ್ರೀ ಲಲಿತೆ ಕಲಾವಿದರು ಪ್ರದರ್ಶನ ನೀಡಿದ "ಶನಿ ಮಹಾತ್ಮೆ" ತುಳು ಪೌರಾಣಿಕ ನಾಟಕದ ಕ್ಲೈಮಾಕ್ಸ್.!!
ಖ್ಯಾತ ನಾಟಕಗಾರ ಕದ್ರಿ ನವನೀತ ಶೆಟ್ಟಿ ಅವರು ರಚಿಸಿದ "ಶನಿ ಮಹಾತ್ಮೆ" ನಾಟಕದ 37ನೇ ಪ್ರದರ್ಶನದಲ್ಲಿ ತಲ್ಲೀನತೆಯಿಂದ ನಾಟಕ ವೀಕ್ಷಣೆ ಮಾಡುತಿದ್ದ ಪ್ರೇಕ್ಷಕರು ಪಟ್ಲ ಸತೀಶ್ ಶೆಟ್ಟಿ ಅವರ ಮಧುರ ಕಂಠದಿಂದ ಹೊರಹೊಮ್ಮಿದ "ಉಚ್ಚಾಯ.. ದೀಪಾಕ ಮಾಲಾ ರಾಗದ ಉಚ್ಚಯ.." ಹಾಡಿನ ಕೊನೆಯಲ್ಲಿ ದೃಶ್ಯಕ್ಕೆ ಅನುಗುಣವಾಗಿ ಬೆಳಕಿನ ಮಾಲೆಯನ್ನು ಮೊಬೈಲ್ ಟಾರ್ಚ್ ಮೂಲಕ ಒದಗಿಸಿ ಸಂಭ್ರಮಿಸಿದರು.
"ಶನೀಶ್ವರ ಮಹಾತ್ಮೆ" ಪೂಜಾ ಸಹಿತ ತಾಳಮದ್ದಳೆಗಳಲ್ಲಿ ದೀಪಕ ಮಾಲಾ ಹಾಡು ಆರಂಭವಾದಾಗ ಸೇವಾ ಕರ್ತರ ಬಳಗದ ಮಹಿಳೆಯರು ದೀಪ ಬೆಳಗಿಸುವ ಸಂಪ್ರದಾಯ ಇದೆ. ಆದರೆ ನಾಟಕದ ಮಧ್ಯ ದಲ್ಲಿ ಹಣತೆ ದೀಪ ಉರಿಸಿದರೆ ರಸಭಂಗ ಆಗುವ ಕಾರಣ ಕುಳಿತಲ್ಲೇ ಪೇಕ್ಷಕರು ಮೊಬ್ಳೆಲ್ ಬಳಸಿ ದೀಪ ಬೆಳಗಿದ ಅನುಭೂತಿ ಪಡೆಯಲು ಅವಕಾಶ ಕಲ್ಪಿಸಿ ನಾಟಕ ಪ್ರದರ್ಶನದಲ್ಲಿ ವಿನೂತನ ಕಾಣಿಸಿತು.
ಸಂಘಟಕ ಕರ್ನೂರು ಮೋಹನ್ ರೈ ಅವರು "ದೀಪಕ ಮಾಲಾ ಹಾಡಿನ ಅಂತ್ಯದಲ್ಲಿ ದೀಪ ಬೆಳಗಿಸಿ ಸಹಕರಿಸಿ" ಎನ್ನುವ ಮಾಹಿತಿ ನೀಡಿದಾಗ ಹರಿಶ್ಚಂದ್ರ ಸತ್ಯ ಪರೀಕ್ಷೆಯ ದೃಶ್ಯದ ಕರುಣಾರಸ ಭಾವದಲ್ಲಿದ್ದ ಕಲಾಭಿಮಾನಿಗಳು ಸಜ್ಜಾಗಿ ಕಾತರದಿಂದ ಕುಳಿತು ಕಾಯುತ್ತಿದ್ದರು.
ಲಯನ್ ಕಿಶೋರ್ ಡಿ ಶೆಟ್ಟಿ ಅವರ ಶ್ರೀ ಲಲಿತೆ ತಂಡವು ಕಳೆದ 15 ವರ್ಷಗಳಿಂದ ಹೊಸತನದೊಂದಿಗೆ 17 ನಾಟಕಗಳನ್ನು ದೇಶ ವಿದೇಶಗಳಲ್ಲಿ ಪ್ರದರ್ಶಿಸಿದೆ. ಈ ನಾಟಕದಲ್ಲಿ ಸಾಂಪ್ರದಾಯಿಕ ರಂಗ ಭೂಮಿಯ ಪರದೆಯನ್ನೂ ಬಳಸಿಕೊಂಡು, ಆಧುನಿಕ ರಂಗ ತಂತ್ರವನ್ನು ಅಳವಡಿಸಲಾಗಿದೆ. ಶನಿ ದೇವರ ಹುಟ್ಟು, ಬೇರೆ ಬೇರೆ ಯುಗಗಳಲ್ಲಿ ತೋರಿದ ಮಹಿಮೆಗಳ ಕಥೆಗಳನ್ನು ಪೋಣಿಸಿ ಎರಡು ಘಂಟೆ ಇಪ್ಪತ್ತು ನಿಮಿಷ ಅವಧಿಯಲ್ಲಿ ಪ್ರಸ್ತುತಿ ಮಾಡಲಾಗಿದೆ.
ಮುಂಬೈಯ ತ್ರಿರಂಗ ಸಂಗಮದ ಸಾರಥ್ಯದಲ್ಲಿ ನಡೆಯುತ್ತಿರುವ 9 ದಿನಗಳ ರಂಗ ಯಾನದ 6ನೇ ಪ್ರದರ್ಶನ ಬಂಟರ ಭವನದಲ್ಲಿ ಸಂಯೋಜಿಸಲ್ಪಟ್ಟಿತ್ತು.
ಪಾತ್ರ ನಿರ್ವಹಿಸಿದ ಮಹಿಳೆಯರು:
ರಂಗ ಅಭ್ಯಾಸದ ಪೂರ್ವ ಸಿದ್ಧತೆ ಇಲ್ಲದೆ ಮಹಿಳಾ ವಿಭಾಗದ ಅಧ್ಯಕ್ಷೆ ಚಿತ್ರಾ ಶೆಟ್ಟಿ ಮತ್ತು ಬಳಗದ ಐದಾರು ಮಹಿಳೆಯರ ಪುರಜನರ ಪಾತ್ರ ನಿರ್ವಹಿಸಿದರು. ಕೈಕಾಲು ಕಳೆದು ಕೊಂಡ ವಿಕ್ರಮನಿಗೆ ಅನ್ನ ನೀರು ಕೊಡಬಹುದು ಎಂದು ರಾಜ ಡಂಗುರ ಸಾರಿದಾಗ ಮಹಿಳೆಯರು ವಿಕ್ರಮನನ್ನು ಉಪಚರಿಸುವ ದೃಶ್ಯ ಮನ ಮುಟ್ಟುವಂತಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ