ಡಾ. ಎಂ. ಮೋಹನ ಆಳ್ವರಿಗೆ ಎಮಿನೆಂಟ್ ಬಂಟ್ ಪರ್ಸನಾಲಿಟಿ ಅವಾರ್ಡ್
ಮಂಗಳೂರು: ಎಲ್ಲ ಜಾತಿ, ಮತ, ಧರ್ಮದವರನ್ನು ಗೌರವಿಸುವ ಸಾಮರಸ್ಯದ ಮನೋಭಾವನೆ ಬೆಳೆಸಿಕೊಂಡಿರುವುದೇ ಇಂದು ಬದುಕಿಗೆ ಶಕ್ತಿ ತುಂಬಿದೆ. ಉತ್ತಮ ಸಂಸ್ಕಾರದ ಜತೆಗೆ ಸಾಮರ್ಥ್ಯ ಅರಿತು ದುಡಿದ ಪರಿಣಾಮ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಿದೆ ಎಂದು ಮೂಡುಬಿದಿರೆಯ ಆಳ್ವಾಸ್ ಎಜ್ಯುಕೇಶನ್ ಟ್ರಸ್ಟ್‌ನ ಚೇರ್ಮನ್ ಡಾ.ಎಂ.ಮೋಹನ ಆಳ್ವ ಹೇಳಿದರು.
ನಗರದ ಎ.ಜೆ. ಗ್ರಾೃಂಡ್ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್‌ನ 29ನೇ ವಾರ್ಷಿಕ ಮಹಾಸಭೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಮಿನೆಂಟ್ ಬಂಟ್ ಪರ್ಸನಾಲಿಟಿ ಅವಾರ್ಡ್ ಸ್ವೀಕರಿಸಿ ಅವರು ಮಾತನಾಡಿದರು.
ಬಾಲ್ಯದಿಂದಲೇ ಕಲೆ ಮತ್ತು ಕ್ರೀಡೆಯಲ್ಲಿ ಆಸಕ್ತಿ ಹೊಂದಿದೆ. ಸಾಂಸ್ಕೃತಿಕ ಕ್ಷೇತ್ರ ಬದುಕಿಗೆ ಒಳ್ಳೆಯ ಮೌಲ್ಯಗಳನ್ನು ನೀಡಿದರೆ, ಕ್ರೀಡೆಯ ಮೇಲಿನ ಆಸಕ್ತಿ ಹೋರಾಟದ ಮನೋಭಾವನೆ ಬೆಳೆಸಿಕೊಳ್ಳಲು ಸಹಕಾರಿಯಾಯಿತು ಎಂದು ಡಾ.ಆಳ್ವ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಡಾ.ಎಂ.ಶಾಂತಾರಾಮ ಶೆಟ್ಟಿ ಮಾತನಾಡಿ ‘ಡಾ.ಎಂ.ಮೋಹನ ಆಳ್ವ ಅವರ ಸಾಧನೆ ಬಂಟ ಸಮಾಜಕ್ಕೆ ಪ್ರೇರಣಾ ಶಕ್ತಿಯಾಗಿದೆ’ ಎಂದರು.
ಹಿರಿಯ ಯಕ್ಷಗಾನ ಕಲಾವಿದ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು ಅವರಿಗೆ ದಿ. ಡಾ.ಡಿ.ಕೆ. ಚೌಟ ದತ್ತಿನಿಧಿ ಪ್ರಶಸ್ತಿ, ಕೃಷಿ ಕ್ಷೇತ್ರದ ಸಾಧನೆಗಾಗಿ ಇಂದಿರಾ ಶೆಟ್ಟಿ ಅವರಿಗೆ ದಿ.ಎಣ್ಮಕಜೆ ಕಲಾವತಿ ಶೆಟ್ಟಿ ದತ್ತಿನಿಧಿ ಪ್ರಶಸ್ತಿ, ಸಿಎ ಅಂತಿಮ ಪರೀಕ್ಷೆಯಲ್ಲಿ 24ನೇ ರ್‍ಯಾಂಕ್ ಪಡೆದ ಸಿಎ ನಿಶ್ಚಲ್ ರೈ ಅವರಿಗೆ ಸಿಎ ವೈ.ಆರ್.ಶೆಟ್ಟಿ ದತ್ತಿನಿಧಿ ಪ್ರಶಸ್ತಿ ಹಾಗೂ ಸಿಎ ರಕ್ಷಾ. ಆರ್.ಶೆಟ್ಟಿ ಅವರಿಗೆ ಸಿಎ ಗೋಪಾಲ್.ಬಿ. ಶೆಟ್ಟಿ ದತ್ತಿನಿಧಿ ಪ್ರಶಸ್ತಿ ವಿತರಿಸಲಾಯಿತು.
ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಿಎ ಸುಧೀರ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಕೆ.ಎಸ್.ಹೆಗ್ಡೆ, ಯೋಜನಾ ನಿರ್ದೇಶಕ ಡಾ.ಬಿ. ಸಂಜೀವ ರೈ, ಖಜಾಂಚಿ ಸಿಎ ಸುದೇಶ್ ಕುಮಾರ್ ರೈ , ಮೀನಾಕ್ಷಿ ಆಳ್ವ ಉಪಸ್ಥಿತರಿದ್ದರು. ಪಳ್ಳಿ ಕಿಶನ್ ಹೆಗ್ಡೆ, ಕೆ.ಎಂ.ಶೆಟ್ಟಿ ಮತ್ತು ಜ್ಯೋತಿ ಪ್ರಸಾದ್ ಹೆಗ್ಡೆ ಸನ್ಮಾನಿತರನ್ನು ಪರಿಚಯಿಸಿದರು. ಜೈರಾಜ್.ಬಿ. ರೈ ವಂದಿಸಿದರು. ಕಳ್ಳಿಗೆ ತಾರನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


