ಮಕ್ಕಳನ್ನು ಜೋಪಾನ ಮಾಡಲು, ಅವರನ್ನು ರಕ್ಷಿಸಲು ತಾಯ್ತನವಿರುವ ಹೆಣ್ಣು ಮಕ್ಕಳು ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲರು. ಅದು ಮರಾಠರ ಸಾಮ್ರಾಟ ಶಿವಾಜಿಯ ಕಾಲ. ಹಾಲು ಮಾರುವ ಹೆಣ್ಣು ಮಗಳು ಪಕ್ಕದ ಊರಿಗೆ ಹೋಗಿ ಹಾಲು ಮಾರಿ ಮನೆಗೆ ಮರಳುವ ಹೊತ್ತಿಗೆ ಕೋಟೆಯ ಬಾಗಿಲನ್ನು ಹಾಕಿ ಬಿಟ್ಟಿದ್ದರು. ಅಲ್ಲಿರುವ ಕಾವಲುಗಾರರಿಗೆ ಆಕೆ ಅದೆಷ್ಟೇ ಬೇಡಿಕೊಂಡರೂ ಅವರು ಕೋಟೆಯ ಬಾಗಿಲನ್ನು ತೆರೆಯಲು ಒಪ್ಪಲಿಲ್ಲ. ಬದಲಾಗಿ ಮುಂಜಾನೆಯವರೆಗೆ ಆಕೆಯನ್ನು ಅಲ್ಲಿಯೇ ಕಾಯುವಂತೆ ಹೇಳಿದರು.
ತನ್ನ ಹಸುಗೂಸಿಗೆ ಹಾಲೂಡಲು ಆಕೆ ಕೋಟೆಯ ಕಳ್ಳಗಿಂಡಿಯ ಮೂಲಕ ಒಳ ನುಸುಳಲು ಪ್ರಯತ್ನಿಸಿದಳು. ಆದರೆ ಅದು ಸಾಧ್ಯವಾಗದೆ ಹೋದಾಗ ಅಗಾಧವಾದ, ಸಾಮಾನ್ಯರು ಹತ್ತಲು ಸಾಧ್ಯವಾಗದ ಕೋಟೆಯನ್ನು ಏರಿ ಕೆಳಗೆ ಹಾರುವ ಸಮಯದಲ್ಲಿ ಕಾವಲುಗಾರರ ಕೈಗೆ ಸಿಕ್ಕು ಶಿವಾಜಿಯ ಮುಂದೆ ಕರೆ ತರಲ್ಪಟ್ಟಳು. ತುರ್ತು ವಿಚಾರಣೆ ನಡೆದಾಗ ಖುದ್ದು ಶಿವಾಜಿ ಮಾತೃ ಮಮತೆಯಿಂದ ಅಭೇದ್ಯವಾದ ಕೋಟೆಯನ್ನು ಹತ್ತಿ ಹಾರಲು ಪ್ರಯತ್ನಿಸಿದ ಆ ಹೆಣ್ಣು ಮಗಳನ್ನು ಮಾತೃತ್ವದ ಸಂಕೇತ ಎಂದು ಗೌರವಿಸಿ ಕಳುಹಿಸಿದ ಕಥೆಯನ್ನು ನಾವು ಲಾವಣಿಗಳಲ್ಲಿ ಜನಪದ ಕಥೆಗಳಲ್ಲಿ ಕೇಳಿದ್ದೇವೆ ಅಲ್ಲವೇ?
ಸಾಮ್ರಾಜ್ಯದ ಆಸೆಯಿಂದ ತನ್ನನ್ನು ಯುದ್ಧಕ್ಕೆ ಆಹ್ವಾನಿಸಿದ ತನ್ನ ಚಿಕ್ಕಪ್ಪನ ಜೊತೆಗಿನ ಉಗ್ರ ಹೋರಾಟದಲ್ಲಿ ಮರಣ ಹೊಂದಿದ ರಾಜಸ್ಥಾನದ ರಜಪೂತ ರಾಜ ಉದಯಭಾನು. ಆತನ ಪತ್ನಿ ತನ್ನ ಮಗನ ರಕ್ಷಣೆಯ ಭಾರವನ್ನು ತನಗೆ ಅತ್ಯಂತ ಆಪ್ತಳಾದ ಸೇವಕಿ ಪನ್ನಾಳಿಗೆ ಒಪ್ಪಿಸಿ ತಾನು ಪತಿಯ ಚಿತೆಯಲ್ಲಿ ಸಹಗಮನ ಮಾಡಿದಳು. ಮುಂದೆ ಉದಯ ಭಾನುವಿನ ಚಿಕ್ಕಪ್ಪ ಮಗುವನ್ನು ಹತ್ಯೆ ಮಾಡಲು ಹವಣಿಸಿ ಕೋಟೆಗೆ ಲಗ್ಗೆ ಹಾಕಿದನು.. ಈಗಾಗಲೇ ರಾಜಕುಮಾರನನ್ನು ನಂಬಿಗಸ್ತ ಬಂಟರ ಸಹಾಯದಿಂದ ಸುರಕ್ಷಿತ ಜಾಗಕ್ಕೆ ಪನ್ನಾ ರವಾನಿಸಿದ್ದಳು, ರಾಜಕುಮಾರನ ಜಾಗದಲ್ಲಿ ತನ್ನ ಮಗ ಚಂದನನನ್ನು ಮಲಗಿಸಿದಳು. ಉದಯ ಬಾನುವಿನ ಚಿಕ್ಕಪ್ಪ ರಾಜಕುಮಾರನೆಂದೇ ಭಾವಿಸಿ ಪನ್ನಾಳ ಮಗ ಚಂದನನನ್ನು ಕೊಂದು ಹಾಕಿದನು. ತನ್ನ ಮಗ ಸಾವಿಗೀಡಾಾಗಬಹುದು ಎಂಬುದನ್ನು ಅರಿತಿದ್ದು ಕೂಡ ತನಗೆ ವಹಿಸಿದ್ದ ಕರ್ತವ್ಯಕ್ಕೆ ಬದ್ಧಳಾದ ಪನ್ನಾ ಬಾಯಿ ಕೂಡ ಇತಿಹಾಸದಲ್ಲಿ ತನ್ನ ಕರ್ತವ್ಯ ಪ್ರಜ್ಞೆ, ತ್ಯಾಗ ಮತ್ತು ಬಲಿದಾನಕ್ಕೆ ಸಾಕ್ಷಿಯಾಗಿದ್ದಾಳೆ.
ಹೆಣ್ಣು ಮಕ್ಕಳಲ್ಲಿ ಮಾತೃತ್ವ ಮತ್ತು ಕರ್ತವ ಪ್ರಜ್ಞೆ ಸದಾ ಜಾಗೃತವಾಗಿದ್ದರೆ ಅವರು ಎಂತಹ ತೊಂದರೆಗಳನ್ನು ಕೂಡ ಎದುರಿಸಿ ತಮ್ಮ ಜೊತೆಗಿರುವವರನ್ನು ರಕ್ಷಿಸಬಲ್ಲರು ಎಂಬುದಕ್ಕೆ ಸಾಕ್ಷಿ ಈ ಮೇಲಿನ ಕಥೆಗಳು. ಇವು ಕೇವಲ ನಮ್ಮ ದೇಶದ ಹೆಣ್ಣು ಮಕ್ಕಳ ಕಥೆ ಮಾತ್ರವಲ್ಲ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಕೂಡ ಹೆಣ್ಣು ಮಕ್ಕಳು ಜಾತಿ, ವರ್ಗ, ವರ್ಣ ಭೇದಗಳಿಲ್ಲದೆ ಇಂತಹ ಸಾಹಸಕ್ಕೆ ಎಳಸಬಲ್ಲರು ಎಂಬುದಕ್ಕೆ ಮತ್ತೊಂದು ನಿದರ್ಶನವಾಗಿ ಓರ್ವ ಪುಟ್ಟ ಯುವತಿಯ ಕಥೆ ನಿಮ್ಮ ಮುಂದಿದೆ.ಸುಮಾರು 250 ವರ್ಷಗಳ ಹಿಂದಿನ ಈ ಕಥೆ ನಮಗೆ ಹೆಣ್ಣು ಮಕ್ಕಳ ಅಸೀಮ ಸಾಹಸಕ್ಕೆ ನಿದರ್ಶನವಾಗಿ ನಿಂತಿದೆ.
ಅದು ಜನವರಿ 12 1888.... ಅಮೆರಿಕ ದೇಶದ ನೆಬ್ರಸ್ಕ ಬಳಿಯ ಒಂದು ಪುಟ್ಟ ಊರಿನಲ್ಲಿ ಆ ದಿನ ಮುಂಜಾವು ಎಂದಿನಂತೆ ತೆರೆದುಕೊಂಡಿತ್ತು. ಚಳಿ ಅಷ್ಟೇನು ಇರದ ಸಾಮಾನ್ಯ ವಾತಾವರಣವಿದ್ದ ಆ ದಿನ ಮಳೆಯ ಯಾವ ಲಕ್ಷಣಗಳೂ ಇಲ್ಲದೆ ತಿಳಿ ಬಿಳಿ ಮೋಡಗಳನ್ನು ಹೊಂದಿದ ಆಕಾಶ ಶುಭ್ರವಾಗಿತ್ತು. ಚಳಿ ಇಲ್ಲದ ಕಾರಣ ಕೋಟನ್ನು ಕೂಡ ಧರಿಸದೆ ಮಕ್ಕಳು ಶಾಲೆಗೆ ಹೋಗಿದ್ದರು. ಮಧ್ಯಾಹ್ನದ ಹೊತ್ತಿಗೆ ಇಡೀ ಆಕಾಶದಲ್ಲಿ ಕಪ್ಪು ಮೋಡಗಳು ದಟ್ಟೈಸಿದವು. ತಣ್ಣನೆಯ ಗಾಳಿ ಜೋರಾಗಿ ಬೀಸಲಾರಂಭಿಸಿತು. ಒಮ್ಮಿಂದೊಮ್ಮೆಲೆ ವಾತಾವರಣ ಸಂಪೂರ್ಣ ಬದಲಾಗಿ ಉಷ್ಣತೆ ಮೈನಸ್ 40 ಡಿಗ್ರಿಗೆ ಹಠಾತ್ತಾಗಿ ಇಳಿಯಿತು. ಕೆಲವೇ ನಿಮಿಷಗಳಲ್ಲಿ ಪಕ್ಕದ ಕೆನಡಾ ದೇಶದಿಂದ ಗಂಟೆಗೆ 60 ಮೈಲಿ ವೇಗದಲ್ಲಿ ಶೀತಲ ಗಾಳಿ ಬೀಸಲಾರಂಭಿಸಿತು. ಹಿಮಪಾತವೂ ಆರಂಭವಾಯಿತು.
ನೆಬ್ರಾಸ್ಕಾ ಪ್ರಾಂತ್ಯದ ಮೀರಾ ಎಂಬ ಕಣಿವೆಯ ಆ ಪುಟ್ಟ ಹಳ್ಳಿಯ ಕೇವಲ ಒಂದು ಕೋಣೆಯ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳುತ್ತಿದ್ದ 19 ವರ್ಷದ ಮಿನ್ನಿ ಫ್ರೀಮನ್ ಎಂಬ ಶಿಕ್ಷಕಿ ಒಮ್ಮಿಂದೊಮ್ಮೆಲೆ ತಂಪಾದ ಗಾಳಿ ಬೀಸಲಾರಂಭಿಸಿದ್ದನ್ನು ಅಷ್ಟಾಗಿ ಗಮನಿಸಿರಲಿಲ್ಲ ಆದರೆ ತರಗತಿ ಕೋಣೆಯ ಒಳಗೆ ಮಂಜಿನ ಕಣಗಳನ್ನು ಒಳಗೊಂಡ ಬಿರುಗಾಳಿ ಜೋರಾಗಿ ಬೀಸಿ ಒಳಬರಲಾರಂಭಿಸಿದ್ದ ರಭಸಕ್ಕೆ ಮತ್ತು ಆ ಶಾಲೆಯ ಮಾಡಿನಲ್ಲಿರುವ ಹಂಚುಗಳು ಜೋರಾಗಿ ಶಬ್ದ ಮಾಡುತ್ತಿರುವುದನ್ನು ಕಂಡು ಆಕೆ ಅತ್ಯಂತ ಗಾಬರಿಯಾದಳು. ನಂತರ ತುಸು ಸಾವರಿಸಿಕೊಂಡ ಆಕೆ ವಯಸ್ಸಿನಲ್ಲಿ ಚಿಕ್ಕವಳಾಗಿದ್ದರು ಕೂಡ ತನಗಿಂತ ಚಿಕ್ಕ ಮಕ್ಕಳ ಜವಾಬ್ದಾರಿಯನ್ನು ಹೊತ್ತಿದ್ದಳಲ್ಲವೆ? ಮಕ್ಕಳು ಗಾಬರಿಯಿಂದ ಧಾವಿಸಿ ತನ್ನ ಬಳಿ ಓಡಿ ಬಂದಾಗ ಆಕೆಗೆ ಖುದ್ದು ತನ್ನನ್ನು ತಾನು ಸಂಭಾಳಿಸಿಕೊಳ್ಳುವುದು ಅನಿವಾರ್ಯವಾಯಿತು. ಅವರೆಲ್ಲರ ಪೇಲವ ಮುಖಗಳು ಮುಂದೇನು? ಎಂದು ಕೇಳುವ ರೀತಿಯಲ್ಲಿ ಆಕೆಯನ್ನು ದಿಟ್ಟಿಸಿದಂತೆ ಆಕೆಗೆ ಭಾಸವಾಯಿತು.
ಯಾವುದೇ ರೀತಿಯ ರಕ್ಷಣಾ ಸಿಬ್ಬಂದಿಗಳು ಬರುವಂತಹ, ಆಪತ್ತು ನಿರ್ವಹಣೆಯ ತಂಡಗಳು ಬರುವ ಸಾಧ್ಯತೆಗಳು ಇರಲೇ ಇಲ್ಲ. ಅಲ್ಲಿ ತರಗತಿ ಕೋಣೆಯಲ್ಲಿ ಕುಳಿತು ಕಾಯುವುದೆಂದರೆ ಸಾವಿಗಾಗಿ ಕಾದಂತೆ ಎಂಬುದು ಸಂಭವನೀಯ ಸಾಧ್ಯತೆಯಾಗಿತ್ತು... ಮಿನ್ನಿಯ ಮುಂದೆ ಎರಡು ಆಯ್ಕೆಗಳಿದ್ದವು. ಮೊದಲನೆಯದು ಸಾವಿಗಾಗಿ ಕಾಯುವುದಾದರೆ, ಎರಡನೆಯದು ಮಕ್ಕಳನ್ನು ಅವರವರ ಗೂಡಿಗೆ ಸುರಕ್ಷಿತವಾಗಿ ಮುಟ್ಟಿಸುವುದು. ತೀವ್ರವಾಗಿ ನಿರ್ಣಯವನ್ನು ಕೈಗೊಂಡ ಮಿನ್ನಿ ಎರಡನೆಯ ಆಯ್ಕೆಯನ್ನು ತನ್ನದಾಗಿಸಿಕೊಂಡಳು.
ತರಗತಿಯಲ್ಲಿ ಇದ್ದ ಎಲ್ಲಾ 13 ಮಕ್ಕಳನ್ನು ಆಕೆ ಅಲ್ಲಿಯೇ ಇದ್ದ ಹಗ್ಗವೊಂದರಿಂದ ಸರಪಳಿಯ ಹಾಗೆ ಒಬ್ಬರನ್ನೊಬ್ಬರು ಜೋಡಿಸಿ ಕಟ್ಟಿದಳು. ತನ್ನ ಕಣ್ಣಿಗೆ ಕಂಡ ಕೈಗೆ ಸಿಕ್ಕಿದ ತರಗತಿಯಲ್ಲಿರುವ ಎಲ್ಲಾ ಸ್ಕಾರ್ಫು ಗಳನ್ನು ಮತ್ತು ಹೊದ್ದಿಕೆಗಳನ್ನು ಮಕ್ಕಳಿಗೆ ತೊಡಿಸಿ ಎಲ್ಲರನ್ನೂ ಕರೆದುಕೊಂಡು ತರಗತಿಯ ಹೊರಗೆ ಕಾಲಿಟ್ಟಳು. ಹೊರಗೆ ಗಾಡಾಂಧಕಾರ ಕವಿದ ವಾತಾವರಣವಿತ್ತು.... ಎಳ್ಳಷ್ಟು ಮುಂದಿನ ವಸ್ತುಗಳು ಕಾಣಿಸುತ್ತಿರಲಿಲ್ಲ. ಶೀತಲಗಾಳಿ ಮತ್ತು ಹಿಮಪಾತ ನಿರಂತರವಾಗಿ ಅವರ ಮುಖಕ್ಕೆ ರಪ್ಪನೆ ರಾಚುತ್ತಿತ್ತು. ಒಂದೊಂದು ಹೆಜ್ಜೆಯನ್ನು ಕಿತ್ತಿಡಲು ಕೂಡ ಸಾಧ್ಯವಿಲ್ಲದಷ್ಟು ಯುದ್ಧ ಭೀಕರತೆ, ಅಸಾಧ್ಯ ಭೀಕರ ವಾದ ಶೀತಲ ಗಾಳಿಗೆ ಎದೆಯೊಡ್ಡಿ ನಡೆಯುವ ಅವರನ್ನು ಕಾಡುತ್ತಿತ್ತು.
ಎಲ್ಲರನ್ನು ಹಗ್ಗದಿಂದ ಬಂಧಿಸಿದಂತೆ ಕಟ್ಟಿದ ಆಕೆ ಅವರನ್ನು ಕೇವಲ ತನ್ನ ಧ್ವನಿ ಮತ್ತು ಪರಸ್ಪರರ ಕೈ ಹಿಡಿದಂತೆ ಇರುವ ಸ್ಪರ್ಶದಿಂದ ಅವರನ್ನು ಪಾರುಗಾಣಿಸಲು ನಿಶ್ಚಯಿಸಿ ಅಂತೆಯೇ ಮಕ್ಕಳನ್ನು ನಿರ್ದೇಶಿಸುತ್ತಾ ಮುಂದೆ ಸಾಗಿದಳು. ಹಾಗೂ ಹೀಗೂ ಒದ್ದಾಡಿ ಗಂಟೆಗಳ ಕಾಲ ನಡೆದು ಸ್ವಲ್ಪ ದೂರ ಸಾಗಿದ ನಂತರ ಅವರಿಗೆ ತೋಟದ ಮನೆಯೊಂದು ಗೋಚರವಾಯಿತು. ಎಲ್ಲ ಮಕ್ಕಳನ್ನು ಕರೆದುಕೊಂಡು ಆಕೆ ಆ ಮನೆಯ ಬಾಗಿಲು ತಟ್ಟಿದಳು. ತೋಟದ ಮನೆಯಲ್ಲಿ ಅವರೆಲ್ಲರೂ ಆಶ್ರಯ ಪಡೆದರು. ಎಲ್ಲಾ 13 ಮಕ್ಕಳನ್ನು ರಕ್ಷಿಸಿದ ತೃಪ್ತಿ ನೆಮ್ಮದಿ ಆಕೆಯದಾಗಿತ್ತು.
ಆ ಬಯಲು ಪ್ರದೇಶದಲ್ಲಿ ಸುಮಾರು 230ಕ್ಕೂ ಹೆಚ್ಚು ಜನರ ಜೀವವನ್ನು ಬಲಿ ತೆಗೆದುಕೊಂಡ ಈ ಹಿಮಪಾತದಲ್ಲಿ ಮಿನ್ನಿಯ ಸಾಹಸದಿಂದ 13 ಮಕ್ಕಳು ಉಳಿದದ್ದು ಪವಾಡಸದೃಶವೆನಿಸಿತು. ದುರಂತದಲ್ಲಿ ಕೊನೆಗಾಣಬೇಕಿದ್ದ ಪ್ರಸಂಗವು ಸುಖಾಂತವಾಗಿ ಪರಿಣಮಿಸಿತು. ಆಕೆಯ ಈ ಸಾಹಸ ಬಾಯಿಂದ ಬಾಯಿಗೆ ಎಲ್ಲೆಡೆ ಹರಡಿತು. ಮರುದಿನ ಪತ್ರಿಕೆಗಳಲ್ಲಿ ಆಕೆಯನ್ನು "ನೆಬ್ರಾಸ್ಕಾದ ನಾಯಕಿ " ಎಂದು ಬಣ್ಣಿಸಿ ಬರೆದರು. ಸಾಕಷ್ಟು ಜನ ಆಕೆಗೆ ಪತ್ರ ಬರೆದು ಶುಭ ಕೋರಿದರೆ ಮತ್ತೆ ಕೆಲವರು ಆಕೆಗೆ ಕೊಡುಗೆಗಳನ್ನು ಕಳುಹಿಸಿದರು. ಆಕೆಯ ಧೈರ್ಯ ಸಾಹಸಗಳನ್ನು ಬಣ್ಣಿಸಿದ 'ಆಲ್ ಥರ್ಟಿನ್ ವರ್ ಸೇವಡ್' ಗೀತೆಯೊಂದು ರಚನೆಯಾಗಿ ಹಾಡಲ್ಪಟ್ಟಿತು.
ಮಿನ್ನಿ ಫ್ರೀಮನ್ನಳ ಈ ಸಾಹಸಗಾಥೆ ಜಾಗತಿಕ ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದೆಂದು ಐತಿಹಾಸಿಕವಾಗಿ ಪರಿಗಣಿಸಲ್ಪಟ್ಟಿತು.ಮಹಿಳೆ ಅಬಲೆ ಅಲ್ಲವೇ ಅಲ್ಲ.... ಅತ್ಯಂತ ಸಬಲೆಯಾಗಿರುವ ಆಕೆ ಅನಿರೀಕ್ಷಿತ ಸಮಯ ಸಂದರ್ಭಗಳಲ್ಲಿ ತನ್ನ ಶಕ್ತಿ ಮೀರಿ ಪ್ರಯತ್ನಿಸಿ ಬೇರೆಯವರನ್ನು ರಕ್ಷಿಸುತ್ತಾಳೆ ಎಂಬುದಕ್ಕೆ ಮೇಲಿನ ಮೂರು ಘಟನೆಗಳೆ ಸಾಕ್ಷಿ.
ಏನಂತೀರಾ ಸ್ನೇಹಿತರೇ?
-ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ, ಗದಗ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

