ಮಂಗಳೂರು: ಕೊಂಕಣಿ ಭಾಷೆ ವಿಶಿಷ್ಟ ಸಂಸ್ಕೃತಿ ಹೊಂದಿರುವುದರೊಂದಿಗೆ ದೇಶದ ಬಹುತ್ವ ಸಂಸ್ಕೃತಿಗೆ ತನ್ನದೇ ಕೊಡುಗೆ ನೀಡುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ. ಪ್ರೀತಿ ಕೀರ್ತಿ ಡಿಸೋಜಾ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ವತಿಯಿಂದ ಆಯೋಜಿಸಲಾಗಿದ್ದ ಕೊಂಕಣಿ ಮಾನ್ಯತಾ ದಿವಸ್: 2025 ಕಾರ್ಯಕ್ರಮದಲ್ಲಿ ಕೊಂಕಣಿ ಭಾಷೆಯನ್ನು ನಿತ್ಯದ ಮಾತುಕತೆ, ಸಾಹಿತ್ಯ ಹಾಗೂ ಮನರಂಜನಾ ಕ್ಷೇತ್ರಗಳಲ್ಲಿ ಹೆಚ್ಚಾಗಿ ಬಳಕೆ ಮೂಲಕ ಪೋಷಿಸಿ, ಸಂರಕ್ಷಿಸಬೇಕಿದೆ ಎಂದು ಹೇಳಿದರು.
ಕೊಂಕಣಿ ಭಾಷಾ ಸಂಶೋಧಕ ಫಾ. ಜೇಸನ್ ಜೋಸೆಫ್ ಪಿಂಟೋ, ಹಲವಾರು ಸವಾಲುಗಳನ್ನು ಎದುರಿಸಿ ಕೊಂಕಣಿ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲಾಗಿದ್ದು, ಅದನ್ನು ಸಂರಕ್ಷಿಸಬೇಕಾದ ಜವಾಬ್ದಾರಿ ಜನಾಂಗ ಬಾಂಧವರ ಮೇಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಭಾಷೆಯೊಂದನ್ನು ಮಾನ್ಯ ಮಾಡಲಾಗಿದೆ ಎಂದರೆ, ಒಂದು ಸಮುದಾಯವನ್ನು ಮಾನ್ಯ ಮಾಡಿದಂತೆ. ಎಲ್ಲಾ ಭಾಷೆಗಳೂ ಅದರದೇ ಆದ ಸೌಂದರ್ಯ ಹೊಂದಿರುವಂತೆ ಕೊಂಕಣಿ ಭಾಷೆಗೂ ಕೂಡ ಅದರದೇ ಆದ ವೈಶಿಷ್ಟ್ಯತೆ ಇದೆ. ಇಂದಿಗೂ ಬುಡಕಟ್ಟು ಜನಾಂಗ ಸೇರಿದಂತೆ ಸಾಕಷ್ಟು ಜನರು ಕೊಂಕಣಿ ಮಾತನಾಡುತ್ತಾರೆ.
ಅಂತಹ ಮೌಲ್ಯಯುತ ಭಾಷೆಯನ್ನು ಸಂರಕ್ಷಿಸಲು ಮಂಗಳೂರು ವಿಶ್ವವಿದ್ಯಾನಿಲಯ ಮುಂದಾಗಿರುವುದು ಶ್ಲಾಘನೀಯ ಎಂದು ತಿಳಿಸಿದರು. ಮಂಗಳೂರು ವಿಶ್ವವಿದ್ಯಾನಿಲಯ ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಪ್ರೊ. ಜಯವಂತ ನಾಯಕ್, ಪ್ರಾಸ್ತಾವಿಕ ಭಾಷಣದಲ್ಲಿ ಕೊಂಕಣಿ ಭಾಷೆ ಸರ್ವ ಧರ್ಮ ಸಮನ್ವಯದ ಭಾಷೆ ಎಂದು ಅಭಿಪ್ರಾಯಪಟ್ಟು ಅತಿಥಿಗಳನ್ನು ಸ್ವಾಗತಿಸಿದರು.
ವಿದ್ಯಾರ್ಥಿ ಹ್ಯಾರಿನ್ ಡಿ’ಸಿಲ್ವಾ ನಿರೂಪಿಸಿದರು. ರಾಜ್ಯದಲ್ಲಿ ಕೊಂಕಣಿ ಭಾಷೆಯಲ್ಲಿ ಮೊದಲ ಡಾಕ್ಟರೇಟ್ ಪದವಿ ಪಡೆದ ಡಾ. ಪ್ರೇಮ್ ಮೊರಸ್ ಅವರನ್ನು ಅಭಿನಂದಿಸಲಾಯಿತು. ಕೊಂಕಣಿ ಸಾಹಿತಿ ವೆಂಕಟೇಶ ನಾಯಕ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

