ವಿಡಂಬನೆ: ಲಾಜಿಕ್ಕೇ ಇಲ್ಲದ ಕತೆ, ಎಷ್ಟು ಎಪಿಸೋಡ್ ಬೇಕಾದರೂ ಎಳೀಬಹುದು...!!

Upayuktha
0



 'ಈ ಕತೆಗೆ ಸು ಫ್ರಮ್ ಸೊ ಅ್ಯಂಡ್ ಸೊ ಅಂತ ಟೈಟಲ್ ಇಡಬಹುದಾ?'


ಯಾವ ಕತೆಗೆ?


ಸು ಅನ್ನುವ ವಯೋವೃದ್ಧ ನಾಯಕಿಯ ಕತೆಗೆ.


ಸು ಅಂದ್ರೆ ಯಾರು?


ಈ ಕತೆಯಲ್ಲಿ ಸು ಅಂದ್ರೆ ಸುಲೋಚನಾ ಅಲ್ಲ


ಮತ್ತೆ?


ಸು ಅಂದರೆ ಹುಟ್ಟದೇ ಇರುವ ಮಗಳನ್ನು ಕಳೆದುಕೊಂಡು ಆಕ್ರಂದನ ಮಾಡುತ್ತಿರುವ ತಾಯಿಯ ಹೆಸರು!! 


ಅರೆ, ಹುಟ್ಟದೇ ಇರುವ ಮಗಳನ್ನು ಕಳೆದುಕೊಳ್ಳವುದಾ? ಅದು ಹೇಗೆ ಸಾಧ್ಯ? ನೀವು 'ಇದು ಸಾಧ್ಯ' ಅಂತ ಒಂದು ಸಿನಿಮಾ ಇದೆ ನೋಡಿದ್ದೀರಾ? 

ನೋಡಿಲ್ಲ, ಆದರೆ ಹಾಗೊಂದು ಸಿನಿಮಾ ಇರುವುದು ಸತ್ಯ. ಅದೇ ರೀತಿ ಇದೂ ಸಾಧ್ಯ!!


ಲಾಜಿಕ್ಕೇ ಇಲ್ಲದ ಕತೆ ಆಗುತ್ತಲ್ಲ?

ಕತೆಯನ್ನು ಪೂರ್ತಿ ಕೇಳದೆ, ಅದು ಹೇಗೆ ಲಾಜಿಕ್ ಇಲ್ಲ ಅನ್ನಲು ಸಾಧ್ಯ?  ಈಗ ಪ್ರದರ್ಶನಗೊಳ್ಳುತ್ತಿರುವ ಸು ಫ್ರಂ ಸೊ ಸಿನಿಮಾದಲ್ಲಿ ಪಾತ್ರ ಒಂದರ ಮೇಲೆ, ಸತ್ತು ಹೋದವರೊಬ್ಬರು ಭೂತವಾಗಿ ಆವಾಹನೆ ಆಗಿದೆ ಅಂತ ಊರವರೆಲ್ಲ ನಂಬುತ್ತಾರೆ, ಹೌದಾ?


ಹೌದು. ಆದರೆ, ಸತ್ತು ಹೋದವರು ಭೂತವಾಗಿ ಪಾತ್ರದ ಮೇಲೆ ನಿಜವಾಗಿ ಲಾಜಿಕ್ಕಾಗಿ ಬಂದಿದಾರಾ?


ಇಲ್ಲ. ಈ ಕತೆಯಲ್ಲೂ ಹಾಗೆ. ಅಂದರೆ, ಹುಟ್ಡದೇ ಇರುವ ಮಗಳು....? ಹೌದು. ಅಲ್ಲಿ ತಾಯಿ ಭೂತವಾಗಿ ಹುಟ್ಟಿರುವುದಿಲ್ಲ, ಇಲ್ಲಿ ಮಗಳು ಭೌತಿಕವಾಗಿ ಹುಟ್ಟಿರುವುದಿಲ್ಲ. ಆದರೆ ಹುಟ್ಟಿದ್ದಾಳೆ ಅಂತ ನಂಬಿಸುವುದೇ ಕಥಾ ಸನ್ನಿವೇಶವಾ?


ಎಕ್ಸಾಕ್ಟ್ಲಿ.  ಹುಟ್ಟದೇ ಇರುವ ಮಗಳು ಈ ಕತೆಯಲ್ಲಿ ಹುಟ್ಟಿದ್ದಳು ಅಂತ ಊರಿಗೆಲ್ಲ ನಂಬಿಸುವ ಪ್ರಯತ್ನ ನೆಡೆಯುತ್ತದೆ.  


ನಂಬ್ತಾರಾ? ನಂಬ್ತಾರೆ. ಆಮೇಲೆ? ಆಮೇಲೆ ಅವಳು ಸತ್ತು ಹೋಗುತ್ತಾಳೆ! ಅದನ್ನೂ ನಂಬಿಸಲಾಗುತ್ತದೆಯಾ? ಅದಕ್ಕೂ ಸಾಕ್ಷಿ ಇಲ್ಲದೆ!?


ಹುಟ್ಟದೇ ಇರುವವಳು ಈಗ ಬದುಕಿಲ್ಲ ಅಂದ್ರೆ ಸತ್ತು ಹೋಗಿದ್ದಾಳೆ ಅಂತ ಅಲ್ವಾ!? 


ಸಾಕ್ಷಿ? ಸಾಕ್ಷಿ ತಾಯಿಯ ಕಣ್ಣೀರು. ಕಣ್ಣೀರು ಸಾಕ್ಷಿ ಹೇಗಾಗುತ್ತೆ? ಕಣ್ಣೀರ ಡಿ.ಎನ್.ಎ.


ಕಣ್ಣೀರಿನಲ್ಲಿ ಡಿ ಎನ್ ಎ ಇರುತ್ತಾ? ನಾಯಕಿಗೆ ಕಣ್ಣೀರು ಬರುವ ಹಾಗೆ ಗ್ಲಿಸರಿನ್ ಹಾಕುವಾಗ ಡಿಎನ್ಎ ಹಾಕಿದರಾಯ್ತು.


ಶಿವನೇssss. ಈ ತರಹದ ಕತೆ ಉಪೇಂದ್ರರವರಿಗೂ ಹೊಳೆದಿರುವುದಿಲ್ಲ! ನಿಮಗೆ ಹೊಳೆದಿದ್ದು ಭಯಂಕರ ವಿಶೇಷ!


ನನಗೆ ಹೊಳೆದಿದ್ದು ಅಂತ ಯಾರು ಹೇಳಿದರು?


ಕತೆ ಬರೆಯುತ್ತಿರುವುದು ನೀವೇ ಅಲ್ವಾ?


ಹೌದು. ಆದರೆ, ಸತ್ಯ ಮತ್ತು ನೈಜ ಘಟನೆಗಳನ್ನು ಆಧರಿಸಿದ ಸತ್ಯ ಕತೆಯನ್ನು ನಾನು ಬರೆದರೂ, ಸತ್ಯ ಕತೆಯಲ್ಲಿ ಹುಟ್ಟದೇ ಇರುವ ಮಗಳನ್ನು ಸೃಷ್ಟಿಸಿದ್ದು ಸು ನಾಮಾಂಕಿತ ತಾಯಿಯೇ ಅಲ್ವಾ? ನನಗೆ ಹೊಳೆದುದ್ದಲ್ಲ.


ಸೃಷ್ಟಿಸಿದ್ದು ಅಂತೀರಿ, ಹುಟ್ಟಿಯೇ ಇಲ್ಲ ಅಂತೀರಿ? ಹೌದು, ಎರಡೂ ಸರಿ. ಸೃಷ್ಟಿಸಿದ್ದೂ ಹೌದು, ಹುಟ್ಟಿಯೂ ಇಲ್ಲ.


ಹುಟ್ಟದೇ ಸೃಷ್ಟಿಸಲ್ಪಟ್ಟು ಸತ್ತು ಹೋದ ಈ ವಿಶಿಷ್ಟವಾದ ಅನನ್ಯವಾದ ಮಗಳ ಪಾತ್ರಕ್ಕೆ ಒಂದು ಸೆಲ್ಯೂಟ್. ಕವರ್ ಪೇಜ್‌ನಲ್ಲಿರುವ ನೀಲಿ ಕುಂಕುಮ ಇಟ್ಟ ಕ್ರಿಯೇಟೆಡ್ ಫೋಟೋಗೆ ನನ್ನ ಕಡೆಯಿಂದ ಒಂದು ಗಂಧದ ಹಾರ, ಶ್ರದ್ಧಾಂಜಲಿ!


ಅದು ಕ್ರಿಯೇಟೆಡ್ ಫೋಟೋ ಅಲ್ಲ. ಒರಿಜಿನಲ್


ಹಾಗಾದರೆ ಮಗಳು ಬದುಕಿದ್ದಾಳಾ? ಇಲ್ಲ. ಸತ್ತು ಹೋಗಿದಾಳೆ. ಪೋಟೋ ಬೇರೆಯವರದ್ದು.


ಆ ಬೇರೆಯವರು ಬದುಕಿದ್ದಾರಾ?


ಇಲ್ಲ.


ಹಾಗಾದರೆ ಇಬ್ಬರಿಗೂ ಸೆಲ್ಯೂಟ್, ಶ್ರದ್ಧಾಂಜಲಿ. ಸರಿ, ಅನನ್ಯವಾದ ಮಗಳ ಪಾತ್ರಕ್ಕೂ ಸಿಂಗಲ್ ಆಲ್ಫಾಬಿಟ್ ಹೆಸರಾ?


ಇಲ್ಲ ಉದ್ದ ಹೆಸರಿದೆ. ಏನಂತ? 


ಆ ಪಾತ್ರದ ಹೆಸರು ಅನನ್ಯಾ ಶೇಷಾದ್ರಿ ಅಂತ.


ಇದೇನು ಮೀನಾಕ್ಷಿ ಶೇಷಾದ್ರಿ, ಪೂಜಾಭಟ್, ಮಾಧುರಿ ಧೀಕ್ಷಿತ್, ಸುಮಿತ್ರಾ ಉಪಾದ್ಯ ಅನ್ನುವ ಸಿನಿಮಾ ನಟಿಯರ ಹೆಸರಿನಂತಿದೆ!?


ಇಲ್ಲ, ಆ ಸಿನಿಮಾ ನಟಿಯರ ಹೆಸರುಗಳಿಗೂ, ಈ ಅನನ್ಯಾ ಶೇಷಾದ್ರಿ ಹೆಸರಿಗೂ ಸಂಬಂಧ ಇಲ್ಲ.  


ಸರಿ ಮುಂದೇನು?


ಅವಳು ಅಂದರೆ ಅನನ್ಯಾ ಶೇಷಾದ್ರಿ ಸಿ ಇ ಟ. ಮುಗಿಸಿ ಕಾಲೇಜಲ್ಲಿ ಓದ್ತಾ ಇದ್ದಳು.


ಅವಳು ಸತ್ತು ಹೋಗಿದಾಳೆ ಅಂದ್ರಿ!!?


ಹೌದು ಸತ್ತು ಹೋಗಿದಾಳೆ. ಕತೆಯ ವರ್ತಮಾನದಲ್ಲಿ ಸತ್ತು ಹೋಗಿದಾಳೆ,  ಸತ್ತು 23 ವರ್ಷ ಆಗಿದೆ. ಆದರೆ ಕತೆಯ ಭೂತ ಕಾಲದಲ್ಲಿ ಅವಳು ವೈದ್ಯಕೀಯ ಕಾಲೇಜಿಗೆ ಹೋಗ್ತಾ ಇದ್ದಳು.


ಹೋ, ಇದೊಂತರಹ ಸೀಕ್ವೆಲ್ ಸಿನಿಮಾಗಳ ತರಹ!? ಹುಟ್ಟದೇ ಇರುವ ಹುಡುಗಿ ಸತ್ತು ಹೋಗ್ತಾಳೆ, ಆಮೇಲೆ ಕತೆಯಲ್ಲಿ ಸೀಕ್ವೆಲ್ ಟರ್ನ್ ತಗೊಂಡು ಕಾಲೇಜಿಗೆ ಹೋಗ್ತಾಳೆ. ಹೋಗ್ಲಿ ಬಿಡಿ. ಸೀಕ್ವೆಲ್‌ನಲ್ಲಿ ಅವಳಿಗೆ ಎಂಬಿಬಿಎಸ್ ಆಯ್ತಾ?


ಇಲ್ಲ, ಎಂಬಿಬಿಎಸ್ ಮಾಡುತ್ತಿರುವಾಗ ಒಂದು ದಿನ ರೇಪ್ ಆಗಿ, ಕೊಲೆಯಾದಳು.


ಹುಟ್ಟದೇ ಇರುವ ಹೆಣ್ಮಗಳನ್ನು ರೇಪ್ ಮಾಡಿದವರ್ಯಾರು? ಕೊಲೆ ಮಾಡಿದವರ್ಯಾರು?


ರೇಪ್ ಮಾಡಿದವರೇ ಕೊಲೆಯನ್ನೂ ಮಾಡಿದ್ದು.


ಅದೇ ಯಾರು?


ಗೊತ್ತಿಲ್ಲ.


ಮತ್ತೆ?


ರೇಪ್ ಆಗಿ ಕೊಲೆ ಆಗಿದ್ದರೂ ತನಿಖೆ ಆಗಲಿಲ್ವಾ?


ತಾಯಿ ಕಂಪ್ಲೇಂಟ್ ಕೊಟ್ಟಿರಲಿಲ್ಲ.


ರೇಪ್ ಆಗಿ, ಕೊಲೆ ಆಗಿದ್ರೂ ಕಂಪ್ಲೇಂಟ್ ಆಗಿರಲಿಲ್ಲ!?


ಹುಟ್ಟದೇ ಇರುವ ಮಗಳಿಗೆ ರೇಪ್ ಆಗಿದೆ, ಕೊಲೆ ಆಗಿದೆ ಅಂತ ಕಂಪ್ಲೇಂಟ್ ಕೊಡುವುದಕ್ಕೆ ಹೇಗೆ ಸಾಧ್ಯ? ಸೋ, ಸು ಅನ್ನುವವರು ಕಂಪ್ಲೇಂಟ್ ಕೊಟ್ಟಿಲ್ಲ.


ಅಲ್ಲಿಗೆ ಎಲ್ಲ ಮುಗಿಯಿತಾ?  


ಇದುವರೆಗೆ ಹೇಳಿರುವುದು ಕತೆಯ ಪೀಠಿಕೆ.


ಏನು!!?


ಕತೆ ಈಗ ಶುರುವಾಗ್ತಾ ಇದೆ. ಹೇಗೆ?


ಮಗಳನ್ನು ಕಳೆದುಕೊಡ ತಾಯಿ 23 ವರ್ಷಗಳ ನಂತರ, ಬೇರೆ ಕೊಲೆಗಳ ಕೇಸಿಗೆ ಸಂಬಂಧಿಸಿದ ತನಿಖೆ ಮಾಡುತ್ತಿರುವ ತನಿಖಾ ತಂಡಕ್ಕೆ ಒಂದು ಮನವಿ ಕೊಡುತ್ತಾಳೆ.


ಏನಂತ?


"ನೀವು 20-24 ವರ್ಷಗಳ ಹಿಂದಿನ ಕಾಲದಲ್ಲಿ ಕೊಲೆ ಆಗಿವೆ ಎಂದು ಹೇಳಲಾಗುತ್ತಿರುವ ಸಾವಿರಾರು ಸಾವುಗಳು ನೆಡೆದ ಜಾಗದಲ್ಲಿ ತನಿಖೆ ಮಾಡುವಾಗ, ರೇಪ್ ಆಗಿ ಕೊಲೆಯಾದ ನನ್ನ ಮಗಳಾದ ಅನನ್ಯಾ ಶೇಷಾದ್ರಿಯನ್ನೂ ಅದೇ ಜಾಗದಲ್ಲಿ ಅಥವಾ ಅಲ್ಲಿಂದ ನೂರಾರು ಕಿಲೋಮೀಟರ್‌ಗಳ ಸುತ್ತಮುತ್ತಲಿನಲ್ಲಿ ಹೂಳಲ್ಪಟ್ಟಿದ್ದು, ಅಲ್ಲಿ ಸಿಗಬಹುದಾದ ಅಸ್ತಿ ಪಂಜರವನ್ನು ನನ್ನ ಡಿಎನ್‌ಎ ಯೊಂದಿಗೆ ಸಮೀಕರಿಸಿ, ಗುರುತಿಸಿ, ನನಗೆ ಕೊಟ್ಟರೆ, ನಾನು ಆ ಅಸ್ಥಿಪಂಜರವನ್ನು ಮತ್ತೆ ಹುಗಿದು ಅಂತ್ಯ ಸಂಸ್ಕಾರ ಮಾಡುತ್ತೇನೆ" ಎಂದು.


ನೀವು ಕನ್ನಡ ಟೀಚರ್ರಾ?


ಯಾಕೆ?  


ಒಂದೇ ವಾಕ್ಯದಲ್ಲಿ ಇಷ್ಟುದ್ದ ಮನವಿ ಕೊಟ್ರಲ್ಲಾ!!?


ಆ ವಾಕ್ಯವೂ ನನ್ನದಲ್ಲ, ಸು ಅವರ ಲಿಖಿತ ಮನವಿಯಿಂದ ಪಡೆದಿದ್ದು. ಮತ್ತು ಸು ಅವರು ಟೀಚರ್ರೂ ಅಲ್ಲ, ಚೀಟರ್.


ಇದು ಯಾವ ತರಹದ ಕತೆ?


ಇದು ಇದೇ ತರಹದ ಕತೆ ಅಂತ ಹೇಳಲಾಗುವುದಿಲ್ಲ. ಬೇರೆ ಬೇರೆ ಪುಟಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಬದಲಾಗುತ್ತಾ ಮುಂದುವರೆಯುತ್ತದೆ. ಮಗಳ ಸ್ಕೆಲೆಟನ್‌ಗೆ ಮನವಿ ಕೊಡುವ ಸಂದರ್ಭದಲ್ಲಿ, ಟಿವಿಯವರು ಕ್ಯಾಮರ ಹಿಡಿದಾಗ ರೋಧಿಸುವ ಕರುಣಾ ರಸದ ಕತೆ ಇದೆ.


ಮುಂದೆ?


ಕತೆಯ ಅಲ್ಲಲ್ಲಿ ಭಯ ಹುಟ್ಟಿಸುವ ಪ್ರಯತ್ನ ಕತಾ ನಾಯಕಿಯಿಂದ ಆಗುತ್ತದೆಯಾದರೂ, ಇಡೀ ಕತೆ ಕುತೂಹಲ, ಹಾಸ್ಯಮಯ ಮತ್ತು ಸತ್ಯಕ್ಕೆ ದೂರವಾದ ಸನ್ನಿವೇಶಗಳಿಂದ ಕೂಡಿದ ಸತ್ಯ ಕತೆಯಾಗಿ ಮುಂದುವರೆಯುತ್ತದೆ.


ಬುರುಡೆ ಕತೆ ಅನ್ನಿ.


ಬುರುಡೆ ಕತೆಯಲ್ಲ, ಕತೆಯಲ್ಲಿ ಬುರುಡೆ ಇದೆ.


ಸತ್ಯಕ್ಕೆ ದೂರವಾದುದಾದರೆ ಸತ್ಯ ಕತೆ ಆಗುವುದು ಹೇಗೆ!?


ಕತೆಯಲ್ಲಿ ಸತ್ಯಕ್ಕೆ ದೂರವಾದ ಸನ್ನಿವೇಶಗಳು ಇರುತ್ತವೆ ಅಂದ ಮಾತ್ರಕ್ಕೆ ಕತೆ ಕಾಲ್ಪನಿಕ ಅಲ್ಲ, ಸತ್ಯ ಕತೆ. ಸತ್ಯಕ್ಕೆ ದೂರವಾದ ಸನ್ನಿವೇಶಗಳನ್ನು ಸೃಷ್ಟಿಸುವ ಪ್ರಯತ್ನ ನೆಡೆದಿರುತ್ತವಲ್ಲ, ಅದು ಸತ್ಯ.  


ಅದು ಹೇಗೆ?


ಅದು ಹೇಗೆ ಅಂದ್ರೆ, ನೀವು ಒಂದು ಸುಳ್ಳು ಹೇಳಿದ್ದೀರಿ ಅಂತ ಇಟ್ಟುಕೊಳ್ಳುವ.


ಹಾಂ. ಒಂದೆರಡು ಬಾರಿ ಸುಳ್ಳು ಹೇಳಿದ್ದೇನೆ.


ಅಂದ ಮೇಲೆ ಸುಳ್ಳು ಹೇಳಿದ್ದು ಸತ್ಯ ಅಲ್ವಾ?


ಹಾಂ, ಹಾಗೆ. ಸುಳ್ಳು ಹೇಳಿದ ಸನ್ನಿವೇಶ ಸತ್ಯ.


ಅಂದ ಹಾಗೆ, ಕಥಾ ನಾಯಕಿಗೆ ಒಂದೇ ಅಕ್ಷರದ ಹೆಸರಾ?


ಹೌದು. ಉಪೇಂದ್ರರವರು ಒಂದೇ ಅಕ್ಷರದ 'ಶ್' ಅಂತ ಸಿನಿಮಾ ಮಾಡಬಹುದಾದರೆ, ಅವರ ಸಿನಿಮಾ ನೋಡಿದವನು ಬರೆಯುವ ಕತೆಯಲ್ಲಿ ನಾಯಕಿಗೆ ಸು ಅಂತ ಒಂದೇ ಅಕ್ಷರದ ಹೆಸರಿರಬಾರದಾ? ಬೇಕಾದರೆ ಸು ಅಂತ ಬರೆದು ಎರಡು ಸ್ಟಾರ್ ಹಾಕಬಹುದು.


ಹೇಗೆ?


ಸು**


ಇರಬಹುದು, ಇರಬಹುದು. ಉಪೇಂದ್ರರು ಒಂದು ಸಿನಿಮಾದಲ್ಲಿ ನಿಜ ಜೀವನದ ಖಳ ನಾಯಕರಾಗಿದ್ದವರನ್ನೇ ತೆರೆಯ ಮೇಲೆ ತಂದಂತೆ, ಈ ಕತೆಯಲ್ಲೂ ನಿಜ ಜೀವನದ ಖಳ ನಾಯಕಿಯೇ ಸು ಹೆಸರಿನಿಂದ ಕಾಣಿಸಿಕೊಳ್ಳುತ್ತಾರಾ?  


ಹೌದು.  


ಓಕೆ. ನಾಯಕಿಗೆ ಮಗಳ ಅಸ್ಥಿಪಂಜರ ಸಿಕ್ಕಿತಾ?


ಮಗಳು ಹುಟ್ಟಿಯೇ ಇಲ್ಲ ಎನ್ನುವಾಗ ಅಸ್ಥಿಪಂಜರ ಸಿಗುತ್ತಾ? 


ಹೌದಲ್ವಾ!! ಹಾಗಾದರೆ, ಸು ಕೊಟ್ಟ ಮನವಿಯನ್ನು ರಿಜೆಕ್ಟ್ ಮಾಡ್ತಾರಾ?  


ರಿಜೆಕ್ಟ್ ಮಾಡಲ್ಲ, 


ಯಾಕೆ?


ಅವಳೇ ಮನವಿಯನ್ನು ವಾಪಾಸ್ ತಗೋಬಹುದು.


ಗಿರೀಶ, ಮಹೇಶ, ಜಗದೀಶ, ಶಿವನೇ! ಸು ಅಸ್ಥಿಪಂಜರ ಬೇಕು ಎಂಬ ಮನವಿಯನ್ನು ವಾಪಾಸ್ ತಗೋತಾಳಾ!?


ನಾನು ಹೇಳಿದ ಅನನ್ಯಾ ಶೇಷಾದ್ರಿ ಕತೆ ಸಂಪೂರ್ಣ ಸುಳ್ಳು ಅಂತ ಒಂದಿನ ರಾತ್ರಿ ಯಾವುದೋ ಟಿವಿಯವರಿಗೆ ಸಂದರ್ಶನ ಕೊಟ್ಟ ಸು ಕತೆಗೆ ಮಧ್ಯಂತರ ಟ್ವಿಸ್ಟ್ ಕೊಡ್ತಾಳೆ.


ಉಫ್.


ಇತ್ತ ಮತ್ತೊಂದು ಕಡೆ, 23-24 ವರ್ಷಗಳ ಹಿಂದೆ ಸಾವಿರಾರು ಸಾವುಗಳಾಗಿದೆ ಎಂಬ ಒಂದು ಅಸ್ಪಷ್ಟ ಕೇಸಿಗೆ ಸಂಬಧಿಸಿದ ತನಿಖೆ ಮಾಡುತ್ತಿರುವ ತನಿಖಾದಳ, ಇಪ್ಪತ್ತು ಕಡೆ ಗುಂಡಿ ತೋಡಿ ಪರಿಶೀಲಿಸಿದೆ. ಅಲ್ಲೆಲ್ಲಿಯೂ ಅಸ್ತಿ ಪಂಜರಗಳು ಸಿಕ್ಕಿಲ್ಲ. 


ಅವರು ಇನ್ನೂ ಎಷ್ಟು ಕಡೆ ಗುಂಡಿ ತೋಡಬಹುದು?


ಗೊತ್ತಿಲ್ಲ. ಮುಖ್ಯ ರಸ್ತೆಯೊಂದನ್ನು ಬಿಟ್ಟು ಎಲ್ಲ ಕಡೆ ಗುಂಡಿ ತೋಡುವ ಅಂದಾಜಿದೆ. ಆದರೆ, ಸದ್ಯಕ್ಕೆ ಗುಂಡಿ ತೋಡುವ ಕೆಲಸಕ್ಕೆ ವಿರಾಮ ಕೊಡಲಾಗಿದೆ.


ಯಾಕೆ?


ಗುಂಡಿ ತೋಡಬೇಕಾದ ಜಾಗ ಇರುವುದು ಅರಣ್ಯ ಜಾಗದಲ್ಲಿ. ಅಲ್ಲಿ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಪೋಲೀಸ್ ಇಲಾಖೆ, ತನಿಖಾ ದಳ ಇಲಾಖೆ, ಜೆಸಿಬಿ ಇಲಾಖೆ, ಇಟಾಚಿ ಇಲಾಖೆ, ಸಬ್ಬಲ್ ಇಲಾಖೆ, ಹಾರೆ ಇಲಾಖೆ... ಯಾರೂ ಗುಂಡಿ ತೋಡುವ ಹಾಗಿಲ್ಲ.


ಮತ್ತೆ ಮೊದಲು ತೋಡಿದ 20 ಗುಂಡಿಗಳು?


ಅವುಗಳಿಗೆ ಮಣ್ಣು ಮುಚ್ಚಲಾಗಿದೆ.


ಅರಣ್ಯ ಇಲಾಖೆಯದ್ದಲ್ಲದ, ರಸ್ತೆಯಲ್ಲಿ ಗುಂಡಿ ತೆಗೆದು ಶೋಧನೆ ಮಾಡಬಹುದಲ್ಲಾ?


ಇಲ್ಲ. ಈಗಾಗಲೆ ರಾಜ್ಯದ ರಸ್ತೆಯಲ್ಲಿ ಆನೆಯ ಖೆಡ್ಡದಷ್ಟು ಆಳದ ಗುಂಡಿಗಳು ನಿರ್ಮಾಣವಾಗಿರುವುದರಿಂದ, ಮತ್ತೆ ಗುಂಡಿ ತೋಡುವ ಅಗತ್ಯ ಇಲ್ಲ.


ರಸ್ತೆಯ ಸಹಜ ಗುಂಡಿಯಲ್ಲಿ ಎಲ್ಲಿಯಾದರು ಅಸ್ತಿ ಪಂಜರ ಸಿಕ್ಕಿದೆಯಾ?


ರಸ್ತೆಯ ಸಹಜ ಗುಂಡಿಯಲ್ಲಿ ಅಸ್ತಿ ಪಂಜರ ಇದ್ದರೂ ಅದನ್ನು ಯಾರೂ ಗುಂಡಿಯಿಂದ ಮೇಲಕ್ಕೆ ತಂದಿಲ್ಲ.


ಯಾಕೆ?


ರಸ್ತೆಯಾಗಿರುವುದರಿಂದ, ಆಕಸ್ಮಿಕವಾಗಿ ಗುಂಡಿಗೆ ಬಿದ್ದವರು ಯಾರೂ ಮೇಲಕ್ಕೆ ಬಂದಿಲ್ಲ ಮತ್ತು ಅವರೂ ಅಸ್ಥಿಪಂಜರವಾಗಿರುವ ಸಾಧ್ಯತೆ ಇದೆ.


ಸರಕಾರ ಇದನ್ನು ಗಮನಿಸಿ ಕ್ರಮ ಕೈಗೊಳ್ಳಬೇಕಲ್ವಾ?  


ಕತೆಯಲ್ಲಿ ಹಾಗೆಲ್ಲ ಮಾಡುವುದಕ್ಕೆ ಆಗಲ್ಲ.


ಮತ್ತೆ?


ಕ್ರಮ ಕೈಗೊಳ್ಳುವ ಮೊದಲು ಜಾತಿಸಮೀಕ್ಷೆ ಆಗಬೇಕು.


ಯಾರದ್ದು?


ರಸ್ತೆ ಗುಂಡಿಯಲ್ಲಿ ಮೊದಲೇ ಸತ್ತು ಇದ್ದವರ ಮತ್ತು ಈಗ ಆಕಸ್ಮಿಕವಾಗಿ ಬಿದ್ದು ಅಸ್ಥಿ ಪಂಜರವಾಗಿರುವವರ ಜಾತಿ ಸಮೀಕ್ಷೆ ಆಗಬೇಕು.


ನಿಜವಾಗಿ ಆಗಬೇಕಾ?


ಕತೆಯಲ್ಲಿ ಮಾತ್ರ.


ಸರಿ, ಮಗಳು ಅನನ್ಯಾ ಶೇಷಾದ್ರಿ ಹೆಸರಿನಲ್ಲಿ ಇರುವ ಶೇಷಾದ್ರಿ ಅಂದರೆ ಅದು ತಂದೆಯ ಹೆಸರಾ?  


ನಾಯಕಿ ಕಮ್ ಕಳನಾಯಕಿ ಸು** ಗೆ ಮದುವೇನೆ ಆಗಿಲ್ಲ.


ಹುಟ್ಟದೇ ಇರುವ ಅನನ್ಯಾ ಶೇಷಾದ್ರಿಗೆ ತಂದೆ ಇಲ್ಲ?  ಸು ರವರಿಗೆ ಪತಿ ಇಲ್ಲ?


ಹಾಗಲ್ಲ, ಹಾಗಲ್ಲ. ಸು ರವರಿಗೆ ಮದುವೆ ಆಗಿಲ್ಲ ಆದರೆ ಗಂಡ ಇದ್ರು!!  


ಗಂಡ ಇದ್ರು ಆದರೆ ಮದುವೆ ಆಗಿಲ್ಲ? ಅದು ಹೇಗೆ?  


ಲಿವಿಂಗ್ ಟುಗೇದರ್


ಲಿವಿಂಗ್ ಟುಗೇದರ್‌ನಲ್ಲಿ ಇದ್ದ ಸು ಸಂಗಾತಿ ಯಾರು?  


ಒಂದು ಎ, ಎರಡು ಬಿ, ಮೂರು....


ನಾನೇ ಹೇಳ್ತಿನಿ, ಸಿ?


ಸಿ ಅಲ್ಲ ಆರ್


ಸರಿ ಬಿಡಿ. ಕತೆಯಲ್ಲಿ ಮೊದಲು ಹೇಳಿದ್ರಲ್ಲ ಈ ಕತೆಗೆ ಸು ಫ್ರೆಮ್ ಸೊ ಅ್ಯಂಡ್ ಸೊ ಅಂತ ಟೈಟಲ್ ಇಡಬಹುದಾ?' ಅಂತ,  ಇಲ್ಲಿ ಸೊ ಅ್ಯಂಡ್ ಸೊ ಅಂದ್ರೇನು?


ಅದು ಅನೇಕ ಊರುಗಳ ಹೆಸರು. ರಿಪ್ಪನ್ ಪೇಟೆ, ಕೊಪ್ಪ, ಚಿಕ್ಕಮಗಳೂರು, ಶಿಕಾರಿಪುರ, ಸುರತ್ಕಲ್, ಉಜಿರೆ, ಮೇಲುಕೊಪ್ಪ, ಬೆಳ್ತಂಗಡಿ, ಬೆಂಗಳೂರು, ಶಿವಮೊಗ್ಗ, ಕಲ್ಕತ್ತಾ ಇತ್ಯಾದಿ ಎಲ್ಲ ಊರುಗಳನ್ನು ಸಂಕ್ಷಿಪ್ತವಾಗಿ ಸೊ ಅ್ಯಂಡ್ ಸೊ ಎನ್ನಲಾಗಿದೆ.


ಆ ಊರಿಗೂ ಸು ಸ್ಟಾರ್ ಸ್ಟಾರ್ (**) ನಾಯಕಿಗೂ ಏನು ಸಂಬಂಧ?  


ವಯೋವೃದ್ಧ ಕಥಾನಾಯಕಿ ಶಕ್ತಿ ಬಸ್‌ನಲ್ಲಿ ಆಗಾಗ ಈ ಊರುಗಳಲ್ಲಿ ತಿರುಗಾಡಿರುತ್ತಾಳೆ!?


ಮೇಲುಕೊಪ್ಪಕ್ಕೆ ಶಕ್ತಿ ಬಸ್ ಇಲ್ವಲ್ಲ?


25 ವರ್ಷಗಳ ಹಿಂದೆ, ಮೇಲುಕೊಪ್ಪದಲ್ಲಿ ಒಂದು ಬೀದಿ ನಾಯಿ ಅಸ್ವಸ್ತತೆಯಿಂದ ಬಳಲಿ ಬಿದ್ದಿದ್ದು, ಆ ವಿಷಯ ಶ್ವಾನ ಪ್ರಿಯ ನಾಯಕಿ ಸು** ಗೆ ತಿಳಿದು, ಆಗ ಇದ್ದ ಸಹಕಾರಿ ಸಾರಿಗೆ ಬಸ್ಸಿನಲ್ಲಿ ಬಂದು, ಸದರಿ ಬೀದಿ ನಾಯಿಯನ್ನು ಕೊಂಡು ಹೋಗಿ ಸಾಕಿದ್ದಕ್ಕೆ ಹೆಸರು ಹೇಳಲು ಇಚ್ಚಿಸದ ಮೇಲುಕೊಪ್ಪದ ಪ್ರತ್ಯಕ್ಷದರ್ಶಿಯೊಬ್ಬರು ಸಾಕ್ಷಿ ಹೇಳಿದ್ದಾರೆ. 


ಒಂದು ಕೆಲಸ ಮಾಡುವ


ಏನು?


ಸದ್ಯಕ್ಕೆ ಕತೆ ನಿಲ್ಲಿಸಿ.


ಯಾಕೆ?


ನಾನು ನಾಳೆಯೇ ಫಿಲಂ ಪ್ರಡ್ಯೂಸರ್ 'ಹೊಂದಾಳೆ' ಎಂ ಡಿ ಯವರನ್ನು ಕರ್ಕೊಂಬರ್ತೇನೆ. ಇದು ಪ್ಯಾನ್ ಇಂಡಿಯ ಸಿನಿಮಾ ಮಾಡಬಹುದಾದ ಇಂಟರೆಸ್ಟಿಂಗ್ ಕತೆ ಇರುವ ಹಾಗಿದೆ.


ಆಗಬಹುದು ಆಗಬಹುದು.


(ಕತೆಯನ್ನು ಇಲ್ಲಿಗೆ ನಿಲ್ಲಿಸಿ, ಇಲ್ಲಿಯವರೆಗೆ ಕತೆ ಓದಿದವರಿಗೆ, ಸದ್ಯಕ್ಕೆ ಮಾನಸಿಕ ಶಾಂತಿಗಾಗಿ ವಿರಾಮ ಕೊಡಲಾಗಿದೆ)


Disclaimer: ಇದೊಂದು ಕಾಲ್ಪನಿಕ ವಿಡಂಬನೆಯಾಗಿದ್ದು, ಕೇವಲ ಓದಿ, ನಗು ಬಂದರೆ ನಕ್ಕು, ಅಳು ಬಂದರೆ ಅತ್ತು ಹಗುರವಾಗುವುದು.  ಇಲ್ಲಿರುವ ಪಾತ್ರಗಳು, ಸನ್ನಿವೇಶಗಳೂ ಕಾಲ್ಪನಿಕವಾಗಿದ್ದು, ಅಕಸ್ಮಾತ್ ಪಾತ್ರ ಮತ್ತು ಸನ್ನಿವೇಶಗಳು ಹೋಲಿಕೆ ಇದ್ದಲ್ಲಿ ಅದಕ್ಕೆ ಕನ್ನಡ ಟಿ ವಿ ಚಾನಲ್‌ಗಳ ಬ್ರೇಕಿಂಗ್ ನ್ಯೂಸ್‌ಗಳು ಕಾರಣವಾಗಿರುತ್ತವೆ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ! 


ಪ್ರಬುದ್ಧತೆ ಎನ್ನುವುದು ಈ ಬರಹಕ್ಕೂ, ಮಾಸ್ ಸಮಾಜಕ್ಕೂ, ಬ್ರೇಕಿಂಗ್ ನ್ಯೂಸ್ ಸನ್ನಿವೇಶಕ್ಕೂ, ಸರಕಾರಕ್ಕೂ ಸಂಬಂಧ ಇರುವಂತಹದ್ದಲ್ಲವಾದ್ದರಿಂದ ಎಲ್ಲವನ್ನೂ ಲಘುವಾಗಿಯೇ ತೆಗೆದುಕೊಳ್ಳುವುದರಿಂದ ಅರೋಗ್ಯ ಉತ್ತಮವಾಗಿರುತ್ತದೆ ಎಂಬ ಸುಭಾಷಿತದೊಂದಿಗೆ, ಶುಭಂ.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top