ನಿರಂತರ ಕಲಿಕೆ, ಸತತ ಜಾಗೃತಿಯಿಂದ ಸದೃಢ ಮುನ್ನಡೆ: ಮಧುಮಿತ ಮನ್ಕರ್

Upayuktha
0

ಪ್ರತಿಷ್ಠಿತ ಬಿ-ಸ್ಕೂಲ್ ನಿಟ್ಟೆ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ 15ನೇ ಸ್ನಾತಕೋತ್ತರ ಪದವಿ ಪ್ರದಾನ ಸಮಾರಂಭ




ಯಲಹಂಕ, ಬೆಂಗಳೂರು: ‘ಭೌಗೋಳಿಕ ಸ್ಥಿತಿಗತಿ, ರಾಜಕೀಯ ಏರುಪೇರು, ನಮ್ಮ ಅರ್ಥವ್ಯವಸ್ಥೆಯನ್ನು ಬದಲಿಸುತ್ತಿರುತ್ತವೆ. ಬದಲಾದ ದೃಷ್ಟಿಕೋನಗಳಿಗೆ ಅನುಗುಣವಾಗಿ ನಮ್ಮ ಆರ್ಥಿಕ ನೀತಿ ಕೂಡ ವಿಭಿನ್ನ ರೂಪ ತಳಿಯುತ್ತಿರುತ್ತದೆ. ಇದರ ಬಗ್ಗೆ ನಮ್ಮ ಮ್ಯಾನೇಜ್‌ಮೆಂಟ್ ತಜ್ಞರು ಸದಾ ನಿಗಾ ಇಡಬೇಕಾಗುತ್ತದೆ. ಏಕೆಂದರೆ ಉದ್ಯಮ ಕ್ಷೇತ್ರವನ್ನು ಭೌಗೋಳಿಕ ಹಾಗೂ ರಾಜಕೀಯ ಸ್ಥಿತ್ಯಂತರಗಳ ನೆರಳಿನಲ್ಲಿ ಮುನ್ನಡೆಸುವ ಹೊಣೆ ನಿಮ್ಮ ಮೇಲಿರುತ್ತದೆ. ನೀವು ನಾಯಕತ್ವ ಗುಣವನ್ನು ಕಲಿಯುವಾಗ ಬೆಳೆಸಿಕೊಂಡಿದ್ದೀರಿ. ಆದರೆ ಸಮರ್ಥ ನಾಯಕತ್ವದ ಶಕ್ತಿಯನ್ನು ತಾವು ರೂಢಿಸಿಕೊಳ್ಳಲು ಜೀವನವಿಡೀ ಶ್ರಮಿಸಬೇಕು. ಲೋಕಜ್ಞಾನದ ಪರಿಪೂರ್ಣ ಅರಿವು ನಿಮ್ಮನ್ನು ಸದೃಢವಾಗಿ ಮುನ್ನಡೆಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಅದರಿಂದ ಲೋಕದ ಆಗುಹೋಗುಗಳ ನಿತ್ಯ ವಿದ್ಯಾರ್ಥಿಯ ಹಾಗೆ ಮಾರ್ಪಡಬೇಕು’ ಎಂದು ಅರ್ನ್ಸ್ಟ್ ಆಂಡ್ ಯಂಗ್ ಸಂಸ್ಥೆಯ ಜಾಗತಿಕ ವಿತರಣಾ ಸೇವೆಗಳ ಕಾರ್ಯನಿರ್ವಾಹಕ ನಿರ್ದೇಶಕಿ ಮಧುಮಿತ ಮನ್ಕರ್ ಅವರು ನುಡಿದರು.


ಅವರು ಬೆಂಗಳೂರಿನ ಪ್ರತಿಷ್ಠಿತ ಬಿ-ಸ್ಕೂಲ್ ನಿಟ್ಟೆ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ 15ನೇ ಸ್ನಾತಕೋತ್ತರ ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. 


ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ ಅನುಮೋದಿತ ಪಿ.ಜಿ.ಡಿ.ಎಂ (ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್) ಸ್ನಾತಕೊತ್ತರ ಪದವಿಯನ್ನು ಒಟ್ಟು 89 ವಿದ್ಯಾರ್ಥಿಗಳು ಗಳಿಸಿದರು. 


ಅತ್ಯುತ್ತಮ ಅಕೆಡೆಮಿಕ್ ಔನ್ನತ್ಯವನ್ನು ಪ್ರದರ್ಶಿಸಿ ಪ್ರಥಮ ರ‍್ಯಾಂಕ್ ಅನ್ನು ಪಡೆದ ಪಿ.ಜಿ.ಡಿ.ಎಂ ವಿತ್ತೀಯ ನಿರ್ವಹಣೆ ವಿಭಾಗದ ಶಾಂಭವಿ ರಾಯ್ ಹಾಗೂ ಎಲಿಸ್ಟರ್ ಲೊಯ್ಸನ್ ಮಾರ್ಟಿಸ್ ಅವರಿಗೆ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು.


‘ಇಂದಿನ ಅತ್ಯಂತ ಲಾಭದಾಯಕ ಹಾಗೂ ಉಪಯುಕ್ತ ಸಂಗತಿಯೆ‍ಂದರೆ ಅದು ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳು. ಈ ಆವಿಷ್ಕಾರಗಳ ಫಲವಾಗಿ ತಮ್ಮೊಂದಿಗೆ ಸದಾ ಇರುವ ತಂತ್ರಜ್ಞಾನವನ್ನು ನಾವು ಸದುಪಯೋಗ ಪಡಿಸಿಕೊಳ್ಳಬೇಕು. ಈ ತಂತ್ರಜ್ಞಾನವನ್ನು ನಾವು ನಮ್ಮ ಪ್ರಾಣಸಖರಂತೆ ಕಾಣಬೇಕು. ಆಗ ಮಾತ್ರ ಸಮರ್ಥ ನಾಯಕತ್ವದೆಡೆಗಿನ ನಿಮ್ಮ ಪಯಣ ಅರ್ಥಪೂರ್ಣವಾಗುತ್ತದೆ, ಫಲಪ್ರದವಾಗಿರುತ್ತದೆ’ ಎಂದರು.


ಪ್ರಾರAಭದಲ್ಲಿ ನಿಟ್ಟೆ ಸ್ಕೂಲ್ ಆಫ್‌  ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಡಾ. ಗುರುರಾಜ್ ಬಿ. ಅರಸ್ ಅವರು ಸರ್ವರನ್ನೂ ಸ್ವಾಗತಿಸಿದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಧಿಕಾರಿ ರೋಹಿತ್ ಪೂಂಜ ಪ್ರತಿಜ್ಞಾವಿಧಿ ಬೋಧಿಸಿದರು. ಅಧ್ಯಕ್ಷತೆ ವಹಿಸಿದ್ದವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್‌ನ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ. ತಮ್ಮ ಭಾಷಣದಲ್ಲಿ ಅವರು, ‘ಪ್ರತಿಯೊಬ್ಬರೂ ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು. ಆ ಗುರಿಯನ್ನು ತಲುಪುವಾಗ, ನಿಮ್ಮನ್ನು ಈ ವರೆಗೆ ಮುನ್ನಡೆಸಿದವರಿಗೆ ಕೃತಜ್ಞರಾಗಿರಬೇಕು, ಸಮಾಜದ ಒಳಿತನ್ನು ಸದಾ ಪರಿಭಾವಿಸಿ ಸದೃಢ ಹೆಜ್ಜೆಗಳನ್ನಿಡಬೇಕು’ ಎಂದರು. 


ಸಂಸ್ಥೆಯ ಪರೀಕ್ಷಾ ನಿಯಂತ್ರಕ ಡಾ. ಚಿಕ್ಕೇಗೌಡ ಕೆ.ಜಿ ಸಮಾರಂಭದ ನಿರ್ವಹಣೆಯ ಹೊಣೆ ಹೊತ್ತಿದ್ದರು. ಸಂಸ್ಥೆಯ ಶಿಕ್ಷಕರಾದ ಡಾ. ಸಂಧ್ಯಾ ಎಸ್, ಪ್ರೊ. ಬಾಲಕೃಷ್ಣಾಚಾರ್, ಇತರೆ ಶಿಕ್ಷಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top